
ರಿಷಭ್ ಶೆಟ್ಟಿ ನಿರ್ದೇಶನದ, ಬಹು ನಿರೀಕ್ಷಿತ ಕಾಂತಾರ: ಚಾಪ್ಟರ್ 1 ಚಿತ್ರವು ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿದ್ದು, ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಲೆಕ್ಷನ್ ಕಾಣುತ್ತಿದೆ. ಅಕ್ಟೋಬರ್ 2ರಂದು ಬಿಡುಗಡೆಯಾದ ಚಿತ್ರವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಹಲವಾರು ಚಿತ್ರಮಂದಿರಗಳು ಇದೀಗ ತುಂಬಿ ತುಳುಕುತ್ತಿವೆ. ಚಿತ್ರ ಬಿಡುಗಡೆಗೂ ಮುನ್ನ ನೀಡಿದ ಸಂದರ್ಶನದಲ್ಲಿ ರಿಷಭ್ ಶೆಟ್ಟಿ, ಹಿರಿಯ ನಟ ರಜನಿಕಾಂತ್ ಅವರೊಂದಿಗಿನ ಭೇಟಿಯನ್ನು ನೆನಪಿಸಿಕೊಂಡರು ಮತ್ತು ತಮಗೆ ಒಂದೇ ಒಂದು ವಿಷಾದವಿದೆ ಎಂದು ಹೇಳಿದರು.
ಬಿಹೈಂಡ್‌ವುಡ್ಸ್ ಜೊತೆ ಮಾತನಾಡಿದ ನಟ, 'ರಜನಿ ಸರ್ ಯಾವಾಗಲೂ ಕಿರಿಯ ಕಲಾವಿದರನ್ನು ಉನ್ನತಿಗೇರಿಸುವ ಮತ್ತು ಪ್ರೋತ್ಸಾಹಿಸುವ ವ್ಯಕ್ತಿ ಮತ್ತು ಅದು ಅವರ ಹಿರಿತನವನ್ನು ನಿಜವಾಗಿಯೂ ವ್ಯಾಖ್ಯಾನಿಸುತ್ತದೆ. ಕಾಂತಾರ ನೋಡಿದ ನಂತರ, ಅವರು ನನ್ನನ್ನು ತಮ್ಮ ಮನೆಗೆ ಕರೆದರು ಮತ್ತು ಆ ಕ್ಷಣ ಬಹುತೇಕ ಆಧ್ಯಾತ್ಮಿಕ ಭಾವನೆ ಮೂಡಿಸಿತು. ಅದು ದೇವಸ್ಥಾನಕ್ಕೆ ಭೇಟಿ ನೀಡಿದಂತೆ; ನನ್ನ ಮುಂದೆ ಅವರನ್ನು ನೋಡಿದಾಗ ಮನುಷ್ಯನ ರೂಪದಲ್ಲಿ ದೇವರನ್ನು ನೋಡುವಂತೆ ಭಾಸವಾಯಿತು" ಎಂದು ಹೇಳಿದರು.
'ಆ ದಿನದ ಬಗ್ಗೆ ನನಗೆ ವಿಷಾದವಿರುವ ಏಕೈಕ ವಿಷಯವೆಂದರೆ, ಧೋತಿ ಧರಿಸಲು ಸಾಧ್ಯವಾಗದಿರುವುದು. ಫೋಟೊದಲ್ಲಿ, ನೀವು ನನ್ನನ್ನು ಪ್ಯಾಂಟ್‌ನಲ್ಲಿ ನೋಡಬಹುದು ಏಕೆಂದರೆ, ಕೊನೆಯ ಕ್ಷಣದಲ್ಲಿ ನನಗೆ ಮಾಹಿತಿ ನೀಡಲಾಯಿತು ಮತ್ತು ಅವರ ಮನೆಗೆ ವಿಮಾನ ಹಿಡಿಯಬೇಕಾಯಿತು. ರಜನಿ ಸರ್ ಧೋತಿ ಧರಿಸಿದ್ದಾಗ ನಾನು ಧೋತಿಯಲ್ಲಿ ಇಲ್ಲದಿರುವುದು ನನಗೆ ಇನ್ನೂ ಬೇಸರ ತರಿಸುತ್ತದೆ. ನಾನು ಸಾಮಾನ್ಯವಾಗಿ ಹೆಚ್ಚಿನ ಸಂದರ್ಭಗಳಲ್ಲಿ ಧೋತಿ ಧರಿಸಲು ಇಷ್ಟಪಡುತ್ತೇನೆ. ತೀರಾ ಅಗತ್ಯವಿದ್ದಾಗ ಮಾತ್ರ ಪ್ಯಾಂಟ್ ಧರಿಸುತ್ತೇನೆ' ಎಂದರು.
2022ರಲ್ಲಿ, ರಿಷಬ್ ರಜನಿಕಾಂತ್ ಅವರನ್ನು ಭೇಟಿಯಾದಾಗ, ಸೂಪರ್ ಸ್ಟಾರ್ ತಮಗೆ ಬಾಬಾ ಪೆಂಡೆಂಟ್ ಇರುವ ಚಿನ್ನದ ಸರವನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ಸಿನಿಮಾ ಎಕ್ಸ್‌ಪ್ರೆಸ್‌ಗೆ ತಿಳಿಸಿದರು. 'ಈ ಭೇಟಿ ಮತ್ತು ಅವರ ಪ್ರೀತಿಯಿಂದ ನೀಡಿರುವ ಸಂಕೇತ ಯಾವಾಗಲೂ ನಿಧಿಯಂತೆ. ನನಗೆ ಅವರ ಆಶೀರ್ವಾದವೂ ಸಿಕ್ಕಿತು. ಒಂದು ಗಂಟೆಯ ಸಂವಾದದಲ್ಲಿ, ನಾವು ಕಾಂತಾರ ಬಗ್ಗೆ ದೀರ್ಘವಾಗಿ ಚರ್ಚಿಸಿದೆವು. ನಾವು ಕೆಲವು ದೃಶ್ಯಗಳನ್ನು ಹೇಗೆ ಚಿತ್ರೀಕರಿಸಿದ್ದೇವೆ ಎಂದು ತಿಳಿಯಲು ಅವರು ಕುತೂಹಲದಿಂದಿದ್ದರು ಮತ್ತು ಕಾಂತಾರದಂತಹ ಚಿತ್ರಗಳು 50 ವರ್ಷಗಳಿಗೊಮ್ಮೆ ಸಂಭವಿಸಬಹುದು ಎಂದು ಹೇಳಿದರು' ಎಂದರು.
ಕಾಂತಾರ: ಚಾಪ್ಟರ್ 1 ಚಿತ್ರವು 2022ರ ಕಾಂತಾರದ ಪ್ರೀಕ್ವೆಲ್ ಆಗಿದ್ದು, ರಿಷಬ್ ಶೆಟ್ಟಿ ಜೊತೆಗೆ ರುಕ್ಮಿಣಿ ವಸಂತ್, ಗುಲ್ಶನ್ ದೇವಯ್ಯ ಮತ್ತು ಜಯರಾಮ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವು ಸದ್ಯ ಭಾರತದಲ್ಲಿಯೇ 170 ಕೋಟಿ ರೂ.ಗಳಿಗೂ ಅಧಿಕ ಗಳಿಕೆ ಕಂಡಿದೆ.
Advertisement