6 ದಶಕಗಳ ಕಾಲ ಕನ್ನಡಿಗರ ಮನೆ ಮಾತಾಗಿದ್ದ ಶಿವರಾಂ ನಡೆದು ಬಂದ ಹಾದಿ!

ಕನ್ನಡ ಚಿತ್ರರಂಗದಲ್ಲಿ ಶಿವರಾಮಣ್ಣ ಹಾಗೂ ಶರಪಂಜರ ಶಿವರಾಂ ಎಂದೇ ಗುರುತಿಸಿಕೊಂಡಿದ್ದ, ಸುಮಾರು ಆರು ದಶಕಗಳ ಕಾಲ ಕನ್ನಡಿಗರ ಮನೆ ಮಾತಾಗಿದ್ದ ಹಿರಿಯ ನಟ ಶಿವರಾಂ ಇನ್ನು ನೆನಪು ಮಾತ್ರ.
ನಟ ಶಿವರಾಮ್ ಇನ್ನಿಲ್ಲ
ನಟ ಶಿವರಾಮ್ ಇನ್ನಿಲ್ಲ

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಶಿವರಾಮಣ್ಣ ಹಾಗೂ ಶರಪಂಜರ ಶಿವರಾಂ ಎಂದೇ ಗುರುತಿಸಿಕೊಂಡಿದ್ದ, ಸುಮಾರು ಆರು ದಶಕಗಳ ಕಾಲ ಕನ್ನಡಿಗರ ಮನೆ ಮಾತಾಗಿದ್ದ ಹಿರಿಯ ನಟ ಶಿವರಾಂ ಇನ್ನು ನೆನಪು ಮಾತ್ರ.
  
ಎರಡು ದಿನಗಳ ಹಿಂದೆ ಮನೆಯಲ್ಲಿ ಬಿದ್ದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಶನಿವಾರ ಮಧ್ಯಾಹ್ನ  ಇಹಲೋಕ ತ್ಯಜಿಸಿದರು. 1938ರ ಜನವರಿ 28ರಂದು ಜನಿಸಿದ ಶಿವರಾಂ, 1958ರಲ್ಲಿ ಚಿತ್ರರಂಗ ಪ್ರವೇಶ ಮಾಡಿದರು. ಚಿಕ್ಕ ಪುಟ್ಟ ಪಾತ್ರಗಳ ಮೂಲಕ ಬಂದವರು ಮುಂದೆ ಚಿತ್ರಗಳನ್ನು ನಿರ್ಮಾಣ ಮಾಡುವ ಮಟ್ಟಕ್ಕೆ ಬೆಳೆದು ನಿಂತರು. ಅವರ ಸಹೋದರ ಬಾಲಿವುಡ್ ನ ಖ್ಯಾತ ನಿರ್ದೇಶಕರಾಗಿದ್ದ ರಾಮನಾಥನ್ ಜೊತೆ ಸೇರಿ 1972ರಲ್ಲಿ ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ಹೃದಯ ಸಂಗಮ' ಚಿತ್ರವನ್ನು ನಿರ್ಮಾಣ ಮಾಡಿದರು.

ಇದನ್ನೂ ಓದಿ: ಕನ್ನಡ ಚಿತ್ರರಂಗದ ಹಿರಿಯ ನಟ ಎಸ್ ಶಿವರಾಮ್ ಇನ್ನಿಲ್ಲ
  
ಬಳಿಕ ಪುಟ್ಟಣ್ಣನವರ ಸೂಪರ್ ಹಿಟ್ ಚಿತ್ರ 'ಗೆಜ್ಜೆಪೂಜೆ' ಹಾಗೂ 'ಉಪಾಸನೆ' ಚಿತ್ರಗಳನ್ನು ನಿರ್ಮಿಸಿದರು. ರಾಶಿ ಬ್ರದರ್ಸ್‌ ಮೂಲಕ ಸೂಪರ್ ಸ್ಟಾರ್ ಗಳಾದ ಅಮಿತಾಬ್ ಬಚ್ಚನ್, ಕಮಲ್ ಹಾಸನ್, ರಜನಿಕಾಂತ್ ಅಭಿನಯದ ಬಾಲಿವುಡ್ ಚಿತ್ರ 'ಗಿರಫ್ದಾರ್' ಚಿತ್ರ ನಿರ್ಮಾಣವಾಗಿತ್ತು. ಅದೇ ರೀತಿ ರಜನಿಕಾಂತ್ ಅವರ 'ಧರ್ಮದೊರೈ' ಮುಂತಾದ ಚಿತ್ರಗಳು ನಿರ್ಮಾಣವಾಗಿದ್ದವು. ವರನಟ ಡಾ.ರಾಜ್ ಕುಮಾರ್ ಅವರ 'ನಾನೊಬ್ಬಕಳ್ಳ' ಚಿತ್ರವನ್ನು ಕೂಡ ರಾಶಿ ಬ್ರದರ್ಸ್ ನಿರ್ಮಿಸಿದ್ದರು. 'ಡ್ರೈವರ್ ಹನುಮಂತು' ಚಿತ್ರವನ್ನು ನಿರ್ದೇಶನ ಮಾಡಿದ್ದ ಶಿವರಾಂ, ಅದರಲ್ಲಿ ಹಾಡನ್ನು ಕೂಡ ಹಾಡಿದ್ದರು.
  
ಶಿವರಾಂ ನಟನೆಯ ಮರೆಯಲಾರದಷ್ಟು ಅಸಂಖ್ಯಾತ ಚಿತ್ರಗಳಿವೆ. ಅದರಲ್ಲಿ ಶರಪಂಪಜರ ಚಿತ್ರದ ಅಡುಗೆ ಭಟ್ಟ, ಶುಭಮಂಗಳ ಚಿತ್ರದ ಸ್ನೇಹಿತ, ನಾಗರಹಾವು ಚಿತ್ರದ ವರದ ಮೊದಲಾದ ಪಾತ್ರಗಳು ಮನೆ ಮಾತಾಗಿದ್ದವು. ಲಗ್ನಪತ್ರಿಕೆ ಮೂಲಕ ಶ್ರೀನಾಥ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ ಕೀರ್ತಿ ಶಿವರಾಮಣ್ಣ ಅವರಿಗೆ ಸೇರುತ್ತದೆ. ಪುಟ್ಟಣ್ಣ ಕಣಗಾಲ್ ಹಾಗೂ ಸಿಂಗೀತಂ ಶ್ರೀನಿವಾಸರಾವ್ ಅವರಿಗೆ ಸಹಾಯಕರಾಗಿ ದುಡಿದ ಹೆಸರೂ ಇದೆ.

ಇದನ್ನೂ ಓದಿ: ಶಿವರಾಂ ನಿಧನಕ್ಕೆ ರಾಜಕೀಯ ನೇತಾರರ ಸಂತಾಪ: ಅಗಲಿದ ಹಿರಿಯ ಚೇತನಕ್ಕೆ ಸಿಎಂ ಬೊಮ್ಮಾಯಿ ಸೇರಿ ಗಣ್ಯರಿಂದ ಕಂಬನಿ
  
ಚಿತ್ರರಂಗದ ಯಾವುದೇ ಕೆಲಸ ಕಾರ್ಯಗಳಲ್ಲಿ ಮುಂಚೂಣಿಯಲ್ಲಿರುತ್ತಿದ್ದ ಶಿವರಾಮಣ್ಣ, ವರನಟ ಡಾ.ರಾಜ್ ಕುಮಾರ್ ಅವರ ಜೊತೆ ಸೇರಿ ಕಲಾವಿದರ ಸಂಘ ಕಟ್ಟುವಲ್ಲಿ ಶ್ರಮಿಸಿದರು. ಮುಖ್ಯವಾಗಿ ಡಾ.ರಾಜ್ ಸೇರಿದಂತೆ ಚಿತ್ರರಂಗದ ಮಂದಿ ಅಯ್ಯಪ್ಪ ಸ್ವಾಮಿ ಮಾಲೆ ಹಾಕಿದಾಗ ಅವರು ಗುರುಸ್ವಾಮಿಯಾಗಿ ಮಾರ್ಗದರ್ಶನ ನೀಡುತ್ತಿದ್ದರು. ಅಯ್ಯಪ್ಪ ಸ್ವಾಮಿಯ ಪರಮ ಭಕ್ತರಾಗಿದ್ದ ಅವರು ತಮ್ಮ ಮನೆಯ ನಾಲ್ಕನೇ ಮಹಡಿಯಲ್ಲಿ ಅಯ್ಯಪ್ಪಸ್ವಾಮಿಯ ದೇವಸ್ಥಾನವನ್ನೇ ನಿರ್ಮಿಸಿಕೊಂಡಿದ್ದರು. ವಿಪರ್ಯಾಸವೆಂದರೆ ಅದೇ ದೇವರ ಗುಡಿಯಲ್ಲೇ ಜಾರಿ ಬಿದ್ದು ಆಸ್ಪತ್ರೆ ಸೇರಿದ್ದರು.
  
ಶಿವರಾಂ ಅವರ ನಿಧನಕ್ಕೆ ಹಿರಿಯ ನಟರಾದ ಶ್ರೀನಿವಾಸಮೂರ್ತಿ, ದ್ವಾರಕೀಶ್, ಶ್ರೀನಾಥ್, ರಮೇಶ್ ಭಟ್ ಹಾಗೂ ಇಡೀ ಚಿತ್ರರಂಗ ಕಂಬನಿ ಮಿಡಿದಿದೆ. 

- ಸ್ನೇಹಪ್ರಿಯ ನಾಗರಾಜ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com