
ಹೈದರಾಬಾದ್: ಹುಟ್ಟುಹಬ್ಬದ ಆಚರಣೆಯ ಸಂದರ್ಭದಲ್ಲಿ ಹೈದರಾಬಾದ್ ನ ಪಬ್ ನಲ್ಲಿ ಗಲಾಟೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಟಾಲಿವುಡ್ ನಟಿ ಕಲ್ಪಿಕಾ ಗಣೇಶ್ (Kalpika Ganesh) ವಿರುದ್ಧ ಪ್ರಕರಣ ದಾಖಲಾಗಿದೆ.
ಹೈದರಾಬಾದ್‌ನ ಗಚ್ಚಿಬೌಲಿಯಲ್ಲಿರುವ ಪ್ರಿಸಂ ಪಬ್‌ನಲ್ಲಿ ಈ ಘಟನೆ ನಡೆದಿದ್ದು, ಕೇಕ್‌ಗಾಗಿ ಆರಂಭವಾದ ಸಣ್ಣ ಜಗಳ ಉಲ್ಬಣಗೊಂಡು ಅಂತಿಮವಾಗಿ ಪೊಲೀಸ್ ಪ್ರಕರಣಕ್ಕೆ ಕಾರಣವಾಗಿದೆ. ನಟಿ ಕಲ್ಪಿಕಾ ಕಳೆದ ಮೇ 29 ರಂದು ಪ್ರಿಸಂ ಪಬ್‌ಗೆ ಹೋಗಿದ್ದರು. ಅಲ್ಲಿ ಅವರು 2200 ರೂ. ಶುಲ್ಕ ಪಾವತಿಸಿ ಉಚಿತ ಕೇಕ್ ಕೇಳಿದ್ದರು. ಮ್ಯಾನೇಜರ್ ಅವರಿಗೆ ಅದನ್ನು ನೀಡಲು ಸಾಧ್ಯವಿಲ್ಲ ಎಂದು ಹೇಳಿದರು. ಈ ವೇಳೆ ಕಲ್ಪಿಕಾ ಗಣೇಶ್ ಮತ್ತು ಪಬ್ ಸಿಬ್ಬಂದಿ ನಡುವೆ ವಾಗ್ವಾದ ನಡೆದಿದೆ.
ಆ ಸಮಯದಲ್ಲಿ, ಪಬ್ ಆಡಳಿತ ಮಂಡಳಿಯು ನಟಿ ಕಲ್ಪಿಕಾ ತಮ್ಮ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿತು. ಗಲಾಟೆ ವೇಳೆ ಕಲ್ಪಿಕಾ ಅವರು ತಟ್ಟೆಗಳನ್ನು ಎಸೆದಿದ್ದಾರೆ.
ಸಿಬ್ಬಂದಿಯನ್ನು ಅವಮಾನಿಸಿದ್ದಾರೆ ಮತ್ತು ಅವರನ್ನು ಅಶ್ಲೀಲ ಪದಗಳಿಂದ ನಿಂದಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಕಲ್ಪಿಕಾ ವಿರುದ್ಧ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಮತ್ತು ಘಟನೆಯ ತನಿಖೆ ನಡೆಸುತ್ತಿದ್ದಾರೆ.
ಪಬ್ ಮ್ಯಾನೇಜರ್ ನೀಡಿದ ದೂರಿನ ಮೇರೆಗೆ ಜೂನ್ 10 ರಂದು ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಲಾಗಿದೆ. ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್‌ಗಳು 324(4) (20,000 ರಿಂದ 1,00,000 ರೂಪಾಯಿಗಳವರೆಗೆ ಆಸ್ತಿಗೆ ನಷ್ಟ ಅಥವಾ ಹಾನಿ ಉಂಟುಮಾಡುವುದು), 352 (ಶಾಂತಿ ಉಲ್ಲಂಘನೆಯನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) ಮತ್ತು 351 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಡಿಯ ಅಪ್ಲೋಡ್ ಮಾಡಿದ ನಟಿ ಕಲ್ಪಿಕಾ
ಮತ್ತೊಂದೆಡೆ, ಕಲ್ಪಿಕಾ ಇತ್ತೀಚೆಗೆ ಪಬ್‌ನಲ್ಲಿ ನಡೆದ ಜಗಳದ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಅದರಲ್ಲಿ, ಸಿಬ್ಬಂದಿ ಕೇಕ್ ವಿಚಾರದಲ್ಲಿ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಲ್ಲದೆ, ಮಾದಕ ವ್ಯಸನಿ ಎಂದೂ ಕರೆದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಸಿಬ್ಬಂದಿಯೊಂದಿಗೆ ವಾಗ್ವಾದ ನಡೆದು, ಅದು ಉಲ್ಬಣಗೊಂಡ ನಂತರ ಪಬ್ ಆಡಳಿತ ಮಂಡಳಿ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದೆ ಎಂದು ಅವರು ಹೇಳಿದ್ದಾರೆ. ಪೊಲೀಸರಿಗೆ ದೂರು ನೀಡಿದ್ದರೂ ಅವರು ತನ್ನನ್ನು ನಿರ್ಲಕ್ಷಿಸಿದ್ದಾರೆ ಎಂದು ಕಲ್ಪಿಕಾ ಆರೋಪಿಸಿದ್ದಾರೆ.
ಯಾರು ಈ ನಟಿ ಕಲ್ಪಿಕಾ
ಅಂದಹಾಗೆ ನಟಿ ಕಲ್ಪಿಕಾ ಟಾಲಿವುಡ್ ನ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟ ಮಹೇಶ್ ಬಾಬು ಮತ್ತು ವಿಕ್ಟರಿ ವೆಂಕಟೇಶ್ ಅಭಿನಯದ 'ಸೀತಮ್ಮ ವಾಕಿಟ್ಲೋ ಸಿರಿಮಲ್ಲೆ ಚೆಟ್ಟು' ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 'ಪ್ರಯಾಣಂ', 'ಸಾರೋಚ್ಚಾರು', 'ಮಾ ವಿಂತ ಗಾಧಾ ವಿನುಮಾ' ಮತ್ತು 'ಯಶೋದಾ' ಮುಂತಾದ ಚಿತ್ರಗಳ ಮೂಲಕ ತೆಲುಗು ಪ್ರೇಕ್ಷಕರಿಗೆ ಪರಿಚಿತರಾಗಿದ್ದಾರೆ.
Advertisement