
ಧ್ರುವ ಸರ್ಜಾ ಅಭಿನಯದ ಪ್ರೇಮ್ ನಿರ್ದೇಶನದ 'ಕೆಡಿ - ದಿ ಡೆವಿಲ್' ಚಿತ್ರದ ಚಿತ್ರೀಕರಣ ಹಂತಿಮ ಹಂತದಲ್ಲಿದೆ. ಚಿತ್ರದ ಕೊನೆಯ ಹಾಡು ಮತ್ತು ಕ್ಲೈಮ್ಯಾಕ್ಸ್‌ನ ಕೆಲವು ದೃಶ್ಯಗಳಷ್ಟೇ ಬಾಕಿ ಉಳಿದಿವೆ. ಇದೀಗ ಕೆಡಿ ಚಿತ್ರದ ತಾರಾ ಬಳಗಕ್ಕೆ ನಟ ಶಿವರಾಜಕುಮಾರ್ ಸೇರ್ಪಡೆಗೊಂಡಿದ್ದು, ಅಭಿಮಾನಿಗಳಲ್ಲಿ ತೀವ್ರ ನಿರೀಕ್ಷೆ ಹುಟ್ಟುಹಾಕಿದೆ.
ಈ ಹಿಂದೆ ದಕ್ಷಿಣ ಭಾರತದ ಕೆಲವು ದೊಡ್ಡ ತಾರೆಯರು ಕೆಡಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ವದಂತಿಗಳು ಕೇಳಿಬಂದಿದ್ದವು. ಇದೀಗ ನಟ ಶಿವರಾಜಕುಮಾರ್ ಅವರು ಕೆಡಿ: ಭಾಗ 1 ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಪ್ರಮುಖ ಪಾತ್ರವನ್ನು ವಹಿಸಲಿದ್ದಾರೆ. ಅವರ ಪಾತ್ರವು ಮುಂದಿನ ಕೆಡಿ: ಭಾಗ 2 ರಲ್ಲಿ ಪ್ರಮುಖ ಪಾತ್ರವಾಗಿರಲಿದೆ ಎಂದು ಹೇಳಲಾಗಿದೆ.
ನಿರ್ದೇಶಕ ಪ್ರೇಮ್ ಅವರು ಶಸ್ತ್ರಚಿಕಿತ್ಸೆಯ ನಂತರ ಶಿವಣ್ಣನನ್ನು ಸೆಟ್‌ಗೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಶಿವಣ್ಣ ಇತ್ತೀಚೆಗಷ್ಟೇ ಮಿಯಾಮಿಯಲ್ಲಿ ಚಿಕಿತ್ಸೆ ಪಡೆದು ಹಿಂತಿರುಗಿದ್ದರು. ಸದ್ಯ ಮನೆಯಲ್ಲೇ ಸುಧಾರಿಸಿಕೊಳ್ಳುತ್ತಿದ್ದಾರೆ. ಶಿವಣ್ಣ ಮುಂದಿನ ವಾರ ಚಿತ್ರೀಕರಣ ಆರಂಭಿಸಲಿದ್ದಾರೆ ಎಂದು ವರದಿಯಾಗಿದೆ.
ರವಿಚಂದ್ರನ್ ಮತ್ತು ರಮೇಶ್ ಅರವಿಂದ್ ಕೂಡ ಚಿತ್ರದಲ್ಲಿ ನಿರ್ಣಾಯಕ ಪಾತ್ರಗಳನ್ನು ನಿರ್ವಹಿಸಿದ್ದು, ಕೆಡಿ ಮೂಲಕ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕನ್ನಡ ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ಅಲ್ಲದೆ, ಸಂಜಯ್ ದತ್ ಕೂಡ ಈ ಚಿತ್ರದ ಮೂಲಕ ಕನ್ನಡಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.
ಚಿತ್ರಕ್ಕೆ ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆಯಿದ್ದು, ವಿಲಿಯಂ ಡೇವಿಡ್ ಮತ್ತು ಶ್ರೀನಿವಾಸ್ ಪಿ. ಪ್ರಭು ಕ್ರಮವಾಗಿ ಛಾಯಾಗ್ರಹಣ ಮತ್ತು ಸಂಕಲನವನ್ನು ನಿರ್ವಹಿಸುತ್ತಿದ್ದಾರೆ. ಚಿತ್ರವು ಸದ್ಯ ಪೋಸ್ಟ್-ಪ್ರೊಡಕ್ಷನ್ ಹಂತದಲ್ಲಿದೆ. ಮೇ ತಿಂಗಳಲ್ಲಿ ಚಿತ್ರ ಬಿಡುಗಡೆಯ ಗುರಿಯನ್ನು ಚಿತ್ರತಂಡ ಹೊಂದಿದೆ.
Advertisement