
ಬೆಂಗಳೂರು: ಬಾಕ್ಸಾಫಿಸ್ ನಲ್ಲಿ ಕನ್ನಡದ ಆ್ಯನಿಮೇಷನ್ ಸಿನಿಮಾ ಮಹಾವತಾರ ನರಸಿಂಹ (MahavatarNarsimha) ಚಿತ್ರದ ಅಬ್ಬರ ಮುಂದುವೆದಿದ್ದು, ಚಿತ್ರವು ಜಾಗತಿಕ ಬಾಕ್ಸ್ ಆಫಿಸ್ ಗಳಿಕೆಯಲ್ಲಿ 300 ಕೋಟಿಯತ್ತ ದಾಪುಗಾಲಿರಿಸಿದೆ.
ಅಶ್ವಿನ್ ಕುಮಾರ್ ನಿರ್ದೇಶನದ ಮತ್ತು ಹೊಂಬಾಳೆ ಸಂಸ್ಥೆಯ ನಿರ್ಮಾಣದ ಮಹಾವತಾರ ನರಸಿಂಹ ಚಿತ್ರ ಸತತ 4ನೇ ವಾರದ ಯಶಸ್ವಿ ಪ್ರದರ್ಶನದ ಬಳಿಕ 5ನೇ ವಾರದತ್ತ ದಾಪುಗಾಲಿರಿಸಿದ್ದು, ಜಾಗತಿಕ ಬಾಕ್ಸಾಫಿಸ್ ಗಳಿಕೆಯಲ್ಲಿ ಚಿತ್ರವು ಬರೊಬ್ಬರಿ 278 ಕೋಟಿ ರೂ ಗಳಿಸಿದೆ.
ಈ ಬಗ್ಗೆ ಚಿತ್ರದ ನಿರ್ಮಾಣ ಸಂಸ್ಥೆ ಹೊಂಬಾಳೆ ಎಕ್ಸ್ ನಲ್ಲಿ ಟ್ವೀಟ್ ಮಾಡಿದ್ದು ಜಾಗತಿಕ ಬಾಕ್ಸಾಫಿಸ್ ನಲ್ಲಿ ಮಹಾವತಾರ ನರಸಿಂಹ ಚಿತ್ರವು 278 ಕೋಟಿ ರೂ ಗಳಿಕೆ ಮಾಡಿದೆ ಎಂದು ಹೇಳಿದೆ. 'ವಿಶ್ವಾದ್ಯಂತ 278 ಕೋಟಿಗೂ ಹೆಚ್ಚು ಗಳಿಕೆಯಾಗಿದ್ದು ಎಣಿಕೆ ಮುಂದುವರೆದಿದೆ.
ಮಹಾವತಾರ ನರಸಿಂಹ ಅವರ ಐತಿಹಾಸಿಕ ಘರ್ಜನೆ ಮುಂದುವರೆದಿದೆ. ವೈಭವದ 5 ನೇ ವಾರವನ್ನು ಪ್ರವೇಶಿಸುತ್ತಿದೆ ಎಂದು ಟ್ವೀಟ್ ಮಾಡಿದೆ.
ಹಿಂದಿಯಲ್ಲೇ 164 ಕೋಟಿ ರೂ ಗಳಿಕೆ!
ಇನ್ನು ಮಹಾವತಾರ ಚಿತ್ರದ ಹಿಂದಿ ಅವತರಣಿಕೆ ಈ ವರೆಗೂ 164 ಕೋಟಿ ರೂ ಗಳಿಕೆ ಮಾಡಿದೆ. ಶುಕ್ರವಾರದ ಅಂತ್ಯಕ್ಕೆ ಹಿಂದಿಯಲ್ಲಿ ಚಿತ್ರವು 164.49 ಕೋಟಿ ರೂ ಗಳಿಕೆ ಕಂಡಿದೆ.
ಈ ಬಗ್ಗೆ ಖ್ಯಾತ ಬಾಕ್ಸ್ ಆಫೀಸ್ ತಜ್ಞ ತರಣ್ ಆದರ್ಶ್ ಮಾಹಿತಿ ನೀಡಿದ್ದು, ಮಹಾವತಾರ ನರಸಿಂಹ ಇದೇ ಜುಲೈ 25 ಶುಕ್ರವಾರದಂದು ಬಿಡುಗಡೆಯಾಗಿತ್ತು.
ಅಂದಿನಿಂದ ಇಂದಿನವರೆಗೂ ಚಿತ್ರ ತನ್ನ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಅಬ್ಬರದ ಆರ್ಭಟ ನಡೆಸುತ್ತಿದ್ದು, ಈಗಾಗಲೇ ಜಾಗತಿಕ ಗಳಿಕೆಯಲ್ಲಿ ಚಿತ್ರ 250 ಕೋಟಿ ಕ್ಲಬ್ ಸೇರಿದೆ.
ಅಂತೆಯೇ ಹಿಂದಿಯಲ್ಲಿ ಈ ಚಿತ್ರ 150 ಕೋಟಿ ರೂ ಗಡಿದಾಟಿ ಇದೀಗ ತನ್ನ ಗಳಿಕೆಯನ್ನು164.49 ಕೋಟಿ ರೂ ಗೆ ಏರಿಸಿಕೊಂಡಿದೆ ಎಂದು ಮಾಹಿತಿ ನೀಡಿದ್ದಾರೆ.
Advertisement