ಅದ್ಧೂರಿ ಸಮಾರಂಭದಲ್ಲಿ ಮೂರನೇ ಹಾಡು ಬಿಡುಗಡೆ; ಕಬ್ಜ ಸಿನಿಮಾ ಪ್ರೇಕ್ಷಕರಿಗೆ ನಿಜವಾಗಿಯೂ ಹಬ್ಬ: ಉಪೇಂದ್ರ

ಉಪೇಂದ್ರ ಅವರ ಕಬ್ಜ ಸಿನಿಮಾ ಬಿಡುಗಡೆಗೆ ಕೆಲವೇ ವಾರಗಳು ಬಾಕಿ ಇರುವಾಗ, ಚಿತ್ರತಂಡ ಸಿನಿಮಾದ ಮೂರನೇ ಹಾಡಾದ ಚುಮ್ ಚುಮ್ ಚಳಿ ಚಳಿಯನ್ನು ಬಿಡುಗಡೆ ಮಾಡಿದೆ.
ಕಬ್ಜ ಸಿನಿಮಾದ ಮೂರನೇ ಹಾಡು ಬಿಡುಗಡೆ ಸಮಾರಂಭ
ಕಬ್ಜ ಸಿನಿಮಾದ ಮೂರನೇ ಹಾಡು ಬಿಡುಗಡೆ ಸಮಾರಂಭ

ಉಪೇಂದ್ರ ಅವರ ಕಬ್ಜ ಸಿನಿಮಾ ಬಿಡುಗಡೆಗೆ ಕೆಲವೇ ವಾರಗಳು ಬಾಕಿ ಇರುವಾಗ, ಚಿತ್ರತಂಡ ಸಿನಿಮಾದ ಮೂರನೇ ಹಾಡಾದ ಚುಮ್ ಚುಮ್ ಚಳಿ ಚಳಿಯನ್ನು ಬಿಡುಗಡೆ ಮಾಡಿದೆ. ಉಪೇಂದ್ರ ಮತ್ತು ತಾನ್ಯಾ ಹೋಪ್ ಒಳಗೊಂಡ ಈ ಹಾಡನ್ನು ನಿರ್ದೇಶಕ ಆರ್ ಚಂದ್ರು ಅವರ ಹುಟ್ಟೂರಾದ ಶಿಡ್ಲಘಟ್ಟದಲ್ಲಿ ಶಿವರಾಜಕುಮಾರ್ ಮತ್ತು ಇತರ ಗಣ್ಯರ ಸಮ್ಮುಖದಲ್ಲಿ ಅದ್ಧೂರಿಯಾಗಿ ಬಿಡುಗಡೆ ಮಾಡಲಾಯಿತು.

ಗೀತರಚನೆಕಾರ ಪ್ರಮೋದ್ ಮರವಂತೆ ಬರೆದಿರುವ ಈ ಮಾಸ್ ಹಾಡಿಗೆ ರವಿ ಬಸ್ರೂರ್ ಸಂಗೀತ ಸಂಯೋಜಿಸಿದ್ದು, ಐರಾ ಉಡುಪಿ, ಮನೀಶ್ ದಿನಕರ್ ಮತ್ತು ಸಂತೋಷ್ ವೆಂಕಿ ಹಾಡಿದ್ದಾರೆ.

ಕಾರ್ಯಕ್ರಮದಲ್ಲಿ ಕಬ್ಜ ನಾಯಕಿ ಶ್ರಿಯಾ ಶರಣ್, ಗೀತಾ ಶಿವರಾಜ್‌ಕುಮಾರ್, ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. 'ನಾನು ಉಪೇಂದ್ರ ಅವರ ಅಭಿಮಾನಿ ಮತ್ತು ಸ್ನೇಹಿತನಾಗಿದ್ದೇನೆ ಎಂದು ಶಿವರಾಜಕುಮಾರ್ ಹೇಳಿದರು. 'ಮೈಲಾರಿ' ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದ ಚಂದ್ರು ಅವರಿಗೆ ಕಬ್ಜ ಸಿನಿಮಾದ ಯಶಸ್ವಿಗೆ ಶುಭ ಹಾರೈಸಿದರು.

'ಕಬ್ಜ ಆಡಿಯೋ ಬಿಡುಗಡೆ ಕಾರ್ಯಕ್ರಮವು ಹಬ್ಬದಂತಿದೆ. ನಮ್ಮ ಚಿಕ್ಕಬಳ್ಳಾಪುರದಲ್ಲಿ ಈ ಹಾಡಿನ ಬಿಡುಗಡೆ ಸಮಾರಂಭವನ್ನು ಮಾಡಬೇಕೆಂದಿದ್ದೆ. ಆದರೆ, ನಿರ್ದೇಶಕರು ಈ ಕಾರ್ಯಕ್ರಮವನ್ನು ತಮ್ಮ ಊರಿನಲ್ಲಿ ಮಾಡಲು ಬಯಸಿದ್ದರು. ನಾನು ಈ ಹಿಂದೆ ಆರ್‌ಆರ್‌ಆರ್‌ನ ಆಡಿಯೋವನ್ನು ಬಿಡುಗಡೆ ಮಾಡಿದ್ದೆ ಮತ್ತು ಕಬ್ಜ ಅದಕ್ಕಿಂತ ದೊಡ್ಡ ಮಟ್ಟದಲ್ಲಿ ಗೆಲ್ಲಬೇಕೆಂದು ನಾನು ಬಯಸುತ್ತೇನೆ. ಚಿತ್ರಕ್ಕೆ ಸಾಕಷ್ಟು ಪ್ರಚಾರ ಸಿಕ್ಕಿದೆ ಮತ್ತು ಅದು ಉತ್ತಮವಾಗಿ ಮೂಡಿಬರಲಿದೆ ಎಂದು ನನಗೆ ಖಾತ್ರಿಯಿದೆ' ಎಂದು ಆರೋಗ್ಯ ಸಚಿವ ಕೆ ಸುಧಾಕರ್ ತಿಳಿಸಿದ್ದಾರೆ.

ನಿರ್ಮಾಪಕ-ನಿರ್ದೇಶಕ ಚಂದ್ರು ಮಾತನಾಡಿ, 'ಹೈದರಾಬಾದ್ ಮತ್ತು ಚೆನ್ನೈನಲ್ಲಿ ಈಗಾಗಲೇ ಎರಡು ಹಾಡುಗಳನ್ನು ಬಿಡುಗಡೆ ಮಾಡಿದ್ದು, ಶಿಡ್ಲಘಟ್ಟದಲ್ಲಿ ಮೂರನೇ ಹಾಡನ್ನು ಬಿಡುಗಡೆ ಮಾಡಿದ್ದೇವೆ. ಹಾಡುಗಳ ಬಿಡುಗಡೆ ಕಾರ್ಯಕ್ರಮಕ್ಕೆ ಎಲ್ಲರೂ ಒಟ್ಟಿಗೆ ಸೇರುವುದನ್ನು ನೋಡಿ ನನಗೆ ಸಂತೋಷವಾಗಿದೆ ಮತ್ತು ಗೀತಕ್ಕ (ಶಿವರಾಜಕುಮಾರ್ ಅವರ ಪತ್ನಿ) ನಮ್ಮ ನಿರ್ಮಾಣದ ಬ್ಯಾನರ್ ಸಿದ್ಧೇಶ್ವರ ಎಂಟರ್‌ಪ್ರೈಸಸ್‌ಗೆ ಚಾಲನೆ ನೀಡಿದ್ದಾರೆ. ಕನ್ನಡ ಇಂಡಸ್ಟ್ರಿಯಿಂದ ಬರುತ್ತಿರುವ ಮತ್ತೊಂದು ದೊಡ್ಡ ಚಿತ್ರ ಕಬ್ಜ ಸಿನಿಮಾವನ್ನು ಪ್ರಸ್ತುತಪಡಿಸಲು ನಾವು ಹೆಮ್ಮೆಪಡುತ್ತೇವೆ' ಎಂದರು.

ಈ ವೇಳೆ ಮಾತನಾಡಿದ ಉಪೇಂದ್ರ, ಆದಷ್ಟು ಬೇಗ ಶಿವಣ್ಣ ಅವರಿಗೆ ನಿರ್ದೇಶನ ಮಾಡುವುದಾಗಿ ಭರವಸೆ ನೀಡಿದರು. 'ನಾನು ಪುನೀತ್‌ಗೆ 'ಆ್ಯಕ್ಷನ್' - 'ಕಟ್' ಹೇಳಲು ಬಯಸಿದ್ದೆ, ಆದರೆ, ಆ ಅವಕಾಶವನ್ನು ನಾನು ಕಳೆದುಕೊಂಡೆ. ನಾನು ಶಿವಣ್ಣನಿಗಾಗಿ ಒಂದು ಸಿನಿಮಾವನ್ನು ನಿರ್ದೇಶಿಸುತ್ತೇನೆ ಮತ್ತು ಅವರ ಬ್ಯಾನರ್‌ನಲ್ಲಿ ಚಿತ್ರವನ್ನು ನಿರ್ಮಿಸುವ ಗೀತಕ್ಕ ಅವರ ಆಸೆಯನ್ನು ಪೂರೈಸುತ್ತೇನೆ' ಎಂದು ಹೇಳಿದರು.

ಕಬ್ಜ ಬಗ್ಗೆ ಮಾತನಾಡಿದ ಉಪ್ಪಿ, ಚಿತ್ರಕ್ಕೆ ಮಾಸ್, ಕ್ಲಾಸಿಕ್ ಮತ್ತು ಮೆಲೋಡಿ ಹಾಡುಗಳನ್ನು ನೀಡಿರುವ ಸಂಗೀತ ನಿರ್ದೇಶಕ ರವಿ ಬಸ್ರೂರ್ ಕಬ್ಜ ಸಿನಿಮಾದ ನಾಯಕ. 'ಕಬ್ಜ ಚಿತ್ರದ ಮೂಲಕ ನಿರ್ದೇಶಕ ಚಂದ್ರು ಎಲ್ಲರ ಮನ ಗೆಲ್ಲುತ್ತಾರೆ. ಚಿತ್ರದಲ್ಲಿ ಹಲವು ಪವಾಡಗಳಿವೆ ಮತ್ತು ಇದು ಪ್ರೇಕ್ಷಕರಿಗೆ ಹಬ್ಬವಾಗಲಿದ್ದು, ಕಥೆಯೇ ಚಿತ್ರದ ಹೈಲೈಟ್ ಆಗಬಹುದು ಎಂದರು.

ಕಬ್ಜ ಚಿತ್ರದಲ್ಲಿನ ತನ್ನ ಪಾತ್ರದ ಬಗ್ಗೆ ಸಂತಸ ವ್ಯಕ್ತಪಡಿಸಿದ ಶ್ರಿಯಾ ಶರನ್, ಚಿತ್ರಕ್ಕಾಗಿ ನಿರ್ದೇಶಕರು ಮತ್ತು ತಂಡವು ಪಟ್ಟ ಶ್ರಮ ಶ್ಲಾಘನೀಯ ಎಂದರು. 

ಎಂಟಿಬಿ ನಾಗರಾಜ್ ಪ್ರಸ್ತುತಪಡಿಸಿದ ಮತ್ತು ಅಲಂಕಾರ್ ಪಾಂಡಿಯನ್ ಸಹಯೋಗದಲ್ಲಿ ಆರ್ ಚಂದ್ರು ನಿರ್ಮಿಸಿರುವ ಕಬ್ಜ ಚಿತ್ರವು ಪ್ರಸ್ತುತ ಸೆನ್ಸಾರ್ ಆಗುತ್ತಿದೆ. ಈ ಚಿತ್ರದಲ್ಲಿ ಸುದೀಪ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ಮಾರ್ಚ್ 17 ರಂದು ಪುನೀತ್ ರಾಜ್‌ಕುಮಾರ್ ಅವರ ಜನ್ಮದಿನದಂದು ವಿಶ್ವದಾದ್ಯಂತ ಸಿನಿಮಾ ಬಿಡುಗಡೆಯಾಗಲಿದೆ.

ಪ್ಯಾನ್ ಇಂಡಿಯಾ ಚಿತ್ರದ ಭಾಗವಾಗುತ್ತಿರುವುದು ನನ್ನ ಪಾಲಿಗೆ ದೊಡ್ಡ ಹೆಜ್ಜೆ

ವಿಶೇಷ ಹಾಡಿನ ಭಾಗವಾಗಿರುವ ತಾನ್ಯಾ ಹೋಪ್ ಈ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗಲಿಲ್ಲ. ಆದಾಗ್ಯೂ, ಸಿನಿಮಾ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡುತ್ತಾ, ದರ್ಶನ್ ಅವರ ಯಜಮಾನ ಸಿನಿಮಾದ ಬಸಣ್ಣಿ ಹಾಡಿಗಾಗಿ ಖ್ಯಾತಿ ಗಳಿಸಿರುವ ಅವರು, ಇದೀಗ ಮತ್ತೊಂದು ವಿಶೇಷ ಹಾಡಿನ ಭಾಗವಾಗಲು ನನಗೆ ಅಷ್ಟೇ ಸಂತೋಷವಾಗಿದೆ ಎಂದು ಹೇಳುತ್ತಾರೆ.

ವಿಶೇಷ ಸಿನಿಮಾದೊಂದಿಗೆ ಹಿಂತಿರುಗಲು ಮತ್ತು ಹೋಂ ಮಿನಿಸ್ಟರ್ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದ ಉಪೇಂದ್ರ ಅವರೊಂದಿಗೆ ಮತ್ತೆ ಕಾಣಿಸಿಕೊಂಡಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ ಎಂದು ಹೇಳುವ ತಾನ್ಯಾ, 'ನಾನು ನೃತ್ಯವನ್ನು ಇಷ್ಟಪಡುತ್ತೇನೆ ಮತ್ತು ಚುಮ್ ಚುಮ್‌ ಚಳಿ ಚಳಿ ಹಾಡಿನಲ್ಲಿ ತುಂಬಾ ಎನರ್ಜಿಯಿದೆ' ಎನ್ನುತ್ತಾರೆ.

'ಅದು ನನ್ನ ವೈಬ್. ಮೇಲಾಗಿ ಉಪೇಂದ್ರ ಸರ್ ಜೊತೆ ಡ್ಯಾನ್ಸ್ ಮಾಡುವುದು ನಿಜಕ್ಕೂ ಖುಷಿ ಕೊಟ್ಟಿತು ಮತ್ತು ಅವರ ಎನರ್ಜಿಗೆ ನಾನು ಬೆರಗಾದೆ. ಎಲ್ಲಕ್ಕಿಂತ ಹೆಚ್ಚಾಗಿ ಕಬ್ಜ ಬಹು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದ್ದು, ನಿರ್ದೇಶಕ ಆರ್ ಚಂದ್ರು ಈ ವಿಶೇಷ ಹಾಡಿಗೆ ಕರ್ನಾಟಕದ ಒಬ್ಬ ನಟಿಯನ್ನು ಆಯ್ಕೆ ಮಾಡಿರುವುದು ಸಂತಸ ತಂದಿದೆ. ಪ್ಯಾನ್-ಇಂಡಿಯಾ ಚಿತ್ರದ ಭಾಗವಾಗಿರುವುದು ನನಗೆ ಒಂದು ದೊಡ್ಡ ಹೆಜ್ಜೆ' ಎಂದರು.

ತಾನ್ಯಾ, ವಿಶೇಷವಾಗಿ ತಮಿಳಿನಲ್ಲಿ ಕಿಕ್ ಮತ್ತು ಗೋಲ್‌ಮಾಲ್ ಸೇರಿದಂತೆ, ವೆಪನ್ ಎಂಬ ಹೆಸರಿನ ಮತ್ತೊಂದು ಯೋಜನೆಗೆ ಸಹಿ ಹಾಕುವ ಮೂಲಕ ಚಿತ್ರ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. 'ಕನ್ನಡದಲ್ಲಿ, ರಿಷಬ್ ಶೆಟ್ಟಿ ಅಭಿನಯದ ಬೆಲ್ ಬಾಟಮ್ 2 ಸಿನಿಮಾ ಸೆಟ್ಟೇರಲು ನಾನು ಕಾಯುತ್ತಿದ್ದೇನೆ' ಎಂದು ಅವರು ಸೇರಿಸುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com