

ಬೆಂಗಳೂರು: ಕನ್ನಡ ರಾಷ್ಟ್ರ ಪ್ರಶಸ್ತಿ ವಿಜೇತ ತಿಥಿ ಚಿತ್ರದ ಹೀರೋ 'ಅಭಿ' ಈಗ ಏನು ಮಾಡುತ್ತಿದ್ದಾರೆ...? ಅವರ ಕುರಿತ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ.
ಹೌದು.. ಒಂದು ಚಿತ್ರದ ಯಶಸ್ಸು ಅದರ ಪಾತ್ರದಾರಿಗಳ ಜೀವನವನ್ನೇ ಬದಲಿಸುತ್ತದೆ. ತಾನು ನಟಿಸಿದ್ದ ಮೊದಲ ಚಿತ್ರವೇ ರಾಷ್ಟ್ರ ಪ್ರಶಸ್ತಿ ಪಡೆದು ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ತಿಥಿ ಚಿತ್ರದ ನಾಯಕ ಅಭಿಷೇಕ್ ಮತ್ತೆ ಸುದ್ದಿಯಲ್ಲಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ಕನ್ನಡ ಚಿತ್ರದಲ್ಲಿ ಹೀರೊ ಆಗಿ ನಟಿಸಿ ಬಳಿಕ ಬ್ಯಾಕ್ ಟು ಬ್ಯಾಕ್ 2 ಚಿತ್ರಗಳಲ್ಲಿ ನಟಿಸಿದ್ದ ನಾಯಕ ನಟ ಬಳಿಕ ಚಿತ್ರರಂಗದಿಂದ ನಾಪತ್ತೆಯಾಗಿದ್ದರು.
ಕೆಲ ವರ್ಷಗಳ ಬಳಿಕ ಮತ್ತೆ ಕ್ಯಾಮೆರಾ ಕಣ್ಣಿಗೆ ಬಿದ್ದಿರುವ ನಟ ಅಭಿಷೇಕ್ ಸಿನಿಮೇತರ ವಿಚಾರಕ್ಕೆ ಸುದ್ದಿಯಾಗುತ್ತಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ಕನ್ನಡ ಚಿತ್ರದಲ್ಲಿ ಹೀರೊ ಆಗಿ ನಟಿಸಿದ್ದ ಈ ನಟ ಅಭಿಷೇಕ್ ಈಗ ಕೂಲಿ ಕೆಲಸ ಮಾಡುತ್ತಿದ್ದಾರೆ. 3 ಸಿನಿಮಾಗಳಲ್ಲಿ ಹೀರೊ ಆಗಿ ನಟಿಸಿದ್ದ ಅಭಿ ಈಗ ಮರ ಹೊರುವ ಕೆಲಸ ಮಾಡುತ್ತಿದ್ದಾರೆ.
ವಿಡಿಯೋ ವೈರಲ್
ಈ ಬಗ್ಗೆ ಯಾರೋ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದು, ವಿಡಿಯೋದಲ್ಲಿ ತಾನು ದಿನಗೂಲಿ ಕೆಲಸ ಮಾಡುತ್ತಿರುವುದಾಗಿ ಅಭಿ ಒಪ್ಪಿಕೊಂಡಿದ್ದಾರೆ. ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ. 'ತಿಥಿ' ಚಿತ್ರದಲ್ಲಿ ಗಡ್ಡಪ್ಪ ಪಾತ್ರದಲ್ಲಿ ನಟಿಸಿದ್ದ ಚೆನ್ನೇಗೌಡ ಇತ್ತೀಚೆಗೆ ನಿಧನರಾಗಿದ್ದರು.
ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ
9 ವರ್ಷಗಳ ಹಿಂದೆ ತೆರೆಗೆ ಬಂದಿದ್ದ 'ತಿಥಿ' ಸಿನಿಮಾ ದಾಖಲೆ ಬರೆದಿತ್ತು. ಸಣ್ಣ ಹಳ್ಳಿಯಲ್ಲಿ ನಡೆಯುವ ಸಿಂಪಲ್ ಕಥೆಯ ಸಿನಿಮಾ ಪ್ರೇಕ್ಷಕರ ಸೆಳೆದಿತ್ತು. ಕರ್ನಾಟಕದ ಮಂಡ್ಯ ಜಿಲ್ಲೆಯ ಹಳ್ಳಿಗಳ ವೃತ್ತಿಪರರಲ್ಲದ ಕಲಾವಿದರು ಈ ಚಿತ್ರದಲ್ಲಿ ನಟಿಸಿ ಗೆದ್ದಿದ್ದರು. ಸೆಂಚುರಿ ಗೌಡ ಹಾಗೂ ಮಗ ಮೊಮ್ಮಕ್ಕಳ ಕಥೆ ಪ್ರೇಕ್ಷಕರಿಗೆ ಹೊಸ ಅನುಭವ ನೀಡಿತ್ತು.
ಚಿತ್ರದಲ್ಲಿ ಅಭಿ ಹಾಗೂ ಕಾವೇರಿಯ ಸಣ್ಣ ಲವ್ ಟ್ರ್ಯಾಕ್ ಕೂಡ ಇತ್ತು. ಅಭಿ ಆಗಿ ಮಂಡ್ಯದ ಸುಣ್ಣದಕೊಪ್ಪಲು ಗ್ರಾಮದ ಅಭಿಷೇಕ್ ಹೆಚ್. ಎನ್ ನಟಿಸಿದ್ದರು. ಕಾವೇರಿಯಾಗಿ ಪೂಜಾ ಕಾಣಿಸಿಕೊಂಡಿದ್ದರು. ಈ ಸಿನಿಮಾ ಬಳಿಕ ಒಂದೆರಡು ಸಿನಿಮಾಗಳಲ್ಲಿ ನಟಿಸಿದ್ದ ಪೂಜಾ ಸದ್ಯ ಮದುವೆಯಾಗಿ ಫ್ಯಾಮಿಲಿ ಜೊತೆ ಕಾಲ ಕಳೆಯುತ್ತಿದ್ದಾರೆ.
Advertisement