ಇತಿಹಾಸ ಪ್ರಸಿದ್ಧ ಮತ್ತು ವಿಶ್ವಖ್ಯಾತ ಬೆಂಗಳೂರು ಕರಗ ಯಾರಿಗೆ ಗೊತ್ತಿಲ್ಲ. ವಿಜೃಂಭಣೆಯಿಂದ ನಡೆಯುವ ಈ ಉತ್ಸವದ ಆಚರಣೆಯ ಹಿಂದೆ ಭಾರಿ ಇತಿಹಾಸ ಮತ್ತು ಪುರಾಣದ ಕಥೆಗಳಿವೆ.
ಕರಗ ಉತ್ಸವದ ಕೇಂದ್ರ ಬಿಂದು ತಿಗಳ ಸಮುದಾಯ. ಈ ಸಮಾಜದ ಮತ್ತೊಂದು ಹೆಸರು ವಹ್ನಿಕುಲ ಕ್ಷತ್ರಿಯರು.
ಹೆಸರೇ ಹೇಳುವಂತೆ ಕ್ಷತ್ರಿಯರಾದ ಇವರು ಬಲಾಢ್ಯರಾಗಿದ್ದರು. ರಾಜರ ಆಳ್ವಿಕೆಯಲ್ಲಿ ಸೇನೆಯಲ್ಲಿ ಕೆಲಸ ಮಾಡುತ್ತಿದ್ದರು. ಯುದ್ಧಗಳಲ್ಲಿ ಮುನ್ನುಗಿ ಹೋರಾಟ ಮಾಡುವ ಗುಣ ಇವರದ್ದಾಗಿತ್ತು. ಯುದ್ಧ ಇಲ್ಲದಿದ್ದಾಗ ಅಂದರೆ ಬಿಡುವಿನ ವೇಳೆಯಲ್ಲಿ ಕೃಷಿ ಮತ್ತು ತೋಟಗಾರಿಕೆ ಮಾಡಿಕೊಂಡಿದ್ದರು. ಕ್ರಮೇಣ ಅದುವೇ ಅವರ ಕುಲ ಕಸುಬು ಸಹ ಆಯಿತು.
ಮತ್ತೊಂದು ವಿಶೇಷ ಎಂದರೆ, ಕರಗ ಉತ್ಸವದ ಸಂದರ್ಭದಲ್ಲಿ ಪ್ರಮುಖ ಪಾತ್ರ ವಹಿಸುವವರು ವೀರ ಕುಮಾರರು. ಅವರು ದ್ರೌಪದಿಯಿಂದ ಸೃಷ್ಟಿ ಆದವರಂತೆ. ಅವರಿಂದ ಬೆಳೆದು ಬಂದಿದ್ದೇ ತಿಗಳ ಸಮುದಾಯ ಎನ್ನುತ್ತಾರೆ ಸಮಾಜದ ಹಿರಿಯರು.
ತಿಗಳರು ಎಂದರೇನು?
ತಿಗಳರು ಎಂದರೆ ತಿ ಕುಲದವರು. ತಿ ಎಂದರೆ ಸಂಸ್ಕೃತದಲ್ಲಿ ಬೆಂಕಿ ಎಂದು ಅರ್ಥ. ಕೆಲವೆಡೆ ತ್ರಿಗಳರು ಎಂದೂ ಕರೆಯುವುದುಂಟು. ಅಂದರೆ, ತ್ರಿಶೂಲವನ್ನು ಮುಂದಿಟ್ಟುಕೊಂಡು ಪೂಜೆ ಪುನಸ್ಕಾರ ಮಾಡುವವರು. ಇದು ಕ್ರಮೇಣ ತಿಗಳ ಆಗಿರಬಹುದು ಎನ್ನುತ್ತಾರೆ ಸಮುದಾಯದ ಹಿರಿಯ ಮುಖಂಡರಲ್ಲಿ ಒಬ್ಬರಾದ ಚಲಕರಿ ನಾರಾಯಣಸ್ವಾಮಿ ಅವರು.
ತಿಗಳರಲ್ಲಿ ಪ್ರಮುಖವಾಗಿ ಮೂರು ಪಂಗಡಗಳಿವೆ. ವಹ್ನಿಕುಲ ಕ್ಷತ್ರಿಯರು, ಅಗ್ನಿಕುಲ ಕ್ಷತ್ರಿಯರು ಮತ್ತು ಶಂಭುಕುಲ ಕ್ಷತ್ರಿಯರು. ಬೆಂಗಳೂರು ಕರಗ ಉತ್ಸವದ ರೂವಾರಿಗಳೇ ವಹ್ನಿಕುಲ ಕ್ಷತ್ರಿಯರು. ತಮಿಳುನಾಡು, ಪಾಂಡಿಚೇರಿ ಭಾಗದಲ್ಲಿ ಇವರಿಗೆ ವಣ್ಣೇರ್, ವಣ್ಣಿಯಾರ್ ಎಂಬ ಹೆಸರಿದೆ. ಬೆಂಗಳೂರು ಸಮೀಪದ ಮಾಗಡಿ ಮತ್ತು ತುಮಕೂರು ಕಡೆ ಅಗ್ನಿಕುಲ ಕ್ಷತ್ರಿಯರಿದ್ದಾರೆ. ಇನ್ನು ಶಂಭುಕುಲ ಕ್ಷತ್ರಿಯರು ಇಲ್ಲಿಂದ ತಮಿಳುನಾಡಿಗೆ ಹೋಗಿ ನೆಲೆಸಿ ಅಲ್ಲಿಂದ ಮತ್ತೆ ಇಲ್ಲಿಗೆ ಬಂದವರು.
ಕರಗ ಉತ್ಸವ ಏಕೆ?
ಮಹಾಭಾರತದಲ್ಲಿ ಬರುವ ಪಾಂಡವರ ಪತ್ನಿ ದ್ರೌಪದಿ ಆದಿಶಕ್ತಿ ಸ್ವರೂಪಿಣಿ ಎಂದು ಹೇಳಲಾಗುತ್ತದೆ. ಕೌರವರು ಸೇರಿದಂತೆ ರಾಕ್ಷಸರ ಸಂಹಾರದ ಬಳಿಕ ಪಾಂಡವರ ಸ್ವರ್ಗಾರೋಹಣ ನೆರವೇರುತ್ತದೆ. ಆದರೆ, ಧರ್ಮರಾಯ ಹೊರತುಪಡಿಸಿ ಉಳಿದವರು ಮಾರ್ಗಮಧ್ಯೆ ಬಿದ್ದು ಹೋಗುತ್ತಾರೆ. ದ್ರೌಪದಿಯೂ ಬಿದ್ದಾಗ ತಿಮಿರಾಸುರ ಎಂಬ ರಾಕ್ಷಸ ಬಂದು ಕೀಟಲೆ ಮಾಡುತ್ತಾನೆ.
ಆಗ ದ್ರೌಪದಿ ಆದಿಶಕ್ತಿ ಸ್ವರೂಪಿಣಿಯಾಗಿ ಅವತಾರ ತಾಳಿ ತನ್ನ ಬೆವರಿನಿಂದ ವೀರ ಯೋಧರನ್ನು ಸೃಷ್ಟಿ ಮಾಡುತ್ತಾಳೆ. ಅವರದ್ದೇ ಒಂದು ಸೈನ್ಯವಾಗಿ ಆ ಸೈನ್ಯ ರಾಕ್ಷಸನನ್ನು ಸಂಹಾರ ಮಾಡುತ್ತದೆ. ಅವರೇ ವೀರಕುಮಾರರು. ಆಂದರೆ, ಕರಗದ ಪೂಜಾರಿಯ ಸುತ್ತ ಖಡ್ಗ ಹಿಡಿದು ಹೋಗುವವರು. ಅವರಲ್ಲಿ ಯಜಮಾನ, ಗೌಡ ಮತ್ತು ಗಂಟೆ ಪೂಜಾರಿಗಳೂ ಇರುತ್ತಾರೆ.
ರಾಕ್ಷಸನ ಸಂಹಾರದ ಬಳಿಕ ದ್ರೌಪದಿ ಮಾಯವಾದಾಗ ವೀರಕುಮಾರರು 'ತಾಯಿಯೇ ಬಾ' ಎಂದು ಕೂಗಿ ಕರೆಯುತ್ತಾರೆ. ಖಡ್ಗದಿಂದ ಎದೆಯ ಮೇಲೆ ಬಡಿದುಕೊಂಡು 'ಡಿಗ್ ಡೀ' ಎನ್ನುತ್ತಾರೆ. ಖಡ್ಗದಿಂದ ಎದೆಯ ಮೇಲೆ ಬಡಿದುಕೊಳ್ಳುವುದನ್ನು ಕರಗ ಉತ್ಸವದಲ್ಲಿ ಕಾಣಬಹುದು. ಅದನ್ನು 'ಅಲಗು ಸೇವೆ' ಎನ್ನುತ್ತಾರೆ.
ವೀರಕುಮಾರರು ಹೀಗೆ ರೋಧಿಸುವಾಗ ವಿಷ್ಣು ಪ್ರತ್ಯಕ್ಷನಾಗಿ, ದ್ರೌಪದಿಯ ಅವತಾರ ಇಲ್ಲಿಗೆ ಮುಗಿಯಿತು. ನೀವು ಇನ್ನು ಭೂಮಿ, ಸ್ತ್ರೀ ಮತ್ತು ಗೋವುಗಳ ರಕ್ಷಣೆ ಮಾಡಿ ಎನ್ನುತ್ತಾರೆ.
ಆದರೂ ವೀರಕುಮಾರರು ಹಠ ಬಿಡುವುದಿಲ್ಲ. ಆಗ ದ್ರೌಪದಿ ಪ್ರತ್ಯಕ್ಷಳಾಗಿ 'ನೀವೆಲ್ಲಾ ನನ್ನ ಮಕ್ಕಳು, ವಿಷ್ಣು ದೇವರು ಹೇಳಿದಂತೆ ಕೇಳಿ' ಎನ್ನುತ್ತಾಳೆ. 'ಇಲ್ಲ ತಾಯಿ ನೀನು ಬರಲೇಬೇಕು' ಎಂದು ವೀರಕುಮಾರರು ಪಟ್ಟು ಹಿಡಿದಾಗ, 'ಪ್ರತಿವರ್ಷ ಚೈತ್ರ ಮಾಸದ ಚಿತ್ತ ಪೂರ್ಣಿಮೆಯ ಹಿಂದಿನ ಮೂರು ದಿನ ನಿಮ್ಮೊಂದಿಗೆ ಇರುತ್ತೇನೆ' ಎಂದು ದ್ರೌಪದಿ ಭರವಸೆ ನೀಡುತ್ತಾಳೆ. ಹೀಗಾಗಿ ಚಿತ್ತ ಪೂರ್ಣಿಮೆಯ ದಿನ ಕರಗ ಉತ್ಸವ ನಡೆಸಲು ವೀರ ಕುಮಾರರು ಪ್ರಾರಂಭಿಸಿದರು.ಅದು ಅಂದಿನಿಂದ ಇಂದಿನವರೆಗೆ ನಡೆದುಕೊಂಡು ಬಂದಿದೆ ಎನ್ನುತ್ತಾರೆ ಚಲಕರಿ ನಾರಾಯಣಸ್ವಾಮಿ ಅವರು.
ಶ್ರದ್ಧೆ, ಶುದ್ಧಿ, ಭಕ್ತಿ
ಕರಗ ಉತ್ಸವ ಎಂದರೆ ಸುಲಭದ ಮಾತಲ್ಲ. ಕರಗ ಹೊರುವ ಪೂಜಾರಿ ಮತ್ತು ವೀರ ಕುಮಾರರು 11 ದಿನಗಳ ಕಾಲ ಕಠಿಣ ವ್ರತದಲ್ಲಿ ತೊಡಬೇಕು. ಮದ್ಯ, ಮಾಂಸ ಆಹಾರ ಸೇವನೆ, ಧೂಮಪಾನದಿಂದ ದೂರ ಇರಬೇಕು.
ಈ ವಹ್ನಿಕುಲ ಕ್ಷತ್ರಿಯರು ಬೆಂಗಳೂರಿಗೆ ಬಂದಿದ್ದಕ್ಕೂ ಒಂದು ಕಥೆ ಇದೆ. ಅಭಿಮನ್ಯುವಿನ ಮಗ ಜನಮೇ ಜಯನ ಕೈಗೆ ರಾಜ್ಯಭಾರ ಒಪ್ಪಿಸಿ ಪಾಂಡವರು ಸ್ವರ್ಗದ ಕಡೆ ಹೋಗುತ್ತಾರೆ. ದ್ರೌಪದಿ ಆದೇಶದಂತೆ ವೀರುಕುಮಾರರು ಈ ಜನಮೇಜಯನ ಬಳಿ ಸೇರಿಕೊಳ್ಳುತ್ತಾರೆ. ಈಗ ಬನ್ನೇರುಘಟ್ಟ ಎಂದು ಕರೆಯುವ ಪ್ರದೇಶ ಆಗ ವನ್ನೇರು ಘಟ್ಟ ಆಗಿತ್ತಂತೆ. ಅಲ್ಲಿ ಏಳು ಸುತ್ತಿನ ಕೋಟೆ ಮಾದರಿಯಲ್ಲಿ ಪ್ರಾಕಾರ ಇತ್ತಂತೆ. ಈಗಲೂ ಇದೆ. ಈ ಕೋಟೆ ಬಳಿ ಇದ್ದ ಸರೋವರದಲ್ಲಿ ಸ್ನಾನ ಮಾಡಿದರೆ ಕಾಯಿಲೆಗಳು ವಾಸಿ ಆಗುತ್ತವೆ ಎಂದಾಗ ನಾನಾ ಕಾಯಿಲೆಗಳಿಂದ ನರಳುತ್ತಿದ್ದ ಜನಮೇಜಯ ವನ್ನೇರುಘಟ್ಟಕ್ಕೆ ಬಂದು ಸರೋವರದಲ್ಲಿ ಸ್ನಾನ ಮಾಡಿದನಂತೆ. ಆಗ ಆತನ ಕಾಯಿಲೆಗಳು ವಾಸಿ ಆಯಿತಂತೆ.
ಜತೆಗಿದ್ದ ವೀರುಕಮಾರರಿಗೆ ನೀವು ಇಲ್ಲೇ ಇದ್ದು, ಭೂಸಂರಕ್ಷಣೆ, ಸ್ತ್ರೀ ಮತ್ತು ಗೋವುಗಳ ರಕ್ಷಣೆ ಮಾಡಿ ಎಂದು ಜನಮೇಜಯ ಆದೇಶಿಸಿದನಂತೆ. ಹೀಗಾಗಿ ವೀರುಕುಮಾರರು ಅಲ್ಲಿ ನೆಲೆ ನಿಂತರು. ಬಳಿಕ ನಾನಾ ಪ್ರದೇಶಗಳಿಗೆ ವಲಸೆ ಹೋದರು. ಕೆಲವರು ಬೆಂಗಳೂರಿಗೂ ಬಂದರು. ಅವರು ನೆಲೆ ನಿಂತ ಪ್ರದೇಶ ತಿಗಳರ ಪೇಟೆ ಆಯಿತು. ಈಗ ಧರ್ಮರಾಯಸ್ವಾಮಿ ದೇವಾಲಯ ಇರುವುದು ಮತ್ತು ಕರಗ ಉತ್ಸವ ನಡೆಯುವುದು ಆಲ್ಲಿಯೇ.
ಬೇಸಾಯವೇ ಕಸುಬು
ಸೈನಿಕರಾಗಿ ಹೆಸರು ಮಾಡಿದ ವಹ್ನಿಕುಲ ಕ್ಷತ್ರಿಯರು ಮುಂದೆ ಕೃಷಿ ಮತ್ತು ತೋಟಗಾರಿಕೆಯನ್ನು ಕಸುಬನ್ನಾಗಿ ಮಾಡಿಕೊಂಡರು. ಅದರಲ್ಲಿ ಅವರು ಎಷ್ಟರ ಮಟ್ಟಿಗೆ ಪ್ರಾವೀಣ್ಯತೆ ಪಡೆದುಕೊಂಡರು ಎಂದರೆ ಯಾವುದೇ ಗಿಡ ನೋಡಿ ಇದರಲ್ಲಿ ಇಂಥದ್ದೇ ಬಣ್ಣದ ಹೂವು ಬರುತ್ತದೆ ಎಂದು ಹೇಳುತ್ತಿದ್ದರಂತೆ. ಅವರ ಬೇಸಾಯಕ್ಕೆ ಅನುಕೂಲವಾಗಲಿ ಎಂಬ ಕಾರಣಕ್ಕಾಗಿಯೇ ನಾಡಪ್ರಭು ಕೆಂಪೇಗೌಡರು ಬೆಂಗಳೂರಿನಲ್ಲಿ 71 ಕೆರೆಗಳನ್ನು ನಿರ್ಮಿಸಿದರು ಎಂದು ಹೇಳಲಾಗುತ್ತದೆ. ಲಾಲ್ಬಾಗ್ ನಿರ್ಮಾಣಕ್ಕಾಗಿ ಟಿಪ್ಪೂಸುಲ್ತಾನ್ ತಿಗಳರನ್ನು ಕರೆತಂದ ಎಂಬ ಮಾತೂ ಇದೆ.
ವಹ್ನಿಕುಲ ಕ್ಷತ್ರಿಯರಿಗೆ ಗರಡಿ ಮನೆಗಳಲ್ಲಿ ಕಸರತ್ತು ನಡೆಸುವುದು ಎಂದರೆ ಬಲು ಇಷ್ಟವಾಗಿತ್ತು. ಹೀಗಾಗಿಯೇ ತಿಗಳರು ನೆಲೆಸಿರುವ ಪ್ರದೇಶಗಳಲ್ಲಿ ಧರ್ಮರಾಯಸ್ವಾಮಿ ದೇವಾಲಯದ ಜೊತೆಗೆ ಗರಡಿ ಮನೆಯೂ ನಿರ್ಮಾಣ ಆಗುತ್ತಿತ್ತು.
ಬ್ರಿಟೀಷರ ಪರೀಕ್ಷೆ
ವೀರಕುಮಾರರು ಕರಗ ಉತ್ಸವ ಸಂದರ್ಭದಲ್ಲಿ ಖಡ್ಗದಿಂದ ಎದೆಗೆ ಬಡಿದುಕೊಳ್ಳುವಾಗ ರಕ್ತ ಬರುವುದಿಲ್ಲವೇ ? ಎಂಬ ಪ್ರಶ್ನೆ ಮೂಡಬಹುದು. ಶ್ರದ್ಧಾ ಭಕ್ತಿಯಿಂದ ಅಲಗು ಸೇವೆ ಮಾಡಿದರೆ ರಕ್ತ ಬರುವುದಿಲ್ಲ. ಇದನ್ನು ಪರೀಕ್ಷಿಸಲು ಬಂದ ಒಬ್ಬ ಬ್ರಿಟಿಷ್ ಅಧಿಕಾರಿ ಕಣ್ಣು ಕಳೆದುಕೊಂಡನಂತೆ. ಆಗ ತಿಗಳರು ಗಂಧ ತಿಕ್ಕಿದಾಗ ದೃಷ್ಟಿ ಬಂತಂತೆ. ಇದೇ ಕಾರಣಕ್ಕೆ ಬ್ರಿಟನ್ನ ಮ್ಯೂಸಿಯಂನಲ್ಲಿ ಕರಗದ ಪ್ರತಿಕೃತಿ ಇದೆ ಎನ್ನುತ್ತಾರೆ ಸಮಾಜದ ಮುಖಂಡರು.
ರಾಜಕೀಯ ಪ್ರಾತಿನಿಧ್ಯ ಇಲ್ಲ
ನಮ್ಮ ಸಮಾಜದ ಜನಸಂಖ್ಯೆ ರಾಜ್ಯದಲ್ಲಿ 30 ಲಕ್ಷಕ್ಕೂ ಅಧಿಕ. ಆದರೆ, ರಾಜಕೀಯ ಪ್ರಾನಿಧ್ಯವೇ ಸಿಕ್ಕಿಲ್ಲ. ಎಲ್ಲ ಪಕ್ಷಗಳೂ ನಮ್ಮನ್ನು ಕಡೆಗಣಿಸಿವೆ. ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಅಷ್ಟೇನೂ ಮುಂದುವರಿಯದ ಸಮಾಜವನ್ನು ರಾಜಕೀಯ ಪಕ್ಷಗಳು ನಿರ್ಲಕ್ಷ್ಯ ಮಾಡಿರುವುದು ಸರಿಯಲ್ಲ ಎನ್ನುತ್ತಾರೆ ಧರ್ಮರಾಯಸ್ವಾಮಿ ದೇವಾಲಯದ ನಿಕಟಪೂರ್ವ ಧರ್ಮದರ್ಶಿ ಮತ್ತು ವೀರಕುಮಾರರ ಸಂಘದ ಉಪಾಧ್ಯಕ್ಷರೂ ಆಗಿರುವ ಚಲಕರಿ ನಾರಾಯಣಸ್ವಾಮಿ ಅವರು.
- ಕೆ.ವಿ.ಪ್ರಭಾಕರ
prabhukolar@yahoo.com