ಭಜರಂಗಿ 2 ಸಿನಿಮಾ ಸೆಟ್ ಬೆಂಕಿಗಾಹುತಿ, ಆಂಜನೇಯನೇ ಕಾಪಾಡಿದ ಎಂದ ಶಿವರಾಜ್ ಕುಮಾರ್

ಸ್ಯಾಂಡಲ್ ವುಡ್  ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅಭಿನಯಿಸುತ್ತಿರುವ ಬಹು ನಿರೀಕ್ಷಿತ ಭಜರಂಗಿ -2 ಚಿತ್ರದ ಸೆಟ್ ಆಕಸ್ಮಿಕವಾಗಿ ಸುಟ್ಟಿದ್ದರಿಂದ ಚಿತ್ರೀಕರಣ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ‌‌. 
 

Published: 16th January 2020 04:03 PM  |   Last Updated: 16th January 2020 04:14 PM   |  A+A-


Posted By : Raghavendra Adiga
Source : UNI

ಬೆಂಗಳೂರು: ಸ್ಯಾಂಡಲ್ ವುಡ್  ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅಭಿನಯಿಸುತ್ತಿರುವ ಬಹು ನಿರೀಕ್ಷಿತ ಭಜರಂಗಿ -2 ಚಿತ್ರದ ಸೆಟ್ ಆಕಸ್ಮಿಕವಾಗಿ ಸುಟ್ಟಿದ್ದರಿಂದ ಚಿತ್ರೀಕರಣ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ‌‌. 

ಎ. ಹರ್ಷ ನಿರ್ದೇಶನದ ಭಜರಂಗಿ -2 ಚಿತ್ರದ ಅದ್ಧೂರಿ ಸೆಟ್ ಅನ್ನು ನಗರದ ಮೋಹನ್ ಬಿ ಕೆರೆ ಸ್ಟುಡಿಯೋ ದಲ್ಲಿ ಹಾಕಲಾಗಿತ್ತು. 

ಈ ವೇಳೆ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ ಉಂಟಾಗಿ ಸೆಟ್ ಉರಿದು ಹೋಗಿದೆ ಎಂದು ತಿಳಿದು ಬಂದಿದ್ದು, ಭಜರಂಗಿ -2 ಚಿತ್ರತಂಡ ಅನಾಹುತದಿಂದ ಪಾರಾಗಿದೆ. 

ಸಿನೆಮಾ ಸೆಟ್‌ನಲ್ಲಿ 300 ಸಹ ಕಲಾವಿದರು ಪಾಲ್ಗೊಂಡಿದ್ದು ಗುರುವಾರ ಬೆಳಿಗ್ಗೆ ಅಕಸ್ಮಿಕ  ಬೆಂಕಿ ಕಾಣಿಸಿಕೊಂಡ ತಕ್ಷಣ ಕಲಾವಿದರೆಲ್ಲಾ ಹೊರ ಓಡಿ ಪ್ರಣಾಪಾಯದಿಂದ ಪಾರಾಗಿದ್ದಾರೆ. ಕೂಡಲೇ ಆಗ್ನಿಶಾಮಕ  ಸಿಬ್ಬಂದಿ ಧಾವಿಸಿ 4 ಗಂಟೆಗಳ ಕಾಲ ಶ್ರಮಿಸಿ ಬೆಂಕಿ ನಂದಿಸಿದ್ದಾರೆ ಭಾರೀ ಅನಾಹುತ  ತಪ್ಪಿದೆ.

ಗುಹೆ ಸೆಟ್‌ಗೆ ಬೆಂಕಿ ಬಿದ್ದಿದ್ದರಿಂದ ಚಿತ್ರತಂಡ ಆತಂಕಕ್ಕೆ  ಒಳಗಾಗಿತ್ತು. ಇದರಿಂದಾಗಿ ಕೆಲ ಕಾಲ ಚಿತ್ರೀಕರಣ ಸ್ಥಗಿತಗೊಂಡಿತ್ತು. ಚಿತ್ರ ತಂಡದ  ಸಿಬ್ಬಂದಿ ತಕ್ಷಣ ಬೆಂಕಿ ನಂದಿಸಿದ್ದರಿಂದ ಮುಂದಾಗುವ ಅನಾಹುತ ತಪ್ಪಿದೆ.

ಕಳೆದ ಎರಡು ದಿನಗಳಿಂದ ಅಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಇಂದು ಚಿತ್ರೀಕರಣದಲ್ಲಿ ಶಿವರಾಜ್ ಕುಮಾರ್ ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ.

ಮಕರ ಸಂಕ್ರಾಂತಿ ಹಬ್ಬದ ದಿನವೇ ಭಜರಂಗಿ-2 ಚಿತ್ರದ ಪೋಸ್ಟರ್ ರಿಲೀಸ್ ಆಗಿದ್ದು, ಪ್ರೇಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದೆ.

ಚಿತ್ರಕ್ಕೆ ಜಯಣ್ಣ ಮತ್ತು ಭೋಗೇಂದ್ರ ಬಂಡವಾಳ ಹೂಡಿದ್ದು, ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಇನ್ನು ಜೆ. ಸ್ವಾಮಿ ಅವರ ಛಾಯಾಗ್ರಹಣವಿದ್ದು, ದೀಪು ಎಸ್‌. ಕುಮಾರ್‌ ಅವರ ಸಂಕಲನವಿದೆ.

ಆಂಜನೇಯನೇ ನಮ್ಮನ್ನು ಕಾಪಾಡಿದ್ದಾನೆ- ಶಿವರಾಜ್ ಕುಮಾರ್

ಆಂಜನೇಯ ನಮ್ಮ ಜೊತೆಗಿದ್ದರಿಂದ ಇಂದು‌ ನಮ್ಮನ್ನು ಕಾಪಾಡಿದ್ದಾನೆ ಎಂದು ನಟ ಶಿವರಾಜ್​ ಕುಮಾರ್​ ಪ್ರತಿಕ್ರಿಯಿಸಿದ್ದಾರೆ.

ಚಿತ್ರೀಕರಣದ ವೇಳೆ ಅಗ್ನಿ ಅವಘಡ ಸಂಭವಿಸಿದ ಕುರಿತು ಮಾತನಾಡಿದ ಅವರು, ಭಜರಂಗಿಯೇ ನಮ್ಮನ್ನು ಕಾಪಾಡಿದ್ದಾನೆ. ಗ್ಯಾಸ್ ಓಪನ್ ಆಗಿದ್ದರೆ ತುಂಬಾ ದೊಡ್ಡ ಅವಘಡ ಸಂಭವಿಸುತ್ತಿತ್ತು, ಆದರೆ, ಸೆಟ್ ಗೆ ಗೋಣಿಚೀಲ ಬಳಸಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ ಎಂದರು.

ಚಿತ್ರೀಕರಣದಲ್ಲಿ ತಾವು ಸೇರಿ 15 ರಿಂದ 20 ಜನ ಮುಖ್ಯ ಕಲಾವಿದರು ಹಾಗೂ ಸರಿಸುಮಾರ 200 ಜನ ಸಹಾಯಕ ಕಲಾವಿದರು ಇದ್ದರು. ಆದರೆ, ಯಾರೊಬ್ಬರಿಗೂ ಯಾವುದೇ ಹಾನಿ ಆಗಿಲ್ಲ, ಅನಾಹುತನೂ ಆಗಿಲ್ಲ. ಇಂದು ಭಜರಂಗಿಯೇ ನಮ್ಮನ್ನು ಕಾಪಾಡಿದ್ದಾನೆ ಎಂದರು.

Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp