
ಕಬ್ಜ ಚಿತ್ರದ ಸ್ಟಿಲ್.
ನಿರ್ದೇಶಕ ಆರ್ ಚಂದ್ರು ಅವರ ಮಹತ್ವಾಕಾಂಕ್ಷೆಯ ಪ್ಯಾನ್-ಇಂಡಿಯನ್ ಚಿತ್ರ, ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಕಬ್ಜಾ ಮಾರ್ಚ್ 17 ರಂದು ತೆರೆಕಾಣಲಿದೆ.
1940-80 ರಲ್ಲಿ ನಡೆದ ಗ್ಯಾಂಗ್‌ಸ್ಟರ್ ಅವಧಿಯ ಕಥೆಯೇ ಕಬ್ಜ ಚಿತ್ರವಾಗಿದೆ. ಚಿತ್ರದಲ್ಲಿ ಉಪೇಂದ್ರ ಅವರು ಅಂಡರ್ ವರ್ಲ್ಡ್ ಡಾನ್ ಆಗಿದ್ದು, ಚಿತ್ರದಲ್ಲಿ ಸುದೀಪ್ ಮತ್ತು ಶ್ರಿಯಾ ಸರನ್ ನಟಿಸಿದ್ದಾರೆ. ಒಟ್ಟಾರೆ ಈ ಸಿನಿಮಾಗೆ ಸುಮಾರು 140 ದಿನಗಳಿಗೂ ಅಧಿಕ ಕಾಲ ಚಿತ್ರೀಕರಣ ನಡೆಸಲಾಗಿದ್ದು, ಬೆಂಗಳೂರು, ಮಂಗಳೂರು, ವಿಶಾಖಪಟ್ಟಣ, ಹೈದರಾಬಾದ್ ಸೇರಿದಂತೆ ಹಲವು ಪ್ರಮುಖ ನಗರಗಳಲ್ಲಿ ಬೃಹತ್ ಸೆಟ್ ಹಾಕಿ ಚಿತ್ರೀಕರಣ ಮಾಡಲಾಗಿದೆ. ತೆಲುಗು, ತಮಿಳು ಮತ್ತು ಹಿಂದಿ ಚಿತ್ರರಂಗದ ಖ್ಯಾತ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: 'ಕಬ್ಜ' ಸಿನಿಮಾವನ್ನು 'ಕೆಜಿಎಫ್' ಗೆ ಹೋಲಿಸುತ್ತಿರುವುದು ಒಳ್ಳೆಯ ಲಕ್ಷಣ: ನಿರ್ದೇಶಕ ಆರ್.ಚಂದ್ರು
ಮೂರು ವರ್ಷಗಳ ನಮ್ಮ ಶ್ರಮವು ಅಂತಿಮವಾಗಿ ಅದರ ಪ್ರಮುಖ ಘಟ್ಟ ತಲುಪಿದೆ. ಕಬ್ಜಾವನ್ನು ನಿರ್ಮಿಸುವಲ್ಲಿ ಸಾಕಷ್ಟು ಶ್ರಮಪಟ್ಟಿದ್ದೇವೆ. ಚಿತ್ರದ ಮೇಲೆ ಸಾಕಷ್ಟು ಪ್ರೀತಿ ಇದೆ. ಸಿನಿಮಾಗೆ ಬಹು ಭಾಷೆಗಳಲ್ಲಿ ಒಂದೇ ರೀತಿಯ ಪ್ರೀತಿ ವ್ಯಕ್ತವಾಗಲಿದೆ ಎಂಬ ವಿಶ್ವಾಸವಿದೆ ಎಂದು ಆರ್.ಚಂದ್ರು ಅವರು ಹೇಳಿದ್ದಾರೆ.
ರವಿ ಬಸೂರ್ ಅವರ ಸಂಗೀತ ಮತ್ತು ಎಜೆ ಶೆಟ್ಟಿ ಅವರ ಛಾಯಾಗ್ರಹಣವಿರುವ ಕಬ್ಜಾಗೆ ಮಹೇಶ್ ರೆಡ್ಡಿ ಸಂಕಲನ ನೀಡಿದ್ದಾರೆ. ಸಾಹಸ ನೃತ್ಯ ಸಂಯೋಜನೆಯನ್ನು ರವಿವರ್ಮ, ವಿಜಯ್ ಮತ್ತು ವಿಕ್ರಮ್ ಮೋರ್ ಮಾಡಿದ್ದಾರೆ ಮತ್ತು ಚಂದ್ರು ಅವರ ಶ್ರೀ ಸಿದ್ದೇಶ್ವರ ಎಂಟರ್‌ಪ್ರೈಸಸ್ ಬ್ಯಾನರ್‌ನಡಿಯಲ್ಲಿ ಅಲಂಕಾರ್ ಪಾಂಡಿಯನ್ ಸಹಯೋಗದಲ್ಲಿ ಎಂಟಿಬಿ ನಾಗರಾಜ್ ಅವರು ಚಿತ್ರವನ್ನು ಪ್ರಸ್ತುತಪಡಿಸಿದ್ದಾರೆ.
ಕಬ್ಜಾ ಬಹು ಭಾಷೆಗಳಲ್ಲಿ ಬಿಡುಗಡೆಯಾಗಲು ಸಜ್ಜಾಗಿದ್ದು, ಚಿತ್ರದಲ್ಲಿ ಬಹುಭಾಷಾ ತಾರಾಗಣವೇ ಇದೆ. ಅನೂಪ್ ರೇವಣ್ಣ, ಪ್ರಮೋದ್ ಶೆಟ್ಟಿ, ಮುರಳಿ ಶರ್ಮಾ, ಜಗಪತಿ ಬಾಬು, ಡ್ಯಾನಿಶ್ ಅಕ್ತರ್ ಸೈಫಿ, ಪ್ರದೀಪ್ ರಾವತ್, ಕಬೀರ್ ದುಹಾನ್ ಸಿಂಗ್ ಜಯಪ್ರಕಾಶ್ ಮತ್ತು ಕೋಟಾ ಶ್ರೀನಿವಾಸ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.