
ಬೆಂಗಳೂರು: ಬಿಗ್ ಬಾಸ್ ಸೀಸನ್ 12 ಸ್ಪರ್ಧಿ ಹಾಗೂ ನಿರೂಪಕಿ ಜಾಹ್ನವಿ ಕಾರ್ಯಕ್ರಮದಲ್ಲಿ ಸಿಂಪಥಿ ಗಿಟ್ಟಿಸಲು ತಮ್ಮ ವಿರುದ್ಧ ಆರೋಪ ಮಾಡುತ್ತಿದ್ದು, ನನ್ನ ಕೆಲಸ ಹೋದಾಗ ಆಕೆಯ ವರ್ತನೆ ಬದಲಾಯಿತು ಎಂದು ಮಾಜಿ ಪತಿ ಕಾರ್ತಿಕ್ ಕೆಂಡಾಮಂಡಲರಾಗಿದ್ದಾರೆ.
ಬಿಗ್ಬಾಸ್ ಕನ್ನಡ ಸೀಸನ್ 12ರಲ್ಲಿ ನಿರೂಪಕಿಯಲ್ಲಿ ಜಾಹ್ನವಿ ಸ್ಪರ್ಧಿಯಾಗಿದ್ದು, ಕಾರ್ಯಕ್ರಮದ ವೇಳೆ ತಮ್ಮ ವೈವಾಹಿಕ ಜೀವನದ ಕುರಿತು ಮಾತನಾಡಿದ್ದ ನಿರೂಪಕಿ ಜಾಹ್ನವಿ ತಮ್ಮ ಪತಿಗೆ ಅಕ್ರಮ ಸಂಬಂಧ ಇತ್ತು ಹಾಗಾಗಿ ತಾವು ವಿಚ್ಛೇದನ ನೀಡಿದ್ದಾಗಿ ಹೇಳಿಕೊಂಡಿದ್ದರು. ಇದೀಗ ಜಾಹ್ನವಿಯ ಮಾಜಿ ಪತಿ ಕಾರ್ತಿಕ್ ಅವರ ಮಾತುಗಳಿಗೆ ಕೆಂಡಾಮಂಡಲರಾಗಿದ್ದು, ಸಿಂಪಥಿಗಾಗಿ ಇಂತಹ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಖಾಸಗಿ ಸುದ್ದಿವಾಹಿನಿಯ ಜೊತೆ ಮಾತನಾಡಿರುವ ಕಾರ್ತಿಕ್, 'ಜಾಹ್ನವಿ ನನ್ನ ತೇಜೋವಧೆ ಮಾಡುತ್ತಿರುವುದನ್ನು ಸಹಿಸುವುದಿಲ್ಲ. ಮದುವೆ ಆದ ಹೊಸತರಲ್ಲಿ ಎಲ್ಲವೂ ಚೆನ್ನಾಗಿತ್ತು, ಚಿತ್ರದುರ್ಗದಲ್ಲಿ ನಮ್ಮ ಉದ್ಯಮ ಇತ್ತು, ಬೆಂಗಳೂರಿನಲ್ಲಿ ನಾನು ಐಟಿ ಕೆಲಸದಲ್ಲಿದ್ದೆ. ಸಂಸಾರ ಆರಂಭಿಸಿದ ಮೇಲೆ ನಾವು ಬೆಂಗಳೂರಿಗೆ ಹೋಗೋಣ ಎಂದು ಹಠವಿಡಿದರು.
ಮದುವೆ ಆಗಿ ಕೆಲ ಸಮಯದ ಬಳಿಕ ನನ್ನ ತಾಯಿಯೊಟ್ಟಿಗೆ ಜಾಹ್ನವಿಗೆ ಹೊಂದಾಣಿಕೆ ಆಗದ ಕಾರಣ ಜಾಹ್ನವಿ ಬಲವಂತದಿಂದ ಬೇರೆ ಮನೆ ಮಾಡಿಸಿದರು. ಬಳಿಕ ಸ್ವಂತ ಮನೆ ಬೇಕೆಂದು ಪಟ್ಟು ಹಿಡಿದ ಕಾರಣ ನಾನು ಅಪಾರ್ಟ್ಮೆಂಟ್ ಒಂದನ್ನು ಬಾಡಿಗೆಗೆ ಪಡೆದುಕೊಂಡೆ' ಎಂದು ಹೇಳಿದ್ದಾರೆ.
ಕೆಲಸ ಹೋದಾಗ ಆಕೆಯ ವರ್ತನೆ ಬದಲಾಯ್ತು
ಇದೇ ವೇಳೆ ಕಾರ್ತಿಕ್ ನನ್ನ ಕೆಲಸ ಹೋಗಿ, ಊರಿನ ಉದ್ಯಮವೂ ಡಲ್ ಆದ ಬಳಿಕ ಜಾಹ್ನವಿ ವರ್ತನೆ ಬದಲಾಯ್ತು. ಜಾಹ್ನವಿ ಉದ್ಯೋಗಕ್ಕೆ ಹೋಗಿ ಕೆಲ ಕಾಲ ಮನೆಯ ಇಎಂಐ ಅನ್ನು ಸಹ ಕಟ್ಟಿದರು. ಆದರೆ ಇಡೀ ಮನೆಯ ಸಾಲ ಅವರೇ ತೀರಿಸಿದರು ಎಂಬುದು ಸುಳ್ಳು, 60 ಸಾವಿರ ಸಂಬಳದಲ್ಲಿ 1.50 ಕೋಟಿಯ ಫ್ಲ್ಯಾಟ್ ಖರೀದಿ ಮಾಡಲು ಸಾಧ್ಯವಾ? ಎಂದು ಕಾರ್ತಿಕ್ ಪ್ರಶ್ನೆ ಮಾಡಿದ್ದಾರೆ.
ಬೇರೊಬ್ಬ ಗಂಡಸಿನೊಂದಿಗೆ ಸಲುಗೆ, ಸುಮ್ಮನೇ ಇರಬೇಕಾ?
ಇದೇ ವೇಳೆ ಕುಡಿದು ಬಂದು ಜಾಹ್ನವಿಯ ಮೇಲೆ ಹಲ್ಲೆ ಮಾಡಿದ ವಿಷಯದ ಬಗ್ಗೆ ಮಾತನಾಡಿರುವ ಕಾರ್ತಿಕ್, ‘ಹೌದು, ಹಲ್ಲೆ ಮಾಡಿರುವುದು ನಿಜ. ನಾನು ಜೊತೆಗಿದ್ದಾಗಲೂ ಬೇರೊಬ್ಬ ಗಂಡಸಿನ ಜೊತೆಗೆ ಸಲುಗೆಯಿಂದ ಇರುವುದು, ಖಾಸಗಿ ಫೋಟೊಗಳನ್ನು ಹಂಚಿಕೊಳ್ಳುವುದು ನೋಡಿದಾಗ ನನಗೆ ಸಿಟ್ಟು ಬಂದು ಹಾಗೆ ಮಾಡಿದ್ದೇನೆ ಎಂದಿದ್ದಾರೆ.
ವೃಥಾ ಆರೋಪಗಳಿಂದ ಕುಟುಂಬಕ್ಕೆ ತೊಂದರೆ
ನನ್ನ ತಂದೆ, ತಾಯಿ ಮೊಮ್ಮಗನನ್ನು ನೋಡಲು ಬಂದಾಗ ಕನಿಷ್ಟ ಸೌಜನ್ಯವನ್ನೂ ಅವರು ತೋರಿಸಲಿಲ್ಲ. ವಿಚ್ಛೇದನ ಆಗಿ ವರ್ಷಗಳೇ ಆದರೂ ಸಹ ನನ್ನ ಬಗ್ಗೆ ಮಾಹಿತಿಗಳನ್ನು ಕಲೆ ಹಾಕಿ ಹೀಗೆ ರಿಯಾಲಿಟಿ ಶೋಗಳಲ್ಲಿ ಮಾತನಾಡುತ್ತಿರುವುದು ಗಮನಿಸಿದರೆ ಅವರದ್ದು ವಿಕೃತ ಮನಸ್ಸು ಎಂಬುದು ಅರ್ಥವಾಗುತ್ತದೆ. ಮಗನ ಶಿಕ್ಷಣಕ್ಕೆ ವರ್ಷಕ್ಕೆ ಇಂತಿಷ್ಟು ಹಣ ಕೊಡಬೇಕೆಂದು ನ್ಯಾಯಾಲಯ ಹೇಳಿದೆ.
ಅದರಂತೆ ನಾನು ಅವರ ಖಾತೆಗೆ ಹಣ ಹಾಕುತ್ತಿದ್ದೇನೆ. ಎಷ್ಟೇ ಆಗಲಿ ಅವನು ನನ್ನ ಮಗ. ಆದರೆ ಜಾಹ್ನವಿ ತಮ್ಮ ಪಾಡಿಗೆ ತಾವು ಇದ್ದರೆ ಒಳ್ಳೆಯದು. ಹೀಗೆ ನನ್ನ ಬಗ್ಗೆ, ನನ್ನ ಕುಟುಂಬದ ಬಗ್ಗೆ ಇಲ್ಲ ಸಲ್ಲದ್ದು ಹೇಳಿದರೆ ನಮ್ಮ ಕುಟುಂಬಕ್ಕೆ ಸಮಸ್ಯೆ ಆಗುತ್ತದೆ’ ಎಂದು ಕಾರ್ತಿಕ್ ಕಿಡಿಕಾರಿದ್ದಾರೆ.
ನೈಟ್ ಶಿಫ್ಟ್ ಕೆಲಸ, ಸಿನಿಮಾ ಬೇಡ ಎಂದಿದ್ದೆ
ಅವರನ್ನು ಮದುವೆ ಮಾಡಿಕೊಳ್ಳುವ ಮುನ್ನ ಸಿನಿಮಾಗೆ ಹೋಗಬಾರದು ಎಂದು ಕಂಡೀಷನ್ ಹಾಕಿದ್ದೆ. ನಾವು ತುಂಬಾ ಸ್ಥಿತಿವಂತರು, ಪೆಟ್ರೋಲ್ ಬಂಕ್ ಇದ್ದವು, ಟ್ರಾವೆಲ್ಸ್ ಇತ್ತು. ಆದರೆ, ನನ್ನ ಪ್ಯಾಶನ್ ಒಂದಿಷ್ಟು ಇದೆ ಎನ್ನುತ್ತಾ ಆರಂಭದಲ್ಲಿ ಧಾರಾವಾಹಿ, ಮಾಧ್ಯಮ ಕ್ಷೇತ್ರದಲ್ಲಿ ಆಫರ್ ಬರ್ತಿವೆ ಎಂದರು. ಆಗ ನಾನು ಸೀರಿಯಲ್ ಬೇಡ, ನ್ಯೂಸ್ ಚಾನಲ್‌ಗೆ ಓಕೆ ಅಂತಾ ಹೇಳಿದೆ.
ನಾನು ಗಂಡ ಆಗಿದ್ದರೂ, ಬೇರೊಬ್ಬ ವ್ಯಕ್ತಿ ಜೊತೆಗೆ ತೀರಾ ಸಲುಗೆಯಿಂದ ಮಾತನಾಡುವುದು, ಖಾಸಗಿ ಫೋಟೋಗಳನ್ನು ಹಂಚಿಕೊಂಡಿದ್ದಾಗ ನಾನು ಕುಡಿದು ಬಂದು ಹೊಡೆದಿರುವುದೂ ನಿಜ ಎಂದು ಕಾರ್ತಿಕ್ ಹೇಳಿದ್ದಾರೆ.
ಹಾಲಿ ಪತ್ನಿ ಕೂಡ ಗರಂ
ಜಾಹ್ನವಿಯ ಮಾಜಿ ಪತಿ ಕಾರ್ತಿಕ್ ಮಾತ್ರವೇ ಅಲ್ಲದೆ ಕಾರ್ತಿಕ್ ಅವರ ಹಾಲಿ ಪತ್ನಿ ಸಹ ಜಾಹ್ನವಿ ಮಾಡಿರುವ ಆರೋಪಗಳ ಬಗ್ಗೆ ಗರಂ ಆಗಿದ್ದಾರೆ. ಸಂದರ್ಶನದಲ್ಲಿ ಮಾತನಾಡಿದ ಅವರು, 'ಜಾಹ್ನವಿ ಹಾಗೂ ಕಾರ್ತಿಕ್ ಮದುವೆ ಮುರಿಯಲು ತಾವು ಕಾರಣ ಅಲ್ಲ. ಜಾಹ್ನವಿ ಸುಳ್ಳುಗಳನ್ನು ಹೇಳಿ ಸಿಂಪಥಿ ಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ' ಎಂದು ಆರೋಪ ಮಾಡಿದ್ದಾರೆ.
Advertisement