ಕೋಮು ಸಂಘರ್ಷ: ಬರೀ ಮೋದಿ ದೂಷಣೆ ಏಕೆ?
ಒಂದು ವೇಳೆ ಮಂಗಳ ಗ್ರಹವಾಸಿಗಳೇನಾದರೂ ಭಾರತಕ್ಕೆ ಬಂದರೆಂದರೆ, ನಮ್ಮ ಮಾಧ್ಯಮಗಳ ಗೀಳು ಮತ್ತು ರಾಜಕೀಯ ಪಕ್ಷಗಳ ಆಪಾದನೆಗಳನ್ನೆಲ್ಲ ನೋಡಿ 'ಸ್ವತಂತ್ರ ಭಾರತದಲ್ಲಿ ಹೊತ್ತಿಕೊಂಡ ಏಕೈಕ ಕೋಮು ದಳ್ಳುರಿ' ಗುಜರಾತ್‌ನ ಗಲಭೆ ಮಾತ್ರ ಎಂದು ನಂಬಿಬಿಡುತ್ತಾರೆ. ಇನ್ನು ಕೆಲವೊಂದು ಸಾರಿ ಬಿಜೆಪಿಯ ವಕ್ತಾರರು ಮಾಧ್ಯಮ ಮನೆಗಳಲ್ಲಿ ಈ ವಿಷಯದಿಂದಾಗಿ ಮುಜುಗರಕ್ಕೊಳಪಟ್ಟು 1984ರ ದೆಹಲಿ ಗಲಭೆಯ ಉದಾಹರಣೆ ಕೊಟ್ಟುಬಿಡುತ್ತಾರೆ.
ಒಟ್ಟಿನಲ್ಲಿ ಎಲ್ಲದಕ್ಕೂ ನರೇಂದ್ರ ಮೋದಿಯವರೇ ಕಾರಣ ಎಂದು ಗೊಣಗುವ ಗೀಳು ಎಲ್ಲರಿಗೂ ಅಂಟಿಕೊಂಡಿದೆ. ಆದರೆ ಕೋಮು ಗಲಭೆಯನ್ನು ಒಂದು ಸಮುದಾಯ ಯೋಜಿಸಿದ್ದರೂ, ಅದು ಎರಡೂ ಕೋಮುಗಳ ನಡುವೆ ನಡೆಯುವಂಥದ್ದು ಎಂಬುದು ಸಾಮಾನ್ಯ ಜ್ಞಾನ.
ಬಹುತೇಕಬಾರಿ ಗಲಭೆ ಮತ್ತು ದಾಳಿಗಳು ನಡೆಯುವುದು ರಾಜಕೀಯ ಪಕ್ಷಗಳ ಪರೋಕ್ಷ ಅಥವಾ ಪ್ರತ್ಯಕ್ಷ ತಂತ್ರಗಳಿಂದಾಗಿಯೇ. ಆದರೆ 1984ರಲ್ಲಿ ಕಾಂಗ್ರೆಸ್‌ನ ಕಾರ್ಯಕರ್ತರು ಇಂದಿರಾಗಾಂಧಿ ಹತ್ಯೆಗೆ ಪ್ರತೀಕಾರವಾಗಿ ಸಿಖ್ ಸಮುದಾಯದ ಮೇಲೆ ದಾಳಿ ನಡೆಸಿದ್ದನ್ನು ಕೋಮು ಗಲಭೆ ಎನ್ನಲಾಗದು. ಏಕೆಂದರೆ ಅಲ್ಲಿ ಎರಡು ಕೋಮುಗಳ ನಡುವೆ ಜಗಳ ನಡೆಯಲಿಲ್ಲ. ಇನ್ನು 2014ರ ಚುನಾವಣೆ ಹತ್ತಿರವಾಗುತ್ತಿದೆಯಾದ್ದರಿಂದ 2002ರ ಗುಜರಾತ್ ಗಲಭೆಯ ವಿಷಯ ಮತ್ತೆ ಚರ್ಚೆಯಾಗುವುದಂತೂ ನಿಶ್ಚಿತ. ಈ ಕಾರಣದಿಂದಾಗಿಯೇ ಸ್ವಾತಂತ್ರ್ಯಾನಂತರ ಭಾರತದಲ್ಲಿ ಎಷ್ಟು ಕೋಮುಗಲಭೆಗಳು ಘಟಿಸಿದವು ಎನ್ನುವ ಬಗ್ಗೆ 'ಔಟ್‌ಲುಕ್' ಪ್ರಕಟಿಸಿರುವ ವರದಿಯತ್ತ ಕಣ್ಣುಹಾಯಿಸುವುದು ಒಳಿತು-
1967ರ ನಂತರ ಭಾರತದ ಸುಮಾರು 47 ಪ್ರದೇಶಗಳಲ್ಲಿ 59 ಕೋಮು ಗಲಭೆಗಳು ನಡೆದಿವೆ. ದಕ್ಷಿಣ ಭಾರತದಲ್ಲಿ 10, ಪೂರ್ವದಲ್ಲಿ 12, ಪಶ್ಚಿಮದಲ್ಲಿ 16 ಮತ್ತು ಉತ್ತರ ಭಾರತದಲ್ಲಿ 20. 1964ರ ನಂತರ ಅಹಮದಾಬಾದ್ 5 ಹಿಂಸಾಚಾರಗಳಿಗೆ ಸಾಕ್ಷಿಯಾದರೆ, ಹೈದ್ರಾಬಾದ್‌ನಲ್ಲಿ 4 ಗಲಭೆಗಳು ನಡೆದಿವೆ. 1990ರನಂತರ ಭಾರತದಲ್ಲಿ ನಡೆದ ಕೋಮುಗಲಭೆಗಳ ಸಂಖ್ಯೆ 23. 1970ರಲ್ಲಿ 7 ಗಲಭೆಗಳು, 1980ರಲ್ಲಿ 14 ಮತ್ತು ಕಳೆದ 13 ವರ್ಷಗಳಲ್ಲಿ 13 ಗಲಭೆಗಳು ನಡೆದಿವೆ. ಇವುಗಳಲ್ಲಿ ಸತ್ತವರ ಒಟ್ಟು ಸಂಖ್ಯೆ: 12,828(ದಕ್ಷಿಣ 597, ಪಶ್ಚಿಮ 3,426, ಪೂರ್ವ 3,581 ಮತ್ತು ಉತ್ತರ 5,224). 1964ರಲ್ಲಿ ಉದ್ಭವವಾದ ಕೋಮು ದ್ವೇಷದ ಅಲೆಯಿಂದಾಗಿ ಕೋಲ್ಕತಾ, ಜೆಮ್‌ಶೆಡ್‌ಪುರ್ ಮತ್ತು ರೂರ್‌ಕೆಲಾ ಸತ್ತವರ ಸಂಖ್ಯೆ 2500.
ಈ ಘಟನೆಗಳು ನಡೆದಾಗ ಯಾವ ಪಕ್ಷ ಅಧಿಕಾರದಲ್ಲಿತ್ತು, ಯಾರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ 100ಕ್ಕಿಂತಲೂ ಹೆಚ್ಚು ಮಂದಿ ಕೋಮು ಗಲಭೆಗೆ ಆಹುತಿಯಾದರು ಎನ್ನುವುದನ್ನೊಮ್ಮೆ ನೋಡೋಣ- ಔಟ್‌ಲುಕ್ ಈ ಕುರಿತು ಪ್ರಕಟಿಸಿದ 17 ಗಲಭೆಗಳ ಪಟ್ಟಿಯಲ್ಲಿ, 9 ಘಟನೆಗಳು ಕಾಂಗ್ರೆಸ್/ಮಿತ್ರಪಕ್ಷಗಳಡಿ ನಡೆದರೆ, 3 ಗಲಭೆಗಳು ರಾಷ್ಟ್ರಪತಿ ಆಳ್ವಿಕೆಯಲ್ಲಿ ನಡೆದಿವೆ. ಇನ್ನುಳಿದಂತೆ ತಲಾ ಒಂದು ಗಲಭೆ ಬಿಜೆಪಿ ಮತ್ತು ಇನ್ನಿತರ ಪಕ್ಷಗಳು ಅಧಿಕಾರದಲ್ಲಿದ್ದಾಗ ನಡೆದದ್ದು.
2002ಕ್ಕೂ ಮುನ್ನ ಅಹಮದಾಬಾದ್‌ನಲ್ಲಿ 4 ಕೋಮು ಗಲಭೆಗಳು ನಡೆದಿದ್ದು ಅದರಲ್ಲಿ ಒಟ್ಟು 912 ಜನ ಮೃತಪಟ್ಟಿದ್ದರೆ, ಸೂರತ್ ಮತ್ತು ಬರೋಡಾದಲ್ಲಾದ ಮೂರು ಹಿಂಸಾಚಾರಗಳಲ್ಲಿ ಸತ್ತವರ ಸಂಖ್ಯೆ 197. ಎಲ್ಲರೂ 2002ರ ಘಟನೆಯನ್ನು ಹಿಡಿದುಕೊಂಡು ಮೋದಿಯವರನ್ನು ಮೂದಲಿಸುತ್ತಾರೆಯೇ ಹೊರತು ಹಿಂದು-ಮುಸ್ಲಿಂ ಜಗಳ ಗುಜರಾತ್‌ನಲ್ಲಿ ಅದಕ್ಕೂ ಮುನ್ನವೇ ಇತ್ತು ಎನ್ನುವುದರ ಬಗ್ಗೆ ಯಾವೊಬ್ಬ ಬುದ್ಧಿಜೀವಿಯೂ ಇದುವರೆಗೆ ತುಟಿಬಿಚ್ಚಿಲ್ಲ. ಅಲ್ಲದೆ ಗುಜರಾತ್ ಗಲಭೆಯಲ್ಲಿ ಸತ್ತವರಲ್ಲಿ 30 ಪ್ರತಿಶತಕ್ಕೂ ಹೆಚ್ಚು ಮಂದಿ ಬಹುಸಂಖ್ಯಾತರು ಎನ್ನುವುದೂ ಅವಿರಿಗೇಕೋ ಅರಿವಿಗೆ ಬಂದಿಲ್ಲ!
ಆದರೆ ಮೋದಿಯವರಂತೆ ಇದುವರೆಗೂ ಇಷ್ಟೊಂದು ದಾಳಿಗೊಳಗಾದ ಮುಖ್ಯಮಂತ್ರಿ ಇನ್ಯಾರೂ ಇರಲಿಕ್ಕಿಲ್ಲ. 2002ರ ಘಟನೆಗೆ ಮೋದಿಯವರನ್ನು ತೆಗಳುವುದಾದರೆ, ಅಂಥದ್ದೇ ಘಟನೆಗಳು ನಡೆದಾಗ ಅಧಿಕಾರದಲ್ಲಿದ್ದ ಮುಖ್ಯಮಂತ್ರಿಗಳೆಲ್ಲರೂ ಕಟಕಟೆಯಲ್ಲಿ ನಿಲ್ಲಬೇಕಾಗುತ್ತದೆ.
ಇನ್ನು ಸ್ವಾತಂತ್ರ್ಯಕ್ಕೂ ಮುನ್ನ ಏನು ನಡೆಯಿತು ಎನ್ನುವುದನ್ನೂ ನಾವು ಮರೆಯಬಾರದು. 1920ರಿಂದ 1940ರವರೆಗೆ ದೇಶದಲ್ಲಿ ಹಿಂದು- ಮುಸ್ಲಿಮರ ಸಂಬಂಧ ಹೇಗಿತ್ತು ಎಂಬುದನ್ನು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು 'Thoughts on pakistan'(1941ರಲ್ಲಿ ಪ್ರಕಟಿತ) ಎಂಬ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ. "1920-ಮೋಫ್ಲಾ ಬಂಡಾಯ ನಿಸ್ಸಂಶಯವಾಗಿಯೂ ಬ್ರಿಟಿಷರ ವಿರುದ್ಧ ಎದ್ದಿತಾದರೂ, ಹೆಚ್ಚು ಹಾನಿಯಾದದ್ದು ಹಿಂದುಗಳಿಗೆ. ಆ ಸಮಯದಲ್ಲಿ ಬಹಳಷ್ಟು ಹಿಂದು ಹೆಣ್ಣುಮಕ್ಕಳ ಮೇಲೆ ಅತ್ಯಾಚಾರವಾಯಿತು, ಮತಾಂತರ ಮತ್ತು ಕೊಲೆಗಳೂ ನಡೆದವು.'
'1924-ಕೊಹೆಟ್‌ನಲ್ಲಾದ ಗಲಭೆಯಲ್ಲಿ ಸುಮಾರು 155 ಜನ ಸತ್ತರು. ಹಿಂದುಗಳು ಆ ಊರನ್ನು ಬಿಡಬೇಕಾಯಿತು.'
'1925-1926- ಹಿಂದು ಮತ್ತು ಮುಸಲ್ಮಾನರ ನಡುವಿನ ವೈಷಮ್ಯ ತೀವ್ರ ಸ್ವರೂಪ ಪಡೆಯಿತು. ಕೊಲ್ಕತಾ, ಸಂಯುಕ್ತ ಪ್ರಾಂತ ಮತ್ತು ಬಾಂಬೆ ಪ್ರೆಸಿಡೆನ್ಸಿಯಲ್ಲಿ ಹಲವಾರು ಗಲಭೆಗಳಾದವು.' '1927ರಲ್ಲಿ ಸುಮಾರು 40 ಹಿಂಸಾಚಾರ ಪ್ರಕರಣಗಳು ಭಾರತದಲ್ಲಿ ಜರುಗಿವೆ. ಒಟ್ಟಾರೆ 197 ಜನ ಈ ಹಿಂಸೆಗೆ ಬಲಿಯಾಗಿದ್ದಾರೆ ಮತ್ತು 1,598 ಮಂದಿ ಗಾಯಗೊಂಡಿದ್ದಾರೆ. 1927ರಲ್ಲಿ, ಖೈಬರ್ ಪಾಸ್‌ನ ಬಳಿ ವಾಸಿಸುವ ಹಿಂದುಗಳೆಲ್ಲರನ್ನು ಓಡಿಸಬೇಕೆಂದು ಆಫ್ರೀದಿ ಮತ್ತು ಶಿನ್ವಾರಿಗಳು ತಂತ್ರ ರಚಿಸಿದ್ದರು. ಇನ್ನು 1937ರಲ್ಲಂತೂ ಕೋಮು ಗಲಭೆಗಳು ನಿರಂತರವಾಗಿ ನಡೆದವು. ಪಾನಿಪತ್, ಪಂಜಾಬ್, ಸಿಂದ್ ಮುಂತಾದ ಪ್ರಾಂತ್ಯಗಳಲ್ಲಿ ಪರಿಸ್ಥಿತಿ ತೀರಾ ಹದಗೆಟ್ಟಿತ್ತು." (ಇನ್ನಷ್ಟು ಮಾಹಿತಿಗಾಗಿ ಅಂಬೇಡ್ಕರ್‌ರ ಪುಸ್ತಕವನ್ನೋದಿ)
ಕೋಮು ಗಲಭೆಗಳು ಸಾಮಾನ್ಯ ಸಂಗತಿ ಎಂದು ಹೇಳುವುದು ಈ ಲೇಖನದ ಉದ್ದೇಶವಲ್ಲ. ಬದಲಾಗಿ, 2002ಕ್ಕೂ ಮುನ್ನ ಮತ್ತು ಅದರ ನಂತರವೂ ಇಂಥ ಹಿಂಸಾಚಾರಗಳು ನಡೆದಿವೆ ಎಂದು ಹೇಳುವುದಕ್ಕೆ. 2012ರಂದು ಅಸ್ಸಾಂನಲ್ಲಿ ಮತ್ತು ಸಮಾಜವಾದಿ ಪಕ್ಷ ಉತ್ತರಪ್ರದೇಶದಲ್ಲಿ ಕಳೆದ ಚುನಾವಣೆಯನ್ನು ಗೆದ್ದಾದ ನಂತರ ಹಲವು ಗಲಭೆಗಳು ಆಗಿವೆ.
ಕೋಮು ಗಲಭೆಗಳು ಏಕೆ ಸಂಭವಿಸುತ್ತವೆ? ಸಾಮಾನ್ಯವಾಗಿ, ಜನರ ಮನಸ್ಸಿನಲ್ಲಿ ಆಕ್ರೋಶ ಮಡುಗಟ್ಟುತ್ತಾ ಹೋದಾಗ ಮತ್ತು ಸಮಾಜ/ಸರ್ಕಾರದ ಬಳಿಯಲ್ಲಿ ಆ ಆಕ್ರೋಶವನ್ನು ತಣ್ಣಗಾಗಿಸುವ ಪರಿಹಾರಗಳು ಇಲ್ಲದಾದಾಗ ಚಿಕ್ಕ ಘಟನೆಯೊಂದು ಹಿಂಸಾಚಾರಕ್ಕೆ ಬತ್ತಿ ಇಡಬಲ್ಲದು. ಎದುರು ಕೋಮಿನ ಜನರನ್ನು ಗಾಯಗೊಳಿಸುವ, ಕೊಂದು ಹಾಕುವ ಅವರ ಆಸ್ತಿಯನ್ನು ಕೊಳ್ಳೆಹೊಡೆಯುವ ಕಾರ್ಯಕ್ಕೆ ಪ್ರೇರೇಪಿಸಬಲ್ಲದು. ಇನ್ನು ಪ್ರಮುಖ ಸ್ಥಳಗಳಲ್ಲಿ ಬಾಂಬ್ ಸ್ಫೋಟ ನಡೆಸುವ ಉಗ್ರವಾದಿಗಳ ಇರಾದೆಯೂ ಇದೇ ಆಗಿರುತ್ತದೆ. ಒಟ್ಟಿನಲ್ಲಿ ಎದುರಿನವನ ಮನಸ್ಸಿನಲ್ಲಿ ಭಯ ಹುಟ್ಟಿಸುವುದೇ ಇದರ ಮೂಲ ಉದ್ದೇಶ. ಉದಾಹರಣೆಗೆ 2006ರಲ್ಲಿ ನಡೆದ ಮುಂಬೈ ರೈಲು ಸ್ಫೋಟ.
ಕೋಮು ಗಲಭೆಗಳ ದಾಳಿಕೋರರು ಸ್ಥಳೀಯರಾಗಿರುತ್ತಾರೆ, ಹಾಗಾಗಿ ಅವರನ್ನು ಸುಲಭವಾಗಿ ಗುರುತಿಸಬಹುದು. ಆದರೆ ಬಾಂಬ್ ಸ್ಫೋಟ ನಡೆಸುವವರ ವಿಷಯ ಹಾಗಲ್ಲ, ಅವರ್ಯಾರು ಎನ್ನುವುದು ಸ್ಪಷ್ಟವಾಗಿ ತಿಳಿಯುವುದಿಲ್ಲ- ಆದರೆ ಅವರ ಸಂದೇಶವಂತೂ ಸ್ಪಷ್ಟವಾಗಿರುತ್ತದೆ. ಬಹುಶಃ ಇದೇ ಕಾರಣದಿಂದಲೋ ಏನೋ, ಭಾರತ ಸರ್ಕಾರಕ್ಕೆ ಪಾಕಿಸ್ತಾನದತ್ತ ಬೆರಳು ಮಾಡಿ ತೋರಿಸುವುದಕ್ಕೆ ಸುಲಭವಾಗುತ್ತದೆ. ದಾಳಿಯನ್ನು ಪಾಕಿಸ್ತಾನಿಗಳು ನಡೆಸಿದರೂ ಅಂತಹ ಪ್ರತೀ ಯೋಜನೆಗಳಿಗೂ ಸ್ಥಳೀಯರ ನೆರವು ಬೇಕೇ ಬೇಕು ಎನ್ನುವ ವಿಷಯವನ್ನು ನಾವು ಕಡೆಗಣಿಸಿಬಾರದು. ಒಂದರ್ಥದಲ್ಲಿ ಕೋಮುಗಲಭೆಗಳು ಮತ್ತು ಬಾಂಬ್ ಸ್ಫೋಟಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ.
ಭಾರತದಲ್ಲಿ ಬಾಂಬ್ ಸ್ಫೋಟ ಮತ್ತು ಭಯೋತ್ಪಾದನೆಯ ಪರ್ವ ಶುರುವಾಗಿದ್ದು 1993ರ ಮುಂಬೈ ಸರಣಿ ಸ್ಫೋಟದ ನಂತರ. 1993ರಿಂದ 6 ಮಾರ್ಚ್ 2013ರ ವರೆಗೆ ಸುಮಾರು 1,446 ಭಾರತೀಯರು ಭಯೋತ್ಪಾದನೆಯಿಂದಾಗಿ ಮೃತಪಟ್ಟರೆ, 4,333 ಮಂದಿ ಗಾಯಗೊಂಡಿದ್ದಾರೆ. ಈ ಸಂಖ್ಯೆ, ಕಾಶ್ಮೀರದ ಉಗ್ರವಾದಿ ಚಟುವಟಿಕೆ ಮತ್ತು ಅಸ್ಸಾಂನ ಉಲ್ಫಾ ಗಲಭೆಗಳಲ್ಲಿ ಮೃತಪಟ್ಟವರಿಗಿಂತಲೂ ಹೆಚ್ಚಿದೆ.
ಇನ್ನು ಭಯೋತ್ಪಾದನಾ ದಾಳಿಗಳು ಸಂಭವಿಸಿದಾಗ ಯಾವ ಪಕ್ಷಗಳು ಅಧಿಕಾರದಲ್ಲಿದ್ದವು ಎನ್ನುವುದರ ಬಗ್ಗೆ ಔಟ್‌ಲುಕ್ ಪತ್ರಿಕೆ ಮತ್ತೊಂದು ಪಟ್ಟಿಯನ್ನು ಪ್ರಕಟಿಸಿದೆ-
1993ರಿಂದ 2008ರ ವರೆಗೆ ನಡೆದ ಸುಮಾರು 14 ಭಯೋತ್ಪಾದನಾ ದಾಳಿಗಳಲ್ಲಿ 10 ದಾಳಿಗಳು ಕಾಂಗ್ರೆಸ್/ ಮಿತ್ರಪಕ್ಷಗಳ ಅಧಿಕಾರದಡಿಯಲ್ಲಿ ಸಂಭವಿಸಿವೆ. ಈ ಕುರಿತು 'ರಾ'ದ ಮಾಜಿ ಮುಖ್ಯಸ್ಥ ಬಿ.ರಾಮನ್- '1981ರ ನಂತರ ಭಾರತದಲ್ಲಿ ಪ್ರಮುಖವಾಗಿ 4 ಬೃಹತ್ ಭಯೋತ್ಪಾದನಾ ದಾಳಿಗಳು ನಡೆದಿವೆ. ಈ ನಾಲ್ಕೂ ಸಂದರ್ಭದಲ್ಲೂ ಕಾಂಗ್ರೆಸ್ ಸರ್ಕಾರವೇ ದೆಹಲಿಯಲ್ಲಿ ಅಧಿಕಾರದಲ್ಲಿದ್ದದ್ದು. 1991ರ ನಂತರ ಎರಡು ಬಾರಿ ಕಾಶ್ಮೀರದಲ್ಲಿ ಮತ್ತು ಒಂದು ಬಾರಿ ಮುಂಬೈನಲ್ಲಿ ವಿದೇಶಿಯರ ಮೇಲೆ ದಾಳಿಗಳಾಗಿವೆ, ಆ ಸಮಯಗಳಲ್ಲೂ ಅಧಿಕಾರದಲ್ಲಿದ್ದದ್ದು ಕಾಂಗ್ರೆಸ್ಸೇ. 1971ರ ಐಎಸ್‌ಐ ಪ್ರಾಯೋಜಿತ 7 ವಿಮಾನ ಅಪರಹರಣಗಳು ನಡೆದಿವೆ- ಆರು ಅಪಹರಣಗಳು ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ನಡೆದರೆ, ಒಂದು ಅಪಹರಣ ಬಿಜೆಪಿ ಆಡಳಿತ ನಡೆಸುತ್ತಿದ್ದ ಸಮಯದಲ್ಲಿ ಆಗಿದೆ. ಇನ್ನು ಭಾರತದ ಪ್ರಯಾಣಿಕರ ವಿಮಾನವೊಂದು ಸ್ಫೋಟಗೊಂಡು ಅದರಲ್ಲಿದ್ದ 250 ಮಂದಿ ಆಹುತಿಯಾದಾಗಲೂ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿತ್ತು' ಎನ್ನುತ್ತಾರೆ.
1993ರ ನಂತರ ಮೃತಪಟ್ಟ 1,446 ಜನರಲ್ಲಿ 52 ಪ್ರತಿಶತ ಮಂದಿ ಸತ್ತದ್ದು ಮುಂಬೈನಲ್ಲಿ! ಏಕೆ ಮುಂಬೈಯನ್ನು ಭಯೋತ್ಪಾದನಾ ಮುಕ್ತ ಸ್ಥಳವನ್ನಾಗಿ ಮಾಡಲು ಸಾಧ್ಯವಾಗಿಲ್ಲ ಎನ್ನುವುದನ್ನು ಇದುವರೆಗೂ ಕಾಂಗ್ರೆಸ್‌ನ ಹೈಕಮಾಂಡ್ ಅಥವಾ ಮಹಾರಾಷ್ಟ್ರದ ಯಾವೊಬ್ಬ ಮುಖ್ಯಮಂತ್ರಿಯೂ ಮಾತನಾಡಿಲ್ಲ. 2006ರ ರೈಲು ಸ್ಫೋಟ ಪ್ರಕರಣದ ಪ್ರಮುಖ ಆರೋಪಿಯ ವಿಚಾರಣೆ ಕಳೆದ 7 ವರ್ಷಗಳಿಂದಲೂ ನಡೆದಿದೆ ಎಂದರೆ ಆ ಸರ್ಕಾರಕ್ಕೆ ಯಾವ ಮಟ್ಟದಲ್ಲಿ ಅಸಡ್ಡೆ ಬೆಳೆದಿದೆಯೋ ಲೆಕ್ಕ ಹಾಕಿ? ಫೆಬ್ರವರಿ 2012ರಂದು ಬಾಂಬೆ ಹೈ ಕೋರ್ಟ್ 2003ರ ಸರಣಿ ಸ್ಫೋಟಕ್ಕೆ ಸಂಬಂಧಿಸಿದಂತೆ ಮೂವರಿಗೆ ಮರಣದಂಡನೆ ವಿಧಿಸಿತು. ಆಮೇಲೇನಾಯಿತೋ ಯಾರಿಗೂ ಗೊತ್ತಿಲ್ಲ?!
ಕೋಮು ಗಲಭೆಯೇ ಆಗಲಿ ಅಥವಾ ಭಯೋತ್ಪಾದನೆಯ ವಿಷಯದಲ್ಲೇ ಆಗಲಿ, ಕಾಂಗ್ರೆಸ್ ಕೂಡ ಕಟಕಟೆಗೆ ನಿಲ್ಲಲೇಬೇಕು. ನರೇಂದ್ರ ಮೋದಿ 2002ರ ಘಟನೆಯ ಬಗ್ಗೆ ಉತ್ತರಿಸಬೇಕು ಎನ್ನುವುದೇನೋ ಸರಿ, ಆದರೆ ಅವರೊಬ್ಬರೇ ಏಕೆ? ಆ ಆಯಾಮದಲ್ಲಿ ನೋಡುವುದಾದರೆ, ಅಮೆರಿಕದ ಇಲ್ಲಿಯವರೆಗಿನ ಅಧ್ಯಕ್ಷರುಗಳೆಲ್ಲರನ್ನೂ ಪ್ರಶ್ನಿಸಲೇಬೇಕಾಗುತ್ತದೆ. ಅವರು ಮಾನವ ಹಕ್ಕು ಎಂಬುದೇ ಆಸ್ತಿತ್ವದಲ್ಲಿಲ್ಲದ ರಾಷ್ಟ್ರಗಳನ್ನೇಕೆ ಬೆಂಬಲಿಸಿದ್ದಾರೆ ಮತ್ತು 'ಸಮೂಹ ನಾಶಕ ಅಸ್ತ್ರಗಳು ಹೊಂದಿವೆ' ಎಂಬ ಕತೆ ಕಟ್ಟಿ ತಮ್ಮ ಸೇನೆಯನ್ನು ಹತ್ತಾರು ರಾಷ್ಟ್ರಗಳಿಗೆ ಹೋಗಿ ಮೊಕ್ಕಾಂ ಹೂಡುವಂತೆ ಮಾಡಿದ್ದಾರೆ ಎಂಬುದರ ಬಗ್ಗೆಯೂ ಉತ್ತರಿಸಬೇಕಾಗುತ್ತದೆ!
ನಂ ವರ್ಷ ಸ್ಥಳ ಸತ್ತವರು ಅಧಿಕಾರದಲ್ಲಿದ್ದ ಪಕ್ಷ ಮುಖ್ಯಮಂತ್ರಿ
1 1967 ಹತಿಯಾ(ರಾಂಚಿ) 183 ಜನ ಕ್ರಾಂತಿ ದಳ ಎಂ.ಪಿ. ಸಿನ್ಹಾ
2 1969 ಅಹಮದಾಬಾದ್ 512 ಕಾಂಗ್ರೆಸ್ ಹಿತೇಂದ್ರ ದೇಸಾಯಿ
3 1970 ಜಲಗಾಂವ್ 100 ಕಾಂಗ್ರೆಸ್ ವಸಂತರಾವ್ ನಾಯಕ್
4 1979 ಜಮ್ಶೆಡ್‌ಪುರ್ 120 ಜನತಾ ಪಾರ್ಟಿ ಕರ್ಪೂರಿ ಠಾಕುರ್
5 1980 ಮೊರಾದಾಬಾದ್ 1,500 ಕಾಂಗ್ರೆಸ್ ವಿ.ಪಿ.ಸಿಂಗ್
6 1983 ನೆಲ್ಲಿ(ಅಸ್ಸಾಂ) 1,819 ರಾಷ್ಟ್ರಪತಿ ಆಡಳಿತ -
7 1984 ಭಿವಂಡಿ 146 ಕಾಂಗ್ರೆಸ್ ವಸಂತ್‌ದಾದಾ ಪಾಟೀಲ್
8 1985 ಅಹಮದಾಬಾದ್ 300 ಕಾಂಗ್ರೆಸ್ ಎಮ್.ಎಸ್.ಸೋಲಂಕಿ
9 1989 ಭಾಗಲ್‌ಪುರ್ 1,161 ಕಾಂಗ್ರೆಸ್ ಎಸ್.ಎನ್.ಸಿಂಗ್
10 1990 ದೆಹಲಿ 100 ಕೇಂದ್ರಾಡಳಿತ ಪ್ರದೇಶ -
11 1990 ಹೈದ್ರಾಬಾದ್ 365 ಕಾಂಗ್ರೆಸ್ ಚೆನ್ನಾರೆಡ್ಡಿ
12 1990 ಅಲಿಗಢ 150 ಜನತಾ ದಳ ಮುಲಾಯಂಸಿಂಗ್ ಯಾದವ್
13 1992 ಸೂರತ್ 152 ಕಾಂಗ್ರೆಸ್ ಜೆಡಿ(ಜಿ)ಜೆಡಿ ಚಮನ್‌ಭಾಯ್ ಪಟೇಲ್
14 1992 ಕಾನ್ಪುರ್ 254 ರಾಷ್ಟ್ರಪತಿ ಆಡಳಿತ -
15 1992 ಭೊಪಾಲ್ 143 ರಾಷ್ಟ್ರಪತಿ ಆಡಳಿತ -
16 1993 ಮುಂಬೈ 872 ಕಾಂಗ್ರೆಸ್ ಸುಧಾಕರ್‌ರಾವ್ ನಾಯಕ್
17 2002 ಗುಜರಾತ್ 1,267 ಬಿಜೆಪಿ ನರೇಂದ್ರ ಮೋದಿ
-ಸಂಜೀವ್ ನಾಯರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

