
ಬೆಂಗಳೂರು: ನಟ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ಚಿತ್ರ ಮಾರ್ಟಿನ್ ಚಿತ್ರಕ್ಕೆ ಗ್ರಾಫಿಕ್ಸ್ ಮಾಡುವುದಾಗಿ ಕೋಟ್ಯಂತರ ರೂ ಹಣ ವಂಚನೆ ಮಾಡಿದ್ದ ಆರೋಪದ ಮೇರೆಗೆ ಗ್ರಾಫಿಕ್ಸ್ ವಿನ್ಯಾಸಕರೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಹೌದು.. ನಟ ಧ್ರುವ ಸರ್ಜಾ ಅಭಿನಯದ ಮಾರ್ಟಿನ್ ಚಿತ್ರಕ್ಕೆ ಗ್ರಾಫಿಕ್ಸ್ ಮಾಡುವುದಾಗಿ ಹೇಳಿ ಸುಮಾರು 3.20 ಕೋಟಿ ರೂ ಹಣ ವಂಚನೆ ಮಾಡಿದ ಆರೋಪದ ಮೇರೆಗೆ ಗ್ರಾಫಿಕ್ಸ್ ವಿನ್ಯಾಸಕರನೊಬ್ಬನ್ನು ಬಸವೇಶ್ವರನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ ಮಹದೇವಪುರದ ನಿವಾಸಿ ಸತ್ಯರೆಡ್ಡಿ ಎಂಬುವವರನ್ನು ಬಂಧಿಸಲಾಗಿದ್ದು, ಚಿತ್ರತಂಡದ ದೂರಿನ ಮೇರೆಗೆ ಈತನನ್ನು ಬಂಧಿಸಲಾಗಿದೆ ಎನ್ನಲಾಗಿದೆ.
ಈ ವಂಚನೆ ಸಂಬಂಧ ಬಸವೇಶ್ವರನಗರ ಠಾಣೆಗೆ ಮಾರ್ಟಿನ್ ಚಲನಚಿತ್ರದ ನಿರ್ಮಾಪಕ ಉದಯ್ ಮೆಹ್ತಾ ದೂರು ನೀಡಿದ್ದರು. ಈ ವಂಚನೆ ಪ್ರಕರಣ ದಾಖಲಾದ ಬಳಿಕ ನಗರ ತೊರೆದು ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಆರೋಪಿ ತಲೆಮರೆಸಿಕೊಂಡಿದ್ದ. ಇದೀಗ ಕಾರ್ಯಾಚರಣೆ ನಡೆಸಿದ ಪೊಲೀಸರು ಆತನನ್ನು ಬಂಧಿಸಿ ಕರೆ ತಂದಿದ್ದಾರೆ ಎನ್ನಲಾಗಿದೆ.
ಧ್ರುವ ಸರ್ಜಾ ನಟನೆಯ ಮಾರ್ಟಿನ್ ಸಿನಿಮಾಗೆ ವಿಶೇಷ ಗ್ರಾಫಿಕ್ಸ್ ವಿನ್ಯಾಸಕ್ಕೆ ಸತ್ಯರೆಡ್ಡಿ ಜತೆ ನಿರ್ಮಾಪಕ ಮೆಹ್ತಾ ಒಪ್ಪಂದ ಮಾಡಿಕೊಂಡಿದ್ದು, ಅಂತೆಯೇ ಆತನಿಗೆ 3.20 ಕೋಟಿ ರೂ ಹಣನ್ನು ಬ್ಯಾಂಕ್ ಮೂಲಕ ಮೆಹ್ತಾ ಪಾವತಿಸಿದ್ದರು. ಆದರೆ ಹಣ ಸ್ವೀಕರಿಸಿದ ಬಳಿಕ ಪೂರ್ವ ಒಪ್ಪಂದಂತೆ ಕೆಲಸ ಮಾಡದೆ ಸತ್ಯ ರೆಡ್ಡಿ ವಂಚಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.
Advertisement