'ಜವಾನ್' ಚಿತ್ರ ಮೆಚ್ಚಿದ ನಟ ಅಲ್ಲು ಅರ್ಜುನ್; ಪುಷ್ಪ ಸಿನಿಮಾವನ್ನು 3 ಬಾರಿ ನೋಡಿದ್ದೇನೆ ಎಂದ ಶಾರುಖ್!
ಮುಂಬೈ: ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ನಟನೆಯ ಆಕ್ಷನ್-ಥ್ರಿಲ್ಲರ್ 'ಜವಾನ್' ಸಿನಿಮಾದ ಕ್ರೇಜ್ ಸದ್ಯಕ್ಕೆ ಕೊನೆಗೊಳ್ಳುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ.
ಚಿತ್ರ ಬಿಡುಗಡೆಯ ನಂತರ, ಚಲನಚಿತ್ರೋದ್ಯಮದ ಸದಸ್ಯರು ಮತ್ತು ಅಭಿಮಾನಿಗಳು ಎಸ್‌ಆರ್‌ಕೆ ಮತ್ತು ‘ಜವಾನ್’ ಚಿತ್ರತಂಡಕ್ಕೆ ಮೆಚ್ಚುಗೆ ಸೂಚಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಸಂದೇಶವನ್ನು ಹಂಚಿಕೊಂಡಿದ್ದರು.
ಈ ಸಾಲಿಗೆ ತೆಲುಗು ನಟ ಅಲ್ಲು ಅರ್ಜುನ್ ಸೇರಿಕೊಂಡಿದ್ದಾರೆ. ಗುರುವಾರ ಟ್ವೀಟ್ ಮಾಡಿರುವ ಅವರು, ಚಿತ್ರಕ್ಕೆ ದೊರಕಿರುವ ಬೃಹತ್ ಯಶಸ್ಸಿಗಾಗಿ 'ಜವಾನ್' ತಂಡವನ್ನು ಅಭಿನಂದಿಸಿದ್ದಾರೆ.
'ಈ ಬೃಹತ್ ಬ್ಲಾಕ್‌ಬಸ್ಟರ್‌ಗಾಗಿ 'ಜವಾನ್'ನ ಇಡೀ ತಂಡಕ್ಕೆ ಅಭಿನಂದನೆಗಳು. ಜವಾನ್ ಚಿತ್ರದ ಇಡೀ ಪಾತ್ರವರ್ಗ, ತಂತ್ರಜ್ಞರು, ಸಿಬ್ಬಂದಿ ಮತ್ತು ನಿರ್ಮಾಪಕರು ಮತ್ತು ತಮ್ಮ ಅವತಾರದಿಂದ ಇಡೀ ಭಾರತವನ್ನೇ ಮೋಡಿ ಮಾಡಿದ ಶಾರುಖ್ ಖಾನ್ ಅವರಿಗೆ ಹಾರ್ದಿಕ ನಮನಗಳು. ನಿಮ್ಮನ್ನು ನೋಡಿ ನಿಜವಾಗಿಯೂ ನನಗೆ ಸಂತೋಷವಾಗಿದೆ ಸರ್. ನಾವು ನಿಮಗಾಗಿ ಇದನ್ನು ಪ್ರಾರ್ಥಿಸಿದ್ದೇವೆ. ವಿಜಯ್ ಸೇತುಪತಿ ಅವರು ಎಂದಿನಂತೆಯೇ ತಮ್ಮ ಪಾತ್ರದಲ್ಲಿ ತುಂಬಾ ಸೊಗಸಾಗಿ ಕಾಣಿಸಿದ್ದಾರೆ. ದೀಪಿಕಾ ಪಡುಕೋಣೆ ಅವರು ಸೊಗಸಾದ ಮತ್ತು ಪ್ರಭಾವಶಾಲಿ ತಾರೆ ಉಪಸ್ಥಿತಿಯಾಗಿದೆ. ನಯನತಾರಾ ಅವರು ರಾಷ್ಟ್ರಮಟ್ಟದಲ್ಲಿ ಪ್ರಕಾಶಮಾನವಾಗಿ ಮಿಂಚಿದ್ದಾರೆ' ಎಂದು ಟ್ವೀಟ್ ಮಾಡಿದ್ದಾರೆ.
ಮುಂದುವರಿದು, ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರೇ, ನೀವು ನಿಮ್ಮ ಸಂಗೀತದ ಮೂಲಕ ದೇಶದ ಎಲ್ಲರನ್ನೂ ಸಂತೋಷಗೊಳಿಸಿದ್ದೀರಿ. ನಾವು ಹೆಮ್ಮೆ ಪಡುವಂತೆ ಮಾಡಿದ ನಿರ್ದೇಶಕ ಅಟ್ಲೀ ಅವರಿಗೆ ಚಿಂತನ-ಪ್ರಚೋದಕ ಕಮರ್ಷಿಯಲ್ ಸಿನಿಮಾ ನೀಡಿದ್ದಕ್ಕೆ ಮತ್ತು ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ಇತಿಹಾಸವನ್ನು ಸೃಷ್ಟಿಸಿದ್ದಕ್ಕೆ ಬಿಗ್ ಬಿಗ್ ಬಿಗ್ ಅಭಿನಂದನೆಗಳು ಎಂದಿದ್ದಾರೆ.
‘ಪುಷ್ಪ’ ಖ್ಯಾತಿಯ ನಟನ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಶಾರುಖ್ ಖಾನ್, 'ತುಂಬಾ ಧನ್ಯವಾದಗಳು. ನಿಮ್ಮ ಪ್ರೀತಿ ಮತ್ತು ಪ್ರಾರ್ಥನೆಗಳಿಗಾಗಿ ವಂದನೆಗಳು. 'ದಿ ಫೈರ್' ಸ್ವತಃ ನನ್ನನ್ನು ಹೊಗಳುತ್ತಿದೆ.... ವಾಹ್ ... ಇದು ನನ್ನ ದಿನವನ್ನು ಸುಂದರಗೊಳಿಸಿದೆ!!! ಮೂರು ದಿನದಲ್ಲಿ ಮೂರು ಬಾರಿ ಪುಷ್ಪ ಸಿನಿಮಾ ನೋಡಿದ ನಾನು ನಿಮ್ಮಿಂದ ಏನಾದರೂ ಕಲಿತಿದ್ದೇನೆ ಎಂದು ಒಪ್ಪಿಕೊಳ್ಳಲೇಬೇಕು!!! ನಿಮಗೆ ದೊಡ್ಡ ಅಪ್ಪುಗೆ ಮತ್ತು ಸಾಧ್ಯವಾದಷ್ಟು ಬೇಗ ಬಂದು ನಿಮಗೆ ವೈಯಕ್ತಿಕವಾಗಿ ನೀಡುತ್ತೇನೆ. ಸ್ವ್ಯಾಗ್ ಮಾಡುತ್ತಲೇ ಇರಿ!!! ನಿಮ್ಮನ್ನು ಪ್ರೀತಿಸುತ್ತೇನೆ' ಎಂದು ಬರೆದಿದ್ದಾರೆ.
'ಜವಾನ್' ಮೊದಲ ವಾರದ ನಂತರ ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ 327.88 ಕೋಟಿ ರೂ. ಗಳಿಸಿದೆ.
ಚಿತ್ರದಲ್ಲಿ ಶಾರುಖ್ ಖಾನ್ ಅವರಲ್ಲದೆ, ತಮಿಳು ನಟ ವಿಜಯ್ ಸೇತುಪತಿ, ನಯನತಾರಾ ಮತ್ತು ಸನ್ಯಾ ಮಲ್ಹೋತ್ರಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜೊತೆಗೆ ನಟಿ ದೀಪಿಕಾ ಪಡುಕೋಣೆ ಕೂಡ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ