

ಕನ್ನಡದ ಮೊದಲ 'ಪ್ಯಾನ್ ಇಂಡಿಯಾ ಸ್ಟಾರ್' ಯಾರೆಂಬ ವಿಚಾರ ಆಗಾಗ್ಗೆ ಅಭಿಮಾನಿಗಳ ನಡುವೆ ಕೆಸರೆರಾಚಟಕ್ಕೆ ಕಾರಣವಾಗುತ್ತಿದೆ. ಕೆಲವರು ವಿಷ್ಣುವರ್ಧನ್ ಕನ್ನಡದ ಮೊದಲ ಪ್ಯಾನ್ ಇಂಡಿಯಾ ಸ್ಟಾರ್ ಎಂದರೆ, ಮತ್ತೆ ಕೆಲವರು ಸುದೀಪ್ ಅನ್ನುತ್ತಿದ್ದಾರೆ. ಆದರೆ, ಕೆಜಿಎಫ್ ನಂತರವೇ ಪ್ಯಾನ್ ಇಂಡಿಯಾ ಕಾನ್ಪೆಪ್ಟ್ ಬಂದಿದ್ದು, ರಾಕಿಂಗ್ ಸ್ಟಾರ್ ಯಶ್ ಅವರೇ ಕನ್ನಡದ ಮೊದಲ ಪ್ಯಾನ್ ಇಂಡಿಯಾ ಸ್ಟಾರ್ ಎಂಬುದು ಅವರ ವಾದವಾಗಿದೆ.
ಈ ಮಧ್ಯೆ ಕನ್ನಡದ ಮೊದಲ ಪ್ಯಾನ್ ಇಂಡಿಯಾ ಸ್ಟಾರ್ 'ಕಿಚ್ಚ ಸುದೀಪ್' ಎಂಬ ಬಿಗ್ ಬಾಸ್ ಹೇಳಿಕೆ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಹೌದು. ಸುದೀಪ್ ಕನ್ನಡ ಚಿತ್ರರಂಗ ಪ್ರವೇಶಿಸಿ 30 ವರ್ಷ ಆದ ಹಿನ್ನೆಲೆಯಲ್ಲಿ ದೊಡ್ಮನೆಯಲ್ಲಿ ಕೇಸ್ ಕಟ್ಟುವ ಮಾಡುವ ಮೂಲಕ ಸಂಭ್ರಮಾಚರಣೆ ಮಾಡಲಾಗಿದೆ.
ಈ ವಿಶೇಷ ಕ್ಷಣದಲ್ಲಿ ದೇಶದ ವಿವಿಧ ರಂಗಗಳ ಪ್ರಖ್ಯಾತ ಗಣ್ಯರು ಹಾಗೂ ಭಾರತೀಯ ಚಿತ್ರರಂಗದ ದಿಗ್ಗಜರು ವಿಡಿಯೋ ಸಂದೇಶಗಳ ಮೂಲಕ ಕಿಚ್ಚನಿಗೆ ಪ್ರೀತಿಯ ಶುಭಾಶಯ ಕೋರಿ, ಅವರ ಸಾಧನೆಯನ್ನ ಕೊಂಡಾಡಿದ್ದಾರೆ. ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್, ಸೂಹೈಲ್ ಖಾನ್, ಸೌರವ್ ಗಂಗೂಲಿ, ಮಲಯಾಳಂ ನಟ ಮೋಹನ್ ಲಾಲ್ ಮತ್ತಿತರರು ಕಿಚ್ಚನಿಗೆ ಅಭಿನಂದನೆ ಸಲ್ಲಿಸಿದ್ದಾರೆ.
1997ರಲ್ಲಿ ‘ತಾಯವ್ವ’ ಸಿನಿಮಾಗೆ ನಾಯಕ ನಟನಾಗಿ ಪಾದಾರ್ಪಣೆ ಮಾಡಿದ ಸುದೀಪ್, ಬಳಿಕ ನಟಿಸಿದ ‘ಬ್ರಹ್ಮ’ ಮತ್ತು ‘ಓ ಕುಸುಮ ಬಾಲೆ’ ಸಿನಿಮಾಗಳು ಬಿಡುಗಡೆಯಾಗಲಿಲ್ಲ. ಉಳಿದಂತೆ ‘ಪ್ರತ್ಯರ್ಥ’ ಮತ್ತು ‘ಸ್ಪರ್ಶ’ ಸಿನಿಮಾಗಳು ಕೊಂಚ ಮಟ್ಟಿನ ಭರವಸೆ ಮೂಡಿಸುತ್ತವೆ. ಆದರೆ ಅವರಿಗೆ ಬ್ರೇಕ್ ನೀಡಿದ ಸಿನಿಮಾ ‘ಹುಚ್ಚ’. 2001ರಲ್ಲಿ ರಿಲೀಸ್ ಆದ ಈ ಸಿನಿಮಾ ಕಿಚ್ಚ ಸುದೀಪ್ ಅವರ ಬಾಳಲ್ಲಿ ಹೊಸ ಅಧ್ಯಾಯ ಶುರು ಮಾಡಿತು.
ಹೀಗೆ ಸದ್ಯ ಚಿತ್ರರಂಗದಲ್ಲಿ ಕಿಚ್ಚ ಸುದೀಪ್ ಅವರು 30ವರ್ಷಗಳನ್ನ ಪೂರೈಸಿದ್ದು, ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಭಾಷೆ ಸೇರಿದಂತೆ 57 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ‘ಮಾಣಿಕ್ಯ’, ‘ಮೈ ಆಟೋಗ್ರಾಫ್’, ‘ವೀರ ಮದಕರಿ’, ‘ಕೆಂಪೇಗೌಡ’ ಸೇರಿದಂತೆ 6 ಸಿನಿಮಾಗಳನ್ನ ನಿರ್ದೇಶನ ಮಾಡಿದ್ದಾರೆ. 16ಕ್ಕೂ ಹೆಚ್ಚು ಸಿನಿಮಾಗಳಿಗೆ ಹಿನ್ನಲೆ ಗಾಯಕರಾಗಿದ್ದಾರೆ.
ಈ ಸಾಧನೆಗಳನ್ನು ಮನಗಂಡು ಸುದೀಪ್ ಅವರನ್ನು ಹೊಗಳುವ ಭರದಲ್ಲಿ ಅವರೇ ಕನ್ನಡದ ಮೊದಲ ಪ್ಯಾನ್ ಇಂಡಿಯಾ ಸ್ಟಾರ್ ಎಂದು ಬಿಗ್ ಬಾಸ್ ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ.
ಕೆಲವರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲೂ ಯಶ್ ಅಭಿಮಾನಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಯಶ್ ಅವರೇ ಕನ್ನಡದ ಮೊದಲ ಪ್ಯಾನ್ ಇಂಡಿಯಾ ಸ್ಟಾರ್ ಎನ್ನುತ್ತಿದ್ದಾರೆ. ಕೆಜಿಎಫ್ ಚಾಪ್ಟರ್ 1, ಕೆಜಿಎಫ್ ಚಾಪ್ಟರ್ 2 ವಿಶ್ವವೇ ಕನ್ನಡ ಚಿತ್ರರಂಗದತ್ತ ತಿರುಗುವಂತೆ ಮಾಡಿದವು. ಈ ಮೂಲಕ ಯಶ್ ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ಆಗಿ ಹೊರಹೊಮ್ಮಿದರು. ಅಲ್ಲದೇ ಯಶ್ ಬಾಸ್ ಅವರೇ ಕನ್ನಡ ಮೊದಲ ಪ್ಯಾನ್ ಇಂಡಿಯಾ ಸ್ಟಾರ್ ಎನ್ನುತ್ತಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅನಿಸಿಕೆ ವ್ಯಕ್ತಪಡಿಸುತ್ತಿದ್ದಾರೆ.