'ಅಂಗಾಂಗ ದಾನ' ಸಾಮಾನ್ಯ ಸಂಗತಿಯಲ್ಲ, ಸಂಚಾರಿ ವಿಜಯ್ ಕುಟುಂಬಕ್ಕೆ ನನ್ನ ವಂದನೆಗಳು: ಸಚಿವ ಲಿಂಬಾವಳಿ, ಡಿಸಿಎಂ ಅಶ್ವಥ್ ನಾರಾಯಣ

ಅಪಘಾತದಲ್ಲಿ ನಿಧನರಾದ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ಸಂಚಾರಿ ವಿಜಯ್ ಅವರ ನಿಧನಕ್ಕೆ ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ, ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತೀವ್ರ ಶೋಕ ವ್ಯಕ್ತಪಡಿಸಿದ್ದು, ವಿಜಯ್ ಅವರ  ಅಂಗಾಂಗ ದಾನ ಮಾಡಿದ ಅವರ ಕುಟುಂಬಸ್ಥರ ನಿರ್ಧಾರವನ್ನು ಶ್ಲಾಘಿಸಿದ್ದಾರೆ.

Published: 15th June 2021 11:16 AM  |   Last Updated: 15th June 2021 12:40 PM   |  A+A-


Sanchari Vijay

ಸಂಚಾರಿ ವಿಜಯ್

Posted By : Srinivasamurthy VN
Source : Online Desk

ಬೆಂಗಳೂರು: ಅಪಘಾತದಲ್ಲಿ ನಿಧನರಾದ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ಸಂಚಾರಿ ವಿಜಯ್ ಅವರ ನಿಧನಕ್ಕೆ ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ, ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತೀವ್ರ ಶೋಕ ವ್ಯಕ್ತಪಡಿಸಿದ್ದು, ವಿಜಯ್ ಅವರ  ಅಂಗಾಂಗ ದಾನ ಮಾಡಿದ ಅವರ ಕುಟುಂಬಸ್ಥರ ನಿರ್ಧಾರವನ್ನು ಶ್ಲಾಘಿಸಿದ್ದಾರೆ.

ನಿನ್ನೆ ಸತತ ಪ್ರಯತ್ನಗಳ ಹೊರತಾಗಿಯೂ ಅಪೋಲೋ ಆಸ್ಪತ್ರೆ ವೈದ್ಯರು ಸಂಚಾರಿ ವಿಜಯ್ ಅವರ ಮೆದುಳು ನಿಷ್ಕ್ರಿಯ ಗೊಂಡಿದೆ ಎಂದು ಹೇಳಿದರು. ಹೀಗಾಗಿ ಅವರ ಕುಟುಂಬಸ್ಥರು ವಿಜಯ್ ಅವರ ಅಂಗಾಂಗ ದಾನ ಮಾಡಲು ನಿರ್ಧರಿಸಿದ್ದು, ಅದರಂತೆ ವಿಜಯ್ ಅವರ ಕಣ್ಣುಗಳು,  ಹೃದಯ, ಕಿಡ್ನಿಗಳನ್ನು ಅಂಗಾಂಗ ಕಸಿ ಶಸ್ತ್ರಚಿಕಿತ್ಸೆ ಮೂಲಕ ತೆಗೆಯಲಾಗಿದ್ದು, 7 ಮಂದಿಗೆ ಇದನ್ನು ಕಸಿ ಮಾಡಲಾಗುತ್ತದೆ. ಆ ಮೂಲಕ ವಿಜಯ್ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದು, 7 ಮಂದಿಗೆ ನೆರವಾಗಿದ್ದಾರೆ.

ಇದೇ ವಿಚಾರವಾಗಿ ಮಾತನಾಡಿರುವ ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಅವರು, 'ವಿಜಯ್ ತಮ್ಮ ಜೀವನ ಯಾನದ ಸಂಚಾರವನ್ನು ಅಪೂರ್ಣವಾಗಿಸಿ ಬದುಕು ತೊರೆದು ಹೋಗಿದ್ದಾರೆ. ಆದರೆ ಬದುಕಿನ ಸಂಚಾರದ ಹಾದಿಯಲ್ಲಿ ಅವರು ಅಂಗಾಂಗ ದಾನ  ಮಾಡುವ ಮೂಲಕ ಹೆಜ್ಜೆ ಗುರುತುಗಳನ್ನು ಉಳಿಸಿ ಹೋಗಿದ್ದಾರೆ. ಇದು ಅತ್ಯಂತ ಭಾವನಾತ್ಮಕ, ಮನಮಿಡಿಯುವ ಸಂದರ್ಭ ಎಂದು ಹೇಳಿದ್ದಾರೆ.

'ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ಸಂಚಾರಿ ವಿಜಯ್ ಅವರು ನಿಧನರಾದ ಸುದ್ದಿ ತಿಳಿದು ಅತೀವ ದುಃಖವಾಗಿದೆ. ವಿಜಯ್ ತಮ್ಮ ಜೀವನ ಯಾನದ ಸಂಚಾರವನ್ನು ಅಪೂರ್ಣವಾಗಿಸಿ ಬದುಕು ತೊರೆದು  ಹೋಗಿದ್ದಾರೆ. ಪ್ರಗತಿಪರ ಚಿಂತನೆಯುಳ್ಳ, ಸಂವೇದನಾಶೀಲ ನಟ  ಎನಿಸಿಕೊಂಡಿದ್ದ ವಿಜಯ್ ಸಾವಿನಲ್ಲೂ ತಮ್ಮ ಆದರ್ಶ ಮೆರೆದಿದ್ದಾರೆ. "ಅಂಗಾಂಗ ದಾನ" ಮಾಡಿದ ಅವರ ಕುಟುಂಬದ ನಿರ್ಣಯಕ್ಕೆ ನನ್ನ ಅನಂತ ವಂದನೆಗಳು. ಇಂತಹ ನಿರ್ಧಾರ ಕೈಗೊಳ್ಳುವುದು ಸಾಮಾನ್ಯ ಸಂಗತಿಯಲ್ಲ ,ಇತರರಿಗೆ ಮಾದರಿಯಾದ ಅವರ ಕುಟುಂಬಕ್ಕೆ ನನ್ನ  ಕೃತಜ್ಞತೆಗಳು ಮತ್ತು ಸಂತಾಪಗಳನ್ನು ಸಲ್ಲಿಸುತ್ತೇನೆ. ಅವರ ದುಃಖದಲ್ಲಿ ನಾನೂ ಭಾಗಿ, ಭಗವಂತ ವಿಜಯ ಅವರ ಆತ್ಮಕ್ಕೆ ಶಾಂತಿ ನೀಡಲಿ, ಕುಟುಂಬಕ್ಕೆ , ಅಭಿಮಾನಿಗಳಿಗೆ ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿ ನೀಡಲಿ ಎಂದು  ಪ್ರಾರ್ಥಿಸುತ್ತೇನೆ ಎಂದು ಸರಣಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಸಂಚಾರ ಮುಗಿಸಿದ ವಿಜಯ್: ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನ, ಸ್ವಗ್ರಾಮ ಪಂಚನಹಳ್ಳಿಯಲ್ಲಿಂದು ಅಂತ್ಯಕ್ರಿಯೆ

ವಿಜಯ್ ಬದುಕಿ ಬರುತ್ತಾರೆ ಎಂಬ ವಿಶ್ವಾಸವಿತ್ತು.. ಆದರೆ..: ಡಿಸಿಎಂ ಅಶ್ವಥ್ ನಾರಾಯಣ
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಾ.ಸಿಎನ್ ಅಶ್ವಥ್ ನಾರಾಯಣ ಅವರು, 'ಚಿಕಿತ್ಸೆ ಪಡೆಯುತ್ತಿದ್ದ ವಿಜಯ್ ಬದುಕಿ ಬರುತ್ತಾರೆ ಎಂಬ ವಿಶ್ವಾಸ ನಂಬಿಕೆ ನನಗಿತ್ತು. ಅವರ ಕುಟುಂಬ ಸದಸ್ಯರು, ಅಭಿಮಾನಿಗಳಂತೆ ನಾನು ಕೂಡ ಪ್ರಾರ್ಥನೆ ಮಾಡಿದ್ದೆ.  ಸೋಮವಾರ ಆಸ್ಪತ್ರೆಗೂ ಭೇಟಿ ನೀಡಿ ವೆಂಟಿಲೇಟರ್ ಮೇಲೆ ಚಿಕಿತ್ಸೆ ಪಡೆಯುತ್ತಿದ್ದ ಅವರು ಉಸಿರಾಡುತ್ತಿದ್ದರು. ಹೀಗಾಗಿ ಅವರು ಬದುಕುಳಿಯುತ್ತಾರೆಂಬ ನಿರೀಕ್ಷೆ ಇತ್ತು. ಕೆಲ ದಿನಗಳ ಚಿಕಿತ್ಸೆ ನಂತರ ಅವರು ಮನೆ ಮರಳಲಿದ್ದಾರೆಂಬ ವಿಶ್ವಾಸ ಬಂದಿತ್ತು. ಆದರೆ, ಎಲ್ಲರ ನಿರೀಕ್ಷೆ ಹುಸಿ  ಮಾಡಿ ಅವರು ಅಗಲಿದ್ದಾರೆ. ಇದು ನನಗೆ ವೈಯಕ್ತಿಕವಾಗಿ ಬಹಳಷ್ಟು ದುಃಖ ಉಂಟು ಮಾಡಿದೆ. ಕನ್ನಡಕ್ಕೆ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟ ಹಿರಿಮೆ ಅವರದ್ದು. ‘ನಾನು ಅವನಲ್ಲ…ಅವಳು’ ಚಿತ್ರದಲ್ಲಿ ಅವರದ್ದು ಅಮೋಘ ನಟನೆ. ಅಷ್ಟೇ ಅಲ್ಲ ಅವರು ನಟಿಸಿದ ಎಲ್ಲ ಪಾತ್ರಗಳಲ್ಲೂ  ಜೀವಿಸುತ್ತಿದ್ದರು. ಅವರ ನಿಧನ ಕನ್ನಡ ಚಿತ್ರರಂಗಕ್ಕೆ ಭರಿಸಲಾಗದ ನಷ್ಟ. ಈ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬದ ಸದಸ್ಯರಿಗೆ, ಅಭಿಮಾನಿಗಳಿ ಹಾಗೂ ಚಿತ್ರರಂಗಕ್ಕೆ ದಯಪಾಲಿಸಲಿ ಎಂದು ಹೇಳಿದ್ದಾರೆ.
 


Stay up to date on all the latest ಸಿನಿಮಾ ಸುದ್ದಿ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp