
ಹೈದರಾಬಾದ್: ಟಾಲಿವುಡ್ ನಟ ನಂದಮೂರಿ ಬಾಲಕೃಷ್ಣ ಮತ್ತೆ ಸುದ್ದಿಯಲ್ಲಿದ್ದು ಈ ಹಿಂದೆ ರಾಷ್ಟ್ರಪತಿಗಳಿಂದ ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ್ದ ನಟ ಬಾಲಯ್ಯ ಇದೀಗ ತಮ್ಮ ಮೀಸೆ ವಿಚಾರವಾಗಿ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾರೆ.
ಜೂನ್ 10 ರಂದು ನಂದಮೂರಿ ಬಾಲಕೃಷ್ಣ 65 ವರ್ಷಕ್ಕೆ ಕಾಲಿಟ್ಟಿದ್ದು, ಅವರ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಯಿತು.
ಅವರು ಕೇಕ್ ಕತ್ತರಿಸುತ್ತಿರುವ ವಿಡಿಯೋ ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಿತ್ತು. ಇದೇ ಕಾರ್ಯಕ್ರಮದಲ್ಲಿ ನಟ ಬಾಲಯ್ಯ ಮುಜುಗರಕ್ಕೊಳಗಾದ ಘಟನೆ ನಡೆದಿದ್ದು, ಅವರ ಮೀಸೆ ವಿಚಾರವಾಗಿ ಸಾಕಷ್ಟು ಸುದ್ದಿಗೆ ಗ್ರಾಸವಾಗಿದ್ದಾರೆ.
ಅಗಿದ್ದೇನು?
ನಟ-ರಾಜಕಾರಣಿ ನಂದಮೂರಿ ಬಾಲಕೃಷ್ಣ ಅವರು ಜೂನ್ 10 ರಂದು 65 ವರ್ಷಕ್ಕೆ ಕಾಲಿಟ್ಟರು. ಇತ್ತೀಚೆಗೆ ಅವರ ಹುಟ್ಟುಹಬ್ಬವನ್ನು ದೊಡ್ಡ ಕೇಕ್ ಕತ್ತರಿಸಿ ಅದ್ಧೂರಿ ಆಚರಣೆಯೊಂದಿಗೆ ಆಚರಿಸಲಾಯಿತು. ಈ ವೇಳೆ ನಟ ಬಾಲಕೃಷ್ಣ ಮಾತನಾಡುತ್ತಿದ್ದ ವೇಳೆ ಅವರ ಕೃತಕ ಮೀಸೆ ಜಾರಿ ಬೀಳುತ್ತಿತ್ತು.
ಒಂದರೆಡು ಬಾರಿ ಅದನ್ನು ಬಾಲಕೃಷ್ಣ ನಿರ್ಲಕ್ಷಿಸಿದರು. ಆದರೆ ಮೀಸೆ ಬೀಳುತ್ತಿದೆ ಎಂದು ತಿಳಿದ ಕೂಡಲೇ ಬಾಲಕೃಷ್ಣ ತಮ್ಮ ಅನುಚರರನ್ನು ಕರೆದು 'ಗಮ್ ಕೊಡ್ರೋ.. ಮೀಸೆ ಬೇಳ್ತಿದೆ..' ಎಂದು ಕೇಳಿದ್ದಾರೆ. ಈ ಕುರಿತ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ಕೇಕ್ ಕತ್ತರಿಸಿದ ಬಾಲಯ್ಯ
ಇನ್ನು ಇದೇ ಕಾರ್ಯಕ್ರಮದಲ್ಲಿ ನಟ ಬಾಲಯ್ಯ ತಮ್ಮ ಜನ್ಮ ದಿನಾಚರಣೆ ನಿಮಿತ್ತ ಕೇಕ್ ಕೂಡ ಕತ್ತರಿಸಿದರು. ಕೇಕ್ ಕತ್ತರಿಸುವ ಮೊದಲು ನಟ ತಮ್ಮ ಟ್ರೇಡ್‌ಮಾರ್ಕ್ ಶೈಲಿಯಲ್ಲಿ ಚಾಕುವನ್ನು ಮೇಲಕ್ಕೆ ಎಸೆದು ಬಳಿಕ ಹಿಡಿಯುವ ಮೂಲಕ ಕ್ಯಾಮೆರಾಮನ್ ಗಳ ಗಮನ ಸೆಳೆದರು. ಚಾಕು ಹರಿತವಾಗಿದ್ದರೂ ಬಾಲಯ್ಯ ಮಾತ್ರ ಅದನ್ನು ತಿರುಗಿಸಿತ್ತು ಬಳಿಕ ಹಿಡಿಯುತ್ತಾ ಮಾತನಾಡುತ್ತಿದ್ದರು.
ಇನ್ನು ಈ ವಿಡಿಯೋದಲ್ಲಿ ನಟ ಬಾಲಕೃಷ್ಣ ಸಾಂಪ್ರದಾಯಿಕ ಬಟ್ಟೆಗಳನ್ನು ಧರಿಸಿ ಹಣೆಯ ಮೇಲೆ ತಿಲಕವನ್ನು ಇಟ್ಟುಕೊಂಡಿದ್ದಾರೆ. ಅವರ ಪಕ್ಕದಲ್ಲಿರುವ ಜನರು ಕೇಕ್ ಕತ್ತರಿಸಲು ಒತ್ತಾಯಿಸುತ್ತಿದ್ದಂತೆ, ಅವರು ಬದಲಾಗಿ ಚಾಕುವನ್ನು ಹಲವು ಬಾರಿ ತಿರುಗಿಸಲು ಪ್ರಾರಂಭಿಸುತ್ತಾರೆ.
ಒಂದು ಹಂತದಲ್ಲಿ, ಅವರ ಪಕ್ಕದಲ್ಲಿ ನಿಂತಿರುವ ಜನರಲ್ಲಿ ಒಬ್ಬರು ಚಾಕು ಅವರ ಹತ್ತಿರ ಬಂದಾಗ ಹಿಂದಕ್ಕೆ ಬಾಗಿ ನೋಡುತ್ತಾರೆ. ಅವರ ಭದ್ರತಾ ಸಿಬ್ಬಂದಿ ಕೂಡ ಏನು ಮಾಡಬೇಕೆಂದು ಯೋಚಿಸುತ್ತಾ ಸುತ್ತಲೂ ನೋಡುತ್ತಿರುವಂತೆ ತೋರುತ್ತದೆ.
ಇನ್ನು ನಟ ಬಾಲಯ್ಯ ತಮ್ಮ ವೇಷಭೂಷಣಗಳ ವಿಚಾರವಾಗಿ ಸುದ್ದಿಗೆ ಗ್ರಾಸವಾಗುತ್ತಿರುವುದು ಇದೇ ಮೊದಲೇನಲ್ಲ.. ಈ ಹಿಂದೆ ಇದೇ ಬಾಲಯ್ಯ ಅವರ ವಿಗ್ ವಿಚಾರವಾಗಿ ಆಂಧ್ರ ಪ್ರದೇಶದಲ್ಲಿ ವ್ಯಾಪಕ ಚರ್ಚೆಗಳಾಗಿದ್ದವು. ವೈಎಸ್ ಆರ್ ಕಾಂಗ್ರೆಸ್ ಪಕ್ಷದ ನಾಯಕರು ಬಾಲಕೃಷ್ಣ ಅವರ ವಿಗ್ ವಿಚಾರವಾಗಿ ಟೀಕೆ ಮಾಡಿದ್ದರು. ಇದಕ್ಕೆ ಭಗವಂತ್ ಕೇಸರಿ ಚಿತ್ರದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಬಾಲಯ್ಯ ಖಡಕ್ ತಿರುಗೇಟು ನೀಡಿದ್ದರು.
Advertisement