
ಪಾಯುಮ್ ಒಲಿ ನೀ ಎನಕ್ಕು (2023) ತಮಿಳು ಚಿತ್ರದ ನಿರ್ದೇಶಕ ಕಾರ್ತಿಕ್ ಅದ್ವೈತ್ ನಟ ಶಿವರಾಜ್‌ಕುಮಾರ್ ಅವರ ಚಿತ್ರ ನಿರ್ದೇಶನದೊಂದಿಗೆ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ ಎಂದು ಈ ಹಿಂದೆಯೇ ವರದಿಯಾಗಿತ್ತು. ಬಹು ಭಾಷೆಗಳಲ್ಲಿ ತಯಾರಾಗಲಿರುವ ಈ ಚಿತ್ರವು ಇದೀಗ ಪ್ರೀ ಪ್ರೊಡಕ್ಷನ್ಸ್ ಹಂತದಲ್ಲಿದೆ. ಶಿವಣ್ಣ, ಸದ್ಯ ನರ್ತನ್ ಅವರ ಭೈರತಿ ರಣಗಲ್ ಮತ್ತು ಅರ್ಜುನ್ ಜನ್ಯ ನಿರ್ದೇಶನದ 45 ಚಿತ್ರದಲ್ಲಿ ಬ್ಯುಸಿಯಾಗಿದ್ದು, ಜುಲೈನಲ್ಲಿ ಈ ಯೋಜನೆಯ ಚಿತ್ರೀಕರಣವನ್ನು ಪ್ರಾರಂಭಿಸುವ ನಿರೀಕ್ಷೆಯಿದೆ. ಜುಲೈ 12ರಂದು ನಟನ ಹುಟ್ಟುಹಬ್ಬದಂದು ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡುವ ಬಗ್ಗೆ ಚಿತ್ರತಂಡ ಯೋಜನೆ ರೂಪಿಸಿದೆ.
ಮತ್ತೊಂದು ಕುತೂಹಲಕಾರಿ ಬೆಳವಣಿಗೆಯೆಂದರೆ, ಈ ಚಿತ್ರದಲ್ಲಿ ದಕ್ಷಿಣ ಭಾರತದ ಜನಪ್ರಿಯ ನಟ ಎಸ್‌ಜೆ ಸೂರ್ಯ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಎಸ್‌ಜೆ ಸೂರ್ಯ, ಹೆಸರಾಂತ ನಿರ್ದೇಶಕ-ನಟನಾಗಿದ್ದು, ಕಮಲ್ ಹಾಸನ್ ಜೊತೆಗೆ ಇಂಡಿಯನ್ 2ನಲ್ಲಿ ಕಾಣಿಸಿಕೊಂಡಿದ್ದರು. ಚಿತ್ರತಂಡ ಸದ್ಯ ನಟನೊಂದಿಗೆ ಮಾತುಕತೆ ನಡೆಸುತ್ತಿದ್ದು, ಎಲ್ಲವೂ ಅಂದಕೊಂಡಂತೆ ನಡೆದರೆ, ಶಿವಣ್ಣ ಮತ್ತು ಸೂರ್ಯ ಬೆಳ್ಳಿತೆರೆಯಲ್ಲಿ ಮುಖಾಮುಖಿಯಾಗಲಿದ್ದಾರೆ. ಎಸ್‌ಜೆ ಸೂರ್ಯ ಅವರನ್ನು ಕನ್ನಡ ಚಿತ್ರರಂಗಕ್ಕೆ ಕರೆತರಲು ಹಲವಾರು ನಿರ್ದೇಶಕರು ಈಗಾಗಲೇ ಪ್ರಯತ್ನಿಸಿದ್ದಾರೆ. ಈ ನಿಟ್ಟಿನಲ್ಲಿ ಕಾರ್ತಿಕ್ ಅದ್ವೈತ್ ಯಶಸ್ವಿಯಾಗುತ್ತಾರೆಯೇ ಎಂಬುದನ್ನು ಕಾದುನೋಡಬೇಕಾಗಿದೆ.
ಎಸ್‌ಸಿಎಫ್‌ಸಿ ಬ್ಯಾನರ್ ಅಡಿಯಲ್ಲಿ ಸುಧೀರ್ ಚಂದ್ರ ಪಾಡಿರಿ ಅವರು ಮೊದಲ ಬಾರಿಗೆ ಈ ಸಿನಿಮಾದ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಕಾರ್ತಿಕ್ ಅದ್ವೈತ್ ಅವರು ಕೊಟಗಿರಿ ವೆಂಕಟೇಶ್ವರ ರಾವ್ ಅವರೊಂದಿಗೆ ಸಹಾಯಕ ನಿರ್ದೇಶಕರಾಗುವ ಮುನ್ನ ಅರೆಕಾಲಿಕ ಸಂಪಾದಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ನ್ಯೂಯಾರ್ಕ್ ಫಿಲ್ಮ್ ಅಕಾಡೆಮಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ವಿಕ್ರಮ್ ಪ್ರಭು ಮತ್ತು ಧನಂಜಯ್ ನಟನೆಯ ಪಾಯುಮ್ ಒಲಿ ನೀ ಎನಕ್ಕು ಚಿತ್ರದ ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆದರು.
ಸಿನಿಮಾ ಎಕ್ಸ್‌ಪ್ರೆಸ್ ಜೊತೆಗಿನ ಹಿಂದಿನ ಸಂದರ್ಶನದಲ್ಲಿ ಅದ್ವೈತ್ ಅವರು, ಶಿವರಾಜಕುಮಾರ್ ಅವರ ಪಾತ್ರಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿಶೇಷವಾಗಿ ಸಿಂಹದ ಮರಿ, ಎಕೆ 47, ಜೋಗಿ ಮತ್ತು ಓಂ ಚಿತ್ರಗಳಲ್ಲಿನ ನಟನೆಯನ್ನು ಮೆಚ್ಚಿದ್ದು, ಅಂತಹ ಪಾತ್ರಗಳ ಛಾಯೆಗಳನ್ನು ಅಳವಡಿಸಲು ಮತ್ತು ವಿಭಿನ್ನ ಅವತಾರದಲ್ಲಿ ಶಿವಣ್ಣನನ್ನು ತೋರಿಸಲು ಯೋಜಿಸಿದ್ದಾರೆ. ಚಿತ್ರದ ತಾರಾಗಣ ಮತ್ತು ತಂತ್ರಜ್ಞರ ಆಯ್ಕೆ ನಡೆಯುತ್ತಿದ್ದು, ಸ್ಯಾಮ್ ಸಿಎಸ್ ಸಂಗೀತ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
Advertisement