ಸೆಕ್ಯುಲರಿಸಂ ಹೆಸರಲ್ಲಿ ಇದ್ಯಾವ ಟೊಪ್ಪಿ ಹಾಕಿಸುತ್ತಿದ್ದಾರೆ ನಿತೀಶ್?
ಪ್ರಧಾನಿ ಹುದ್ದೆಗೆ ನಿತೀಶ್ ಕುಮಾರ್ ಅವರೇನಾದರೂ ಆಕಾಂಕ್ಷೆ ಹೊಂದಿದ್ದರೆ ಅದರಲ್ಲಿ ಅಸಹಜವಾದದ್ದೇನೂ ಇಲ್ಲ. ನರೇಂದ್ರ ಮೋದಿ ಎನ್ಡಿಎದ ಪ್ರಧಾನಿ ಅಭ್ಯರ್ಥಿ ಆಗುವಂತಿಲ್ಲ ಎಂಬ ಆಕ್ಷೇಪ ಸಲ್ಲಿಸುವುದಕ್ಕೂ ಅವರು ಸ್ವತಂತ್ರರಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ ಬಿಜೆಪಿಯು ಈ ಷರತ್ತನ್ನು ಒಪ್ಪಿಕೊಳ್ಳುವುದು ಅಥವಾ ಬಿಡುವುದು ಅದರ ಹಕ್ಕಾಗುತ್ತದೆ. ತಮ್ಮ ಷರತ್ತಿಗೆ ಮನ್ನಣೆ ಸಿಗದಿದ್ದಾಗ ಬೇರೆ ಆಯ್ಕೆಗಳತ್ತ ಗಮನ ಹರಿಸುವುದಕ್ಕೂ ನಿತೀಶ್ ಕುಮಾರ್ ಸ್ವತಂತ್ರರಾಗಿರುತ್ತಾರೆ. ಆದರೆ ಒಪ್ಪಿಕೊಳ್ಳುವುದಕ್ಕೆ ಸಾಧ್ಯವಿರದ ಒಂದು ಸಂಗತಿ ಎಂದರೆ ಸೆಕ್ಯುಲರಿಸಂ ಹೆಸರಲ್ಲಿ ಡಂಬಾಚಾರದ ಬೇಡಿಕೆಗಳನ್ನು ಇಡುವುದು.
ಇತ್ತೀಚೆಗೆ ನಿತೀಶ್ ಕುಮಾರ್ ಅವರು 'ಟೋಪಿ ಮತ್ತು ತಿಲಕ'ದ ಉಲ್ಲೇಖ ಕೊಟ್ಟರು. ಒಂದು ಮುಸ್ಲಿಂ ಮತವನ್ನು ಪ್ರತಿನಿಧಿಸುವುದಾಗಿದ್ದರೆ ಇನ್ನೊಂದು ಹಿಂದು ಧರ್ಮವನ್ನು ಸಂಕೇತಿಸುತ್ತದೆ. 'ಕೆಲವೊಮ್ಮೆ ನೀವು ಟೋಪಿ ಧರಿಸಬೇಕಾಗುತ್ತದೆ, ಇನ್ನು ಕೆಲವೊಮ್ಮೆ ತಿಲಕ ಇಟ್ಟುಕೊಳ್ಳಬೇಕಾಗುತ್ತದೆ' ಎಂಬುದು ಅವರ ವಾಗ್ಬಾಣ. ಈ ಬಾಣ ಗುರಿಯಾಗಿರುವುದು ಮೋದಿ ಕಡೆಗೆ. 2011ರ 'ಸದ್ಭಾವನಾ' ಉಪವಾಸದ ವೇಳೆ ಮುಸ್ಲಿಂ ಟೊಪ್ಪಿಗೆಯನ್ನು ಮೋದಿಯವರಿಗೆ ಯಾರೋ ನೀಡಿದಾಗ ಅವರದನ್ನು ಧರಿಸುವುದಕ್ಕೆ ನಿರಾಕರಿಸಿದರು ಎಂದು ವರದಿಯಾಗಿತ್ತು. ಪರೋಕ್ಷವಾಗಿ ಅದನ್ನೇ ಅಗೆದು ತೆಗೆದರು ನಿತೀಶ್ ಕುಮಾರ್.
'ಟೊಪ್ಪಿ-ತಿಲಕ' ವಿಚಾರಧಾರೆಯೇ ಅತ್ಯಂತ ದಯನೀಯವಾದದ್ದು. ಸ್ವಾತಂತ್ರ್ಯದ 66ನೇ ವರ್ಷದಲ್ಲಿ ನಿಂತುಕೊಂಡೂ ನಮಗೆ ಸೆಕ್ಯುಲರಿಸಂ ವ್ಯಾಖ್ಯಾನವನ್ನು ಕೇವಲ ತೋರ್ಪಡಿಸುವಿಕೆಗೆ ಸೀಮಿತಗೊಳಿಸಿದ್ದೇವೆ. ಅಂದರೆ ನಿಜಕ್ಕೂ ಚರ್ಚೆಗೆ ಅಗತ್ಯವಿರುವ ವಿಷಯಗಳ ಬಗ್ಗೆ ಗಮನ ಹರಿಸದಿದ್ದರೂ ಪರವಾಗಿಲ್ಲ, ಒಬ್ಬ 'ಮುಸ್ಲಿಂ ಟೋಪಿ' ಹಾಕುತ್ತಾನೆಂದರೆ ಆ ಸಮುದಾಯದವರು ಆತನನ್ನು ನಂಬಿ ಬಿಡುತ್ತಾರೆ ಎಂದೇ? ಸ್ವತಂತ್ರ ಭಾರತದಲ್ಲಿ ನಮ್ಮ ನೇತಾರರು ಮಾಡುತ್ತ ಬಂದಿದ್ದು ಇಂಥ ತೋರ್ಪಡಿಸುವಿಕೆಯ ವೈಭೋಗಗಳನ್ನೇ: ಅಲ್ಪಸಂಖ್ಯಾತರಿಗೆ ಅನುಕೂಲ ಒದಗಿಸುವ ನಾಟಕ ಆಡುತ್ತ ವಾಸ್ತವದಲ್ಲಿ ಅವರಿಗೆ ಸಹಾಯವಾಗುವಂಥ ಯಾವ ಕಾರ್ಯಗಳನ್ನೂ ಮಾಡದೇ ಇರುವುದು. ಅಲ್ಪಸಂಖ್ಯಾತರ ಸುತ್ತ ಅವರೆಲ್ಲ ಯಾವ ನಿಜ ಸೌಲಭ್ಯಗಳೂ ತಲುಪದಂಥ ಕೋಟೆಯೊಂದನ್ನು ಕಟ್ಟುತ್ತ ಬಂದಿದ್ದಾರೆ. ಅಂಥವರ ಸಾಲಿಗೆ ಇದೀಗ ನಿತೀಶ್ಕುಮಾರ್ ಲಗುಬಗೆಯಿಂದ ಸೇರಿಕೊಂಡಂತಾಗಿದೆ.
ಇಷ್ಟಕ್ಕೂ ನರೇಂದ್ರ ಮೋದಿಯವರನ್ನು ವ್ಯಂಗ್ಯ ಮಾಡುವುದಕ್ಕೆ ಹೋಗಿ ಈಗ ನಿತೀಶ್ ಕುಮಾರ್ ಅವರೇ ಜೋಕ್ಗೆ ಆಹಾರವಾಗಿದ್ದಾರೆ. 'ಯಾರಿಗಾದರೂ ಟೋಪಿ ಹಾಕಿಸುವುದು' ಎಂಬುದರ ಅರ್ಥವೇನು ಎಂಬುದು ಎಲ್ಲರಿಗೂ ತಿಳಿದೇ ಇದೆ. ಯಾರನ್ನಾದರೂ ಮೂರ್ಖರನ್ನಾಗಿಸುವುದು ಎಂದರ್ಥ. ಸೆಕ್ಯುಲರಿಸಂ ಹೆಸರಲ್ಲಿ ನಮ್ಮ ರಾಜಕಾರಣಿಗಳು ಮುಸ್ಲಿಮರಿಗೆ ಮಾಡುತ್ತ ಬಂದಿರುವುದು ಈ ಟೋಪಿ ಹಾಕುವ ಪ್ರಕ್ರಿಯೆಯನ್ನೇ. ಉತ್ತಮ ಶಿಕ್ಷಣ, ಒಳ್ಳೆಯ ಉದ್ಯೋಗ, ಮುಖ್ಯವಾಹಿನಿ ಜತೆಗೆ ಬೆಸೆಯುವಿಕೆ ಏನನ್ನೂ ಮಾಡದೇ ಕೇವಲ ತೋರ್ಪಡಿಸುವಿಕೆಯ ಪೌರುಷವನ್ನಷ್ಟೇ ಮೆರೆದು ಟೋಪಿ ಹಾಕಿಕೊಂಡೇ ಬಂದರು.
ಈ 'ಟೋಪಿ-ತಿಲಕ' ರೂಪಕವು ಸೆಕ್ಯುಲರಿಸಮ್ಗೆ ಎಂಥ ಆಘಾತವನ್ನು ಕೊಡುತ್ತಿದೆ ನೋಡಿ. ಸೆಕ್ಯುಲರಿಸಂ ಎಂಬುದು ತೋರ್ಪಡಿಸುವಿಕೆ ಆಗಬಾರದು ಎಂಬುದು ಮೊದಲನೇ ಕಾಳಜಿ. ಅಷ್ಟಾಗಿಯೂ ಈ ತೋರ್ಪಡಿಸುವಿಕೆಯಲ್ಲೂ ಏಕಮುಖವಿರಬಾರದು. ಈಗ ಹೇಳಿ, ಅವೆಷ್ಟು ಮಂದಿ ಅಲ್ಪಸಂಖ್ಯಾತ ನಾಯಕರು ತಮ್ಮ ಹಣೆ ಮೇಲೆ ತಿಲಕವನ್ನು ಜಳಪಿಸುತ್ತಾರೆ? ಒಮರ್ ಅಬ್ದುಲ್ಲಾ ಅವರಾಗಲೀ ಮಾಯಾವತಿ ಅವರಾಗಲೀ 'ತಿಲಕ' ಭೂಷಿತರಾಗಿ ಕಾಣಿಸಿದ್ದು ಇದೆಯಾ? ಕೇರಳದ ಯಾವ ಅಲ್ಪಸಂಖ್ಯಾತ ನಾಯಕ ಇಂಥ ತೋರ್ಪಡಿಕೆಯೊಂದಿಗೆ ಇನ್ನೊಂದು ಸಮುದಾಯವನ್ನು ಸಂತುಷ್ಟಿಗೊಳಿಸುವುದಕ್ಕೆ ನೋಡಿದ ಉದಾಹರಣೆ ಸಿಗುತ್ತದೆ? ಹಿಂದು ನಾಯಕ ಮಾತ್ರವೇ ತನ್ನ ಸೆಕ್ಯುಲರಿಸಂ ವಿಶ್ವಾಸಾರ್ಹತೆ ತೋರಿಸುವುದಕ್ಕೆ ಟೋಪಿ ಧರಿಸಿ ಪೋಸು ಕೊಡಬೇಕೇ?
ಎರಡನೆಯದಾಗಿ, ಐಡೆಂಟಿಟಿ ಎನ್ನುವುದು ವೈಯಕ್ತಿಕ ಆಯ್ಕೆಯಾಗಿರುತ್ತದೆ. ಅಮರ್ತ್ಯಸೇನ್ ಎಚ್ಚರಿಸುವಂತೆ, ಟೋಪಿ ಧರಿಸುವ ಮೂಲಕವೇ ಸುಭಗತನ ತೋರಿಸುವ ಅವಶ್ಯಕತೆ ಮೋದಿಗೇನಿದೆ? ಮೋದಿ ಆ ಕ್ಷಣಕ್ಕೆ ಮುಸ್ಲಿಂ ಟೊಪ್ಪಿ ಧರಿಸಿಯೇಬಿಟ್ಟಿದ್ದರು ಎಂದಿಟ್ಟುಕೊಳ್ಳೋಣ. ಅದೋಂದೇ ಕಾರಣಕ್ಕೆ ಅವರು ಸೆಕ್ಯುಲರ್ ಎನ್ನಿಸಿಕೊಳ್ಳುತ್ತಿದ್ದರೇ? ಅವರ ಐಡೆಂಟಿಟಿಯನ್ನು ಅವರ ಆಯ್ಕೆಗೆ ತಕ್ಕಂತೆ ಕಟ್ಟಿಕೊಳ್ಳುವುದಕ್ಕೆ ನಾವು ಬಿಡಬಾರದೇಕೆ? ಅವರ ವೈಯಕ್ತಿಕ ಬದ್ಧತೆ ಏನೇ ಇದ್ದರೂ ಎಲ್ಲ ಐಡೆಂಟಿಟಿಗಳನ್ನೂ ಸ್ವೀಕರಿಸುವ ವ್ಯಕ್ತಿಯಾಗಿ ನಟಿಸುವ ಅನಿವಾರ್ಯತೆಯನ್ನು ಏಕೆ ಒಡ್ಡಬೇಕು?
ಮೂರನೆಯದಾಗಿ ಸೆಕ್ಯುಲರಿಸಂ ಎಂಬುದು ಅಸಹಿಷ್ಣು ಆಗಿರುವುದಿಲ್ಲ. ಸರ್ಕಾರದ ನೀತಿಗಳಲ್ಲಿ ಯಾವುದೇ ಸಮುದಾಯದ ಕುರಿತು ತಾರತಮ್ಯ ಮನೋಭಾವ ಆಚರಿಸದಿರುವಂತೆ ಅದು ನಿರ್ದೇಶಿಸುತ್ತದೆ. ನಿತೀಶ್ ಕುಮಾರ್ ವ್ಯಾಖ್ಯಾನವನ್ನೇ ಒಪ್ಪಿಕೊಳ್ಳುವುದಾರೆ ನಾವು ಫ್ರೆಂಚರನ್ನು ಕೋಮುವಾದಿಗಳು ಎಂದು ಕರೆಯಬೇಕಾಗುತ್ತದೆ. ಏಕೆಂದರೆ ಅವರು ಸಾರ್ವಜನಿಕ ಜೀವನದಲ್ಲಿ ಕ್ರಾಸ್, ತಲೆಗವಸು, ರುಮಾಲು ಎಲ್ಲವನ್ನೂ ನಿಷೇಧಿಸಿಬಿಟ್ಟಿದ್ದಾರೆ. ಯಾವ ಕೋಮಿನ ಚಿಹ್ನೆಯೂ ಬಿಂಬಿತವಾಗುವಂತೆಯೇ ಇಲ್ಲ.
ನಾಲ್ಕನೆಯದಾಗಿ, ನಿತೀಶ್ ಕುಮಾರ್ ಅವರ ಸೆಕ್ಯುಲರಿಸಂ ನಿಜಕ್ಕೂ ಗಾಢವಾದ್ದದ್ದೇ? ನಿತೀಶರಿಗೆ ಮೋದಿ ಇಷ್ಟವಾಗುವುದಿಲ್ಲ, ಆದರೆ ಆಡ್ವಾಣಿ ಅವರೊಂದಿಗೆ ಸಂಬಂಧ ಚೆನ್ನಾಗಿದೆ. ವಾಸ್ತವದಲ್ಲಿ ಹಿಂದುತ್ವದ ಅಲೆಯ ಪ್ರವರ್ತಕರೆ ಆಡ್ವಾಣಿ. ಆ ಅಲೆ ಕೊನೆಗೆ ಬಾಬ್ರಿ ಮಸೀದಿಯನ್ನು ಉರುಳಿಸುವುದರಲ್ಲಿ ಸಮಾಪ್ತಿಯಾಯಿತು.ಆಡ್ವಾಣಿಯವರ ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೆ ಹಸಿರು ನಿಶಾನೆ ಬೀಸುವುದಕ್ಕೆ ನಿತೀಶರೇ ಮುಂಚೂಣಿಯಲ್ಲಿದ್ದರು. ಅಂದಮೇಲೆ ಮೋದಿ ಅವರನ್ನು ಮಾತ್ರ 'ಕೋಮುವಾದಿ' ಎಂದು ಗುರಿ ಮಾಡುತ್ತಿರುವುದರ ಹಿದೆ ರಾಜಕೀಯ ಮಹಾತ್ವಾಕಾಂಕ್ಷೆ ಅಲ್ಲದೇ ಇನ್ನೇನು ತಾನೇ ಇರುವುದಕ್ಕೆ ಸಾಧ್ಯ?
ಐದನೆಯದಾಗಿ, ಭಾರತದಲ್ಲಿ ಅಸಹಿಷ್ಣುತೆಯನ್ನು ಕೇವಲ ಹಿಂದು ಕೋಮುವಾದಕ್ಕೆ ಸಮೀಕರಿಸಿ ವಿವರಿಸಲಾಗುತ್ತದೆ. ಮೇಲ್ವರ್ಗದವರ ಅಸಹಿಷ್ಣುತೆಯನ್ನು ಖಂಡಿಸುವ ಅವಕಾಶ ಇಲ್ಲದ ಕಡೆಯಲ್ಲಿ ಜಾತಿ ಆಧಾರಿತ ಕೋಮುವಾದವನ್ನೂ ಪರಿಗಣಿಸಲಾಗುವುದಿಲ್ಲ. ಹೀಗಾಗಿ ಕಾಂಗ್ರೆಸ್ ಪಕ್ಷವು ಇಂಡಿಯನ್ ಮುಸ್ಲಿಂ ಲೀಗ್, ಎಮ್ಐಎಮ್ನಂಥ ಕಟ್ಟರ್ ಮುಸ್ಲಿಂ ಪಕ್ಷಗಳೊಂದಿಗೆ ಕೈಜೋಡಿಸಿದರೂ ಕೋಮುವಾದಿ ಎಂದು ಅನ್ನಿಸಿಕೊಳ್ಳುವುದಿಲ್ಲ. ಎಲ್ಲ ಬಗೆಯ ಮುಲ್ಲಾಗಳೊಂದಿಗೆ ಮೈತ್ರಿ ಮಾಡಿಕೊಂಡು ಜಾತಿ ಆಧಾರದಲ್ಲಿ ಯಾದವರನ್ನು ಮತಬ್ಯಾಂಕ್ ಮಾಡಿಕೊಂಡಿರುವ ಸಮಾಜವಾದಿ ಪಕ್ಷವು ಕೋಮುವಾದಿ ಎಂದೆನಿಸಿಕೊಳ್ಳುವುದಿಲ್ಲ. ತಮಿಳುನಾಡಿನಲ್ಲಿ ದಲಿತರನ್ನು ತುಳಿಯುವ ಡಿಎಂಕೆ ಕೋಮುವಾದಿ ಎನಿಸಿಕೊಳ್ಳುವುದಿಲ್ಲ. ಕೇರಳದಲ್ಲಿರುವ ಪ್ರತಿ ಪಕ್ಷವೂ ಮುಸ್ಲಿಂ, ಕ್ರೈಸ್ತ, ನಾಯರ್, ಏಳವ ಎಂದೆಲ್ಲ ಬೇರೆ ಬೇರೆ ಸಮುದಾಯಗಳನ್ನು ಪ್ರತಿನಿಧಿಸುತ್ತದೆ. ಹಾಗಿದ್ದೂ ಇವು ಕೋಮುವಾದಿ ಮೈತ್ರಿಗಳೆನಿಸಿಕೊಳ್ಳುವುದಿಲ್ಲ. ಪಶ್ಚಿಮ ಬಂಗಾಳದ ನಂದಿಗ್ರಾಮದಲ್ಲಿ ಮುಸ್ಲಿಮರನ್ನು ಕೊಂಡ ಸಿಪಿಎಂ ಕಮ್ಯುನಲ್ ಎನಿಸಿಕೊಳ್ಳುವುದಿಲ್ಲ. ನಿತೀಶ್ ಕುಮಾರ್ ಇಂಥ ಎಲ್ಲ ಅವಿವೇಕಗಳಿಗೆ ತಮ್ಮ ಅಂಕಿತ ಒತ್ತಿದ್ದಾರೆ.
ಇನ್ನು, ಮೋದಿಯವರದ್ದು ಸರ್ವಾಧಿಕಾರಿ ಧೋರಣೆ ಎಂದು ನಿತೀಶರು ಟೀಕಿಸಿದರು. ಆದರೆ ಬಿಹಾರದಲ್ಲಿ ಒನ್ಮ್ಯಾನ್ ಷೋ ನಡೆಸುತ್ತಿದ್ದಾರೆ ಎಂದು ಖುದ್ದು ನಿತೀಶರ ವಿರುದ್ಧ ಅಸಮಾಧಾನಗಳಿವೆ. ಅಲ್ಲಿ ಪತ್ರಿಕಾ ಸ್ವಾತಂತ್ರ್ಯದ ಹರಣವಾಗಿದೆ ಎಂದು ಮಾರ್ಕಂಡೇಯ ಕಾಟ್ಜು ಬೊಬ್ಬೆ ಹಾಕಿದ್ದು ನೆನಪಿರಬಹುದು. ಅಲ್ಲದೇ ಇಂಡಿಯನ್ ಎಕ್ಸ್ಪ್ರೆಸ್ ವರದಿ ಪ್ರಕಾರ ಜೆಡಿಯುದಲ್ಲೇ ನಿತೀಶರ ಅತಿ ಅಧಿಕಾರ ವ್ಯಾಪ್ತಿಗೆ ಹಲವರು ಬೇಸತ್ತಿದ್ದಾರೆ. ವಾಸ್ತವ ಏನೆಂದರೆ ಭಾರತದಲ್ಲಿ ಸಂಸ್ಥೆಗಳಿಗಿಂತ ವ್ಯಕ್ತಿಗಳೇ ಹೆಚ್ಚಿನ ಅಧಿಕಾರ ಹೊಂದಿರುತ್ತಾರೆ. ಈ ವಿಕ್ಷಿಪ್ತ ವಿದ್ಯಮಾನ ಮೋದಿಗೆ ಮಾತ್ರ ಸೀಮಿತವಾಗಿಲ್ಲ. ಜೆ. ಜಯಲಲಿತಾ, ಮಮತಾ ಬ್ಯಾನರ್ಜಿ, ಸೋನಿಯಾ ಗಾಂಧಿ, ಪ್ರಕಾಶ್ ಕಾರಟ್, ನವೀನ್ ಪಟ್ನಾಯಕ್, ಕರುಣಾನಿಧಿ, ಮಾಯಾವತಿ, ಲಾಲು ಪ್ರಸಾದ್, ರಾಜ್, ಉದ್ಧವ್ ಠಾಕ್ರೆ ಇವರ್ಯಾರೂ ಪಕ್ಷಗಳ ಆಂತರಿಕ ಪ್ರಜಾಪ್ರಭುತ್ವ ಪದ್ಧತಿಗೆ ಉದಾಹರಣೆ ಆಗುವುದಿಲ್ಲ.
ಈ ಎಲ್ಲ ಹಿನ್ನೆಲೆಯಲ್ಲಿ ನಿತೀಶರ ಸೆಕ್ಯುಲರಿಸಂ ಪ್ರವಚನ ಅವರ ರಾಜಕೀಯ ಲೆಕ್ಕಾಚಾರ, ಆಕಾಂಕ್ಷೆ ಹಾಗೂ ಸನ್ನಿವೇಶಗಳನ್ನು ಬಿಂಬಿಸುವುದೇ ಹೊರತು ಭಾರತದ ಸೆಕ್ಯುಲರಿಸಂ ತತ್ವವನ್ನು ಯಾವ ರೀತಿಯಲ್ಲೂ ಬಲಪಡಿಸುವುದಿಲ್ಲ. ಬದಲಿಗೆ ಆ ಪರಿಕಲ್ಪನೆಯನ್ನೇ ಗೇಲಿ ಮಾಡುತ್ತದೆ ಅಷ್ಟೇ!
- ಆರ್. ಜಗನ್ನಾಥನ್
anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

