ಸಂಚಾರಿ ವಿಜಯ್ ನಮ್ಮನ್ನಗಲಿದ್ದಾರೆ: ಅಪೋಲೋ ಆಸ್ಪತ್ರೆ ಹೆಲ್ತ್ ಬುಲೆಟಿನ್

ಮೆದುಳು ನಿಷ್ಕ್ರಿಯಗೊಂಡು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ನಟ ಸಂಚಾರಿ ವಿಜಯ್ ಅವರು ಮಂಗಳವಾರ ನಿಧನ ಹೊಂದಿದ್ದಾರೆಂದು ಅಪೋಲೋ ಆಸ್ಪತ್ರೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. 
ಸಂಚಾರಿ ವಿಜಯ್
ಸಂಚಾರಿ ವಿಜಯ್

ಬೆಂಗಳೂರು: ಮೆದುಳು ನಿಷ್ಕ್ರಿಯಗೊಂಡು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ನಟ ಸಂಚಾರಿ ವಿಜಯ್ ಅವರು ಮಂಗಳವಾರ ನಿಧನ ಹೊಂದಿದ್ದಾರೆಂದು ಅಪೋಲೋ ಆಸ್ಪತ್ರೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. 

ಸಂಚಾರಿ ವಿಜಯ್ ಅವರು 15-6-2021ರ ಬೆಳಗಿನ ಜಾವ 3.34ಕ್ಕೆ ನಿಧನರಾದರು ಎಂದು ತಿಳಿಸಲು ವಿಷಾಧಿಸುತ್ತೇವೆ, ಅವರ ನಿಧನಕ್ಕೆ ಇಡೀ ಅಪೊಲೊ ಕುಟುಂಬವು ಸಂತಾಪ ಸೂಚಿಸುತ್ತದೆ ಎಂದು ಆಸ್ಪತ್ರೆ ತನ್ನ ಹೆಲ್ತ್ ಬುಲೆಟಿನ್ ನಲ್ಲಿ ಮಾಹಿತಿ ನೀಡಿದೆ. 

ಇಂದು ಬೆಳಗಿನ ಜಾವ 3.34ಕ್ಕೆ ವೈದ್ಯರು ಅಧಿಕೃತ ಘೋಷಣೆ ಮಾಡಿದ್ದಾರೆ. ಮೆದುಳಿಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಅವರಿಗೆ ತಕ್ಷಣ ಶಸ್ತ್ರ ಚಿಕಿತ್ಸೆ ಮಾಡಿ, ಐಸಿಯುನಲ್ಲಿ ಇರಿಸಲಾಗಿತ್ತು. ಮೆದುಳಿನಲ್ಲಿ ತೀವ್ರ ರಕ್ತಸ್ರಾವ ಆದ ಪರಿಣಾಮ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದರು.

'ಮೆದುಳಿನ ಬಲಭಾಗದಲ್ಲಿ ಹೆಚ್ಚು ಹೊಡೆತ ಬಿದ್ದು ತೀವ್ರ ರಕ್ತಸ್ರಾವ ಆಗಿತ್ತು. ಭಾನುವಾರ ಬೆಳಗ್ಗೆ ನಾಲ್ಕು ಗಂಟೆ ಸುಮಾರಿಗೆ ಸರ್ಜರಿ ಮಾಡಿದ್ದರು, ಅದಾಗಿ 36 ಗಂಟೆ ಕಳೆದರೂ ಅವರ ಬ್ರೇನ್​ ಕಡೆಯಿಂದ ಪ್ರತಿಕ್ರಿಯೆ ಇರಲಿಲ್ಲ. ಮೆದುಳಿನ ಕೆಲಸಗಳು ನಿಂತು ಹೋಯಿತು. ಇದನ್ನು ಬ್ರೇನ್​ ಡೆಡ್​ ಎನ್ನುತ್ತೇವೆ'' ಎಂದು ಅಪೊಲೊ ಆಸ್ಪತ್ರೆ ವೈದ್ಯರು ತಿಳಿಸಿದ್ದರು.

ವೈದ್ಯರ ಎಲ್ಲ ಪ್ರಯತ್ನಗಳು ವಿಫಲವಾಗಿವೆ. ಸಂಚಾರಿ ವಿಜಯ್​ ಬ್ರೇನ್ ​ಡೆಡ್​ ಆದ ಬಳಿಕ ಅವರ ಅಂಗಾಂಗ ದಾನಕ್ಕೆ ಕುಟುಂಬದವರು ಸಮ್ಮತಿ ನೀಡಿದರು. ಇಂದು ಮಧ್ಯಾಹ್ನ 1.15ಕ್ಕೆ ವೈದ್ಯರು ಅಂಗಾಂಗ ದಾನದ ಪ್ರೋಟೋಕಾಲ್​ ಪ್ರಕಾರ ಕಾರ್ಯ ನಿರ್ವಹಿಸಿದ್ದಾರೆ ಎಂಬುದು ಹೆಲ್ತ್​ ಬುಲೆಟಿನ್​ ಮೂಲಕ ತಿಳಿದುಬಂದಿದೆ.

48 ಗಂಟೆಗಳು ಕಳೆದರೂ ಅವರ ದೇಹ ಚಿಕಿತ್ಸೆಗೆ ಸ್ಪಂದಿಸುತ್ತಿರಲಿಲ್ಲ. ಪರಿಣಾಮವಾಗಿ ಸಂಚಾರಿ ವಿಜಯ್​ ಮೃತರಾಗಿದ್ದಾರೆ. ಈ ಸುದ್ದಿ ಇಡೀ ಚಿತ್ರರಂಗಕ್ಕೆ ಆಘಾತ ಉಂಟು ಮಾಡಿದೆ.

ರಾತ್ರಿ 9.30ಕ್ಕೆ ಅವರ ಅಂಗಾಂಗ ಪಡೆಯುವ ಪ್ರಕ್ರಿಯೆ ಶುರು ಮಾಡಿ, 2 ಕಿಡ್ನಿ, ಯಕೃತ್ತು, ಶ್ವಾಸಕೋಶ ಹಾಗೂ ಹೃದಯ ಕವಾಟಗಳನ್ನು ಅಂಗಾಗ ಕಸಿಗಾಗಿ ಕಾಯುತ್ತಿದ್ದವರಿಗೆ ಜೋಡಿಸಲಾಗಿದೆ. ರಾಜ್ಯ ಸರ್ಕಾರದ ಜೀವನ ಸಾರ್ಥಕತೆ ಸಂಸ್ಥೆಯಲ್ಲಿ ನೋಂದಣಿ ಮಾಡಿಕೊಂಡು ಅಂಗಾಂಗಕ್ಕಾಗಿ ಕಾಯುತ್ತಿದ್ದ ಅವರದ್ದೇ ರಕ್ತದ ಗುಂಪಿನವರಿಗೆ ಸಂಚಾರಿ ವಿಜಯ್ ಅವರ ಅಂಗಾಂಗಗಳನ್ನು ಕಸಿ ಮಾಡಲಾಯಿತು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. 

ಅಂತಿಮ ದರ್ಶನಕ್ಕೆ ಅವಕಾಶ
ಅಗಲಿದ ರಾಷ್ಟ್ರ ಪ್ರಶಸ್ತಿ ವಿಜೇತ ನಟನ ಅಂತಿಮ ದರ್ಶನವನ್ನು ಅಭಿಮಾನಿಗಳಿಗೆ ಕಲ್ಪಿಸಲು ನಿರ್ಧರಿಸಲಾಗಿದೆ. ಸರ್ಕಾರದ ಕಡೆಯಿಂದಲೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಾಳೆ ಬೆಳಿಗ್ಗೆ 8-10 ಗಂಟೆವರೆಗೂ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ನಿರ್ದೇಶಕ‌ ಮನ್ಸೋರೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com