ಕನ್ನಡ ಚಿತ್ರಗಳ ಇತಿಹಾಸದಲ್ಲೇ ಅತಿ ಹೆಚ್ಚು ವೀಕ್ಷಣಾ ಸಮಯದ ಚಿತ್ರ: ಓಟಿಟಿಯಲ್ಲೂ ಶಿವಣ್ಣನ 'ಭಜರಂಗಿ 2' ದಾಖಲೆ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ನೂತನ ಚಿತ್ರ ಭಜರಂಗಿ 2 ಓಟಿಟಿ ವೇದಿಕೆಯಲ್ಲಿ ವಿಶೇಷ ದಾಖಲೆಯೊಂದನ್ನು ನಿರ್ಮಾಣ ಮಾಡಿದ್ದು, ಕನ್ನಡ ಚಿತ್ರಗಳ ಇತಿಹಾಸದಲ್ಲೇ ಬಿಡುಗಡೆಯಾದ ಮೂರು ದಿನದಲ್ಲಿ Zee5ನಲ್ಲಿ ಅತೀ ಹೆಚ್ಚು ವೀಕ್ಷಣಾ ಸಮಯ ಕಂಡ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಭಜರಂಗಿ-2 ಚಿತ್ರದ ಪೋಸ್ಟರ್
ಭಜರಂಗಿ-2 ಚಿತ್ರದ ಪೋಸ್ಟರ್
Updated on

ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ನೂತನ ಚಿತ್ರ ಭಜರಂಗಿ 2 ಓಟಿಟಿ ವೇದಿಕೆಯಲ್ಲಿ ವಿಶೇಷ ದಾಖಲೆಯೊಂದನ್ನು ನಿರ್ಮಾಣ ಮಾಡಿದ್ದು, ಕನ್ನಡ ಚಿತ್ರಗಳ ಇತಿಹಾಸದಲ್ಲೇ ಬಿಡುಗಡೆಯಾದ ಮೂರು ದಿನದಲ್ಲಿ Zee5ನಲ್ಲಿ ಅತೀ ಹೆಚ್ಚು ವೀಕ್ಷಣಾ ಸಮಯ ಕಂಡ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇತ್ತೀಚೆಗೆ ಅಂದರೆ ಡಿಸೆಂಬರ್ 23ರಿಂದ ‘ಭಜರಂಗಿ 2’ ಚಿತ್ರವನ್ನು ಓಟಿಟಿಯಲ್ಲಿ ಬಿಡುಗಡೆ ಮಾಡಲಾಗಿತ್ತು. ಜೀ5ನಲ್ಲಿ (Zee5) ತೆರೆಕಂಡ ಚಿತ್ರವನ್ನು ಕನ್ನಡ ಚಿತ್ರಪ್ರೇಮಿಗಳು ಪ್ರೀತಿಯಿಂದ ಬರಮಾಡಿಕೊಂಡಿದ್ದು, ಪರಿಣಾಮ, ಚಿತ್ರ ಕೇವಲ ಮೂರೇ ದಿನದಲ್ಲಿ ಹಿಂದಿನ ದಾಖಲೆಗಳನ್ನು ಮುರಿದಿದೆ.

ಜೀ5ನಲ್ಲಿ ತೆರೆಕಂಡಿರುವ ‘ಭಜರಂಗಿ 2’ ಬಿಡುಗಡೆಯಾದ ಕೇವಲ ಮೂರು ದಿನದಲ್ಲಿ ಬರೋಬ್ಬರಿ 5 ಕೋಟಿ ನಿಮಿಷಗಳ ವೀಕ್ಷಣೆ ಪಡೆದಿದೆ. ಓಟಿಟಿಯಲ್ಲಿ ಇಷ್ಟು ಕಡಿಮೆ ಅವಧಿಯಲ್ಲಿ ಬೃಹತ್ ವೀಕ್ಷಣೆ ಪಡೆದ ಮೊದಲ ಕನ್ನಡ ಚಿತ್ರ ಇದಾಗಿದ್ದು, ದಾಖಲೆ ಬರೆದಿದೆ. 

ಹಲವು ಕಾರಣಗಳಿಂದ ‘ಭಜರಂಗಿ 2’ ಚಿತ್ರ ಚಿತ್ರಮಂದಿರದಲ್ಲಿ ಬಹಳ ಕಾಲದವರೆಗೆ ನಿಲ್ಲಲು ಸಾಧ್ಯವಾಗಿರಲಿಲ್ಲ. ಆದರೆ ಓಟಿಟಿಯಲ್ಲಿ ತೆರೆಕಂಡ ಚಿತ್ರವನ್ನು ಸಿನಿಪ್ರೇಮಿಗಳು ತುಂಬು ಹೃದಯದಿಂದ ಸ್ವಾಗತಿಸಿದ್ದಾರೆ.

ಇದು ಚಿತ್ರತಂಡ ಹಾಗೂ ಶಿವರಾಜ್​ಕುಮಾರ್ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದ್ದು,. ಜೀ5 ಈ ಕುರಿತು ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದೆ. ಅಲ್ಲದೇ ವೀಕ್ಷಕರಿಗೆ ಧನ್ಯವಾದ ಸಲ್ಲಿಸಿದೆ.

ಶಿವರಾಜ್​ಕುಮಾರ್ (Shiva Rajkumar) ಅವರ ‘ಭಜರಂಗಿ 2’ (Bhajarangi 2) ಚಿತ್ರ ಬಿಡುಗಡೆಗೂ ಮುನ್ನವೇ ಬಹಳ ನಿರೀಕ್ಷೆ ಹುಟ್ಟುಹಾಕಿತ್ತು. ಬಹಳ ಕಾಲದಿಂದ ಕಾದು, ಅಕ್ಟೋಬರ್ 29ರಂದು ಚಿತ್ರ ಬಿಡುಗಡೆಯಾದಾಗ, ಸಂಭ್ರಮದಿಂದ ಬರಮಾಡಿಕೊಂಡಿದ್ದ ಅಭಿಮಾನಿಗಳಿಗೆ ಪುನೀತ್ (Puneeth Rajkumar) ನಿಧನದ ಸುದ್ದಿ ಬರಸಿಡಿಲಿನಂತೆ ಎರಗಿತ್ತು. 

ನಂತರ ಕೆಲ ದಿನ ಚಿತ್ರದ ಪ್ರದರ್ಶನ ನಿಂತಿತು. ಕಾಲಾನಂತರದಲ್ಲಿ ಚಿತ್ರ ಚೇತರಿಕೆ ಕಂಡರೂ ನಿರೀಕ್ಷಿತ ಮಟ್ಟ ತಲುಪಲಿಲ್ಲ. ಆದರೆ ಕನ್ನಡ ಚಿತ್ರಪ್ರೇಮಿಗಳು ಒಳ್ಳೆಯ ಚಿತ್ರವನ್ನು ಎಂದಿಗೂ ಕೈಬಿಡುವುದಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾದಂತಾಗಿದೆ.

ನಿರ್ದೇಶಕ ಎ ಹರ್ಷ (A Harsha) ನಿರ್ದೇಶನದ ಈ ಚಿತ್ರದಲ್ಲಿ ಭಾವನಾ ಮೆನನ್ (Bhavana Menon) ನಾಯಕಿಯಾಗಿ​ ಅಭಿನಯಿಸಿದ್ದಾರೆ. ಭಜರಂಗಿ ಲೋಕಿ (Loki), ಶ್ರುತಿ (Shruthi), ಶಿವರಾಜ್​ ಕೆ.ಆರ್​. ಪೇಟೆ ಸೇರಿದಂತೆ ಅನೇಕ ಕಲಾವಿದರು ಬಣ್ಣ ಹಚ್ಚಿದ್ದಾರೆ. 

ಖ್ಯಾತ ನಿರ್ಮಾಪಕರಾದ ಜಯಣ್ಣ-ಭೋಗೇಂದ್ರ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಅರ್ಜುನ್​ ಜನ್ಯ (Arjun Janya) ಸಂಗೀತ ಸಂಯೋಜಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com