ಜೈಲರ್, ಭೋಳಾ ಶಂಕರ್ ಗಾಗಿ, ಕನ್ನಡದ ಕೌಸಲ್ಯ ಸುಪ್ರಜಾ ರಾಮಾ ಚಿತ್ರದ ಎತ್ತಂಗಡಿ, ಚಿತ್ರತಂಡದಿಂದ ಪ್ರತಿಭಟನೆ

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಜೈಲರ್ ಮತ್ತು ತೆಲುಗಿನ ಮೆಗಾ ಸ್ಟಾರ್ ಚಿರಂಜೀವಿ ಅಭಿನಯದ ಭೋಳಾ ಶಂಕರ್ ಚಿತ್ರಕ್ಕಾಗಿ  ಕನ್ನಡದ ಕೌಸಲ್ಯ ಸುಪ್ರಜಾ ರಾಮಾ ಚಿತ್ರಕ್ಕೆ ಗೇಟ್ ಪಾಸ್ ನೀಡುತ್ತಿರುವ ಮಲ್ಟಿಪ್ಲೆಕ್ಸ್ ಗಳ ವಿರುದ್ಧ ಚಿತ್ರತಂಡ ಪ್ರತಿಭಟನೆಗೆ ಮುಂದಾಗಿದೆ.
ಕೌಸಲ್ಯ ಸುಪ್ರಜಾ ರಾಮಾ ಚಿತ್ರ
ಕೌಸಲ್ಯ ಸುಪ್ರಜಾ ರಾಮಾ ಚಿತ್ರ

ಬೆಂಗಳೂರು: ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಜೈಲರ್ ಮತ್ತು ತೆಲುಗಿನ ಮೆಗಾ ಸ್ಟಾರ್ ಚಿರಂಜೀವಿ ಅಭಿನಯದ ಭೋಳಾ ಶಂಕರ್ ಚಿತ್ರಕ್ಕಾಗಿ  ಕನ್ನಡದ ಕೌಸಲ್ಯ ಸುಪ್ರಜಾ ರಾಮಾ ಚಿತ್ರಕ್ಕೆ ಗೇಟ್ ಪಾಸ್ ನೀಡುತ್ತಿರುವ ಮಲ್ಟಿಪ್ಲೆಕ್ಸ್ ಗಳ ವಿರುದ್ಧ ಚಿತ್ರತಂಡ ಪ್ರತಿಭಟನೆಗೆ ಮುಂದಾಗಿದೆ.

ಹೌದು.. ಈ ವಾರ ತೆಲುಗು, ತಮಿಳು, ಹಿಂದಿ ಸಿನಿಮಾಗಳಿಗಾಗಿ ಕನ್ನಡ ಸಿನಿಮಾಗಳನ್ನು ಥಿಯೇಟರ್‌ಗಳಿಂದ ಎತ್ತಂಗಡಿ ಮಾಡಲಾಗುತ್ತಿದೆ. ಶಶಾಂಕ್ ನಿರ್ದೇಶನದ 'ಕೌಸಲ್ಯಾ ಸುಪ್ರಜಾ ರಾಮ' ಸಿನಿಮಾವನ್ನು ತೆಗೆದು 'ಜೈಲರ್' ಪ್ರದರ್ಶನಕ್ಕೆ ಥಿಯೇಟರ್‌ಗಳು ಮುಂದಾಗಿದೆ. ಈ ಸಂಬಂಧ ಚಿತ್ರತಂಡ ಫಿಲ್ಮ್ ಚೇಂಬರ್ ಮೆಟ್ಟಿಲೇರಿದೆ.

ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್ ಹಾಗೂ ಬೃಂದಾ ಆಚಾರ್ಯ ನಟನೆಯ 'ಕೌಸಲ್ಯಾ ಸುಪ್ರಜಾ ರಾಮ' ಸಿನಿಮಾ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಯೂತ್‌ಫುಲ್ ಎಂಟರ್‌ಟೈನರ್ ಸಿನಿಮಾ ಎಲ್ಲಾ ವರ್ಗದ ಪ್ರೇಕ್ಷಕರ ಮನಗೆದ್ದಿದೆ. ವಾಸ್ತವಕ್ಕೆ ಬಹಳ ಹತ್ತಿರ ಎನಿಸುವ ಸಿನಿಮಾ ನೋಡಿ ಪ್ರೇಕ್ಷಕರು ಮನಸೋತಿದ್ದಾರೆ. ಇಂತಹ ಸಮಯದಲ್ಲೇ ಕೆಲವೆಡೆ ಈ ಸಿನಿಮಾ ತೆಗೆದು ತೆಲುಗು, ತಮಿಳು ಸಿನಿಮಾ ಪ್ರದರ್ಶನ ಮಾಡಲು ಕೆಲವರು ಮುಂದಾಗಿದ್ಧಾರೆ. ಈಗಾಗಲೇ ಆನ್‌ಲೈನ್‌ನಲ್ಲಿ ಟಿಕೆಟ್‌ ಬುಕ್ಕಿಂಗ್ ಓಪನ್ ಆಗಿದೆ.

ಆದರೆ ರಜನಿಕಾಂತ್ ಹಾಗೂ ಶಿವರಾಜ್‌ಕುಮಾರ್ ನಟನೆಯ ತಮಿಳಿನ 'ಜೈಲರ್', ಚಿರಂಜೀವಿ ನಟನೆಯ ತೆಲುಗಿನ 'ಭೋಳಾ ಶಂಕರ್' ಹಾಗೂ ಬಾಲಿವುಡ್‌ನ 'ಗದರ್-2' ಸಿನಿಮಾಗಳು ದೊಡ್ಡಮಟ್ಟದಲ್ಲಿ ಈ ವಾರ ರಾಜ್ಯದಲ್ಲಿ ತೆರೆಗಪ್ಪಳಿಸುತ್ತಿವೆ. ಈ ಚಿತ್ರಗಳಿಗೆ ಅವಕಾಶ ನೀಡುವ ಸಲುವಾಗಿ ಕನ್ನಡ ಸಿನಿಮಾಗಳನ್ನು ತೆಗೆದು ಬೇರೆ ಭಾಷೆ ಸಿನಿಮಾಗಳನ್ನು ಹಾಕುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಮಲ್ಟಿಪ್ಲೆಕ್ಸ್‌ಗಳಲ್ಲಿ 'ಕೌಸಲ್ಯಾ ಸುಪ್ರಜಾ ರಾಮ' ಸಿನಿಮಾ ತೆಗೆದು ಬೇರೆ ಸಿನಿಮಾ ಪ್ರದರ್ಶನಕ್ಕೆ ಮುಂದಾಗಿರುವುದರ ಸಂಬಂಧ ಚಿತ್ರತಂಡ ನ್ಯಾಯಕೇಳಿ ಫಿಲ್ಮ್‌ಚೇಂಬರ್‌ಗೆ ಮನವಿ ಸಲ್ಲಿಸಿದೆ.

ಚಿತ್ರದ ನಿರ್ದೇಶಕ, ನಿರ್ಮಾಪಕ ಶಶಾಂಕ್ ಹಾಗೂ ಚಿತ್ರದ ವಿತರಕರಾದ ಕೆವಿಎನ್‌ ಸಂಸ್ಥೆ ಫಿಲ್ಮ್‌ ಚೇಂಬರ್‌ಗೆ ಮನವಿ ಪತ್ರ ನೀಡಿದ್ದು, ' "ನಿಮಗೆ ಈಗಾಗಲೇ ತಿಳಿದಿರುವಂತೆ ನಮ್ಮ ಕೌರವ ಪ್ರೊಡಕ್ಷನ್ ಹೌಸ್ ಮತ್ತು ಶಶಾಂಕ್ ಸಿನೆಮಾಸ್ ಸಹಭಾಗಿತ್ವದಲ್ಲಿ ನಿರ್ಮಾಣವಾಗಿರುವ, ಶಶಾಂಕ್ ನಿರ್ದೇಶನದ, ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್‌, ಬೃಂದಾ ಆಚಾರ್ಯ ಮುಂತಾದವರು ಅಭಿನಯಿಸಿರುವ, 'ಕೌಸಲ್ಯಾ ಸುಪ್ರಜಾ ರಾಮ' ಚಿತ್ರ ಜುಲೈ 28ರಂದು ಬಿಡುಗಡೆಯಾಗಿ, ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ಪಡೆದುಕೊಂಡು, ತುಂಬಿದ ಗೃಹಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ. ಆದಾಗ್ಯೂ ಬೆಂಗಳೂರಿನ ಮಲ್ಟಿಪ್ಲೆಕ್ಸ್ ಆಡಳಿತ ಮಂಡಳಿಗಳು, ಚಿತ್ರಕ್ಕೆ ಸಾಕಷ್ಟು ಶೋಗಳನ್ನು ಕೊಡದೆ, ಸಮಯ ಮೀಸಲಾತಿಯಲ್ಲೂ ತಾರತಮ್ಯ ಮಾಡುತ್ತಾ ಪರಭಾಷೆ ಚಿತ್ರಗಳಿಗೆ ಮಣೆ ಹಾಕುತ್ತಿದ್ದಾರೆ ಎಂದು ಹೇಳಿದೆ.

ಗಾಯದ ಮೇಲೆ ಬರೆ ಎಳೆದಂತೆ, ಆಗಸ್ಟ್ 11ರಂದು ನಾಲ್ಕು ಪರಭಾಷಾ ದೊಡ್ಡ ಚಿತ್ರಗಳು ಬಿಡುಗಡೆಯಾಗುತ್ತಿದ್ದು, ಬಿಡುಗಡೆಗೆ ಒಂದು ವಾರ ಮುನ್ನವೇ, ಮಲ್ಟಿಪ್ಲೆಕ್ಸ್‌ಗಳು ಆ ಚಿತ್ರಗಳಿಗೆ ವಿಪರೀತ ಎನಿಸುವಷ್ಟು ಶೋಗಳನ್ನು ಕಾದಿರಿಸಿದ್ದಾರೆ. ಇದಕ್ಕಾಗಿ ಮುಂಬರುವ ದಿನಗಳಲ್ಲಿ 'ಕೌಸಲ್ಯ ಸುಪ್ರಜಾ ರಾಮ' ಚಿತ್ರದ ಶೋಗಳನ್ನು ಕಡಿತಗೊಳಿಸುವ ಎಲ್ಲಾ ಸಾಧ್ಯತೆಗಳು ಇವೆ. ಈ ಪರಭಾಷಾ ಪರ ಧೋರಣೆಯ ವಿರುದ್ಧ ಮಲ್ಟಿಪ್ಲೆಕ್ಸ್ ಆಡಳಿತ ಮಂಡಳಿಗಳೊಂದಿಗೆ ಮಾತನಾಡಿ, ಕರ್ನಾಟಕದಲ್ಲಿ ಕನ್ನಡ ಚಿತ್ರಗಳಿಗೆ ಮೊದಲ ಆದ್ಯತೆ ಎಂಬ ವಿಷಯವನ್ನು ಅವರಿಗೆ ಮನವರಿಕೆ ಮಾಡಿಕೊಟ್ಟು, ನಮ್ಮ ಚಿತ್ರಕ್ಕೆ ನ್ಯಾಯ ಕೊಡಿಸುವಂತೆ, ಈ ಮೂಲಕ ನಿಮ್ಮಲ್ಲಿ ಮನವಿ ಮಾಡುತ್ತಿದ್ದೇವೆ ಎಂದು ಪತ್ರದಲ್ಲಿ ಉಲ್ಲೇಖಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com