

ಬೆಂಗಳೂರು: ಸ್ಯಾಂಡಲ್ ವುಡ್ ನಟಿ ರುಕ್ಮಿಣಿ ವಸಂತ್ ಬಿಕಿನಿಯಲ್ಲಿರುವ AI ಫೋಟೋ ಮತ್ತು ವಿಡಿಯೋ ವೈರಲ್ ಪ್ರಕರಣ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ಹೇಳಿದ್ದಾರೆ.
ಬಂಧಿತ ಆರೋಪಿಗಳನ್ನು ಬಾಗಲಕೋಟೆ ಜಿಲ್ಲೆಯ ಚಿಲಕಮುಖಿ ಗ್ರಾಮದ ನಿವಾಸಿ ರವಿಕುಮಾರ್ (24) ಶಿವಮೊಗ್ಗ ಜಿಲ್ಲೆಯ ನಿವಾಸಿ ಆದರೆ ಬೆಂಗಳೂರಿನಲ್ಲಿ ವಾಸಿಸುವ ಚಂದ್ರಕಾಂತ್ (33) ಮತ್ತು ಬೆಂಗಳೂರಿನ ನಿವಾಸಿ ರಂಜಿತ್ (25) ಎಂದು ಗುರುತಿಸಲಾಗಿದೆ.
ಕಳೆದ ತಿಂಗಳು ನಟಿ ಸಲ್ಲಿಸಿದ ದೂರಿನ ಆಧಾರದ ತನಿಖೆ ಆರಂಭಿಸಲಾಗಿತ್ತು. ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ನ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆರೋಪಿಗಳು AI ತಂತ್ರಜ್ಞಾನವನ್ನು ಬಳಸಿಕೊಂಡು ಅಶ್ಲೀಲ ಪೋಟೋ ಮತ್ತು ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಡಿರುವುದು ತನಿಖೆ ವೇಳೆ ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ರುಕ್ಮಿಣಿ ವಸಂತ್ ಅವರ ಡೀಪ್‌ಫೇಕ್ ವಿಡಿಯೋವನ್ನು ವೈರಲ್ ಮಾಡಿದ್ದರು. ಆ ವಿಡಿಯೋದಲ್ಲಿ ಅವರು ಬಿಕಿನಿ ಧರಿಸಿ ಸ್ವಿಮ್ಮಿಂಗ್ ಪೂಲ್‌ನಿಂದ ಹೊರಬರುತ್ತಿರುವ ದೃಶ್ಯವನ್ನು ತೋರಿಸಲಾಗಿತ್ತು. ಆದರೆ ಅದು ನಿಜವಾದ ವಿಡಿಯೋ ಅಲ್ಲ ಎಂಬುದು ನಂತರ ಬೆಳಕಿಗೆ ಬಂದಿತ್ತು. ಡೀಪ್‌ಫೇಕ್ ವಿಡಿಯೋ ವೈರಲ್ ಆದ ಬಳಿಕ ನಟಿ ರುಕ್ಮಿಣಿ ವಸಂತ್ ಬೇಸರವನ್ನು ವ್ಯಕ್ತಪಡಿಸಿದ್ದರು. ತಮ್ಮ ವ್ಯಕ್ತಿತ್ವ ಮತ್ತು ಗೌರವಕ್ಕೆ ಧಕ್ಕೆ ತರುವ ಉದ್ದೇಶದಿಂದ ಈ ವಿಡಿಯೋ ಸೃಷ್ಟಿಸಲಾಗಿದೆ ಎಂದು ಆರೋಪಿಸಿ ಅವರು ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಆರೋಪಿಗಳನ್ನು ಪತ್ತೆಹಚ್ಚಲು ವಿಶೇಷ ತಂಡವನ್ನು ರಚಿಸಿ, ತನಿಖೆ ಕೈಗೊಳ್ಳಲಾಯಿತು.
ಸಂಗ್ರಹಿಸಿದ ಸಾಕ್ಷ್ಯಗಳ ಆಧಾರದ ಮೇಲೆ, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸೈಬರ್ ಕಮಾಂಡ್‌ನ ಸಿಐಡಿ ಪೊಲೀಸ್ ಮಹಾನಿರ್ದೇಶಕ ಪ್ರಣಬ್ ಮೊಹಾಂತಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅಪರಾಧದಲ್ಲಿ ಬಳಸಲಾದ ಮೂರು ಮೊಬೈಲ್ ಫೋನ್‌ಗಳನ್ನು ಅವರ ಬಳಿಯಿಂದ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement