ಉಗಾದಿ ಹಬ್ಬದ ಮಾರ್ನೇ ದಿನ ನಮ್ ಮೈಲಾರಿಗೆ ನ್ಯಾಸ್ನಲ್ ಪೆಸ್ಟಿವಲ್! ಗೊತ್ತಾಗಿಲ್ವಾ? ಅದೇ ಕಣ್ರೀ, ವರ್ಷತೊಡಕು. ಅಂದ್ರೆ ಆವತ್ತು ಪುಲ್ ನಾನ್‌ವೆಜ್ಜು.
ಯಾಕೋ ಏನೋ ಮೈಲಾರಿ ಆವತ್ತು ಮೂಡ್ನಾಗೆ ಇರ್ಲಿಲ್ಲ. ಮನ್ಯಾಗೆ ವೊಲೆಮ್ಯಾಲೆ ಅಕ್ಕೀನೂ ಇಲ್ಲ, ಬ್ಯಾಳೇನೂ ಬೇಯ್ತಾ ಇರಿಲ್ಲ ಅಂತೀನಿ. ಏನೋ ಎಡ್ವಟ್ಟಾಗದೆ. ಕೇಳಾವ ಅಂತೇಳಿ ಅಮಾಸೆ ಮನೆತಾವ ವೋತಾಯಿದ್ದಂಗೆ ಮೈಲಾರಿ ಕಂಕ್ಳಾಗೆ ನಾಟಿ ಕೋಳಿ ಮಡಿಕ್ಕಂಡು ಆಚೆ ಬಂದ. 'ಇದೇನ್ಲಾ ಮೈಲಾರಿ ಕೋಳಿ ಎತ್ಕಂಡು ಎತ್ಲಾಗೆ ವೊಂಟೆ?' ಅಂತ ಅಮಾಸೆ ಕೇಳ್ದ. 'ಎಲೆಕ್ಸನ್ ಅಪೀಸ್ತವ ವೋಯ್ತಾಯಿದ್ದೀನಿ. ಆಪೀಸರ್ರು ಇರ್ತರೆ ಅಲ್ವಾ?' ಅಂತೇಳಿ ಮೈಲಾರಿ ಕೇಳ್ದ.
'ಅಲ್ಲಿಗ್ಯಾಕ್ಲಾ ಮೂದೇವಿ ? ಎಲೆಕ್ಸನ್ ಆಪೀಸು ಮುಂದ್ಲಾಗಡೆ ಕೋಳಿ ಕುಯ್ತಿಯಾ?' ಅಂತ ಅಮಾಸೆ ಕೇಳ್ದ. 'ಇಲ್ಲಪ್ಪ, ಈವಾಗ ಅದೇನೋ ರೂಲ್ಸು ಮಾಡವ್ರಂತೆ. ಎಲೆಕ್ಸನ್ ಟೇಮ್ನಾಗೆ ಎಲೆಕ್ಸನ್ ಆಪೀಸರ್ನ ಕೇಳ್ದೆ ಕುರಿ, ಕೋಳಿನ ಕುಯ್ಯುಂಗಿಲ್ಲ, ಅವ್ರುಗೆ, ಇವ್ರುಗೆ ಅಂತ ವೂಟ ಹಾಕ್ಸಂಗಿಲ್ಲ. ಯಾಕ್ಬೇಕು ಯಾವಾರ? ಕೋಳಿ ಕುಯ್ಯೋಗಂಟ ಸುಮ್ಕೆ ಇದ್ದು ಅಮ್ಯಾಲೆ ಬತ್ತಾರೆ, ಮಾಡಿರೋ ಸಾರು ಚರಂಡಿಗೆ ಸುರೀತರೆ. ಅದುಕ್ಕೆ ಕೋಳಿ ಕುಯ್ಯಕ್ಕೆ ಪರ್ಮಿಸನ್ನು ತಕ್ಕಂಡು ಬತ್ತೀನಿ. ಪರ್ಮಿಸನ್ನು ಕೊಡೋಗಂಟ ನಾನು ಮಸಾಲೆ ರುಬ್ಬಕ್ಕಿಲ್ಲ ಅಂತ ನನ್ನೆಂಡ್ರೂ ಹೇಳ್ಳ್ಬಟ್ಟವ್ಳೆ' ಅಂದ ಮೈಲಾರಿ. 'ಇಸ್ಯ ಹಂಗೈತೇನಲ ? ಇದೊಳ್ಳೆ ಕಿರ್ಕಿರಿ ಆಯ್ತು ಕಣ್ಲಾ. ನಮ್ ಕೋಳಿ ಕುಯ್ಯಕ್ಕೆ ಅವ್ರು ಏನಂತೆ ಪರ್ಮಿಸನ್ನು ಕೊಡಾದು. ಕೋಳಿ ಮೊಟ್ಟೆ ಇಡಕ್ಕೂ ಪರ್ಮಿಸನ್ನು ಏನರ ಬೇಕಾ ?' ಅಂತ ಅಮಾಸೆ ಕೇಳ್ದ. 'ವೂ ಕಣಪ್ಪ, ಪೇಪ್ರಾಗೆ ನ್ಯೂಜು ವೋದಿಲ್ವಾ ನೀನು. ನಮ್ ನೆಂಟ್ರು ಅರ್ಸೀಕೆರೆನಾಗೆ ಅವ್ರೆ. ಅವ್ರು ಮನ್ಯಾಗೆ ಮೊನ್ನೆ ಮದ್ವೆ ಆಗದೆ. ಬೀಗ್ರೂಟ ಮಾಡಕ್ಕೆ ಅಂತ ರೆಡಿ ಮಾಡ್ಕಂಡಿದ್ರಂತೆ. ಎಲೆಕ್ಸನ್ ಆಪೀಸರ್ರು ವೋಗಿ ಬೀಗ್ರೂಟುಕ್ಕೆ ಗೂಟ ಮಡ್ಗುದ್ರಂತೆ. ಆಮ್ಯಾಲೆ ನಮ್ ನೆಂಟ್ರು ಹೈಕೋರ್ಟ್‌ಗಂಟ ವೋಗಿ ಪರ್ಮಿಸನ್ ತಕ್ಕಂಡು ಬಂದವ್ರೆ' ಕಲಾ ಅಂದ ಮೈಲಾರಿ.
'ಹೌದೇನ್ಲಾ? ಹಂಗರೆ ಇರಪ್ಪ, ನಾನೂವೆ ಮನ್ಯಾಗಿರೋ ಕೋಳಿ ಹಿಡ್ಕಂಡು ಬತ್ತೀನಿ. ಅಮ್ಯಾಲೆ ಇನ್ನೂರು ರೂಪಾಯಿ ಕೋಳಿ ಕುಯ್ಯಕ್ಕೆ ಸಾವ್ರಾರು ರುಪಾಯಿ ಖರ್ಚು ಮಾಡ್ಕಂಡು ಹೈಕೋರ್ಟ್‌ಗಂಟ ಯಾರು ವೋದಾರು' ಅಂತ ಆಮಾಸೆ ಮನೆಕಡೆ ವೊಂಟ. ಮೈಲಾರಿ, ಅಮಾಸೆ ಕೋಳಿ ಹಿಡ್ಕಂಡು ವೋಯ್ತಾಯಿದ್ದಂಗೆ ಎಲೆಕ್ಸನ್ ಆಪೀಸರ್ರು ಜೀಪು ಹಾಕ್ಕಂಡು ಬಂದೇಬುಟ್ರು. 'ಮುಂಡೇವ, ಕೋಳಿನಾ ಹಿಡ್ಕಂಡು ಎತ್ಲಾಗೆ ವೋಯ್ತಾಯಿದ್ದೀರಿ. ಈ ವೂರ್ನಾಗೇ ವೊಂದೇ ವೊಂದು ಕೋಳಿ ಇರಂಗಿಲ್ಲ. ಕೊಡ್ರಲಾ ಇಲ್ಲಿ' ಅಂತ ಆಪೀಸರ್ರು ಕಿತ್ಕಂಬುಟ್ರು. 'ಆದ್ಯಾಕೆ ಸ್ವಾಮಿ ?' ಅಂತ ಮೈಲಾರಿ ಕೇಳ್ದ. 'ಈ ವೂರ್ನಾಗೆ ಎಲೆಕ್ಸನ್ಗೆ ನಿಂತಿರೋ ಪಕ್ಸೇತರ ಕ್ಯಾಂಡೇಟು ಸಿಂಬಲ್ಲು ಕೋಳಿ. ಹಿಂಗಾಗಿ ಕೋಳಿ ಇದ್ರೆ ವೋಟಾಕೋರು ಮ್ಯಾಲೆ ಪ್ರಭಾವ ಬೀರ್ದಂಗೆ ಆಯ್ತದೆ' ಅಂತೇಳಿ ಆಪೀಸರ್ರು ಭರ್ರೋ ಅಂತ ವೊಂಟೋಬುಟ್ರು. 'ಆಯ್ಕಂಡು ತಿನ್ನೋ ಕೋಳೀನೂವೆ ಬುಡಕ್ಕಿಲ್ವಲ್ಲ ಇವ್ರು. ಎಂತ ಕಾಲ ಬಂತಪ್ಪ' ಅಂತೇಳಿ ಮೈಲಾರಿ, ಅಮಾಸೆ ಮಖ ಸೊಟ್ಗೆ ಮಾಡ್ಕಂಡು ವಾಪ್ಸು ಮನೆಕಡೆ ವೊಂಟ್ರು.
ದಾರಿನಾಗೆ ವೋಯ್ತಾಯಿದ್ದಂಗೆ 'ಬಿಗ್ ಬಾಸ್, ಬಿಗ್ ಬಾಸ್' ಅಂತ ಯೋಳ್ಕಂಡು ಕಾಳಿ ಸ್ವಾಮಿ ಬಂದೇಬುಟ್ರು. 'ಇದೇನಲ, ಕೋಳಿ ವೋಯ್ತು ಅಂದ್ರೆ ಕಾಳಿ ಬಂತಲ್ಲೋ' ಅಂತೇಳಿ ಮೈಲಾರಿ, ವೋ, ಸ್ವಾಮ್ಕಳು, ಎತ್ಲಾಗಿಂದ ಬತ್ತಾಐತೆ ಸವಾರಿ ?' ಅಂತ ಸ್ವಾಮ್ಗಳ್ನ ಕೇಳ್ದ. 'ಬಿಗ್‌ಬಾಸ್ ಮನ್ಯಾಗಿಂದ ಬತ್ತಾಯಿವ್ನಿ ಕಣ್ರಲೇ' ಅಂದ್ರು ಸ್ವಾಮ್ಗಳು. 'ಅಯ್ಯೋ ಯಾಕೆ ಆಚ್ಗೆ ಹಾಕ್ಬುಟ್ರಾ? ಯಾಕಂತೆ ಸ್ವಾಮ್ಗಳೇ' ಅಂತ ಮೈಲಾರಿ ಕೇಳ್ದ. ಠನಂದು ಆಕ್ಟಿಂಗು ನೋಡಿ ಕಣ್ರಲೇ' ಅಂತೇಳುದ್ರು ಸ್ವಾಮ್ಗಳು.
'ಅಕ್ಟಿಂಗು ನೋಡಿ ಅಲ್ಲೇ ಮಡಿಕ್ಕಬೇಕಿತ್ತು. ಆಚ್ಗೆ ಹಾಕಿದ್ದು ಯಾಕಂತೆ ?'ಅಂತ ಮೈಲಾರಿ ಕೇಳ್ದ. 'ಸುದೀಪ್ ನನ್ ಆಕ್ಟಿಂಗು ನೋಡಿ ಮೂಗಿನಮ್ಯಾಲೆ ಬೆಳ್ಳು ಮಡಿಕ್ಕಂಬುಟ್ರು. ಈ ಸ್ವಾಮೀನಾ ಹಿಂಗೇ ಬುಟ್ರೆ ಬಿಗ್‌ಬಾಸ್ ಆಗೋಯ್ತನೆ. ನನ್ನುನ್ನ ವಾಪ್ಸು ಕಳುಸ್ತಾರೆ ಅಂತ ಪೀಲಿಂಗು ಮಾಡ್ಕಂಬುಟ್ರು. ಆದುಕ್ಕೆ ಐಡಿಯಾ ಮಾಡಿ ಕಳುಸ್ಬುಟ್ರು' ಅಂದ್ರು ಸ್ವಾಮ್ಗಳು. 'ಹೌದಾ ಸ್ವಾಮಿ?' ಅಂದ್ರು ಮೈಲಾರಿ, ಅಮಾಸೆ.
- ಕೆ.ವಿ.ಪ್ರಭಾಕರ್
prabhukolar@yahoo.com