ನಿಮಗೆ ಇನ್ನೊಂದು ಅವಕಾಶ ಕೊಟ್ಟರೆ ದೇಶದ ಗತಿ ಏನು?

I am neither ruling it in or out !... ಅವಕಾಶ ಸಿಕ್ಕರೆ ಮೂರನೇ ಅವಧಿಗೆ...
Updated on: 

I am neither ruling it in or out !

ಅವಕಾಶ ಸಿಕ್ಕರೆ ಮೂರನೇ ಅವಧಿಗೆ ಪ್ರಧಾನ ಮಂತ್ರಿಯಾಗಿ ಮುಂದುವರಿಯುವ ಇರಾದೆ ಇದೆಯೇ ಎಂಬ ಪ್ರಶ್ನೆಗೆ ಸಾಮಾನ್ಯವಾಗಿ ಮೌನದಲ್ಲೇ ಉತ್ತರಿಸುವ ಮನಮೋಹನ್ ಸಿಂಗ್ ತುಟಿ ಬಿಚ್ಚಿ ಹೇಳಿದ  ಮಾತುಗಳಿವು. ಅಂದರೆ ಅವಕಾಶ, ಅದೃಷ್ಟ ಎರಡೂ ಅರಸಿ ಬಂದರೆ ಮತ್ತೊಂದು ಅವಧಿಗೆ ಪ್ರಧಾನಿಯಾಗಿ ಮುಂದುವರಿಯಲು ಸಿದ್ಧ ಎಂದು ಸಿಂಗ್ ಪರೋಕ್ಷವಾಗಿ ಒಪ್ಪಿಕೊಂಡರು. ಇದಕ್ಕೆ ಕೆಲವೇ ದಿನದ ಮುನ್ನ  ವಿದೇಶ ಪ್ರವಾಸದಿಂದ ಭಾರತಕ್ಕೆ ವಾಪಸಾಗುವಾಗ ವಿಶೇಷ ವಿಮಾನದಲ್ಲಿ ನಡೆಸಿದ ಪತ್ರಿಕಾಗೋಷ್ಠಿ ಇದೇ ಸಿಂಗ್ ಅವರು "will cross the bridge when we come to it' ಎಂದು ಇಂತಹುದೇ ಪ್ರಶ್ನೆಗೆ ಉತ್ತರಿಸಿದ್ದರು. ಈ ಮಾತುಗಳಿಂದ ಅವರ  ಇರಾದೆಯಂತೂ ಸ್ಪಷ್ಟ. ಒಲ್ಲದ ಮನಸ್ಸಿನ ನೇತಾರ ರಾಹುಲ್‌ಗಾಗಿ ಬೆಂಚು ಬಿಸಿ ಮಾಡಲು ನನಗಿಂತ ಉತ್ತಮ ವ್ಯಕ್ತಿ ಯಾರೂ ಇಲ್ಲ. ಹಾಗಾಗಿ ಮತ್ತೊಂದು ಬಾರಿ ಪಿಎಂ ಯಾಕಾಗಬಾರದು? ಎಂಬುದು ಅವರ ಅಭಿಮತ.  ತಾನು ರಾಜಕಾರಣಿಯಾಗಿದ್ದು ಆಕಸ್ಮಿಕ, ಪ್ರಧಾನಿ ಆಗಿದ್ದು ಅದೃಷ್ಟ ಎಂದು ತಮ್ಮ ರಾಜಕೀಯ ಜೀವನವನ್ನು ಬಣ್ಣಿಸುವ ಸಿಂಗ್ ಏಕಾಏಕಿ ಪ್ರಧಾನಿ ಸ್ಥಾನದ ಮಹತ್ವಾಕಾಂಕ್ಷಿಯಾಗಿ ಮಾರ್ಪಾಟ್ಟಾಗಿದ್ದಾದರೂ ಏಕೆ? ಅಂತಹ  ಪರಿಸ್ಥಿತಿಯಾದರೂ ಏನು? ಮುಂದಿನ ಚುನಾವಣೆಯಲ್ಲಿ ಮತ್ತೆ ಬಹುಮತದಿಂದ ಗೆದ್ದು ಬರುವ ಭರವಸೆ ಕಾಂಗ್ರೆಸ್ ಮತ್ತು ಅದರ ಅಂಗಪಕ್ಷಗಳಿಗೇ ಇಲ್ಲ. ಹಾಗೊಂದು ವೇಳೆ ಅತಂತ್ರ ಲೋಕಸಭೆ ರಚನೆಯಾಗಿ ಬಿಜೆಪಿಗಿಂತ  ಹೆಚ್ಚು ಸೀಟು ಪಡೆದು ಮತ್ತೊಂದು ಮೈತ್ರಿಕೂಟ ಕಲೆ ಹಾಕಿ ಸರ್ಕಾರ ರಚಿಸುವ ಸ್ಥಿತಿ ಒದಗಿ ಬಂದರೆ ಪ್ರಧಾನಿ ಸ್ಥಾನ ಯಾರಿಗೆ ಒಲಿಯಬಹುದು ಎಂದು ಕಾಂಗ್ರೆಸ್‌ನಲ್ಲಿ ಈಗಾಗಲೇ ಲೆಕ್ಕಾಚಾರ ಶುರುವಾಗಿದೆ. ಅದರಲ್ಲೂ  ರಾಹುಲ್ ಗಾಂಧಿಯಂತೂ ಪಿಎಂ ಆಗುವ ಯಾವುದೇ ಆಸೆ ಇಲ್ಲ ಎಂದು ಪದೇ ಪದೇ ಹೇಳುತ್ತಿರುವುದು ಅನೇಕ ಕಾಂಗ್ರೆಸ್ ಮುಖಂಡರಲ್ಲಿ ಆಸೆಯ ಗರಿ ಬಿಚ್ಚುವಂತೆ ಮಾಡಿದೆ. ಸದ್ಯ ವಿತ್ತ ಸಚಿವರಾಗಿರುವ ಪಿ.  ಚಿಂದಂಬರಂ ತಾವು ರೇಸ್‌ನಲ್ಲಿರುವುದನ್ನು ಪರೋಕ್ಷವಾಗಿ ಸಾರಿದ್ದಾರೆ. ವಿದೇಶಿ ಪತ್ರಿಕೆಗಳಲ್ಲಿ ಅವರ ಪರ ವಕಾಲತ್ತು ವಹಿಸುವ ಲೇಖನಗಳೂ ಮೂಡಿ ಬಂದಿವೆ. ದೇಶದ ಉದ್ಯಮ ವಲಯದಲ್ಲಿ ಸಹ ಇಂತಹ ಒಂದು  ಚಿಂತನೆಯನ್ನು ಹರಿಯ ಬಿಟ್ಟಿದ್ದಾರೆ. ಇದೆಲ್ಲದರ ಅರಿವು ಸಿಂಗ್ ಅವರಿಗಿದೆ. ಅದಕ್ಕೇ ಅವರು 'ನನ್ನನ್ನೂ ಲೆಕ್ಕಕ್ಕಿಟ್ಟುಕೊಳ್ಳಿ' ಎಂದು ಸಾರಿ ಹೇಳುತ್ತಿದ್ದಾರೆ. ಇಷ್ಟಕ್ಕೂ '2004ರಿಂದ ಈವರೆಗೆ ದೇಶಕ್ಕಲ್ಲದಿದ್ದರೂ ಕನಿಷ್ಠ  ಕಾಂಗ್ರೆಸ್ ಅಧ್ಯಕ್ಷರಿಗೆ ಸಂತೃಪ್ತಿ ತರುವಂತೆ ನಡೆದುಕೊಂಡಿದ್ದೇನೆ. ಅವರು ಹೇಳಿದ್ದನ್ನೆಲ್ಲ ಶಿರಸಾ ವಹಿಸಿ ಮಾಡಿದ್ದೇನೆ. ಅದರಿಂದ ದೇಶದ ಆರ್ಥಿಕ ಪರಿಸ್ಥಿತಿ ಪಾತಾಳ ತಲುಪಿದ್ದರೂ ಚಿಂತಿಲ್ಲ, ಸೋನಿಯಾ ಗಾಂಧಿ  ಮುಖದಲ್ಲಿ ಮಂದಹಾಸ ಮೂಡಿಸಿದ್ದೇನೆ. ಹೀಗಿರುವಾಗ ನನ್ನನ್ನು ಕಡೆಗಣಿಸಲು ಹೇಗೆ ಸಾಧ್ಯ'  ಎಂದು ಸಿಂಗ್ ತಮಗೇ ತಾವೇ ಹಾಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರನ್ನು ಪ್ರಶ್ನಿಸಿದ್ದಾರೆ. ಹಾಗಾದರೆ  ಮೂರನೇ ಅವಧಿಗೆ ಪಿಎಂ ಆಗಲು ಮನಮೋಹನ್ ಸಿಂಗ್ ಅರ್ಹರೆ. ಈ ದೇಶ ಮತ್ತೊಂದು ಅವಧಿಗೆ ಅವರ inaction (ನಿಷ್ಕ್ರಿಯತೆ) ಸಹಿಸಿಕೊಳ್ಳಬೇಕೆ? ಈ ಅವಧಿಯಲ್ಲಿ ದೇಶ ಉದ್ಧಾರವಾಗಿದೆಯೇ? ಆರ್ಥಿಕವಾಗಿ  ದೇಶ ತಾನಿರಬೇಕಾದ ಸ್ಥಾನದಲ್ಲಿದೆಯೇ? ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವಲ್ಲಿ ಸಿಂಗ್ ಯಶಸ್ವಿ ಆಗಿದ್ದಾರೆಯೇ? ಈ ಪ್ರಶ್ನೆಗಳಿಗೆಲ್ಲ ಸಿಂಗ್ ಸಕಾರಾತ್ಮಕವಾಗಿ ಉತ್ತರಿಸಬಹುದು. ಅಂಕಿ-ಅಂಶಗಳಲ್ಲಿ ತಮ್ಮ  ಓರೆ-ಕೋರೆಗಳನ್ನು ಮುಚ್ಚಿಕೊಳ್ಳಲು ಪ್ರಯತ್ನಿಸಬಹುದು. ಆದರೆ ವಾಸ್ತವ ಬೇರೆಯೇ ಇದೆ. 2004ರಲ್ಲಿ ಉಂಟಾದ ತೀರಾ ಅನಿರೀಕ್ಷಿತ ಮತ್ತು ಆಕಸ್ಮಿಕ ಪರಿಸ್ಥಿತಿಯಲ್ಲಿ ದೇಶದ ಆಡಳಿತ ಚುಕ್ಕಾಣಿ ಆರ್ಥಿಕ ತಜ್ಞ ಸಿಂಗ್  ಅವರ ಕೈವಶವಾಯಿತು. ಆಗ ಇದ್ದ ಜಾಗತಿಕ ಆರ್ಥಿಕ ಉಬ್ಬರ, ಹಿಂದಿನ ಸರ್ಕಾರಗಳು ತುಳಿದಿದ್ದ ಪ್ರೌಢ ವಿತ್ತೀಯ ಹೆಜ್ಜೆ ಹುಲುಸಾದ ಬೆಳೆಯನ್ನು ಸಿಂಗ್ ಮತ್ತವರ ತಂಡದ ಕೈಗೆ ಒಪ್ಪಿಸಿತ್ತು. ಯಾವುದೇ ದೇಶದ  ಆರ್ಥಿಕತೆಗೆ ಇಂಬು ನೀಡುವುದು ಅದರ connectivity ಅಂದರೆ ಸಂಪರ್ಕ. ಇಲ್ಲಿ ರಸ್ತೆ ನಿರ್ಮಾಣ ಅತಿ ಪ್ರಾಮುಖ್ಯ ಪಡೆಯುತ್ತದೆ. ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ ಇದನ್ನು ಮನಗಂಡು  ದೇಶವನ್ನು ಬೆಸೆಯುವ ರಸ್ತೆ ಜಾಲಕ್ಕೆ ಪ್ರಾಮುಖ್ಯ ನೀಡಿತ್ತು. ಆದರೆ ಅದು ಯುಪಿಎ ಮತ್ತು ಸಿಂಗ್ ಅವರಿಗೆ ಅಪಥ್ಯವಾಯಿತು. ಪರಿಣಾಮ, ಕಳೆದ 9 ವರ್ಷಗಳಲ್ಲಿ ಕಿಲೋಮೀಟರ್ ಲೆಕ್ಕ ಹಾಗಿರಲಿ ಟೇಪ್ ಹಿಡಿದು ಸೆಂಟಿಮೀಟರ್ ಲೆಕ್ಕ  ಹಾಕಬಹುದಾದಷ್ಟು ದೂರ ಮಾತ್ರ ರಸ್ತೆ ಜಾಲ ಮುಂದುವರಿದಿದೆ ಎಂದರೆ ಈ ಸರ್ಕಾರದ ಗೊತ್ತು ಗುರಿ ಏನು ಎಂಬುದು ತಿಳಿಯುತ್ತದೆ. ಸಿಂಗ್ ಅವರ ಪಾಲಿಗೆ ಮೊದಲ ಐದು ವರ್ಷ ಒಂದು ರೀತಿ ಹನಿಮೂನ್‌ನಂತೆ ಕಳೆದು ಹೋಯಿತು. ಬೊಕ್ಕಸದಲ್ಲಿ ರೊಕ್ಕ ಇತ್ತು. 2008ರ ಜಾಗತಿಕ ಆರ್ಥಿಕ ಕುಸಿತದವರೆಗೆ ವಿದೇಶಿ ಬಂಡವಾಳ ನಮ್ಮ ಪೇಟೆಗೆ ಜೀವ ತುಂಬಿತ್ತು. ಬೊಕ್ಕಸಕ್ಕೆ ತೂತು ಮಾಡುವ ಜನಪ್ರಿಯ ಯೋಜನೆಗಳನ್ನು  ಅನುಷ್ಠಾನಕ್ಕೆ ತಂದು ಮತದಾರನಿಗೆ ಒಲೈಕೆಯ ಗಾಳ ಹಾಕಿದ್ದೂ ಆಯಿತು. ಪರಿಣಾಮ 2009ರ ಜನಮತ. ಆಗ ಅನಿವಾರ್ಯ ಎನ್ನುವಂತೆ ಕಾಂಗ್ರೆಸ್ ಸಿಂಗ್ ಅವರನ್ನೇ ಮುಂದುವರಿಸಬೇಕಾಯಿತು. ನಿಜಕ್ಕೂ ಈ  ಅವಧಿ ಸಿಂಗ್ ಸರ್ಕಾರದ ಪಾಲಿಗೆ ಸವಾಲಿನದ್ದಾಗಿತ್ತು. 2008ರ ಆರ್ಥಿಕ ಬಿಸಿ ತಟ್ಟದಿರಲು ಜಾರಿಗೆ ತಂದ ಕ್ರಮಗಳನ್ನು ಹಿಂತೆಗೆದುಕೊಳ್ಳುವುದು ಅನಿವಾರ್ಯವಾಗಿತ್ತು. ಅದು ಆರ್ಥಿಕತೆಯ ಮೇಲೆ ಬೀರುವ  ಪರಿಣಾಮಗಳನ್ನು ಸಮಗೊಳಿಸಲು ಸಾಕಷ್ಟು ಸುಧಾರಣಾ ಕ್ರಮಗಳನ್ನು ಅನುಸರಿಸಲೇಬೇಕಾಗಿತ್ತು. ಎರಡನೇ ಅವಧಿಗೆ ಅಧಿಕಾರಕ್ಕೆ ಬಂದ ಆರಂಭದಲ್ಲಿ ಎಲ್ಲ ಸಚಿವಾಲಯಗಳಿಗೂ 100 ದಿನಗಳ ಒಳಗೆ ಸುಧಾರಣೆಯ  ಕ್ರಮಗಳ ಮಾರ್ಗಸೂಚಿ ರೂಪಿಸುವಂತೆ ಹೇಳಿದ್ದೂ ಆಯಿತು. ಆದರೆ ಆ ನೂರು ದಿನಗಳ ಗಡುವು ಇನ್ನೂ ಮುಗಿದಂತಿಲ್ಲ.
ಸಮಸ್ಯೆ, ಸವಾಲುಗಳು ಬೆಟ್ಟದಷ್ಟಿದ್ದವು. ಇಲ್ಲಿ ಯಾವುದೇ ಸಬೂಬು ಹೇಳಲು ಅವಕಾಶ ಇರಲಿಲ್ಲ. ಆದರೆ ಈ ಕಳೆದ ನಾಲ್ಕು ವರ್ಷಗಳಲ್ಲಿ ಆಗಿರುವುದಾದರೂ ಏನು? ವಿತ್ತೀಯ ಕೊರತೆ ಗಗನ ಮುಖಿಯಾಗಿದೆ. ಬೆಳವಣಿಗೆ  ದರ ತೀವ್ರ ಕುಸಿತ ಕಂಡಿದೆ. ವಿದೇಶಿ ಹೂಡಿಕೆ ವಿರಳವಾಗಿದೆ. ಆದಾಯ ಸಂಗ್ರಹ ಇಳಿಮುಖವಾಗಿದೆ. ಹಣದುಬ್ಬರ ಇನ್ನೂ ಅಂಕೆಗೆ ಸಿಕ್ಕಿಲ್ಲ. ಇಡೀ ವ್ಯವಸ್ಥೆ ಒಂದು ರೀತಿ Stand still (ಇದ್ದಲ್ಲೇ ಹೆಣವಾಗಿದೆ.) ಆಗಿದೆ.  ಪ್ರಧಾನಿ ಸ್ಥಾನದಲ್ಲಿ ಕುಳಿತು ಸಿಂಗ್ ಇದನ್ನೆಲ್ಲ ಮೌನವಾಗಿ ನೋಡುತ್ತಿದ್ದಾರೆಯೇ ಹೊರತು ತಕ್ಕ ಉಪಕ್ರಮಗಳಿಗೆ ಮುಂದಾಗಿಲ್ಲ. ಈ ಪರಿಸ್ಥಿತಿಗೆ ನೇರ ಹೊಣೆ ಹೊರಬೇಕಾದ ಸಿಂಗ್ ಅದನ್ನು ಮೈತ್ರಿಕೂಟದ ತೊಡಕು  ಹಾಗೂ ಪ್ರತಿಪಕ್ಷಗಳ ಅಸಹಕಾರದ ನೆಪ ನೀಡಿ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಮೃತ್ರಿಕೂಟವನ್ನು ಮುನ್ನಡೆಸುವ ದಾರಿಯಲ್ಲಿ ಬರುವ ಒತ್ತಡಗಳಿಂದ (Coalition compulsions) ಆರ್ಥಿಕ ಸ್ಥಿತಿ ಮತ್ತು ಸುಸೂತ್ರ  ಆಡಳಿತಕ್ಕೆ ಹಿನ್ನಡೆಯಾಗಿದೆ ಎಂದು ಸಿಕ್ಕ ಸಿಕ್ಕ ವೇದಿಕೆಗಳಲ್ಲೆಲ್ಲ ಸಿಂಗ್ ಹಲುಬಿದ್ದಾರೆ. ಆದರೆ ಮೈತ್ರಿಕೂಟ ರಚಿಸುವಾಗ ಇವರಿಗೆ ಆ ಜ್ಞಾನ ಇರಲಿಲ್ಲವೇ? ಸರ್ಕಾರ ರಚನೆ ಸಂದರ್ಭದಲ್ಲೇ ಅತಿ ಪ್ರಮುಖವಾಗಿ  ತೆಗೆದುಕೊಳ್ಳಲೇ ಬೇಕಾದ ನಿರ್ಧಾರಗಳನ್ನು ಗುರುತಿಸಿ ಈ ವಿಷಯದಲ್ಲಿ ರಾಜಿ ಇಲ್ಲ ಎಂದು ಮಿತ್ರ ಪಕ್ಷಗಳಿಗೆ ತಿಳಿ ಹೇಳಿ ನಂತರ ಅವರನ್ನು ಸರ್ಕಾರದೊಳಗೆ ಬಿಟ್ಟುಕೊಳ್ಳಲು ಇವರಿಗೇನಾಗಿತ್ತು ಧಾಡಿ. ಕನಿಷ್ಠ ಗುರಿಗಳನ್ನು  ಹಾಕಿ ಇದಕ್ಕೆ ಒಪ್ಪುವುದಾದರೆ ಮಾತ್ರ ಸರ್ಕಾರದ ಜವಾಬ್ದಾರಿ ಹೊರುತ್ತೇನೆ. ಇಲ್ಲದಿದ್ದರೆ ಈ ಹೊಣೆಯನ್ನು ಬೇರೆಯವರಿಗೆ ಒಪ್ಪಿಸಿ ಎಂದು ಹೇಳಲು ಅಂದು ಸಿಂಗ್ ಅವರಿಗೆ ಬಾಯಿ ಇರಲಿಲ್ಲವೇ? ಅಧಿಕಾರಕ್ಕಾಗಿ  ನಿರ್ಧಾರಗಳನ್ನು ಕೈಗೊಳ್ಳುವುದನ್ನೇ ಮುಂದೂಡಿ ಪರಿಸ್ಥಿತಿ ವಿಕೋಪಕ್ಕೆ ಹೋದಾಗ ಮಿತ್ರ ಪಕ್ಷಗಳನ್ನು ದೂರುವುದು ಸೋಗಲಾಡಿತನದ ಪರಮಾವಧಿ ಅಲ್ಲವೇ? ಯಾವ ಸಮಯದಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳಬೇಕು ಎಂಬ ವಿವೇಚನೆಯೇ ಇಲ್ಲದ ಮೇಲೆ ಯಾರು ತಾನೆ ಅಂತಹವರನ್ನು ಮುತ್ಸದ್ಧಿ ಎಂದು ಕರೆಯಲು ಸಾಧ್ಯ! ಇನ್ನು ಪ್ರತಿ ಪಕ್ಷಗಳ ಅಸಹಕಾರದ ಮಾತು. ಅಲ್ಲ ಪರಸ್ಪರ ಸಹಕಾರ ಎಂಬುದು one way traffic  ಅಲ್ಲ ಎಂಬ ಕನಿಷ್ಠ ಜ್ಞಾನ ಈ ಹಾರ್ವರ್ಡ್ ಪ್ರೊಫೆಸರ್‌ಗೆ ಇಲ್ಲವೇ? ಪ್ರಧಾನಿ ಸ್ಥಾನದಲ್ಲಿ ಕುಳಿತ ಮೇಲೆ ದೇಶದ ಹಿತದೃಷ್ಟಿ ಮತ್ತು ಸುಸೂತ್ರ ಆಡಳಿತಕ್ಕಾಗಿ ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುವ ಜವಾಬ್ದಾರಿ ಅವರ ಮೇಲಲ್ಲದೆ ಇನ್ನಾರ ಮೇಲಿರುತ್ತದೆ. 'ಗುಜರಾತಿನಲ್ಲಿ ಸಚಿವರೊಬ್ಬರ (ಅಮಿತ್ ಶಾ) ಮೇಲೆ ದಾಖಲಾಗಿರುವ ಸಿಬಿಐ ಕೇಸ್ ಹಿಂಪಡೆಯದಿದ್ದರೆ ರಾಜಕೀಯ ಅಸಹಕಾರ ಮುಂದುವರಿಸುವುದಾಗಿ ಬಿಜೆಪಿ ಪಟ್ಟು ಹಿಡಿದಿದೆ' ಎಂದು ನೇರವಾಗಿ ಸಿಂಗ್ ಬಿಜೆಪಿ ಮೇಲೆ ಆರೋಪ ಹೊರಿಸಿದ್ದಿದೆ. ಆದರೆ ಇದೇ ಸರ್ಕಾರ ಸಿಬಿಐ ಅನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿರುವ ಬಗ್ಗೆ ಯಾರಿಗಾದರೂ ಅನುಮಾನ ಇದೆಯೇ? ಯುಪಿಎ ಕೂಟದಲ್ಲಿ ಇದ್ದಷ್ಟೂ ದಿನ ಸಿಬಿಐ ಕಣ್ಣಿಗೆ ಕಾಣದ ಡಿಎಂಕೆ ನಾಯಕ ಸ್ಟಾಲಿನ್‌ರ ಭ್ರಷ್ಟಾಚಾರ ಆ ಪಕ್ಷ ಬೆಂಬಲ ಹಿಂತೆಗೆದುಕೊಂಡು ರಾತ್ರಿ ಬೆಳಗಾಗುವುದರಲ್ಲಿ ಪತ್ತೆಯಾಗಿ ಅವರ ಮನೆಯ ಮೇಲೆ ದಾಳಿ ಮಾಡಿದ್ದು ಕೇವಲ ಕಾಕತಾಳೀಯವೇ ಅಥವಾ ಸಿಬಿಐನ ಸ್ವತಂತ್ರ ನಡೆಯೇ? ರಾಷ್ಟ್ರಪತಿ ಚುನಾವಣೆ ವಿಷಯದಲ್ಲಿ ಮುಲಾಯಂ ಸಿಂಗ್, ಮಮತಾ ಜೊತೆ ಕೈಜೋಡಿಸಿ ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿ ವಿರುದ್ಧ ತೊಡೆ ತಟ್ಟಿದ ಕೂಡಲೇ ಅವರನ್ನು ಭೋಜನಕ್ಕೆ ಆಹ್ವಾನಿಸಿ ಮಾರನೆಯ ದಿನ ಅವರು ಉಲ್ಟಾ ಹೊಡೆಯುವಂತೆ ಮಾಡಿದ್ದರ ಹಿಂದೆ ಸಿಬಿಐ ದುರ್ಬಳಕೆ ಕಾಣುವುದಿಲ್ಲವೇ? ಕಳೆದ ವಾರ ಉತ್ತರ ಪ್ರದೇಶದಲ್ಲಿ ಮಾತನಾಡಿದ ಇದೇ ಮುಲಾಯಂ 'ಕಾಂಗ್ರೆಸ್ ವಿರುದ್ಧ ಹೋರಾಡಿ ಜೈಲು ಪಾಲಾಗಿ ಇಲ್ಲವೇ ಸಿಬಿಐನ ಬಲಿಪಶುವಾಗಿ' ಎಂದು ಹೇಳಿದ್ದರಲ್ಲಿ ಸತ್ಯಾಂಶ ಇಲ್ಲ ಎಂದು ಹೇಳಲು ಸಾಧ್ಯವೇ? ಭ್ರಷ್ಟಾಚಾರದ ವಿರುದ್ಧ ಸಂಘಟಿತರಾಗಿ ಹೋರಾಡಬೇಕು ಎಂದು ಹೇಳುತ್ತಲೇ ತಮ್ಮ ಮೂಗಿನ ಕೆಳಗೇ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಮೂಕ ಸಾಕ್ಷಿಯಾಗಿ, ಹಗರಣಗಳ ಮೇಲೆ ಹಗರಣಗಳಿಗೆ ಕಾರಣರಾಗಿರುವುದು ಏನನ್ನು ತೋರಿಸುತ್ತದೆ. ಒಬ್ಬ ನಾಯಕ ಎನಿಸಿಕೊಂಡವನು ಕೇವಲ ಶುದ್ಧ ಹಸ್ತನಾಗಿದ್ದರೆ ಸಾಲದು, ಇಡೀ ದೇಶವನ್ನು ಉನ್ನತಿಗೆ ಕೊಂಡೊಯ್ಯುವ ಛಾತಿ, ವಿಷನ್ ಎರಡನ್ನೂ ಒಳಗೊಂಡಿರಬೇಕು. ಪುಸ್ತಕದ ಥಿಯರಿಗಳಿಗಿಂತ ವಾಸ್ತವದ ಪರಿಸ್ಥಿತಿ ಆಧರಿಸಿ ನಿರ್ಧಾರಗಳನ್ನು ಕೈಗೊಳ್ಳುವಂತಿರಬೇಕು. ಆದರೆ ಮನಮೋಹನ್ ಸಿಂಗ್ ಈ ಎಲ್ಲ ವಿಷಯಗಳಲ್ಲಿ ವಿಫಲ ನಾಯಕರೇ ಆಗಿದ್ದಾರೆ. ಅವರ ಪಾಲಿಗಂತೂ ಇದು Lost opportunity  (ಕಳೆದುಕೊಂಡ ಸದಾವಕಾಶ). ಇನ್ನು ಇದು ಅವರ  Last opportunity (ಕಡೆಯ ಅವಕಾಶ). ಆದರೆ ಅದರಿಂದ ದೇಶಕ್ಕೂ ಒಳಿತು.

- ಕೆ.ಎಸ್.ಜಗನ್ನಾಥ್
jagannath.kudinoor@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com