

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 12ನಲ್ಲಿ ಭಾರಿ ಸುದ್ದಿಗೆ ಗ್ರಾಸವಾಗಿದ್ದ ರಕ್ಷಿತಾಶೆಟ್ಟಿಗೆ ಬಳಸಿದ್ದ ಎಸ್ ಪದದ ಕುರಿತು ಕೊನೆಗೂ ಸ್ಪರ್ಧಿ ಅಶ್ವಿನಿಗೌಡ ಸ್ಪಷ್ಟನೆ ನೀಡಿದ್ದಾರೆ.
ಹೌದು.. ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ರಕ್ಷಿತಾ ಶೆಟ್ಟಿ, ಅಶ್ವಿನಿ ಗೌಡ ಮಧ್ಯೆ ಜಗಳ ಆಗಿತ್ತು. ಆ ವೇಳೆ ಅಶ್ವಿನಿ ಗೌಡ ಅವರು ರಕ್ಷಿತಾ ಎಸ್ ಕ್ಯಾಟಗರಿಗೆ ಸೇರಿದವಳು ಎಂದು ಹೇಳಿದ್ದರು. ಬಳಿಕ ಈ ಎಸ್ ಕ್ಯಾಟಗರಿ ಅಂದರೆ ಏನು ಎಂದು ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಒಂದು ಸಮುದಾಯದ ನಾಯಕರು ಇದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಪೊಲೀಸ್ ಠಾಣೆ ಮೆಟ್ಟಿಲು ಕೂಡ ಏರಿದ್ದರು.
ಇದೀಗ ಇದೇ ಎಸ್ ಪದ ಬಳಕೆ ಕುರಿತು ಕೊನೆಗೂ ಅಶ್ವಿನಿಗೌಡ ಮಾತನಾಡಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಶ್ವಿನಿಗೌಡ ಅವರು, 'ಎಸ್' ಪದ ವಿವಾದಾಸ್ಪದವಲ್ಲ.. ನಾನು ಸಾಮಾಜಿಕ ಹೋರಾಟಗಾತಿ, ಕನ್ನಡ ಹೋರಾಟಗಾರ್ತಿ. ನನಗೆ 20 ವರ್ಷದ ಜರ್ನಿ ಇದೆ. ಜಾತಿ ಅಥವಾ ಇನ್ಯಾವುದೋ ವಿಚಾರದಲ್ಲಿ ಯಾವ ಪದ ಬಳಸಿದರೆ, ಏನಾಗುತ್ತದೆ ಎಂದು ಗೊತ್ತಿದೆ. ಅಷ್ಟು ಪ್ರಜ್ಞೆ ಇಲ್ಲದಿರೋ ವ್ಯಕ್ತಿ ನಾನಲ್ಲ' ಎಂದು ಹೇಳಿದ್ದಾರೆ.
ಇಷ್ಟಕ್ಕೂ ಎಸ್ ಕ್ಯಾಟಗರಿ ಎಂದರೇನು?
S ಅಂದರೆ ಶೌಟಿಂಗ್ ಎಂದರ್ಥ, ಕೂಗಾಡ್ತಾರೆ, ಕಿರುಚಾಡಿ ಸ್ಕೋಪ್ ತಗೊಳ್ತಾರೆ ಎನ್ನುವವರಿಗೆ ಶೌಟಿಂಗ್ ಕ್ಯಾಟಗರಿ ಎಂದು ಹೇಳುತ್ತಾರೆ. ರಕ್ಷಿತಾ ಶೆಟ್ಟಿ ಕೂಗಾಡುತ್ತಾರೆ, ಆ ವ್ಯಕ್ತಿ ನಾನಲ್ಲ. ಎಸ್ ಕ್ಯಾಟಗರಿ ಬಗ್ಗೆ ಜನರು ಈಗ ಮಾತನಾಡಿರೋದು ನೋಡಿ, ಸಿಲ್ಲಿ ಅನಿಸಿತು. ಈಗ ನನಗೆ ರಕ್ಷಿತಾ ಶೆಟ್ಟಿ ನೇರವಾಗಿ ಗೊತ್ತಿದೆ” ಎಂದು ಅಶ್ವಿನಿ ಗೌಡ ಹೇಳಿದ್ದಾರೆ.
3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕು!
ಮನುಷ್ಯನಿಗೆ ತೃಪ್ತಿ ಅನ್ನೋದು ಇಲ್ಲ, ನಾನು ವಿನ್ ಆದರೂ ಕೂಡ ತೃಪ್ತಿ ಇರೋದಿಲ್ಲ. ವಿನ್ ಆಗಬೇಕು ಎನ್ನೋದಿತ್ತು. ಈಗ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳೋಣ. ಎಲ್ಲರನ್ನು ಎದುರಿ ಹಾಕಿಕೊಂಡು ಒಂಟಿಯಾಗಿ ಬದುಕೋದು ಸುಲಭ ಇಲ್ಲ. ಇಲ್ಲಿಯವರೆಗೆ ಬಂದಿದೀನಿ ಅಂದರೆ ನಾನು ಕಪ್ ಗೆದ್ದಷ್ಟೇ ಖುಷಿಯಾಗಿದೆ ಎಂದರು.
ಪ್ರಚಾರ ಮಾಡಿದ್ದರಲ್ಲಿ ತಪ್ಪಿಲ್ಲ
ಇದೇ ವೇಳೆ ಅಶ್ವಿನಿ ಗೌಡ ಪರವಾಗಿ ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷರು ಬೆಂಬಲ ಸೂಚಿಸಿದ್ದರು. ಇದೂ ಕೂಡ ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು. ಈ ಬಗ್ಗೆಯೂ ಮಾತನಾಡಿರುವ ಅಶ್ವಿನಿಗೌಡ ಅವರು, 'ಈಗ ಬಿಗ್ ಬಾಸ್ ಮನೆಯಲ್ಲಿ ಇದ್ದವರು ಎಲ್ಲರೂ ಕನ್ನಡಿಗರೇ, ನಾನು ಕನ್ನಡ ಹೋರಾಟಗಾರ್ತಿ. ನಾನು ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದೇನೆ, ನನ್ನ ಕುಟುಂಬದವರು ವೋಟ್ ಹಾಕಿ ಎಂದು ಕೇಳಿದ್ದರಲ್ಲಿ ಯಾವುದು ತಪ್ಪಿಲ್ಲ, ಆದರೆ ಬೇರೆಯವರನ್ನು ಕೆಳಗಿಡಿ ಎಂದು ಹೇಳಿಲ್ಲ” ಎಂದು ಹೇಳಿದ್ದಾರೆ.
Advertisement