
ಖ್ಯಾತ ನಟ, ನಿರ್ದೇಶಕ ಸಿವಿ ಶಿವಶಂಕರ್
ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ಮತ್ತು ಸಾಹಿತಿಯೂ ಆಗಿದ್ದ ಸಿ.ವಿ. ಶಿವಶಂಕರ್ ಅವರು ಮಂಗಳವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.
ಇಂದು ಅಂದರೆ ಜೂನ್ 27 ಮಧ್ಯಾಹ್ನ 2 ಗಂಟೆ ಸುಮಾರಿಗೆ ಅವರಿಗೆ ಹೃದಯಾಘಾತ (Heart Attack) ಆಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಅಷ್ಟುಹೊತ್ತಿಗಾಗಲೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. ಸಿ.ವಿ. ಶಿವಶಂಕರ್ ಅವರಿಗೆ 90 ವರ್ಷ ವಯಸ್ಸಾಗಿತ್ತು. ‘ಯಾವುದೇ ಗಂಭೀರವಾದ ಆರೋಗ್ಯ ಸಮಸ್ಯೆ ಅವರಿಗೆ ಇರಲಿಲ್ಲ. ಮಧ್ಯಾಹ್ನ ಊಟ ಮುಗಿಸಿ ಪೂಜೆ ಮಾಡಿದ ಬಳಿಕ ಹಾರ್ಟ್ ಅಟ್ಯಾಕ್ ಆಯಿತು’ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ಇದನ್ನೂ ಓದಿ: ವಯಸ್ಸು ಕೇವಲ ಸಂಖ್ಯೆ ಎಂದು ಸಾಬೀತುಪಡಿಸಿದ ನಟ ವೈಜನಾಥ್ ಬಿರಾದಾರ್, ಸಿನಿಮಾ ಬಿಡುಗಡೆಗೆ ದಿನಾಂಕ ನಿಗದಿ
ಸಿ.ವಿ. ಶಿವಶಂಕರ್ (C V Shivashankar) ಅವರ ನಿಧನಕ್ಕೆ ಚಿತ್ರರಂಗದವರು ಸಂತಾಪ ಸೂಚಿಸಿದ್ದು, ಅಂತ್ಯಕ್ರಿಯೆ ಬಗ್ಗೆ ಕುಟುಂಬಸ್ಥರು ಚರ್ಚಿಸಿ ನಿರ್ಧರಿಸಲಿದ್ದಾರೆ ಎಂದು ಹೇಳಲಾಗಿದೆ.
Sad Demise: Actor, lyricist, director, CV Shivashankar. Best known for Kannada patriotic songs incl:
— S Shyam Prasad (@ShyamSPrasad) June 27, 2023
* ಕನ್ನಡದಾ ರವಿಮೂಡಿ ಬಂದಾ, ಮುನ್ನಡೆಯ ಬೆಳಕನ್ನು ತಂದಾ
* ನಾಡಚರಿತೆ ನೆನಪಿಸುವ ವೀರ ಗೀತೆಯಾ, ಹಾಡು ನೀನು ಕನ್ನಡಿಗಾ ದೇಶಗೀತೆಯ
* ಸಿರಿವಂತನಾದರೂ ಕನ್ನಡ ನಾಡಲ್ಲಿ ಮೆರೆವೇ, ಭಿಕ್ಷುಕನಾದರೂ ಕನ್ನಡ ಮನ್ನಲ್ಲೇ ಮಡಿವೇ
ಸಿವಿ ಶಿವಶಂಕರ್ ಅವರು 23 ಮಾರ್ಚ್ 1933 ರಂದು ಕರ್ನಾಟಕದ ತಿಪಟೂರು ತುಮಕೂರಿನಲ್ಲಿ ಜನಿಸಿದರು. ಅವರು ವೆಂಕಟಕೃಷ್ಣ ಭಟ್ ಮತ್ತು ಶ್ರೀಮತಿ ವೆಂಕಟ್ ಲಕ್ಷ್ಮಮ್ಮ ದಂಪತಿಗಳಿಗೆ ಜನಿಸಿದ್ದರು. ರಂಭದಲ್ಲಿ ಸಿವಿ ಶಿವಶಂಕರ್ ಅವರು ರಂಗಭೂಮಿಯಲ್ಲಿ ತೊಡಗಿಕೊಂಡಿದ್ದರು. ಬಾಲನಟನಾಗಿಯೇ ರಂಗಭೂಮಿ ಪ್ರವೇಶಿಸಿದ್ದ ಅವರು ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದರು. ಖ್ಯಾತ ನಿರ್ಮಾಪಕ, ನಿರ್ದೇಶಕರಾಗಿದ್ದ ಅವರು ಡಾ.ರಾಜ್‌ಕುಮಾರ್ ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಅವರು 1962 ರಲ್ಲಿ ತಮ್ಮ ರತ್ನ ಮಂಜರಿ ಚಲನಚಿತ್ರದೊಂದಿಗೆ ನಟ, ಸಹಾಯಕ ನಿರ್ದೇಶಕ ಮತ್ತು ನಿರ್ಮಾಣ ವ್ಯವಸ್ಥಾಪಕರಾಗಿ ಚಿತ್ರರಂಗದ ವೃತ್ತಿ ಜೀವನ ಪ್ರಾರಂಭಿಸಿದರು.
ಇದನ್ನೂ ಓದಿ: ಅಪಘಾತ: ಕಾಲು ಕಳೆದುಕೊಂಡ ಪಾರ್ವತಮ್ಮ ರಾಜ್‌ಕುಮಾರ್ ತಮ್ಮನ ಮಗ ಸೂರಜ್; ಸ್ಯಾಂಡಲ್‌ವುಡ್ ಕನಸು ನುಚ್ಚುನೂರು!
ನಂತರ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ‘ಸ್ಕೂಲ್ ಮಾಸ್ಟರ್’, ‘ಕೃಷ್ಣ ಗಾರುಡಿ’, ‘ರತ್ಮಮಂಜರಿ’, ‘ರತ್ನಗಿರಿ ರಹಸ್ಯ’ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಅವರು ನಟಿಸಿದ್ದರು. ಹಲವು ನಿರ್ದೇಶಕರ ಜೊತೆ ಸಹಾಯಕರಾಗಿ ಅನುಭವ ಪಡೆದ ಬಳಿಕ ‘ಮನೆ ಕಟ್ಟಿ ನೋಡು’ ಸಿನಿಮಾವನ್ನು ಸ್ವತಂತ್ರವಾಗಿ ನಿರ್ದೇಶಿಸಿದ್ದರು. ‘ಪದವೀಧರ’, ‘ನಮ್ಮ ಊರು’, ‘ಮಹಡಿಯ ಮನೆ’, ‘ಹೊಯ್ಸಳ, ‘ಮಹಾ ತಪಸ್ವಿ’, ‘ಕನ್ನಡ ಕುವರ’, ‘ವೀರ ಮಹಾದೇವ’ ಮತ್ತಿತರ ಸಿನಿಮಾಗಳಿಗೆ ಸಿ.ವಿ. ಶಿವಶಂಕರ್ ಅವರು ನಿರ್ದೇಶನ ಮಾಡಿದ್ದರು. ಕನ್ನಡ ಚಿತ್ರರಂಗದಲ್ಲಿ ಗೀತರಚನಕಾರನಾಗಿಯೂ ಅವರು ಗುರುತಿಸಿಕೊಂಡಿದ್ದರು. ‘ಸಿರಿವಂತನಾದರೂ ಕನ್ನಡ ನಾಡಲ್ಲಿ ಮೆರೆವೆ..’ ಹಾಡನ್ನು ಬರೆಯುವ ಮೂಲಕ ಅವರು ಅಪಾರ ಜನಪ್ರಿಯತೆ ಪಡೆದುಕೊಂಡಿದ್ದರು.