ಟಾಲಿವುಡ್ ಸೂಪರ್ ಸ್ಟಾರ್ ನಟ ಕೃಷ್ಣ ವಿಧಿವಶ

ಅನಾರೋಗ್ಯದಿಂದ ಬಳಲುತ್ತಿದ್ದ ಮಹೇಶ್ ಬಾಬು ಅವರ ತಂದೆ ಹಾಗೂ ಟಾಲಿವುಡ್'ನ ಸೂಪರ್ ಸ್ಟಾರ್ ನಟ ಕೃಷ್ಣ ಘಟ್ಟಮನೇನಿ (80) ಅವರು ಮಂಗಳವಾರ ವಿಧಿವಶರಾಗಿದ್ದಾರೆ.
ನಟ ಕೃಷ್ಣ
ನಟ ಕೃಷ್ಣ

ಹೈದರಾಬಾದ್: ಅನಾರೋಗ್ಯದಿಂದ ಬಳಲುತ್ತಿದ್ದ ಮಹೇಶ್ ಬಾಬು ಅವರ ತಂದೆ ಹಾಗೂ ಟಾಲಿವುಡ್'ನ ಸೂಪರ್ ಸ್ಟಾರ್ ನಟ ಕೃಷ್ಣ ಘಟ್ಟಮನೇನಿ (80) ಅವರು ಮಂಗಳವಾರ ವಿಧಿವಶರಾಗಿದ್ದಾರೆ.

ಹೃದಯಾಘಾತದಿಂದ ಅಸ್ವಸ್ಥರಾಗಿದ್ದ ನಟ ಕೃಷ್ಣ ಅವರನ್ನು ನಿನ್ನೆ ಹೈದರಾಬಾದ್'ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗಿನ ಜಾವ 4 ಗಂಟೆಗೆ ನಿಧನರಾಗಿದ್ದಾರೆಂದು ತಿಳಿದುಬಂದಿದೆ.

ಕೃಷ್ಣ ಅವರ ಮೂಲ ಹೆಸರು ಘಟ್ಟಮನೇನಿ ಶಿವ ರಾಮ ಕೃಷ್ಣ ಮೂರ್ತಿ. ಇವರು ಸುಮಾರು 350 ಚಿತ್ರಗಳಲ್ಲಿ ನಟಿಸಿದ್ದಾರೆ. ಆ ಕಾಲದ ಅಗ್ರಗಣ್ಯ ನಟರಲ್ಲಿ ಇವರೂ ಒಬ್ಬರು. ಕೃಷ್ಣ ಅವರು ನಟ ಮಾತ್ರವಲ್ಲದೆ ಒಬ್ಬ ಯಶಸ್ವಿ ನಿರ್ದೇಶಕ ಹಾಗೂ ನಿರ್ಮಾಪಕ ಕೂಡ ಆಗಿದ್ದರು. ಅವರ ಚಿತ್ರರಂಗದ ಸೇವೆಯನ್ನು ಗುರುತಿಸಿ ಅವರಿಗೆ 2009ರಲ್ಲಿ ಪದ್ಮಭೂಷಣ ಪ್ರಶಸ್ತಿ ಕೂಡ ನೀಡಿ ಗೌರವಿಸಲಾಗಿತ್ತು.

ನಟ ಕೃಷ್ಣ ತೆಲುಗು ಸ್ಟಾರ್‌ ನಟ ಮಹೇಶ್‌ ಬಾಬು ಅವರ ತಂದೆ ಹಾಗೂ ಟಿಡಿಪಿ ನಾಯಕ ಜಯ್‌ ಗಲ್ಲಾ ಅವರ ಮಾವ ಕೂಡ ಆಗಿದ್ದಾರೆ. 1980ರ ದಶಕದಲ್ಲಿ ಅವರು ಕಾಂಗ್ರೆಸ್‌ ಪಕ್ಷ ಸೇರಿ ಸಂಸದರು ಆಗಿದ್ದರು. ಆದರೆ, ಕೃಷ್ಣ ಅವರು ತಮಿಳುನಾಡಿನಲ್ಲಿ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರ ಹತ್ಯೆಯಾದ ಬಳಿಕ ರಾಜಕೀಯವನ್ನು ತೊರೆದಿದ್ದರು.

1965ರಲ್ಲಿ ಅವರು ನಟನೆಯ ಜರ್ನಿ ಆರಂಭಿಸಿದ್ದ ಕೃಷ್ಣ ಅವರು, ಪೌರಾಣಿಕ, ಐತಿಹಾಸಿಕ ಸೇರಿದಂತೆ ಹಲವು ಬಗೆಯ ಪಾತ್ರಗಳಿಗೆ ಜೀವ ತುಂಬುವ ಮೂಲಕ ಅವರು ಅಭಿಮಾನಿಗಳ ಮನ ಗೆದ್ದಿದ್ದಾರೆ. ಕೃಷ್ಣ ಅವರ ಅಂದಾಜು 25 ಸಿನಿಮಾಗಳಲ್ಲಿ ಮಹೇಶ್​ ಬಾಬು ಬಾಲ ನಟನಾಗಿ ಅಭಿನಯಿಸಿದ್ದರು.

ಸೆಪ್ಟೆಂಬರ್​ 28ರಂದು ಕೃಷ್ಣ ಅವರ ಪತ್ನಿ ಇಂದಿರಾ ದೇವಿ ನಿಧನ ಹೊಂದಿದರು. ಆ ಬಳಿಕ ಕೃಷ್ಣ ಅವರು ಖಿನ್ನತೆಗೆ ಒಳಗಾದರು ಎನ್ನಲಾಗಿದೆ. ಈ ವರ್ಷ ಆರಂಭದಲ್ಲಿ ಕೃಷ್ಣ ಅವರ ಹಿರಿಯ ಪುತ್ರ ರಮೇಶ್​ ಬಾಬು ಕೂಡ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com