ಮಿಡಲ್ ಕ್ಲಾಸ್ ವ್ಯಕ್ತಿಯ ಫರ್ಸ್ಟ್ ಕ್ಲಾಸ್ ಸ್ಟೋರಿ 'ರತ್ನನ್ ಪ್ರಪಂಚ': ಡಾಲಿ ಧನಂಜಯ ಸಂದರ್ಶನ

ಸರ್, ಸಂಜೆ ಬೆಂಗಳೂರು ರಸ್ತೆಯೊಂದರಲ್ಲಿ ಟ್ರಾಫಿಕ್ ಸಿಗ್ನಲ್ ಬೀಳುತ್ತೆ. ಗಾಡಿ ನಿಲ್ಲಿಸಿ ಅಕ್ಕಪಕ್ಕ ಕಣ್ಣು ಹಾಯಿಸಿದಾಗ, ಮನೆ ಸೇರಿಕೊಳ್ಳುವ ಧಾವಂತದಲ್ಲಿರುವ ಹೆಲ್ಮೆಟ್ ತೊಟ್ಟ ಒಬ್ಬ ವ್ಯಕ್ತಿ ಸ್ಪ್ಲೆಂಡರ್ ಬೈಕಿನಲ್ಲಿ ಕಾಣಿಸುತ್ತಾನೆ. ಅವನೇ ರತ್ನಾಕರ.​ ರತ್ನನ್ ಪ್ರಪಂಚ ಸಿನಿಮಾದ ಕಥಾನಾಯಕ. ದಿ ಕಾಮನ್ ಮ್ಯಾನ್!
ರತ್ನನ್ ಪ್ರಪಂಚ ಸಿನಿಮಾದಲ್ಲಿ ಡಾಲಿ ಧನಂಜಯ
ರತ್ನನ್ ಪ್ರಪಂಚ ಸಿನಿಮಾದಲ್ಲಿ ಡಾಲಿ ಧನಂಜಯ

ಸಂದರ್ಶನ: ಹರ್ಷವರ್ಧನ್ ಸುಳ್ಯ


ನಿಮ್ಮ ರತ್ನನ್ ಪ್ರಪಂಚ ಸಿನಿಮಾ ಕಥಾನಾಯಕ ರತ್ನಾಕರ ಜನರಿಗೆ ಯಾಕೆ ಇಷ್ಟವಾಗುತ್ತಾನೆ? 

ಸರ್, ಸಂಜೆ ಬೆಂಗಳೂರು ರಸ್ತೆಯೊಂದರಲ್ಲಿ ಟ್ರಾಫಿಕ್ ಸಿಗ್ನಲ್ ಬೀಳುತ್ತೆ. ಗಾಡಿ ನಿಲ್ಲಿಸಿ ಅಕ್ಕಪಕ್ಕ ಕಣ್ಣು ಹಾಯಿಸಿದಾಗ, ಮನೆ ಸೇರಿಕೊಳ್ಳುವ ಧಾವಂತದಲ್ಲಿರುವ ಹೆಲ್ಮೆಟ್ ತೊಟ್ಟ ಒಬ್ಬ ವ್ಯಕ್ತಿ ಕಾಣಿಸುತ್ತಾನೆ. ಅವನೇ ರತ್ನಾಕರ. ದಿನಸಿ ಅಂಗಡಿ ಮುಂದೆ ಇಷ್ಟೂದ್ದದ ಸಾಮಾನು ಚೀಟಿ ಹಿಡಿದು ತಲೆಕೆಡಿಸಿಕೊಂಡು ಬಿಲ್ ಲೆಕ್ಕ ಹಾಕುತ್ತಿರುತ್ತಾನಲ್ಲ ಅವನು ರತ್ನಾಕರ. ಸಿಂಪಲ್ಲಾಗ್ ಹೇಳಬೇಕೂಂದರೆ ರತ್ನಾಕರ ಒಬ್ಬ ಕಾಮನ್ ಮ್ಯಾನ್. ಅವನು ಎಲ್ಲಾ ಕಡೆಯೂ ಇರುತ್ತಾನೆ. ಪ್ರತಿಯೊಬ್ಬ ಮಿಡಲ್ ಕ್ಲಾಸ್ ಮಂದಿಯೂ ರತ್ನಾಕರನ ಜೊತೆ ಕನೆಕ್ಟ್ ಮಾಡಿಕೊಳ್ಳಬಹುದು.


ರತ್ನಾಕರನಿಗೂ ಧನಂಜಯ ಅವರಿಗೂ ಏನು ಹೋಲಿಕೆ?

ನಾನು ಕೂಡಾ ಮಿಡಲ್ ಕ್ಲಾಸ್ ಕುಟುಂಬದಿಂದ ಬಂದೋನು. ಇನ್ಫೋಸಿಸ್ ನಲ್ಲಿ ಉದ್ಯೋಗಿಯಾಗಿದ್ದಾಗ ಸ್ಪ್ಲೆಂಡರ್ ಬೈಕಿನಲ್ಲಿ ರತ್ನಾಕರನ ಹಾಗೆಯೇ ಹೆಲ್ಮೆಟ್ ತೊಟ್ಟು ಓಡಾಡಿದ್ಡೇನೆ. ಹೀಗಾಗಿಯೇ ರತ್ನಾಕರನ ಜೊತೆ ಹಲವು ಸಂದರ್ಭಗಳಲ್ಲಿ ಕನೆಕ್ಟ್ ಮಾಡೀಕೊಳ್ಳಲು ಸಾಧ್ಯವಾಯಿತು. ರತ್ನಾಕರನನ್ನು ಏಲ್ಲಾ ರೀತಿಯಲ್ಲೂ ಹೋಲುತ್ತೇನೆ ಎನ್ನುವುದಿಲ್ಲ. ರತ್ನಾಕರ ಎಲ್ಲಾ ಕಾಮನ್ ಮ್ಯಾನ್ ಗಳ ಒಟ್ಟು ಮಿಶ್ರಣ.


ಸಿನಿಮಾ ಒಪ್ಪಿಕೊಳ್ಳೋಕೆ ಕಾರಣಗಳೇನು?

ಟಗರು ಸಿನಿಮಾದಲ್ಲಿ ಡಾಲಿ ಪಾತ್ರ ಹಿಟ್ ಆದ ಮೇಲೆ ಅದೇ ಶೇಡ್ ಇರೋ ಸಿನಿಮಾಗಳೇ ಸಿಗತೊಡಗಿದವು. ಅದರ ನಡುವೆ ವಿಭಿನ್ನ ಬಗೆಯ ಪಾತ್ರ ಮಾಡಬೇಕು ಅಂತಾ ನಾನೂನೂ ತುಂಬಾ ಕಾಯ್ತಾ ಇದ್ದೆ. ಆ ಸಮಯದಲ್ಲೇ ರತ್ನನ್ ಪ್ರಪಂಚ ಸಿನಿಮಾ ಅವಕಾಶ ಸಿಕ್ಕಿದ್ದು. ಡಾಲಿ ಥರದ ಪಾತ್ರಗಳನ್ನು ಮಾಡಬಾರದು ಅಂತಿಲ್ಲ, ಆದರೆ ಅದನ್ನೂ ಸೇರಿಸಿ ವಿಭಿನ್ನ ಬಗೆಯ ಪಾತ್ರಗಳನ್ನು ನಿರ್ವಹಿಸಬೇಕು ಅನ್ನೋದು ಒಬ್ಬ ಕಲಾವಿದನಾಗಿ ಆಸೆ ಪಡುತ್ತೇನೆ. ಪಾತ್ರದ ಆಯ್ಕೆ ವಿಚಾರದಲ್ಲಿ ವರ್ಸಟೈಲ್ ಆಗಿರಬೇಕು. ರೋಹಿತ್ ಪದಕಿ ಈ ಸಿನಿಮಾ ಕಥೆ ಹೇಳಿದಾಗ ಕಣ್ಣಲ್ಲಿ ನೀರು ತುಂಬ್ಕೊಳ್ತು. ಕೆಲ ದಿನಗಳವರೆಗೆ ಅದರ ಗುಂಗಿನಿಂದ ನಾನು ಹೊರ ಬರಲಿಲ್ಲ. ಈ ಸಿನಿಮಾ ಮಾಡ್ಲೇಬೇಕು ಅಂತ ಅವತ್ತೇ ಡಿಸೈಡ್ ಆಗೋದೆ.


ಟ್ರೇಲರ್ ನೋಡಿದರೆ ಸಿನಿಮಾ ಲೊಕೇಶನ್ ಗಳು ಎಲ್ಲಿಂದ ಎಲ್ಲಿಗೋ ಕರೆದೊಯ್ಯುವಂತಿದೆಯಲ್ಲ...

ಹೌದು. ಎಲ್ಲರ ಜೀವನದಲ್ಲೂ ಒಂದಲ್ಲ ಒಂದು ಹಂತದಲ್ಲಿ ಟ್ವಿಸ್ಟ್ ಬರುವಂತೆ ಕಥಾನಾಯಕ ರತ್ನಾಕರನ ಜೀವನದಲ್ಲೂ ಒಂದು ಟ್ವಿಸ್ಟ್ ಬರುತ್ತೆ. ಅಲ್ಲಿಂದ ಅವನ ಹುಡುಕಾಟ ಪ್ರಾರಂಭವಾಗುತ್ತದೆ. ಅದು ಅವನನ್ನು ದೇಶದ ಯಾವ ಯಾವುದೋ ಮೂಲೆಗಳಿಗೆ ಕರೆದೊಯ್ಯುತ್ತದೆ. ಸಿನಿಮಾದ ಗ್ರೇಟ್ ನೆಸ್ ಎಂದರೆ ಸಿನಿಮಾ ಕೊನೆಗೊಂಡ ನಂತರವೂ ರತ್ನಾಕರನ ಹುಡುಕಾಟ ಕೊನೆಯಾಗೋದಿಲ್ಲ. ಅದು ನಿರಂತರ. ರಿಯಲ್ ಲೈಫಲ್ಲೂ ಹಾಗೇ ಅಲ್ವಾ...


ಸರ್ ಈ ಸಿನಿಮಾ ಟೈಟಲ್ ಕೇಳಿದ ಕೂಡ್ಲೆ ನಮ್ ಗಳಿಗೆ ಮೊದಲು ತಲೆಗೆ ಬಂದಿದ್ದು ಜಿಪಿ ರಾಜರತ್ನಂ ಅವರ 'ರತ್ನನ್ ಪದ'. ಅದಕ್ಕೂ ಸಿನಿಮಾಗೂ ಏನಾದರೂ ಲಿಂಕ್ ಇದೆಯಾ?

ಇಲ್ಲ. ಎಲ್ಲರೂ ಹಾಗಂದುಕೊಳ್ಳುತ್ತಾರೆ. ಆದರೆ ಏನೂ ಲಿಂಕ್ ಇಲ್ಲ.


ನಿಮ್ಮನ್ನ ನೀವು ಹೇಗೆ ಮೋಟಿವೇಟ್ ಮಾಡ್ಕೊತೀರಾ?

ಯಾವುದೇ ಕ್ಷೇತ್ರ ಇರಬೋದು, ಹೊಸ ಹೊಸ ಆಲೋಚನೆಗಳು, ಹೊಸ ವಿಚಾರಧಾರೆಯ ವ್ಯಕ್ತಿಗಳಿಂದ ನಮ್ಮ ಬದುಕನ್ನು ತುಂಬಿಸಿಕೊಂಡರೆ ಕ್ರಿಯಾಶೀಲತೆ ಮೈಗೂಡಿಸಕೊಳ್ಳಬಹುದು. ಅದರಿಂದ ತಾನಾಗಿಯೇ ಮೋಟಿವೇಶನ್ ಬರುತ್ತೆ.


ಡಾಲಿ ಪಾತ್ರ ಮಾಡುವುದಕ್ಕೂ ಮುಂಚೆ ನಾಯಕರಾಗಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಿರಿ. ಆದರೆ ಡಾಲಿ ಪಾತ್ರ ನಿಮಗೆ ಜನಪ್ರಿಯತೆ ತಂದುಕೊಡ್ತು. ಗುಡ್ ಬಾಯ್ ಆಗಿದ್ದಾಗ ಯಾರೂ ನೋಡಲಿಲ್ಲ, ಬ್ಯಾಡ್ ಬಾಯ್ ಆದಾಗ ಎಲ್ಲರೂ ಮೆಚ್ಚಿಕೊಂಡರು ಅಂತ ಯಾವತ್ತಾದರೂ ಅನ್ಸಿದೆಯಾ? 

ಇಲ್ಲ. ನಂಗೆ ಹಾಗನ್ಸಿಲ್ಲ. ಡಾಲಿ ಮುಂಚೆ ಮಾಡಿದ ಸಿನಿಮಾಗಳು ಜನರನ್ನು ರೀಚ್ ಆಗುವುದರಲ್ಲಿ ಹಿಂದೆ ಬಿದ್ದಿರಬಹುದು ಅಂತ ಅನ್ಸುತ್ತೆ. ಟಗರು ಸಿನಿಮಾ ಹೆಚ್ಚು ಹೆಚ್ಚು ಜನರನ್ನು ರೀಚ್‍ ಆಗಿದ್ದೇ ಡಾಲಿ ಪಾತ್ರ ಹಿಟ್ ಆಗಲು ಕಾರಣವಾಗಿರಬಹುದು ಅಂತ ನನ್ನ ಅನಿಸಿಕೆ.
 

ರತ್ನನ್ ಪ್ರಪಂಚ ಕಾಮನ್ ಮ್ಯಾನ್ ಸಿನಿಮಾ ಅಂತ ಹೇಳಿದಿರಿ. ಆದರೆ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡದೆ ಅಕ್ಟೋಬರ್ 22ರಂದು ಅಮೆಜಾನ್ ಪ್ರೈಂನಲ್ಲಿ ರಿಲೀಸ್ ಮಾಡ್ತಿದ್ದೀರಲ್ಲಾ...

ಇವಾಗ ಒಟಿಟಿ ಯಲ್ಲಿ ಸಿನಿಮಾ ನೋಡೋರ ಸಂಖ್ಯೆ ಹೆಚ್ಚಾಗ್ತಾ ಇದೆ. ಅದೂ ಅಲ್ದೆ ಒಟಿಟಿಯಲ್ಲಾದರೆ ಜಗತ್ತಿನ ಅತಿ ಹೆಚ್ಚು ಮಂದಿ ಸಿನಿ ಪ್ರೇಕ್ಷಕರನ್ನ ತಲುಪಬಹುದು. ಈ ಆಲೋಚನೆಗಳಿಂದ ಚಿತ್ರತಂಡ ಅಮೆಜಾನ್ ಪ್ರೈಂ ನಲ್ಲಿ ಸಿನಿಮಾ ರಿಲೀಸ್ ಮಾಡೋಕೆ ನಿರ್ಧರಿಸಿದೆ.
 

ಆಲ್ ದಿ ಬೆಸ್ಟ್ ಸರ್

ಥ್ಯಾಂಕ್ ಯೂ ಸರ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com