ಮತದಾರರಿಗೆ ಸರಿ ಪಥ ತೋರಿಸುತ್ತಿರುವ 'ನಮ್ಮ ಬೆಂಗಳೂರು ಫೌಂಡೇಷನ್‌'

Updated on: 

ಬೆಂಗಳೂರಿನ ವಿದ್ಯಾವಂತ ನಾಗರಿಕರ ಬಗ್ಗೆ ಒಂದು ದೂರಿದೆ. ಕಳಪೆ ಆಡಳಿತದ ಬಗ್ಗೆ ಅವರು ಯಾವಾಗಲೂ ವಟಗುಡುತ್ತಾ ಇರುತ್ತಾರಾದರೂ ಗುಣಾತ್ಮಕ ಬದಲಾವಣೆ ತರಬಲ್ಲ ಅವಕಾಶ ಅವರಿಗೆ ಎದುರಾದಾಗ ಕಣ್ಣು ಮುಚ್ಚಿ ಕುಳಿತುಬಿಡುತ್ತಾರೆ ಎಂಬುದು. ಬಹುತೇಕರು ಮತದಾನ ಮಾಡುವುದೇ ಇಲ್ಲ. 'ನಾನೇಕೆ ಮತ ನೀಡಬೇಕು; ನನ್ನ ಒಂದು ಓಟು ಅದ್ಹೇಗೆ ಬದಲಾವಣೆ ತರಬಲ್ಲದು?' ಎನ್ನುವುದು ಅವರ ಸ್ಟ್ಯಾಂಡರ್ಡ್ ಪ್ರಶ್ನೆ. ಆದರೆ ಅಚಾನಕ್ಕಾಗಿ ಎಲ್ಲವೂ ಬದಲಾಗುತ್ತಿದೆ. ಇದಕ್ಕಾಗಿ ಹಲವು ಎನ್‌ಜಿಒಗಳಿಗೆ ಧನ್ಯವಾದ ಅರ್ಪಿಸಲೇಬೇಕು. ವಿಧಾನಸಭಾ ಚುನಾವಣೆಗಳು ಮೇ 5 ರಂದು ನಡೆಯಲಿದ್ದು, ಬೆಂಗಳೂರಿನಲ್ಲಿ ಸುಮಾರು 28 ಎಮ್‌ಎಲ್‌ಎಗಳು ಆಯ್ಕೆಯಾಗಬೇಕಿದೆ.
ಈ ನಿಟ್ಟಿನಲ್ಲಿ ಬಹುವಾಗಿ ಶ್ರಮಿಸುತ್ತಿರುವ 'ನಮ್ಮ ಬೆಂಗಳೂರು ಫೌಂಡೇಷನ್‌' ಮತದಾನದ ಮಹತ್ವವನ್ನು ಜನತೆಗೆ ತಿಳಿಸಿಕೊಡುವುದಷ್ಟೇ ಅಲ್ಲದೆ, ಸರಿಯಾದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ವಿಷಯದಲ್ಲೂ ಭಾರೀ ಪ್ರಚಾರಕಾರ್ಯ ನಡೆಸಿದೆ.  ಅದರ ಘೋಷಣೆ ಸರಳವಾಗಿದೆ: 'ಸ್ವಚ್ಛ, ಸುರಕ್ಷಿತ, ಮತ್ತು ಉತ್ತಮ ಬೆಂಗಳೂರಿಗಾಗಿ ಎಲ್ಲರೂ ಮತ ನೀಡೋಣ, ಜವಾಬ್ದಾರಿಯುತವಾಗಿ ಮತದಾನ ಮಾಡೋಣ'. ಈಗ ಆ ಘೋಷಣೆ ಫಲಕೊಡುತ್ತಿದೆ. ಅದಾಗಲೇ ಬಹಳಷ್ಟು ಮತದಾರರು ಎಚ್ಚೆತ್ತುಕೊಂಡಿದ್ದಾರೆ.
'ನನ್ನ ಮತಕ್ಕೆ ಬೆಲೆ ಇದೆಯಾ?' ಎಂದು ಪ್ರಶ್ನಿಸುವವರಿಗೆ ಫೌಂಡೇಷನ್, ಮೈನವಿರೇಳಿಸುವಂತಹ ಉತ್ತರ ಕೊಡುತ್ತದೆ. ಇತಿಹಾಸದ ಉದಾಹರಣೆಯನ್ನು ಕೊಟ್ಟು, ಹೇಗೆ ಒಂದೇ ಒಂದು ಮತ ದೊಡ್ಡ ಬದಲಾವಣೆಗೆ ಕಾರಣವಾಗಬಲ್ಲದು ಎನ್ನುವುದನ್ನು ವಿವರಿಸುತ್ತದೆ:
-1875ರಲ್ಲಿ ಫ್ರಾನ್ಸ್‌ನಲ್ಲಿ ಒಂದು ಮತದ ಅಂತರದಲ್ಲಿ ರಾಜಪ್ರಭುತ್ವದ ಬದಲು, ರಿಪಬ್ಲಿಕನ್ ಸರ್ಕಾರ ಅಸ್ತಿತ್ವಕ್ಕೆ ಬಂದಿತು.
-1649ರಲ್ಲಿ ಇಂಗ್ಲೆಂಡ್‌ನ ಕಿಂಗ್ ಚಾರ್ಲ್ಸ್-1 ನೇಣುಗಂಬವೇರುವುದಕ್ಕೆ ಒಂದು ಹೆಚ್ಚುವರಿ ಓಟು ನಿರ್ಣಾಯಕವಾಯಿತು.
-ಅಧ್ಯಕ್ಷ ಆ್ಯಂಡ್ರಿವ್ ಜಾನ್ಸನ್‌ಗೆ ಮಹಾಭಿಯೋಗದಿಂದ ತಪ್ಪಿಸಿಕೊಳ್ಳಲು 1 ಮತ ಬಹಳ ಸಹಾಯಕ್ಕೆ ಬಂದಿತು.
-ಕ್ಯಾಲಿಫೋರ್ನಿಯಾ, ಓರೇಗಾನ್, ಟೆಕ್ಸಾಸ್ ಮತ್ತು ವಾಷಿಂಗ್‌ಟನ್ ಪ್ರೇತ್ಯೇಕ ರಾಜ್ಯಗಳಾಗಲು ಕಾರಣವಾಗಿದ್ದು ಒಂದು ಓಟು.
-ವಾಜಪೇಯಿ ಅವರು ವಿಶ್ವಾಸಮತ ಗಳಿಕೆಯಲ್ಲಿ ಸೋತಿದ್ದು ಕೇವಲ ಒಂದು ಓಟಿನಿಂದ.
ಈಗಲೂ ನಿಮಗೆ ವಿಷಯ ಮನದಟ್ಟಾಗಲಿಲ್ಲವೆಂದರೆ, 'ನಮ್ಮ ಬೆಂಗಳೂರು ಫೌಂಡೇಷನ್‌' ಹೊರತೆಗೆದಿರುವ ಅಂಕಿ ಅಂಶಗಳತ್ತ ಗಮನ ಹರಿಸುವುದೊಳಿತು: ಬೆಂಗಳೂರು ನಗರದ ಜನಸಂಖ್ಯೆ 9 ಮಿಲಿಯನ್‌ನಿಂದ 10 ಮಿಲಿಯನ್‌ನಷ್ಟಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಮತದಾರರಾಗಿ ನೋಂದಣಿ ಮಾಡಿಸಿಕೊಂಡವರ ಸಂಖ್ಯೆ 2 ಮಿಲಿಯನ್‌ನಷ್ಟು. ಆದರೆ ಅದರಲ್ಲಿ 1 ಮಿಲಿಯನ್‌ಗಿಂತಲೂ ಕಡಿಮೆ ಮಂದಿ ಮತದಾನ ಮಾಡಿದರು. ಬಿಜೆಪಿ ನಾಯಕ ಅನಂತಕುಮಾರ್ 4.37 ಲಕ್ಷ ಮತಗಳೊಂದಿಗೆ ಗೆದ್ದರು. ಇದರರ್ಥವೇನು? ಅವರು ಆ ಕ್ಷೇತ್ರದಲ್ಲಿನ 10-15 ಪ್ರತಿಶತ ಜನರನ್ನಷ್ಟೇ ಪ್ರತಿನಿಧಿಸುತ್ತಿದ್ದಾರೆ ಎಂದೇ ಅರ್ಥವಲ್ಲವೇ?!
ಪ್ರತಿ ಮತಕ್ಕೂ ಮೌಲ್ಯವಿದೆ. ಒಂದು ಮತ ಇಡೀ ಫಲಿತಾಂಶವನ್ನೇ ಬದಲಿಸಿಬಿಡಬಲ್ಲದು. ನಾವು ಜವಾಬ್ದಾರಿಯುತವಾಗಿ ಮತದಾನಕ್ಕೆ ಮುಂದಾಗಬೇಕಷ್ಟೆ. ಕ್ಷೇತ್ರದ ದೇಖರೇಖಿ ನೋಡಿಕೊಳ್ಳಬಲ್ಲ ಸರಿಯಾದ ಅಭ್ಯರ್ಥಿಯನ್ನು ನಾವು ಆಯ್ಕೆ ಮಾಡಿಕೊಳ್ಳಬೇಕು. ಹಾಗಾಗಿಯೇ ಈ ನಿಟ್ಟಿನಲ್ಲಿ 'ನಮ್ಮ ಬೆಂಗಳೂರು ಫೌಂಡೇಷನ್‌'
ಮತದಾರರ ಸಹಾಯಕ್ಕೆ ಮುಂದಾಗಿದೆ. ಮತದಾರರು ಅಭ್ಯರ್ಥಿಗಳ ಮುಂದಿಡಬೇಕಾದ ಕೆಲವು ಪ್ರಶ್ನೆಗಳ ಪಟ್ಟಿಯನ್ನು ಅದು ಸಿದ್ಧಪಡಿಸಿದೆ:
ಕೆಳಕಂಡ ವಿಷಯಗಳ ಬಗ್ಗೆ ನಿಮ್ಮ ನಿಲುವೇನು, ಈ ಸಮಸ್ಯೆಗಳನ್ನು ಬಗೆಹರಿಸಲು ನಿಮ್ಮ ಬಳಿ ಯಾವ ಪರಿಹಾರವಿದೆ?
1)ಸಾರ್ವಜನಿಕ ಸ್ಥಳಗಳ ನೋಟಿಫಿಕೇಷನ್ ಮತ್ತು ಡಿನೋಟಿಫಿಕೇಷನ್ 2) ಪಾರ್ಕು ಮತ್ತು ಕೆರೆಗಳ ಒತ್ತುವರಿ 3) ಕಾಂಟ್ರಾಕ್ಟರ್‌ಗಳು ಜನತೆಯ ಹೆಸರಿನಲ್ಲಿ ಅನವಶ್ಯಕ ಮತ್ತು ಅರ್ಥವಿಲ್ಲದ ಯೋಜನೆಗಳನ್ನು ಕೈಗೊಂಡು ಅವರ ಹಣವನ್ನು ಹಾಳು ಮಾಡುತ್ತಿರುವುದು 4) ನಗರದ ಹಲವಾರು ಯೋಜನೆಗಳ ಕಾಂಟ್ರ್ಯಾಕ್ಟ್ ಪ್ರಕ್ರಿಯೆಯಲ್ಲಿನ ಭ್ರಷ್ಟಾಚಾರ 5) ರಿಯಲ್ ಎಸ್ಟೇಟ್‌ನಿಂದ ಕಾಂಟ್ರಾಕ್ಟ್‌ನೆಡೆಗೆ ವಾಲಿದ ಕಾಂಟ್ರ್ಯಾಕ್ಟರ್‌ಗಳು ಮತ್ತು ಅದರಿಂದ ಅವರಿಗಾಗುತ್ತಿರುವ ಉಪಯೋಗ 6) ವಾಸಯೋಗ್ಯ ಪ್ರದೇಶಗಳಲ್ಲಿ ವಾಣಿಜ್ಯ ಅಭಿವೃದ್ಧಿ 7) ನಗರದಲ್ಲಿನ ಕಸದ ಸಮಸ್ಯೆ.
ನೀವು ಇವುಗಳನ್ನು ಬೆಂಬಲಿಸಿ, ಈ ನಿಟ್ಟಿನಲ್ಲಿ ಕೆಲಸ ಮಾಡುತ್ತೀರಾ?
1) ನಗರದ ಅಭಿವೃದ್ಧಿಯೆಡೆಗಿನ ಯೋಜನೆಯ ರೂಪಣೆಯಲ್ಲಿ ಜನರ ಭಾಗವಹಿಸುವಿಕೆ 2)ನಗರದಲ್ಲಿ ವಾಸಿಸಲು ಉತ್ತಮ ಗುಣಮಟ್ಟದ ಜೀವನ 3) ಮಹಿಳೆಯರು, ಮಕ್ಕಳು ಮತ್ತು ಹಿರಿಯ ನಾಗರಿಕರ ರಕ್ಷಣೆ 4)ಉತ್ತಮ ಸಾರ್ವಜನಿಕ ಸೌಲಭ್ಯಗಳ ಪೂರೈಕೆ.
ಒಬ್ಬ ಅರ್ಹ ಅಭ್ಯರ್ಥಿಗೆ ಮತ ಹಾಕಿ ಗೆಲ್ಲಿಸುವ ಮೂಲಕ ನಾವು ಬೆಂಗಳೂರನ್ನು ಇನ್ನಷ್ಟು ಉತ್ತಮ ನಗರವನ್ನಾಗಿ ಬದಲಾಯಿಸಬಲ್ಲೆವು. ಬೆಂಗಳೂರಿನ 28 ಕ್ಷೇತ್ರಗಳಲ್ಲಿನ ಶ್ರಮಜೀವಿ ಕುಟುಂಬಗಳನ್ನು ಪ್ರತಿನಿಧಿಸಲು ಸುಮಾರು 100 ಎಮ್‌ಎಲ್‌ಎ ಅಭ್ಯರ್ಥಿಗಳು ಸೆಣಸಲಿದ್ದಾರೆ. ಹಾಗಾಗೇ ಅವರಲ್ಲಿನ ಅರ್ಹ ವ್ಯಕ್ತಿಗಳನ್ನಷ್ಟೇ ಆಯ್ಕೆ ಮಾಡೋಣ. ಮತದಾನ ಮಾಡಿದರಷ್ಟೇ ಅಲ್ಲ, ಸರಿಯಾದ ವ್ಯಕ್ತಿಗೆ ಮತ ನೀಡುವುದೂ ಅತಿ ಮುಖ್ಯ.
 ಈ ನಿಟ್ಟಿನಲ್ಲಿ ಫೌಂಡೇಷನ್ ನಡೆಸುತ್ತಿರುವ ಪ್ರಯತ್ನಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು www.namma-bengaluru.org ಜಾಲತಾಣಕ್ಕೆ ಭೇಟಿ ನೀಡಿ. ಉತ್ತಮ ಆಡಳಿತ ನೀಡುವ ಮತ್ತು ನಗರಕ್ಕಂಟಿರುವ ಜಡ್ಡನ್ನು ದೂರಮಾಡಬಲ್ಲ ಅಭ್ಯರ್ಥಿಗಳ ಆಯ್ಕೆಗಾಗಿ ಅಭಿಯಾನ ಆರಂಭಿಸಿರುವ ಈ ಪ್ರತಿಷ್ಠಾನದೊಂದಿಗೆ ಕೈ ಜೋಡಿಸಿ.
ಕೊನೆಯ ಗುಟುಕು: 2004ರಲ್ಲಿ 1.29 ಕೋಟಿ ರುಪಾಯಿಗಳಷ್ಟಿದ್ದ ಕರ್ನಾಟಕದ ಎಮ್‌ಎಲ್‌ಎಗಳ ಸರಾಸರಿ ಆಸ್ತಿ ಮೌಲ್ಯ 2008 ಕ್ಕೆ 5.98 ಕೋಟಿ ರುಪಾಯಿಯಷ್ಟಾದದ್ದು ಮತ್ತು 2004ರಲ್ಲಿ 91 ಲಕ್ಷರುಪಾಯಿಗಳಷ್ಟಿದ್ದ ಮಂತ್ರಿಗಳ ಸರಾಸರಿ ಆಸ್ತಿ ಮೌಲ್ಯ 2008ಕ್ಕೆ 6.96 ಕೋಟಿ ರುಪಾಯಿಗಳಷ್ಟಾದದ್ದು ನಿಮಗೆ ಗೊತ್ತೆ? ಈ ಅಂಕಿ ಅಂಶಗಳನ್ನು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್)ಮತ್ತು ಕರ್ನಾಟಕ ಎಲೆಕ್ಷೆನ್ ವಾಚ್ (ಕೆಇಡಬ್ಲೂ) ಬಿಡುಗಡೆ ಮಾಡಿವೆ. ಒಟ್ಟಿನಲ್ಲಿ ಈ ರಾಜಕಾರಣಿಗಳ ಆಸ್ತಿ 2013ರ ವೇಳೆಗೆ ಇನ್ನಷ್ಟು ಹೆಚ್ಚಿಗೆಯಾಗಿರಲಿಕ್ಕೇ ಬೇಕು! ಆದಾಯ ತೆರಿಗೆ ಇಲಾಖೆ ಈ ಕೂಡಲೆ ಎಚ್ಚೆತ್ತು, ಇವರೆಲ್ಲರ ಆಸ್ತಿ ಇಷ್ಟು ಕಡಿಮೆ ಸಮಯದಲ್ಲಿ ಇಷ್ಟೊಂದು ಏರಿಕೆ ಹೇಗೆ ಕಂಡಿತು ಎಂಬುದನ್ನು ಪತ್ತೆಹಚ್ಚಬೇಕು.

-ಎಚ್.ಎಸ್. ಬಲರಾಮ್
hsbalram@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com