ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಾವನ್ನಪ್ಪಿ 20 ದಿನ ಕಳೆದರೂ ಅವರ ಹಾಗೂ ಕುಟುಂಬ ಮತ್ತು ಅಭಿಮಾನಿಗಳಲ್ಲಿ ನೋವು ಮಾತ್ರ ನಿಂತಿಲ್ಲ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಮಂಗಳವಾರ ನಡೆದ 'ಪುನೀತ ನಮನ'' ಕಾರ್ಯಕ್ರಮದಲ್ಲಿ ಪುನೀತ್ ರಾಜ್ ಕುಮಾರ್ ಅವರ ಸಹೋದರರಾದ ಡಾ. ಶಿವರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ವೇದಿಕೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತರು.
ಕಣ್ಣೀರುಡತ್ತಲ್ಲೇ ವೇದಿಕೆ ಮೇಲೆ ಬಂದ ಶಿವರಾಜ್ ಕುಮಾರ್, ಮಾತನಾಡಲು ತುಂಬಾ ಕಷ್ಟ ಆಗುತ್ತಿದೆ. ಪುನೀತ್ ಬಗ್ಗೆ ಮಾತನಾಡಲು ನಮಗೆ ನಾಚಿಕೆ ಆಗುತ್ತೆ, ಒಂದೊಂದು ಸಲ ಅನ್ನಿಸುತ್ತದೆ. ಅವನ ಬಗ್ಗೆ ಮಾತನಾಡಿ, ಮಾತನಾಡಿನೇ ಈ ರೀತಿ ಆಗೋಯ್ತು ಅಂತಾ, ಯಾವುದೇ ಸಂದರ್ಶನ ಬಂದರೂ ಅವನ ಬಗ್ಗೆ ಮಾತನಾಡುತ್ತಿದೆ. ನನ್ನ ಕಣ್ಣು ದೃಷ್ಟಿನೇ ಆಗ್ಬಿಡ್ತು ಅನ್ಸುತ್ತೆ. ಅವನು ರಾಯಲ್ ಆಗಿ ಹುಟ್ಟಿದ್ದ. ರಾಯಲ್ ಆಗಿಯೇ ಇನ್ನು ಮುಂದೆ ಇರ್ತಾನೆ ಅಂತಾ ಅವನೊಂದಿಗಿದ್ದ ಕೊನೆ ಕಾರ್ಯಕ್ರಮದಲ್ಲೂ ಹೇಳಿದ್ದೆ. ಆದರೆ ದೇವರು ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ ಎಂದು ಕಣ್ಣೀರು ಇಟ್ಟರು.
ಇದನ್ನೂ ಓದಿ: ಪುನೀತ ನಮನ ಕಾರ್ಯಕ್ರಮ: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಗೆ ಮರಣೋತ್ತರ 'ಕರ್ನಾಟಕ ರತ್ನ' ಘೋಷಣೆ
ಪುನೀತ್ ಇಷ್ಟೊಂದು ಅಭಿಮಾನಿಗಳನ್ನು ಗಳಿಸಿಕೊಂಡಿದ್ದಕ್ಕೆ ಸಂತೋಷ ಆಗುತ್ತದೆ. ಎಲ್ಲರೂ ಒಂದೇ ದಿನ ಹೋಗಲೇ ಬೇಕು, ಆದರೆ, ಅಪ್ಪು ಇಷ್ಟು ಬೇಗ ಯಾಕೆ ಹೋದ ಅನ್ನೋದೆ ದುಃಖ. ನಾವು ದುಃಖ ಸಹಿಸಿಕೊಳ್ಳಲು ನಿಮ್ಮ ಪ್ರೀತಿಯೇ ಕಾರಣ. ಇವತ್ತು ನನ್ನ ತಮ್ಮನನ್ನು ಧ್ರುವ ಸರ್ಜಾ, ಯಶ್, ಸುದೀಪ್, ದರ್ಶನ್, ವಿಜಯ್, ಗಣೇಶ್, ವಿಶಾಲ್ ಎಲ್ಲರಲ್ಲೂ ನೋಡ್ತಿನಿ. ವಿಶಾಲ್ ನೋಡುತ್ತಿದ್ದರೆ ಪುನೀತರನ್ನೇ ನೋಡಿದಂತೆ ಆಗುತ್ತೆ. ಈ ಮಾತನ್ನು ನಾನು ಪುನೀತ್ ಗೆ ಹೇಳಿದ್ದೆ. ಈಗ ಅವರೆಲ್ಲ ಬಂದು ನಾವು ಇದ್ದೀವಿ ಅಂತ ಹೇಳಿದ್ರೆ ಎಷ್ಟೊಂದು ಖುಷಿ ಆಗುತ್ತೆ ಎಂದರು. ಪುನೀತ್ಗಾಗಿ ಹಾಡು ಹೇಳಿ ಗಾನ ನಮನ ಸಲ್ಲಿಸಿದರು.
ಪವರ್ ಹೋದ ಮೇಲೆ ನಾವು ಬಲ್ಬ್ ಏನು ಮಾಡಬೇಕು? ನನ್ನ ಆಯಸ್ಸು ನಿನಗೆ ಕೊಡುತ್ತೇನೆ ಅಂತ ನಾನು ಅವನಿಗೆ ಹೇಳಿದ್ದೆ. ಆದರೆ ಅವನು ತನ್ನ ಆಯಸ್ಸು ನನಗೆ ಕೊಟ್ಟು ಹೋದ’ ಪುನೀತ್ ಅವರನ್ನು ಹೂತ್ತಿಲ್ಲ, ಬಿತ್ತಿದ್ದೇವೆ. ಪುನೀತ್ ರೀತಿ ಇರುವ ನೂರಾರು ಜನ ಹುಟ್ಟಿ ಬರುತ್ತಾರೆ. ಹುಟ್ಟುವಾಗ ನನ್ನ ತಮ್ಮನಾಗಿ ಬಂದ. ವಾಪಸ್ ಹೋಗುವಾಗ ತಂದೆಯಾಗಿ ಹೋದ. ಹೇಗೆ ಬದುಕಬೇಕು ಎಂಬುದನ್ನು ನನಗೂ ಮತ್ತು ಶಿವಣ್ಣನಿಗೂ ತಿಳಿಸಿಕೊಟ್ಟು ಹೋದ. ದಯವಿಟ್ಟು ಬಂದುಬಿಡು ಕಂದಾ. ಇಷ್ಟು ದಿನ ಈ ನೋವನ್ನು ತಡೆದುಕೊಂಡಿದ್ದೆ. ನಿನ್ನ ಜಾಗಕ್ಕೆ ನಾನು ಬರುತ್ತೇನೆ ಎಂದು ರಾಘಣ್ಣ ಕಂಬನಿ ಸುರಿಸಿದರು.
Advertisement