
ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಕವಲುದಾರಿ ಮತ್ತು ಇತ್ತೀಚಿನ ಸಪ್ತ ಸಾಗರದಾಚೆ ಎಲ್ಲೋ ಚಿತ್ರಗಳಿಗೆ ಹೆಸರಾದ ನಿರ್ದೇಶಕ ಹೇಮಂತ್ ಎಂ ರಾವ್ ಇದೀಗ ಹೊಸ ಚಿತ್ರವನ್ನು ಘೋಷಿಸಿದ್ದು, '666 ಆಪರೇಷನ್ ಡ್ರೀಮ್ ಥಿಯೇಟರ್' ಎಂಬ ಶೀರ್ಷಿಕೆಯನ್ನು ಅನಾವರಣಗೊಳಿಸಿದ್ದಾರೆ.
ನಟ ಶಿವರಾಜ್‌ಕುಮಾರ್ ಅವರೊಂದಿಗೆ ಈ ಹಿಂದೆ ಘೋಷಿಸಲಾದ 'ಭೈರವನ ಕೊನೆ ಪಾಠ' ಚಿತ್ರವು ಸದ್ಯ ಸ್ಥಗಿತಗೊಂಡಿದ್ದರೂ, ಇದೀಗ ಈ ಹೊಸ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಶಿವರಾಜ್‌ಕುಮಾರ್ ಇತ್ತೀಚೆಗೆ ಸಂವಾದದ ಸಮಯದಲ್ಲಿ ಹೇಮಂತ್ ಅವರೊಂದಿಗೆ ಮುಂಬರುವ ಚಿತ್ರದ ಬಗ್ಗೆ ಸುಳಿವು ನೀಡಿದ್ದರು. ಇದೀಗ ಚಿತ್ರತಂಡ ಶೀರ್ಷಿಕೆ ಮೋಷನ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ.
ಶಿವರಾಜ್‌ಕುಮಾರ್ ಅವರೊಂದಿಗೆ ನಟ ಡಾಲಿ ಧನಂಜಯ್ ಕೂಡ ನಟಿಸುತ್ತಿದ್ದಾರೆ. ಟಗರು ಚಿತ್ರದ ಬಳಿಕ ಮತ್ತೊಮ್ಮೆ ಇಬ್ಬರು ನಟರು ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ.
ಈ ಚಿತ್ರವನ್ನು ವೈಶಾಖ್ ಜೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಡಾ. ವೈಶಾಕ್ ಜೆ ಗೌಡ ನಿರ್ಮಿಸುತ್ತಿದ್ದಾರೆ. ಈ ಬಾರಿ, ಹೇಮಂತ್ 70ರ ದಶಕದಿಂದ ಪ್ರೇರಿತವಾದ ಕಥೆಯನ್ನು ಹೇಳುತ್ತಿದ್ದಾರೆ. 666 ಆಪರೇಷನ್ ಡ್ರೀಮ್ ಥಿಯೇಟರ್ ಕೂಡ ವಿಶಿಷ್ಠ ಶೈಲಿಯಲ್ಲಿ ತೆರೆ ಮೇಲೆ ಬರುವ ನಿರೀಕ್ಷೆಯಿದೆ.
ಚಿತ್ರಕ್ಕೆ ಚರಣ್ ರಾಜ್ ಅವರು ಸಂಗೀತ ಸಂಯೋಜಿಸುತ್ತಿದ್ದು, ಹೇಮಂತ್ ಅವರೊಂದಿಗಿನ ಅವರ ಯಶಸ್ವಿ ಸಹಯೋಗವನ್ನು ಮುಂದುವರೆಸಿದ್ದಾರೆ. ಚಿತ್ರಕ್ಕೆ ಅದ್ವೈತ್ ಗುರುಮೂರ್ತಿ ಅವರ ಛಾಯಾಗ್ರಹಣ, ವಿಶ್ವಾಸ್ ಕಶ್ಯಪ್ ಅವರ ನಿರ್ಮಾಣ ವಿನ್ಯಾಸವಿದೆ. 666 ಆಪರೇಷನ್ ಡ್ರೀಮ್ ಥಿಯೇಟರ್ ಸದ್ಯ ಪ್ರೀ-ಪ್ರೊಡಕ್ಷನ್ ಹಂತದಲ್ಲಿದ್ದು, ಮುಂದಿನ ದಿನಗಳಲ್ಲಿ ಈ ಯೋಜನೆ ಕುರಿತು ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.
ಈಮಧ್ಯೆ, ಧನಂಜಯ್ ಅವರು ಶಂಕರ್ ಗುರು ನಿರ್ದೇಶನದ ಅಣ್ಣಾ ಫ್ರಂ ಮೆಕ್ಸಿಕೋ, ರೋಹಿತ್ ಪದಕಿ ನಿರ್ದೇಶನದ ಉತ್ತರಕಾಂಡ, ಸುಕೇಶ್ ನಾಯಕ್ ನಿರ್ದೇಶನದ ಹಲಗಲಿ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.
Advertisement