ಮತ್ತೆ ಒಂದಾದ ಹಿಟ್ ಜೋಡಿ: ಎಸ್. ನಾರಾಯಣ್ ನಿರ್ದೇಶನದ ಮುಂದಿನ ಚಿತ್ರದಲ್ಲಿ ನಟಿ ಶ್ರುತಿ ನಟನೆ

ಭಾವನಾತ್ಮಕ ಕಥೆಗಳನ್ನು ತೆರೆಯ ಮೇಲೆ ಮನಮುಟ್ಟುವಂತೆ ಕಟ್ಟಿಕೊಡುವ ಮೂಲಕ ಗುರುತಿಸಿಕೊಂಡಿರುವ ಹಿರಿಯ ನಿರ್ದೇಶಕ ಡಾ. ಎಸ್. ನಾರಾಯಣ್ ತಮ್ಮ ಮುಂದಿನ ಸಿನಿಮಾದ ಕೆಲಸಗಳಿಗೆ ಚಾಲನೆ ನೀಡಿದ್ದಾರೆ.
ಇತ್ತೀಚೆಗೆ ಸರಳವಾಗಿ ನಡೆದ ಮುಹೂರ್ತ ಸಮಾರಂಭದ ಬಳಿಕ ಚಿತ್ರತಂಡ ಮೊದಲ ಕಲಾವಿದರ ಆಯ್ಕೆಯ ಮಾಹಿತಿಯನ್ನು ಹಂಚಿಕೊಂಡಿದೆ. ಖ್ಯಾತ ನಟಿ ಶ್ರುತಿ ಈ ಸಿನಿಮಾದ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈ ಹಿಂದೆ ಎಸ್. ನಾರಾಯಣ್ ಮತ್ತು ಶ್ರುತಿ ಜೋಡಿ ಹಲವು ಯಶಸ್ವಿ ಸಿನಿಮಾಗಳನ್ನು ನೀಡಿದೆ. 'ಭಾಮಾ ಸತ್ಯಭಾಮಾ', 'ತವರಿನ ತೊಟ್ಟಿಲು', 'ವೀರಪ್ಪನಾಯಕ' ಹಾಗೂ 'ಸಿರಿವಂತ' ಸೇರಿದಂತೆ ಹಲವು ಚಿತ್ರಗಳಲ್ಲಿ ಇವರಿಬ್ಬರ ಕಾಂಬಿನೇಷನ್ ಪ್ರೇಕ್ಷಕರ ಮೆಚ್ಚುಗೆ ಗಳಿಸಿತ್ತು.
ಇದೀಗ ಮತ್ತೊಮ್ಮೆ ಈ ಜೋಡಿ ಒಂದಾಗಿರುವುದು ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಆದರೆ, ಚಿತ್ರದಲ್ಲಿ ಶ್ರುತಿ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಮತ್ತು ಕಥೆಯಲ್ಲಿ ಅವರ ಪಾತ್ರದ ಮಹತ್ವವೇನು ಎಂಬುದನ್ನು ಚಿತ್ರತಂಡ ಸದ್ಯಕ್ಕೆ ಗೌಪ್ಯವಾಗಿಟ್ಟಿದೆ.
ಈ ಸಿನಿಮಾದ ಮತ್ತೊಂದು ವಿಶೇಷವೆಂದರೆ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಅವರು ಮೊದಲ ಬಾರಿಗೆ ಎಸ್. ನಾರಾಯಣ್ ಅವರೊಂದಿಗೆ ಕೈಜೋಡಿಸುತ್ತಿದ್ದಾರೆ.
ತಾಂತ್ರಿಕ ವಿಭಾಗದಲ್ಲೂ ಅನುಭವಿ ತಂಡವೇ ಕೆಲಸ ಮಾಡುತ್ತಿದೆ. ಗಿರಿಧರ್ ದಿವಾನ್ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದರೆ, ಶಿವಪ್ರಸಾದ್ ಯಾದವ್ ಸಂಕಲನ ಮಾಡಲಿದ್ದಾರೆ. ಸಾಹಸ ನಿರ್ದೇಶನದ ಹೊಣೆ ಡಿಫರೆಂಟ್ ಡ್ಯಾನಿ ಅವರದ್ದು. ಅಜಯ್ ಸೃಜನಾತ್ಮಕ ಮುಖ್ಯಸ್ಥರಾಗಿ ಹಾಗೂ ಪುಷ್ಪಮಾಲಾ ನಿರ್ಮಾಣ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಸದ್ಯಕ್ಕೆ ಸಿನಿಮಾದ ಶೀರ್ಷಿಕೆ, ನಿರ್ಮಾಪಕರು, ನಿರ್ಮಾಣ ಸಂಸ್ಥೆ ಹಾಗೂ ಉಳಿದ ಕಲಾವಿದರ ವಿವರಗಳನ್ನು ಚಿತ್ರತಂಡ ಬಹಿರಂಗಪಡಿಸಿಲ್ಲ. ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ಹೊರಬೀಳುವ ನಿರೀಕ್ಷೆಯಿದೆ.
ಎಸ್. ನಾರಾಯಣ್ ಅವರ ಅನುಭವಿ ನಿರ್ದೇಶನ, ಶ್ರುತಿ ಅವರ ಅಭಿನಯ ಹಾಗೂ ವಿ. ಹರಿಕೃಷ್ಣ ಅವರ ಸಂಗೀತದೊಂದಿಗೆ ಈ ಸಿನಿಮಾ ಮತ್ತೊಂದು ಕೌಟುಂಬಿಕ ಮನರಂಜನೆಯ ಚಿತ್ರವಾಗುವ ನಿರೀಕ್ಷೆ ಮೂಡಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



