ಬಿಡುಗಡೆಗೆ ಸಜ್ಜಾದ ತೋತಾಪುರಿ-2: ನವರಸನಾಯಕ ಜಗ್ಗೇಶ್ ಜೊತೆ ಡಾಲಿ ಧನಂಜಯ್ ಮಿಂಚು!
2022 ರಲ್ಲಿ ಬಿಡುಗಡೆಯಾದ ವಿಜಯಪ್ರಸಾದ್ ನಿರ್ದೇಶನದ ತೋತಾಪುರಿ-1 ಪ್ರಪಂಚವೇ ಒಂದು ಕುಟುಂಬ ಎನ್ನುವ ಭಾವೈಕ್ಯತೆಯ ಸಂದೇಶವನ್ನು ಸಾರಿತ್ತು. ಚಿತ್ರಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆಗಳು ವ್ಯಕ್ತವಾಗಿತ್ತು. ಇದೀಗ ‘ತೋತಾಪುರಿ’ ಸಿನಿಮಾದ 2ನೇ ಭಾಗ ಬರುತ್ತಿದ್ದು, ಚಿತ್ರ ಬಿಡುಗಡೆಗೆ ಸಜ್ಜಾಗಿದೆ.
ತೋತಾಪುರಿ-1 ಚಿತ್ರದಲ್ಲಿ ಜಗ್ಗೇಶ್ ಮತ್ತು ಅದಿತಿ ಪ್ರಭುದೇವ ಪ್ರಮುಖ ಪಾತ್ರದಲ್ಲಿ ನಟಿಸಿದ್ದರೆ, ಡಾಲಿ ಧನಂಜಯ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಶಿವಲಿಂಗ’ ಚಿತ್ರದ ಖ್ಯಾತಿಯ ನಿರ್ಮಾಪಕ ಕೆ.ಎ. ಸುರೇಶ್ ಅವರು, ಚಿತ್ರವನ್ನು ನಿರ್ಮಾಣ ಮಾಡಿದ್ದರು. ಅಷ್ಟೇ ಉತ್ಸಾಹದಿಂದ ಇದೀಗ ಪಾರ್ಟ್ 2ವನ್ನೂ ಕೂಡ ಮಾಡಿದ್ದಾರೆ.
ತೋತಾಪುರಿ-2 ಚಿತ್ರದಲ್ಲಿ ಧನಂಜಯ್ ಅವರು ಪೂರ್ಣಪ್ರಮಾಣದ ನಾಯಕನಾಗಿ ಕಾಣಿಸಿಕೊಂಡಿದ್ದು,ಇತ್ತೀಚೆಗೆ ಗುರುಪೂರ್ಣಿಮೆ ಪ್ರಯುಕ್ತ ಈ ಸಿನಿಮಾದ ಫಸ್ಟ್ ಲುಕ್ ಕೂಡ ಅನಾವರಣಗೊಂಡಿದೆ. ಚಿತ್ರದಲ್ಲಿ ಡಾಲಿ ಧನಂಜಯ್ ಮತ್ತು ಜಗ್ಗೇಶ್ ಅವರ ಗೆಟಪ್ ಹೇಗಿರಲಿದೆ ಎಂಬುದು ಈ ಪೋಸ್ಟರ್ ಮೂಲಕ ತಿಳಿದುಬಂದಿದೆ.
ಚಿತ್ರವನ್ನು ಸುರೇಶ್ ಕೆಎ ಅವರು ನಿರ್ಮಾಣ ಮಾಡುತ್ತಿದ್ದು, ಚಿತ್ರ ಬಿಡುಗಡೆಗೆ ಚಿತ್ರತಂಡ ಸಿದ್ಧತೆಗಳನ್ನು ನಡೆಸುತ್ತಿದೆ. ಟೀಸರ್, ಟ್ರೇಲರ್ ಹಾಗೂ ಹಾಡುಗಳ ಬಿಡುಗಡೆ ಮೂಲಕ ಪ್ರೇಕ್ಷಕರಲ್ಲಿ ಕ್ರೇಜ್ ಹುಟ್ಟಿಸಲು ಚಿತ್ರತಂಡ ಮುಂದಾಗಿದೆ. ಸೆನ್ಸಾರ್ ಮಂಡಳಿಯಿಂದ ಪ್ರಮಾಣಪತ್ರ ಸ್ವೀಕರಿಸಿದ ಬಳಿಕ ಚಿತ್ರ ಬಿಡುಗಡೆ ದಿನಾಂಕ ಘೋಷಣೆಯಾಗಲಿದೆ.
ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನಿರ್ದೇಶಕರಾಗಿದ್ದು, ತೋತಾಪುರಿ ಮೊದಲ ಭಾಗದಲ್ಲಿ ಕಾಣಿಸಿಕೊಂಡಿದ್ದ ಅದಿತಿ ಪ್ರಭುದೇವ, ವೀಣಾ ಸುಂದರ್ ಮತ್ತು ಹೇಮಾದತ್ ಪಾರ್ಟ್-2 ಚಿತ್ರದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ