ಅದೇಕೆ ಎಂದು ಪ್ರಶ್ನಿಸಿದರೆ ಉತ್ತರ ಗೊತ್ತಿಲ್ಲ. ಬಹಳಷ್ಟು ಜನ ಹೀಗೆ ಕೇಳಿಯೂ ಇದ್ದಾರೆ- ನೀವೇಕೆ ನೀರಿನ ಬಗ್ಗೆಯೇ ಬರೆಯುವುದು? ಬೇರೆಯದನ್ನು ಬರೆಯಲು ಬರುವುದಿಲ್ಲ. ಅದಕ್ಕೇ ನೀರಿನ ಬಗ್ಗೆ ಬರೆಯುತ್ತೇನೆ ಅಂಥ 'ಕುಶಾಲು' ತೋಪು ಹಾರಿಸಿದ್ದಿದೆ. ಹಾಗೆಂದು ನೀರಿನ ಬಗ್ಗೆ ಬರೆಯಲು ಬರುತ್ತದೆ ಎಂದೇನು ಅಲ್ಲ ಬಿಡಿ. ಆದರೂ ಮೊದಲಿಂದಲೂ ನನಗೆ ನೀರನ್ನು ಕಂಡರೆ ಅದೇನೋ ಒಂದು ರೀತಿಯಲ್ಲಿ ಹೇಳಿಕೊಳ್ಳಲಾಗದ ಪ್ರೀತಿ. ಮೊದಲ ಮಳೆ ಬಿದ್ದ ಕ್ಷಣಗಳನ್ನು ಯಾವತ್ತಿಗೂ ನಾನು ಮಿಸ್ ಮಾಡಿಕೊಳ್ಳಲೇ ಇಲ್ಲ. ಅದರಲ್ಲಿ ಮನದಣಿಯೆ ನೆನೆದು, ಕುಣಿದು ಕುಪ್ಪಳಿಸಿದ್ದೇನೆ. ಈ ಬೆಂಗಳೂರಿನ ಮಳೆ ಒಂಥರಾ ವಿಚಿತ್ರ. ಅದು ಕಾದು ಕುಳಿತಿರುವಂತೆ ಎಲ್ಲರೂ ಆಫೀಸ್ ಮುಗಿಸಿ ಮನೆಗೆ ಹೊರಟಾಗಲೇ ರಚ್ಚೆ ಹಿಡಿದು ಹೊಯ್ಯಲಾರಂಭಿಸುತ್ತದೆ. ನಮ್ಮ ಜನರಿಗೂ ಮಳೆಗೂ ಆಗಿಬರಲಿಕ್ಕಿಲ್ಲ. ಅತ್ತ ಮಳೆ, ಇತ್ತ ಗೊಣಗಾಟ ಎರಡೂ ಸುರಿಯುತ್ತಿರುವಾಗಲೂ ರಸ್ತೆಯಲ್ಲಿ ಡ್ರೈನೇಜ್ ನೀರು ಹಾಗೂ ವಾಹನಗಳು ಎರಡೂ ಜಾಮ್ ಆಗಿರುತ್ತವೆ. ಆಗ ರಸ್ತೆಯಲ್ಲಿ ಬೈಕ್ ಸವಾರಿ ಮಾಡುತ್ತ, ಮೈಪೂರ ತೊಪ್ಪೆ ಮಾಡಿಕೊಂಡು ಮೇಲಿಂದ ಸುರಿಯುವ ಹನಿಗೆ ಮಧ್ಯೆಮಧ್ಯೆ ನಾಲಗೆ ಒಡ್ಡುತ್ತಾ ಮನೆಯತ್ತ ಸಾಗುವುದು ನನಗೊಂಥರಾ ಖುಷಿ ಕೊಡುತ್ತೆ. ಸುರಿಯುವ ಧಾರಾಕಾರ ಮಳೆಯಲ್ಲೇ ಮನೆಗೆ ಹೊರಟುಬಿಡುವ ನನ್ನ ನೋಡಿ ಸಹೋದ್ಯೋಗಿಗಳು ವಿಚಿತ್ರ ಪ್ರಾಣಿಯಂತೆ ನೋಡುವುದು ಗಮನಕ್ಕೆ ಬಂದಿಲ್ಲವಂತೇನಿಲ್ಲ. ಆದರೂ ಹಾಗೆ ನೆನೆಯುವುದು ನನ್ನಲ್ಲಿ ಅಕಾರಣ ಸಂಭ್ರಮ ಹುಟ್ಟಿಸುತ್ತೆ. ಅಂಥ ನನ್ನ ಮನಸ್ಸು ಬೇಸಿಗೆ, ಚಳಿಗೆ ಮಾತ್ರ ಮುರುಟಿ ಹೋಗುತ್ತದೆ.
ನನ್ನ ದೃಷ್ಟಿಯಲ್ಲಿ ನೀರೆಂದರೆ ಚೇತನ, ಅದು ಪುಳಕ, ಅದು ಸಮೃದ್ಧಿ. ಎಲ್ಲಕ್ಕಿಂತ ಹೆಚ್ಚಾಗಿ ಅದೇ ಬದುಕು. ಹೀಗಾಗಿ ನನಗದು ಪ್ರೀತಿ; ಅದು ಜೀವನ ಪ್ರೀತಿ.
ಮಲೆನಾಡಿನಲ್ಲೇ ಹುಟ್ಟಿ ಬೆಳೆದಿದ್ದರ ಫಲವೂ ಈ ನೀರ ಪ್ರೀತಿಗೆ ಕಾರಣವಿದ್ದೀತು. ಸಮೃದ್ಧ ಮಳೆಯ ಸನ್ನಿಧಿಯಲ್ಲೇ ಬೆಳೆದ ನಾನೀಗ ಅ ಸಂಭ್ರಮವನ್ನು ಮಿಸ್ ಮಾಡಿಕೊಳ್ಳುತ್ತಿರುವುದಂತೂ ಸತ್ಯ. ಅಗಲಿಕೆಯ ವಿರಹದಲ್ಲಿ ಪ್ರೀತಿ ಇಮ್ಮಡಿಸಿದ್ದರೂ ಇರಬಹುದು. ಆದರೆ ನನ್ನೂರಿನಲ್ಲಿ ಈಗ ನೀರಿಲ್ಲ. ಶುದ್ಧ ಮಲೆನಾಡು ಸಹ ಇಂದಿನ ದಿನಗಳಲ್ಲಿ ನೀರಿನ ಕೊರತೆಯನ್ನು ಎದುರಿಸುತ್ತಿದೆ ಎಂಬುದು ದುರಂತ. ಇದ್ದಕ್ಕಿದ್ದಂತೆ ನನ್ನೂರಿನ ಮಣ್ಣಿನೊಳಗಿನ ನೀರು ಮರಳಿ ಆವಿಯಾಗಿ ಹಾರಿ ಹೋದದ್ದೇನೂ ಅಲ್ಲ. ಇದು ನಮ್ಮದೇ ಸ್ವಯಂಕೃತಾಪರಾಧ ಎಂಬುದು ಅರ್ಥವಾಗಿದೆ. ನನ್ನೂರು ಅಂತಲೇ ಅಲ್ಲ. ಎಲ್ಲ ಊರುಗಳಲ್ಲೂ ನೀರು ಕಣ್ಮರೆಯಾಗಿದ್ದರೆ ಅದು ನಮ್ಮ ನಿರ್ಲಕ್ಷ್ಯದ ಫಲವೇ. ಕೈ ತುದಿಗೆ ನಿಲುಕುತ್ತಿದ್ದ ಅಮೂಲ್ಯ ನಿಧಿಯನ್ನು ಮಣ್ಣಿನಲ್ಲಿ ಜಾರಿ ಬಿಟ್ಟ ಹತಭಾಗ್ಯರು ನಾವು. ಹಸುರಿನ ಹೆಸರಿಲ್ಲವಾಗಿದೆ. ಹೀಗಾಗಿ ಮುಟ್ಟಿದ್ದೆಲ್ಲಾ ಬೂದಿಯಾಗಿಸುವ ಭಸ್ಮಾಸುರ ಸಂತತಿಗೆ ಸೇರಿದ್ದೇವೆ. ಜೀವ ಜಲವೇ ಬತ್ತಿ ಹೋದ ಈ ಬರಡು ನೆಲದಲ್ಲಿ ಹತಾಶರಾಗಿದ್ದೇವೆ. ಬೇಸಿಗೆಯನ್ನು ಬಯ್ಯುತ್ತಿದ್ದೇವೆ. ಮಳೆಯಿಲ್ಲದ್ದಕ್ಕೆ ಕೊರಗುತ್ತಿದ್ದೇವೆ.
ಹಾಗೆ ನೋಡಿದರೆ ಬೇಸಿಗೆ, ಬಿಸಿಲನ್ನು ಅದೇಕೆ ಬಯ್ದುಕೊಳ್ಳುತ್ತೇವೋ ಅರ್ಥವಾಗುವುದಿಲ್ಲ. ಎಲ್ಲವನ್ನೂ ನಕಾರಾತ್ಮಕವಾಗಿ ನೋಡುವುದು ನಮಗೆ ಅಭ್ಯಾಸವಾಗಿಬಿಟ್ಟಿದೆಯಿರಬೇಕು. ಯಾವುದನ್ನೂ ಗೊಣಗದೇ ಸ್ವೀಕರಿಸಲು ನಮಗೆ ಬರುವುದೇ ಇಲ್ಲ ಎಂಬಷ್ಟರ ಮಟ್ಟಿಗೆ ನಮ್ಮ ಮೈಂಡ್ ಸೆಟ್ ಅದಕ್ಕೆ ಕೂತುಹೋಗಿದೆ. ಬೇಕಿದ್ದರೆ ನೋಡಿ, ಚಳಿ, ಮಳೆ, ಬಿಸಿಲು ಹೀಗೆ ಯಾವುದೇ ಕಾಲದಲ್ಲಿ ನಾವು ಕೊರಗುವುದನ್ನು ನಿಲ್ಲಿಸುವುದಿಲ್ಲ. 'ಅಯ್ಯೋ ಏನು ಮಳೆಯೋ ಏನೋ? ಮನೆಯೆಲ್ಲ ಕೆಸರು. ಹೊರಗೆ ಹೋಗುವಂತಿಲ್ಲ. ಒಂದು ಕೆಲಸವೂ ಆಗುವುದಿಲ್ಲ...' ಎನ್ನುತ್ತೇವೆ. ಚಳಿ ಬಂದರೆ 'ಥತ್, ಎಂಥ ಚಳಿ. ಮೈ-ಕೈ ಎಲ್ಲ ಮುರುಟಿಹೋಗುತ್ತದೆ. ಈ ಚಳಿ ಯಾವಾಗ ಮುಗಿಯುತ್ತದೋ ಎನಿಸಿಬಿಟ್ಟಿದೆ. ಶೀತ ತಲೆನೋವು... ಬಿಸಿಲು-ಮಳೆಯಾದರೆ ಹೇಗೂ ತಡೆದುಕೊಳ್ಳಬಹುದು' ಎಂದುಕೊಳ್ಳುತ್ತೇವೆ. ಇನ್ನು ಬೇಸಿಗೆ ಬಂದರಂತೂ ಮುಗಿದೇ ಹೋಯಿತು. ಬೆಂಕಿ ತುಳಿದಂತೆಯೇ ಆಡುತ್ತಿರುತ್ತೇವೆ. ಅಸಲಿಗೆ ಬದಲಾಗಬೇಕಾದದ್ದು ಋತುಮಾನವಲ್ಲ, ನಮ್ಮ ಮನದ ಮೂಲೆಯಲ್ಲಿ ಗೂಡುಕಟ್ಟಿ ಕುಳಿತಿರುವ ನಕಾರಾತ್ಮಕ ಧೋರಣೆ.
ಯಾವುದೇ ಬದಲಾವಣೆಗಳಿರಲಿ ತನ್ನ ಪಾಡಿಗೆ ತಾನು ಆಗುತ್ತಲೇ ಇರುತ್ತದೆ. ಅದು ನಿಯಮ. ಆದರೆ ಅದಕ್ಕೆ ತಕ್ಕ ಬದಲಾವಣೆಗೆ ನಾವು ಸಿದ್ಧರಿರುವುದಿಲ್ಲ. ಬೇಸಿಗೆಯ ವಿಚಾರದಲ್ಲೂ ಅದೇ. ಬಿಸಿಲು ಬಿದ್ದೇ ಬೀಳುತ್ತದೆ, ಕಪಾಳಕ್ಕೆ ಬಾರಿಸುತ್ತದೆ ಎಂಬುದು ಹೊಸತೇನಲ್ಲ. ಹಾಗೆ ಬಾರಿಸಿದಾಗ ಮೈ ಬೆವರುತ್ತದೆ, ನೆಲದ ನೀರಿನ ಪಸೆಯೂ ಆರಿ ಹೋಗುತ್ತದೆ ಎಂಬುದೂ ಗೊತ್ತಿಲ್ಲದ ಸಂಗತಿಯೇನಲ್ಲ. ಆದರೂ ಅದಕ್ಕೆ ತಕ್ಕ ಸಿದ್ಧತೆಯನ್ನು ನಾವು ಮಾಡಿಕೊಂಡಿರುವುದೇ ಇಲ್ಲ. ಆರಿ ಹೋಗುವ ಮುನ್ನ ಒಂದಷ್ಟು ನೀರನ್ನು ಬಾಯಾರಿ ಬಂದಾಗ ಬೇಕಾಗುತ್ತದೆಂದು ಸಂರಕ್ಷಿಸಿಟ್ಟುಕೊಳ್ಳುವುದಿಲ್ಲ. ಏನಾದೀತು? ಆದರೂ ಎಲ್ಲರಿಗಾದದ್ದು ನಮಗಾಗುತ್ತದೆ, ಅಷ್ಟೇ ಅಲ್ಲವೇ? ಎಂಬ ಅಸಡ್ಡೆ ಬೇರೆ. ಹೀಗಾಗಿ ನೀರಿದ್ದಾಗ ಬೇಕಿರಲಿ, ಬೇಡದಿರಲಿ, ಬಳಸುತ್ತೇವೆ ಎಂಬುದಕ್ಕಿಂತ ಕಬಳಿಸುತ್ತೇವೆ; ಜೇಬಿನಲ್ಲಿರುವ ದುಡ್ಡಿನಂತೆಯೇ. ಅದಕ್ಕೂ ಆರವಿಲ್ಲ ಭಾರವಿಲ್ಲ. ನೀರನ್ನೂ ಅಷ್ಟೆ, ಆರುವವರೆಗೆ ತಲೆ ಕೆಡಿಸಿಕೊಳ್ಳುವುದಿಲ್ಲ.
ನೀರು ಉಳಿಸಿಕೊಂಡರೆ ಅದು, ನೀರಿನ ಉಳಿವು ಮಾತ್ರವಲ್ಲ. ಕಿಸೆಯ ಕಾಸೂ ಉಳಿಯುತ್ತದೆ. ನೆಲದ ಸಮೃದ್ಧಿ ಉಳಿಯುತ್ತದೆ. ಸುತ್ತಲಿನ ಬಾವಿ ಕೆರೆ, ಕಟ್ಟೆ, ನದಿ, ನಾಲೆ ಕೊನೆಗೆ ಒಂದಿಡೀ ಸಮಾಜದ ಉಳಿವು ನಾವು ಉಳಿಸುವ ನೀರನ್ನು ಅವಲಂಬಿಸಿರುತ್ತದೆ ಎಂದು ಹೇಳಿದರೆ ಬಹುತೇಕ ನಮಗೆ ಅರ್ಥವೇ ಆಗುವುದಿಲ್ಲ. ಕಾರಣ ಮತ್ತದೇ ನಕಾರಾತ್ಮಕ ಧೋರಣೆ. ಒಂದು ಸಮಾಜದ ಉಳಿವು. ಮುಂದಿನ ತಲೆಮಾರಿಗೆ ಆಸ್ತಿ ಸಂಪಾದಿಸದ್ದಿರೂ, ನಿಮ್ಮ ಮಕ್ಕಳು, ಮೊಮ್ಮಕ್ಕಳು ಬದುಕುತ್ತಾರೆ. ಆದರೆ ನೀರಿನ ಆಕರವನ್ನು ಉಳಿಸಿ, ಸಂರಕ್ಷಿಸದಿದ್ದರೆ...
ನೀರಿನ ಸಂರಕ್ಷಣೆಯೆಂದರೆ ಎರಡು ರೀತಿ. ಒಂದು ನೀರನ್ನು ಕಡಿಮೆ ಬಳಸಿ ಉಳಿಸುವುದು, ಅದಕ್ಕಿಂತ ಮುಖ್ಯವಾದದ್ದು ಉಳಿದ ನೀರು ಮಲಿನವಾಗದಂತೆ ಕಾಪಾಡುವುದು. ಗಮನಿಸಲೇಬೇಕಾದ ಅಂಶವೆಂದರೆ ನಮಗೆ ನೀರಿಲ್ಲ ಎಂದ ಮಾತ್ರಕ್ಕೆ ಕೊರತೆಯಿದೆ ಎಂದಲ್ಲ. ಇರುವ ನೀರು ಬಳಕೆಗೆ ಯೋಗ್ಯವಾಗಿಲ್ಲ. ನೀರನ್ನು ಸಂರಕ್ಷಿಸುವುದರಿಂದ ಅದು ಮಣ್ಣಿನ ಸಂತೃಪ್ತ ಸ್ಥಿತಿಯನ್ನು ತಡೆದು ನೈರ್ಮಲ್ಯ ವ್ಯವಸ್ಥೆಯ ಆಯುಸ್ಸನ್ನು ಹೆಚ್ಚಿಸುತ್ತದೆ.
ಈ ಎಲ್ಲ ದೃಷ್ಟಿಯಿಂದ ಜಲ ಸಂರಕ್ಷಣೆ ಹಾಗೂ ಸುವ್ಯವಸ್ಥಾಪನೆಯ ದೃಷ್ಟಿಯಿಂದ ಒದಷ್ಟು ಟಿಪ್ಸ್ಗಳು ನಿಮಗಾಗಿ...
ಮನೆಗಳಲ್ಲಿ ಮಾಡಬೇಕಾದ್ದು