

ಚನ್ನಪಟ್ಟಣ ಕ್ಷೇತ್ರದ ಶಾಸಕ ಸಿ ಪಿ ಯೋಗೇಶ್ವರ್ ಪುತ್ರ ಧ್ಯಾನ್ ಸ್ಯಾಂಡಲ್‌ವುಡ್ ಗೆ ಹೊಸ ಹೀರೋ ಆಗಿ ಎಂಟ್ರಿಯಾಗಿದ್ದಾರೆ. ಧ್ಯಾನ್ ಅವರ ಚೊಚ್ಚಲ ಪ್ರವೇಶದಲ್ಲಿಯೇ ಒಟ್ಟೊಟ್ಟಿಗೆ ಎರಡು ಅದ್ದೂರಿ ಸಿನಿಮಾಗಳು ಘೋಷಣೆಯಾಗಿದ್ದು, ಎರಡೂ ಚಿತ್ರಗಳಲ್ಲಿ ತಂದೆ-ಮಗ ಒಟ್ಟಿಗೆ ಸ್ಕ್ರೀನ್ ಶೇರ್ ಮಾಡಲಿರುವುದು ವಿಶೇಷ.
ಸಿಎಂ ಡಿ ಕೆ ಶಿವಕುಮಾರ್ ಚಾಲನೆ
ಈ ಎರಡೂ ಬಹುನಿರೀಕ್ಷಿತ ಚಿತ್ರಗಳ ಜಂಟಿ ಮುಹೂರ್ತ ಸಮಾರಂಭವು ಇಂದು ಭಾನುವಾರ ಅತ್ಯಂತ ಅದ್ದೂರಿಯಾಗಿ ನೆರವೇರಿತು. ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಆಗಮಿಸಿ ಚಿತ್ರದ ಮುುಹೂರ್ತಕ್ಕೆ ಚಾಲನೆ ನೀಡಿ ಹೀರೋ ಧ್ಯಾನ್ ಗೆ ಶುಭ ಹಾರೈಸಿದರು. ಕೇಂದ್ರ ಸಚಿವರಾದ ವಿ. ಸೋಮಣ್ಣ ಸೇರಿದಂತೆ ರಾಜಕೀಯ ಹಾಗೂ ಚಿತ್ರರಂಗದ ಹಲವು ಗಣ್ಯರು, ಹಿತೈಷಿಗಳು ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಧ್ಯಾನ್ ಸಿನಿಮಾಗೆ ನಾಗಣ್ಣ ನಿರ್ದೇಶನ
ಪಿ.ಎಂ.ಜಿ ಫಿಲಂ ಪ್ರೊಡಕ್ಷನ್ ಪ್ರೈ. ಲಿ. ಸಂಸ್ಥೆಯ ಬ್ಯಾನರ್ ಅಡಿಯಲ್ಲಿ ಧ್ಯಾನ್ ಯೋಗೇಶ್ವರ್ ಅವರನ್ನು ನಾಯಕನನ್ನಾಗಿ ಪರಿಚಯಿಸಲಾಗುತ್ತಿದೆ. ಹಿರಿಯ ನಿರ್ದೇಶಕ ನಾಗಣ್ಣ ಆ್ಯಕ್ಷನ್ ಕಟ್ ಹೇಳಲಿರುವ ಈ ಚಿತ್ರಕ್ಕೆ 'ಕರ್ಣಾಟಬಲಂ ಅಜೇಯಂ' ಎಂದು ಹೆಸರಿಡಲಾಗಿದೆ. ಈ ಚಿತ್ರದ ಮೂಲಕ ಸಿ. ಪಿ. ಯೋಗೇಶ್ವರ್ ಅವರು ಸುಮಾರು 25 ವರ್ಷಗಳ ಸುದೀರ್ಘ ಬಿಡುವಿನ ಬಳಿಕ ಮತ್ತೆ ಬಣ್ಣದ ಪ್ರಪಂಚಕ್ಕೆ ಮರಳುತ್ತಿರುವುದು ವಿಶೇಷ. ಚಿತ್ರದಲ್ಲಿ ಧ್ಯಾನ್ ಜೊತೆಗೆ ಯೋಗೇಶ್ವರ್ ಕೂಡ ಪ್ರಮುಖ ಪಾತ್ರದಲ್ಲಿದ್ದು, ಮಿಸ್ ಯೂನಿವರ್ಸ್ ಇಂಡಿಯಾ ಮಣಿಕ ವಿಶ್ವಕರ್ಮ, ಮಿಸ್ ಯೂನಿವರ್ಸ್ ಇಂಡಿಯಾ ರನ್ನರ್ ಅಪ್ ರೇಖಾ ಪಾಂಡೆ ಹಾಗೂ ದಕ್ಷಿಣ ಭಾರತದ ಖ್ಯಾತ ನಟ ಜಗಪತಿ ಬಾಬು ಪ್ರಮುಖ ತಾರಾಗಣದಲ್ಲಿದ್ದಾರೆ.
‘ಸೈನಿಕ’ ಸೀಕ್ವೆಲ್
ಸಿ. ಪಿ. ಯೋಗೇಶ್ವರ್ ಅವರ ಹೋಮ್ ಬ್ಯಾನರ್ 'ರಾಜಯೋಗಿ ಫಿಲಂಸ್' ಮೂಲಕ 25 ವರ್ಷಗಳ ಹಿಂದೆ ತೆರೆಕಂಡು ಸೂಪರ್ ಹಿಟ್ ಆಗಿದ್ದ 'ಸೈನಿಕ' ಚಿತ್ರದ ಮುಂದುವರಿದ ಭಾಗ 'ಸೈನಿಕ 2' ಚಿತ್ರವನ್ನೂ ಘೋಷಣೆ ಮಾಡಲಾಗಿದೆ. ಈ ಚಿತ್ರವನ್ನು ಪುನೀತ್ ರುದ್ರನಾಗ್ ನಿರ್ದೇಶಿಸಲಿದ್ದು, ಸಿ. ಪಿ. ಯೋಗೇಶ್ವರ್ ಹಾಗೂ ಪುತ್ರ ಧ್ಯಾನ್ ಇಬ್ಬರೂ ಪ್ರಮುಖ ಪಾತ್ರಗಳಲ್ಲಿ ಬಣ್ಣ ಹಚ್ಚಲಿದ್ದಾರೆ.