ಕನ್ನಡದಲ್ಲೇ ರಜನಿ 'ದರ್ಬಾರ್' ಗೆ ಕನ್ನಡಪರ ಸಂಘಟನೆಗಳ ಪ್ರತಿಭಟನೆ
ಬೆಂಗಳೂರು: ಸೂಪರ್ ಸ್ಟಾರ್ ರಜನಿಕಾಂತ್ ಅವರ ದರ್ಬಾರ್ ಸಿನಿಮಾಗೆ ಮತ್ತೆ ವಿಘ್ನ ಎದುರಾಗಿದ್ದು, ಕನ್ನಡದಲ್ಲಿ ಮಾತ್ರ ದರ್ಬಾರ್ ಚಿತ್ರ ಕರ್ನಾಟಕದಲ್ಲಿ ತೆರೆಕಾಣಬೇಕು ಎಂದು ಕನ್ನಡಪರ ಸಂಘಟನೆಗಳು ಆಗ್ರಹಿಸಿವೆ.
ದೇಶಾದ್ಯಂತ ಇಂದು ಏಕಕಾಲಕ್ಕೆ ರಜನಿಕಾಂತ್ ಅವರ ಬಹು ನಿರೀಕ್ಷಿತ ಚಿತ್ರ ದರ್ಬಾರ್ ತೆರೆ ಕಾಣುತ್ತಿದ್ದು, ಕನ್ನಡ, ತಮಿಳು, ತೆಲುಗು ಸೇರಿದಂತೆ ಒಟ್ಟು ಐದು ಭಾಷೆಗಳಲ್ಲಿ ಚಿತ್ರ ತೆರೆಕಾಣುತ್ತಿದೆ. ಕರ್ನಾಟಕದ ಹಲವು ಚಿತ್ರ ಮಂದಿಗಳಲ್ಲಿ ದರ್ಬಾರ್ ನ ಕನ್ನಡ, ತೆಲುಗು ಮತ್ತು ತಮಿಳು ಚಿತ್ರಗಳು ತೆರೆಕಾಣಲು ಸಜ್ಜಾಗಿದೆ. ಗುರುವಾರ ನರ್ತಕಿ ಚಿತ್ರಮಂದಿರದಲ್ಲಿ ತಮಿಳು ಹಾಗೂ ತೆಲುಗು ಭಾಷೆಯಲ್ಲಿ ದರ್ಬಾರ್ ಸಿನಿಮಾವನ್ನ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಏತನ್ಮಧ್ಯೆ ಈ ಸಿನಿಮಾ ಕನ್ನಡದಲ್ಲೇ ರಿಲೀಸ್ ಆಗಬೇಕು, ಬೇರೆ ಭಾಷೆಯಲ್ಲಿ ಬಿಡುಗಡೆ ಮಾಡಿದರೆ ಹೋರಾಟ ಮಾಡುತ್ತೇವೆ ಎಂದು ಕನ್ನಡ ಪರ ಸಂಘಟನೆಗಳು ಎಚ್ಚರಿಕೆ ನೀಡಿವೆ. ಕರುನಾಡ ಸಂಘಟನೆಗಳ ಒಕ್ಕೂಟ ಈ ಕುರಿತಂತೆ ಚಿತ್ರತಂಡಕ್ಕೆ ಎಚ್ಚರಿಕೆ ನೀಡಿದ್ದು, ಈ ಸಿನಿಮಾ ಕನ್ನಡದಲ್ಲಿ ಡಬ್ಬಿಂಗ್ ಆಗಿದ್ದು, ಕನ್ನಡ ಭಾಷೆಯಲ್ಲೇ ಸಿನಿಮಾ ರೀಲಿಸ್ ಮಾಡಿ ಅದನ್ನ ಬಿಟ್ಟು ತಮಿಳು, ತೆಲುಗು ಭಾಷೆಯಲ್ಲಿ ಬಿಡುಗಡೆ ಮಾಡಲು ಸಿದ್ಧರಾದರೆ ಉಗ್ರ ಹೋರಾಟ ಮಾಡಬೇಕಾಗುತ್ತೆ ಎಂದು ಕನ್ನಡ ಪರ ಸಂಘಟನೆಗಳು ಎಚ್ಚರಿಸಿವೆ.
ಸಿನಿಮಾ ಕನ್ನಡದಲ್ಲಿ ಡಬ್ಬಿಂಗ್ ಆಗಿರುವುದರಿಂದ ಕನ್ನಡದಲ್ಲೇ ರಿಲೀಸ್ ಮಾಡಿ, ತೆಲುಗಿನಲ್ಲಿ ಸಿನಿಮಾವನ್ನ ಬಿಡುಗಡೆ ಮಾಡೊದಕ್ಕೆ ಬಿಡುವುದಿಲ್ಲ. ಬೇರೆ ಭಾಷೆಯಲ್ಲಿ ಚಿತ್ರ ಪ್ರದರ್ಶನ ಮಾಡಿದರೆ ಗುರುವಾರ ಚಿತ್ರಮಂದಿರದ ಮುಂದೆ ಬೃಹತ್ ಪ್ರತಿಭಟನೆ ಮಾಡುವುದಾಗಿ ಸಂಘಟನೆ ಹೇಳಿದೆ.
ಎ.ಆರ್ ಮುರುಗದಾಸ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಮಹತ್ವಾಕಾಂಕ್ಷಿ ಸಿನಿಮಾ ‘ದರ್ಬಾರ್’ ನಲ್ಲಿ ಸೂಪರ್ ಸ್ಟಾರ್ ಗೆ ನಯನತಾರಾ ನಾಯಕಿಯಾಗಿ ನಟಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ