ರಣಾಂಗಣದ ನಯ-ನಾಜೂಕು ಹುಟ್ಟಿಸಿರುವ ಸಂದೇಹ

ಯುದ್ಧರಂಗದಲ್ಲಿ ಅಣ್ಣ,ತಮ್ಮ, ಬಂಧು, ಬಳಗ ನಗಣ್ಯ. ಗುರಿ ಮತ್ತು ಗೆಲವು ಮಾತ್ರ ಮುಖ್ಯ
Updated on: 

ಯುದ್ಧರಂಗದಲ್ಲಿ ಅಣ್ಣ,ತಮ್ಮ, ಬಂಧು, ಬಳಗ ನಗಣ್ಯ. ಗುರಿ ಮತ್ತು ಗೆಲವು ಮಾತ್ರ ಮುಖ್ಯ ಎಂದು ಶ್ರೀಕೃಷ್ಣ ಪರಮಾತ್ಮ ಆರ್ಜುನನಿಗೆ ಬೋಧಿಸಿದ್ದಾಗಿ ಭಗವದ್ಗೀತೆ ಹೇಳುತ್ತದೆ. ಚುನಾವಣೆ ಎಂಬ ರಣಾಂಗಣವೂ ಅಷ್ಟೇ. ಅಲ್ಲಿ ಎದುರಾಳಿ ಯಾರೇ ಆಗಿರಲಿ, ರಾಜಕೀಯ ಪಕ್ಷಗಳಿಗೆ ಅಥವಾ ಕಣದಲ್ಲಿರುವ ಅಭ್ಯರ್ಥಿಗಳಿಗೆ ಗೆಲವು ಮುಖ್ಯ. ಗುರಿ ಸಾಧನೆಗಾಗಿ ಎಂತಹ ಅಸ್ತ್ರಗಳನ್ನಾದರೂ ಪ್ರಯೋಗಿಸಲು ಸಿದ್ಧ.
ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳು ಪರಸ್ಪರ ಪ್ರಯೋಗಕ್ಕೆ ಅಸ್ತ್ರಗಳನ್ನು ಸಿದ್ಧ ಮಾಡಿಕೊಂಡು ಬತ್ತಳಿಕೆಗೆ ಸೇರಿಕೊಳ್ಳುವುದು ಮೊದಲಿನಿಂದ ನಡೆದುಕೊಂಡು ಬಂದಿರುವ ಪದ್ಧತಿಯೂ ಹೌದು. ಹೀಗಾಗಿಯೇ ಚುನಾವಣಾ ಕಾಲಕ್ಕೆ ಆರೋಪ, ಪ್ರತ್ಯಾರೋಪ, ಟೀಕಾಸ್ತ್ರಗಳು ಚುನಾವಣಾ ಕಣದಲ್ಲಿ ಮಾರ್ದನಿಸುತ್ತವೆ. ಒಬ್ಬರ ಹುಳುಕನ್ನು ಮತ್ತೊಬ್ಬರು ಎತ್ತಿ ತೋರಿಸುವ ಕೆಲಸವಾಗುತ್ತದೆ. ಬಹಿರಂಗ ಸಭೆಗಳಲ್ಲಿ ಆಡಳಿತ ಪಕ್ಷದ ವಿರುದ್ಧ ಪ್ರತಿಪಕ್ಷಗಳು, ಪ್ರತಿಪಕ್ಷಗಳ ವಿರುದ್ಧ ಆಡಳಿತ ಪಕ್ಷದವರು ಕೆಸರೆರಚಾಟ ನಡೆಸುವುದು ಹೊಸತೇನೂ ಆಲ್ಲ. ಚುನಾವಣಾ ಕಣ ರಂಗೇರುವುದೂ ಇದೇ ಕಾರಣಕ್ಕೆ. ಆದರೆ, ರಾಜ್ಯ ವಿಧಾನಸಭೆ ಚುನಾವಣೆಯ ಕಣದಲ್ಲಿ ಆಗುತ್ತಿರುವುದು ಏನು? ಎಲ್ಲ ಪಕ್ಷಗಳ ನಡವಳಿಕೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಹೋದರೆ ಇಂಥದೊಂದು ಅನುಮಾನ ಕಾಡದಿರದು. ಅದರಲ್ಲೂ ರಾಜಕಾರಣದ ಲೆಕ್ಕಾಚಾರಗಳ ಬಗ್ಗೆ ಗಮನ ಇಟ್ಟಿರುವವರಿಗೆ ರಾಜಕೀಯ ಪಕ್ಷಗಳ ಸದ್ಯದ ವರ್ತನೆ ಕೊಂಚ ಅಚ್ಚರಿ ಎನಿಸಿದರೂ ಹಿನ್ನೆಲೆ ಕೆದಕಿ ನೋಡಿದಾಗ ವಸ್ತುಸ್ಥಿತಿ ಅವರಿಗೆ ಮನವರಿಕೆ ಆಗದಿರದು.
ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸುವ, ಅವುಗಳ ಪರಿಶೀಲನೆ ಮತ್ತು ಉಮೇದುವಾರಿಕೆ ವಾಪಸ್ ಪಡೆವ ಪ್ರಕ್ರಿಯೆಗಳು ಪೂರ್ಣಗೊಂಡಿವೆ. ಟಿಕೆಟ್ ಸಿಗದ ಕಾರಣ ಬಂಡಾಯದ ಬಾವುಟ ಹಾರಿಸಿ ಕಣದಲ್ಲಿ ಉಳಿದಿದ್ದ ಅತೃಪ್ತರ ಮನವೊಲಿಸಿ ಅವರನ್ನು ಹಿಂದಕ್ಕೆ ಕರೆಯಿಸಿಕೊಳ್ಳುವ ಪ್ರಕ್ರಿಯೆ ಸಹ ಮುಗಿದಿದೆ. ಇನ್ನೇನಿದ್ದರೂ ಅಬ್ಬರದ ಪ್ರಚಾರಕ್ಕೆ ಮಾತ್ರ ಅವಕಾಶ. ಏಕೋ ಏನೋ ರಾಜಕೀಯ ಪಕ್ಷಗಳ ಪ್ರಚಾರದಲ್ಲಿ ಅಂತಹ ಗಮ್ಮತ್ತು ಕಂಡು ಬರುತ್ತಿಲ್ಲ. ಹಿಂದಿನಂತೆ ಅಬ್ಬರ, ಅವೇಶ,ಆಕ್ರೋಶ ವ್ಯಕ್ತವಾಗುತ್ತಿಲ್ಲ. ಎಲ್ಲ ಪಕ್ಷಗಳ ನಾಯಕರು ಮೈಗೆ ಎಣ್ಣೆ ಮೆತ್ತಿಕೊಂಡೇ ಮಾತಿಗಿಳಿಯುತ್ತಿದ್ದಾರೆ. ಟೀಕಾಸ್ತ್ರಗಳನ್ನು ಪ್ರಯೋಗಿಸುವಾಗಲೂ ಎಚ್ಚರಿಕೆ ವಹಿಸುತ್ತಿದ್ದಾರೆ. ಯಾವ ಮಾತಾಡಿದರೆ ಯಾರಿಗೆ ನೋವಾಗುವುದೋ ಎಂಬಂತೆ ವರ್ತಿಸುತ್ತಿದ್ದಾರೆ. ಹೀಗೇಕೆ ?
ಆಡಳಿತಾರೂಡ ಬಿಜೆಪಿ, ಪ್ರಮುಖ ಪ್ರತಿಪಕ್ಷವಾದ ಕಾಂಗ್ರೆಸ್,  ಕುಮಾರಸ್ವಾಮಿ ಮುಂದಾಳತ್ವದ ಜೆಡಿಎಸ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಾರಥ್ಯದ ಕೆಜೆಪಿ, ಮಾಜಿ ಸಚಿವ ಬಿ.ಶ್ರೀರಾಮುಲು ನೇತೃತ್ವದ ಬಿಎಸ್‌ಆರ್ ಕಾಂಗ್ರೆಸ್, ಇವು ಪ್ರಮುಖವಾಗಿ ವಿಧಾನಸಭೆ ಚುನಾವಣಾ ಕಣದಲ್ಲಿರುವ ಪಕ್ಷಗಳು. ಚುನಾವಣೆಯಲ್ಲಿ ಪ್ರಾಬಲ್ಯ ಸಾಧಿಸುವ ತವಕ ಎಲ್ಲ ಪಕ್ಷಗಳಿಗೂ ಸಹಜವಾಗೇ ಇದೆ. ಚುನಾವಣೆಗೆ ದಿನಾಂಕ ಘೋಷಣೆಯಾದ ಸಂದರ್ಭದಲ್ಲಿ ಮತ್ತು ಅದಕ್ಕೂ ಮುನ್ನ ಕೆಲ ಮಾಧ್ಯಮಗಳಲ್ಲಿ ಪ್ರಕಟವಾದ ಸಮೀಕ್ಷೆ ಪ್ರಕಾರ ಕಾಂಗ್ರೆಸ್ ಗೆಲ್ಲುವ ಕುದುರೆ ಎಂದು ಪರಿಗಣಿಸಲಾಗಿತ್ತು. ಸ್ಪಷ್ಟ ಬಹುಮತದೊಂದಿಗೆ ಆ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯುತ್ತದೆ ಎಂದು ಸಮೀಕ್ಷೆಗಳು ಹೇಳಿತ್ತು. ಹೀಗಾಗಿ ಕಾಂಗ್ರೆಸ್ ಕೊಂಚ ಎದೆಯುಬ್ಬಿಸಿಕೊಂಡೇ ಓಡಾಡಿತ್ತು. ಪಕ್ಷದ ನಾಯಕರೂ ಸಹ ಇನ್ನೇನು ಅಧಿಕಾರ ಕೈಗೆ ಬಂದೇಬಿಟ್ಟಿತು ಎಂಬಂತೆ ನಲಿದಾಡಿದರು. ಅದು ಎಲ್ಲಿಯವರೆಗೆ ಎಂದರೆ ಟಿಕೆಟ್ ಹಂಚಿಕೆಯಲ್ಲಿ ಎಡವಟ್ಟು ಆಗುವವರೆಗೆ. ಕಾಂಗ್ರೆಸ್ ಪಕ್ಷದ ಉತ್ಸಾಹವೆಲ್ಲ ಟಿಕೆಟ್ ಹಂಚಿಕೆ ಸಮಯದಲ್ಲಿ ಕೊಂಚ ಕರಗಿತು. ಎಲ್ಲೆಲ್ಲೂ ಬಂಡಾಯದ ಬಾವುಟಗಳು ಹಾರಾಡತೊಡಗಿದವು. ಟಿಕೆಟ್‌ಗಾಗಿ ಇನ್ನಿಲ್ಲದ ಪೈಪೋಟಿ ಏರ್ಪಟ್ಟಿತು. ಹಿರಿಯ ಮುಖಂಡರೆನಿಸಿಕೊಂಡವರೇ ಪಕ್ಷಕ್ಕೆ ಬಿಸಿ ಮುಟ್ಟಿಸಿದರು. ಗೆಲ್ಲುವ ಅವಕಾಶ ಇರುವ ಕ್ಷೇತ್ರಗಳಲ್ಲಿ ಸೋಲುವ ಅಭ್ಯರ್ಥಿಗಳನ್ನು ಹಾಕಲಾಗಿದೆ ಎಂಬ ಕೂಗು ಕೇಳಿ ಬಂದಿತು. ಈ ಎಲ್ಲದರಿಂದಾಗಿ ಕಾಂಗ್ರೆಸ್ ಸ್ವಲ್ಪಮಟ್ಟಿಗೆ ಜರ್ಝರಿತವಾಯಿತು. ಕಣದಲ್ಲಿರುವ ಬಂಡಾಯ ಅಭ್ಯರ್ಥಿಗಳನ್ನು ಮನವೊಲಿಸಿದ ಬಳಿಕ ಆ ಪಕ್ಷದ ಪರಿಸ್ಥಿತಿ ಕೊಂಚ ಸುಧಾರಿಸಿದೆಯಾದರೂ ಬೀಳಬಾರದಾಗಿದ್ದ ಪೆಟ್ಟು ಬಿದ್ದು ಹೋಗಿದೆ. ಹೀಗಾಗಿ ಸಮೀಕ್ಷೆಯಲ್ಲಿ ವ್ಯಕ್ತವಾದ ಅನಿಸಿಕೆಯಂತೆ ನಾವು ಏಕಾಂಗಿಯಾಗಿ ಅಧಿಕಾರಕ್ಕೆ ಬಂದೇ ಬರುತ್ತೇವೆ ಎಂದು ಹೇಳಿಕೊಳ್ಳುವ ಧೈರ್ಯವನ್ನು ಪಕ್ಷದ ಮುಖಂಡರು ಕಳೆದುಕೊಂಡಿದ್ದಾರೆ. ಪೂರ್ಣ ಬಹುಮತದೊಂದಿಗೆ ನಾವು ಆಡಳಿತದ ಚುಕ್ಕಾಣಿ ಹಿಡಿಯುತ್ತೇವೆ ಎಂದು ನಾಯಕರು ಎದೆತಟ್ಟಿಕೊಂಡು ಹೇಳುವ ಸನ್ನಿವೇಶ ಇಲ್ಲದಂತಾಗಿದೆ. ಪಕ್ಷದ ಪರವಾಗಿ ಇದ್ದ ಅಲೆಯನ್ನು ಲಾಭವಾಗಿ ಮಾಡಿಕೊಳ್ಳುವಲ್ಲಿ ನಾಯಕರು ಎಡವಿದ್ದೇ ಇದಕ್ಕೆ ಕಾರಣ. ಹೀಗಾಗಿ ಸಮ್ಮಿಶ್ರ ಸರ್ಕಾರದ ವಾಸನೆ ಮೂಗಿಗೆ ಬಡಿಯತೊಡಗಿದೆ. ಕಾಂಗ್ರೆಸ್‌ನ ಸ್ಥಿತಿಗತಿ ಸುತ್ತಲೇ ಇತರ ಪಕ್ಷಗಳ ಲೆಕ್ಕಾಚಾರ ಗಿರಕಿ ಹೊಡೆಯುತ್ತಿದೆ. ಹೀಗಾಗಿ ಚುನಾವಣಾ ಕಣದಲ್ಲಿ ಪ್ರಯೋಗಿಸಬೇಕಾದ ಅಸ್ತ್ರಗಳಲ್ಲೂ ರಾಜಕೀಯ ಪಕ್ಷಗಳು ಬದಲಾವಣೆ ಮಾಡಿಕೊಳ್ಳುತ್ತಿವೆ. ಹಿಂದಿನಂತೆ ಒಬ್ಬರ ವಿರುದ್ಧ ಮತ್ತೊಬ್ಬರು ರೋಷಾವೇಷ ಪ್ರದರ್ಶಿಸದೆ ಎಚ್ಚರಿಕೆಯ ಹೆಜ್ಜೆಗಳನ್ನು ಇಡುವ ಕೆಲಸವಾಗುತ್ತಿದೆ. ನಾಯಕರು ಮೇಲ್ನೋಟಕ್ಕೆ ವೈರಿಗಳಂತೆ ಕಂಡುಬಂದರೂ ಒಳಗೊಳಗೇ ಮಾತುಕತೆ ನಡೆಸುತ್ತಿದ್ದಾರೆ.
ಬಿಜೆಪಿಯಿಂದ ಸಿಡಿದು ಹೋದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕರ್ನಾಟಕ ಜನತಾಪಕ್ಷ ಕಟ್ಟಿಕೊಂಡಿದ್ದಾರೆ. ಚುನಾವಣಾ ಕಣದಲ್ಲಿ ಅವರಿಗೆ ಬಿಜೆಪಿಯೇ ಮೊದಲ ಶತ್ರು. ಆದರೆ, ಬಿಜೆಪಿ ವಿರುದ್ಧದ ಯಡಿಯೂರಪ್ಪ ಅವರಿಗೆ ಆರಂಭದಲ್ಲಿ ಇದ್ದ ಕೋಪತಾಪದ ಪ್ರಮಾಣ ಸ್ವಲ್ಪ ಕಡಿಮೆ ಆಗಿದೆ ಎಂಬಂತೆ ಭಾಸವಾಗುತ್ತಿದೆ. ಇದಲ್ಲದೇ, ಯಡಿಯೂರಪ್ಪ ಅವರು ಜೆಡಿಎಸ್ ಅಥವಾ ಕಾಂಗ್ರೆಸ್ ನಾಯಕರ ವಿರುದ್ಧವೂ ಮುಗುಮ್ಮಾಗಿದ್ದಾರೆ.  ಅದೇ ರೀತಿ ಬಿಜೆಪಿ ನಾಯಕರೂ ಕೆಲವರು ಹೋಗಿದ್ದರಿಂದ ಪಕ್ಷ ಸ್ವಚ್ಛವಾಗಿದೆ. ಕಳೆದ 2 ವರ್ಷದಲ್ಲಿ ನಾವು ಒಳ್ಳೆಯ ಆಡಳಿತ ನೀಡುತ್ತಿದ್ದೇವೆ ಎಂದು ಭಾಷಣದಲ್ಲಿ ಹೇಳುತ್ತಿದ್ದಾರೆ. ಯಡಿಯೂರಪ್ಪ ಅವರನ್ನು ಟಾರ್ಗೆಟ್ ಮಾಡಿಕೊಂಡು ಹೆಚ್ಚಾಗಿ ಅವರು ಮಾತನಾಡುತ್ತಿಲ್ಲ. ಜೆಡಿಎಸ್ ವಿಷಯದಲ್ಲೂ ಬಿಜೆಪಿ ನಾಯಕರು ಸೌಮ್ಯವಾಗೇ ಇದ್ದಾರೆ. ಈ ಎರಡೂ ಪಕ್ಷಗಳ ಮಧ್ಯೆ ಏನೋ ನಡೆಯುತ್ತಿದೆ ಎಂಬ ಅನುಮಾನಕ್ಕೂ ಈ ವರ್ತನೆ ಇಂಬು ನೀಡುತ್ತಿದೆ.
ಕಾಂಗ್ರೆಸ್ ನಾಯಕರ ನಡವಳಿಕೆಯೂ ಇದಕ್ಕಿಂತ ಭಿನ್ನವಾಗಿಲ್ಲ. ಅವರೂ ಹಿಂದಿನಂತೆ ಯಡಿಯೂರಪ್ಪ ಮೇಲೆ ಮುಗಿಬೀಳುತ್ತಿಲ್ಲ. ಅಕ್ರಮ ಗಣಿಗಾರಿಕೆ ವಿಚಾರ ಹೊರತುಪಡಿಸಿದರೆ ಯಡಿಯೂರಪ್ಪ ಅವರ ಹೆಸರು ಮುಂದೆ ಮಾಡಿಕೊಂಡು ಹಳೆಯ ಹಗರಣಗಳನ್ನು ಕೆದಕುವ ಗೋಜಿಗೆ ಹೋಗುತ್ತಿಲ್ಲ. ಜೆಡಿಎಸ್ ವಿರುದ್ಧವೂ ವಾಗ್ಬಾಣಗಳನ್ನು ಹರಿಯಬಿಡುತ್ತಿಲ್ಲ.
ಇನ್ನು ಜೆಡಿಎಸ್ ಸಹ ಮಾತುಕತೆಯಲ್ಲಿ ನಯ ಮತ್ತು ನಾಜೂಕು ತೋರಿಸುತ್ತಿದೆ. ಕರ್ನಾಟಕ ಜನತಾ ಪಕ್ಷ, ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ಧ ಮಾತನಾಡುವಾಗ ಎಚ್ಚರ ವಹಿಸುತ್ತಿದೆ. ಚುನಾವಣೆ ಫಲಿತಾಂಶದ ಬಳಿಕ ಅದೃಷ್ಟ ಎಲ್ಲಿಂದಾದರೂ ಬಂದು ಗಂಟುಬೀಳಬಹುದು ಎಂಬ ಲೆಕ್ಕಾಚಾರದಲ್ಲಿ ಆ ಪಕ್ಷದ ನಾಯಕರಿದ್ದಾರೆ. ಈ ಎಲ್ಲ ಪಕ್ಷಗಳ ನಾಯಕರ ಮಾತಿನ ವರಸೆ ಬದಲಾಗಲು ಮುಖ್ಯ ಕಾರಣ ಅತಂತ್ರ ವಿಧಾನಸಭೆ ಸೃಷ್ಟಿ ಆಗಬಹುದು ಎಂಬ ಲೆಕ್ಕಾಚಾರ.
ಚುನಾವಣೆಯಲ್ಲಿ ಬಿಜೆಪಿಗೆ 60ರಿಂದ 70 ಸ್ಥಾನಗಳು ಸಿಕ್ಕರೆ, ಜೆಡಿಎಸ್‌ಗೆ 30-40 ಕ್ಷೇತ್ರಗಳು ಸಿಕ್ಕರೆ ಸರ್ಕಾರ ರಚನೆಗೆ ಒಂದು ಕೈ ನೋಡೇಬಿಡಬಹುದು ಎಂಬ ಆಲೋಚನೆ ಇದೆ. ಹೀಗಾಗಿ ಎರಡು ಪಕ್ಷಗಳವರು ಬಹಿರಂಗವಾಗಿ ಏನೋ ಮಾತನಾಡಿಕೊಂಡರೂ ಒಳಗೊಳಗೆ ಪರಸ್ಪರ ಪ್ರೀತಿ ತೋರಿಸಿಕೊಂಡೇ ಮುಂದಡಿ ಇಡುತ್ತಿದ್ದಾರೆ. ಒಂದೊಮ್ಮೆ ಕಾಂಗ್ರೆಸ್ ಬೃಹತ್ ಪಕ್ಷವಾಗಿ ಹೊರ ಹೊಮ್ಮಿದರೆ ಸರ್ಕಾರ ರಚಿಸುವಂತೆ ರಾಜ್ಯಪಾಲರು ಆ ಪಕ್ಷಕ್ಕೆ ಆಹ್ವಾನ ನೀಡುತ್ತಾರೆ. ಆಗ ಅಧಿಕಾರದ ರುಚಿ ನೋಡಲು ಶಾಸಕರು ಕಾಂಗ್ರೆಸ್ ಕಡೆಗೆ ಓಡಲು ಶುರುವಿಟ್ಟುಕೊಳ್ಳುತ್ತಾರೆ. ಸರ್ಕಾರ ರಚನೆಗೆ ಬಹುಮತದ ಕೊರತೆ ಉಂಟಾದರೆ ಕಾಂಗ್ರೆಸ್ ಪಕ್ಷ ಮೊದಲು ನೋಡುವುದೇ ಪಕ್ಷೇತರರ ಕಡೆಗೆ. ಅದು ಸಾಧ್ಯವಾಗದಿದ್ದರೆ ಕೆಜೆಪಿ ಕಡೆಗೆ ವಾರೆನೋಟ ಬೀರಬೇಕಾಗುತ್ತದೆ. ಅದೂ ಆಗದಿದ್ದರೆ ನಮ್ಮ ನಡಿಗೆ ಜೆಡಿಎಸ್ ಜೊತೆಗೆ ಎಂಬಂತೆ ಆಗುತ್ತದೆ. ಈ ಹಂತದಲ್ಲಿ ಆಪರೇಷನ್ ಹಸ್ತದ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.
ಬಿಜೆಪಿ ಜೊತೆಗೂಡಿ ಸರ್ಕಾರ ರಚಿಸುವುದು ಕಾಂಗ್ರೆಸ್‌ನಿಂದ ಆಗದ ಮಾತು. ಹೀಗಾಗಿ ಆ ಪಕ್ಷ ಜೆಡಿಎಸ್, ಕೆಜೆಪಿ, ಬಿಎಸ್‌ಆರ್ ಕಾಂಗ್ರೆಸ್ ಅಥವಾ ಪಕ್ಷೇತರರ ನೆರವು ಕೋರಬೇಕಾಗುತ್ತದೆ. ಏಕೆಂದರೆ, ಆಧಿಕಾರಕ್ಕಾಗಿ ಕಾಂಗ್ರೆಸ್ ಹಾತೊರೆಯುತ್ತಿದೆ. ಕಳೆದ ಚುನಾವಣೆಯಲ್ಲಿ ಗೆಲುವಿನ ಸಮೀಪ ಹೋಗಿ ಆ ಪಕ್ಷ ಎಡವಿತ್ತು. ಆಗಾಗ ಸರ್ಕಾರ ಉರುಳಿಸುವ ಅವಕಾಶ ಸಿಕ್ಕಿದರೂ ವರಿಷ್ಠರ ನಡೆ ಮತ್ತು ನುಡಿಯಿಂದಾಗಿ ಕೈಚೆಲ್ಲಿ ಕೂರಬೇಕಾಯಿತು. ಸ್ಪಷ್ಟ ಜನಾದೇಶ ಪಡೆದು ಅಧಿಕಾರಕ್ಕೆ ಬನ್ನಿ ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಹೇಳಿದ್ದಾರೆ. ಹೀಗಾಗಿ ಶತಾಯಗತಾಯ ಚುಕ್ಕಾಣಿ ಹಿಡಿಯಲು ನಾಯಕರು ಪ್ರಯತ್ನ ನಡೆಸಿದ್ದಾರೆ. ಎಲ್ಲ ಲೆಕ್ಕಾಚಾರಗಳನ್ನು ಬೆನ್ನಿಗಂಟಿಸಿಕೊಂಡೇ ಕಣದಲ್ಲಿ ಹೋರಾಟ ನಡೆಸಿದ್ದಾರೆ. ಹೀಗಾಗಿ ವಿಧಾನಸಭೆ ಚುನಾವಣೆ ಕಣದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಮಾತ್ರ ಟೀಕಾಸ್ತ್ರಗಳ ಪ್ರಯೋಗ ನಡೆಯುತ್ತಿದೆ. ಉಳಿದಂತೆ ಒಂದು ಪಕ್ಷ ಮತ್ತೊಂದು ಪಕ್ಷದ ವಿಚಾರದಲ್ಲಿ ಸೌಮ್ಯವಾಗಿಯೇ ಇದೆ.
ಹಿಂದೆಲ್ಲಾ ಚುನಾವಣೆ ಸಂದರ್ಭದಲ್ಲಿ ಎದುರಾಳಿಗಳ ವೈಫಲ್ಯವನ್ನೇ ದೊಡ್ಡದಾಗಿ ಬಿಂಬಿಸಿ ಪ್ರಚಾರ ಕೈಗೊಳ್ಳಲಾಗುತ್ತಿತ್ತು. ಆದರೆ ಈಗ ಅದು ಅಧಿಕಾರದ ಮುಂದೆ ಗೌಣವಾಗುತ್ತಿದೆ. ಹೊಂದಾಣಿಕೆ ರಾಜಕಾರಣ ಎಲ್ಲೆಲ್ಲೂ ಪ್ರಾಶಸ್ಯ್ತ ಪಡೆದುಕೊಳ್ಳುತ್ತಿದೆ. ಅಧಿಕಾರ ಎಂಬುದು ಮರೀಚಿಕೆ. ಒಮ್ಮೆ ಅದು ಬಳಿಗೆ ಬಂದಾಗ ಹೇಗಾದರೂ ಮಾಡಿ ಅಪ್ಪಿಕೊಳ್ಳಲೇಬೇಕು. ಇಲ್ಲದಿದ್ದರೆ ಕೈ ಸುಟ್ಟುಕೊಳ್ಳಬೇಕಾಗುತ್ತದೆ. ಮತ್ತೊಂದು ಚುನಾವಣೆ ವರೆಗೆ ಎದುರು ನೋಡಬೇಕಾಗುತ್ತದೆ ಎಂಬ ಆಲೋಚನೆಯಲ್ಲಿ ಎಲ್ಲ ಪಕ್ಷಗಳಿವೆ. ಆಂದರೆ ಕಾಯುವ ಮನಸ್ಥಿತಿ ಯಾರಲ್ಲೂ ಇಲ್ಲ.
ಕಾಂಗ್ರೆಸ್‌ಗೆ ಬಹುಮತದ ಕೊರತೆ ಎದುರಾದರೆ ನಮ್ಮನ್ನೇ ಅವಲಂಬಿಸಬೇಕಾಗುತ್ತದೆ. ಹೀಗಾಗಿ ಆ ಪಕ್ಷಕ್ಕೆ ಚುನಾವಣೆಯಲ್ಲಿ ಕಡಿಮೆ ಸ್ಥಾನಗಳು ಸಿಗಲಿ. ಬಿಜೆಪಿಗೂ ಅದೇ ಪರಿಸ್ಥಿತಿ ಎದುರಾಗಲಿ ಎಂಬುದು ಕೆಜೆಪಿ ಮತ್ತು ಜೆಡಿಎಸ್ ಹಾರೈಕೆ. ಕಳೆದ ಎರಡು ವರ್ಷದಲ್ಲಿ ಉತ್ತಮ ಆಡಳಿತ ನೀಡುವ ಪ್ರಯತ್ನ ಮಾಡಿದ್ದೇವೆ. ಹೀಗಾಗಿ ಜನ ಸಾರಾಸಗಟಾಗಿ ನಮ್ಮನ್ನು ತಿರಸ್ಕರಿಸುವ ಸಾಧ್ಯತೆ ಇಲ್ಲ. 60-70 ಸ್ಥಾನಗಳು ಸಿಕ್ಕರೆ ಜೆಡಿಎಸ್ ಅಥವಾ ಕೆಜೆಪಿ ಜೊತೆಗೂಡಿ ಸರ್ಕಾರ ರಚಿಸಬಹುದು ಎಂಬ ಆಲೋಚನೆ ಬಿಜೆಪಿಯದ್ದು. ಇನ್ನು ಕಾಂಗ್ರೆಸ್, ಸಮೀಕ್ಷೆಗಳು ನಮ್ಮ ಪರವಾಗೇ ಇವೆ. 110-120 ಸ್ಥಾನಗಳು ಸಿಗದಿದ್ದರೂ ನೂರರ ಬಳಿ ಬರಬಹುದು. ಆಗ ಪಕ್ಷೇತರರು, ಬಿಜೆಪಿ ಹೊರತುಪಡಿಸಿ ಇತರ ಪಕ್ಷಗಳೊಂದಿಗೆ ಸೇರಿ ಒಂದು ಆಟ ಕಟ್ಟಬಹುದು ಎಂಬ ಚಿಂತನೆ ನಾಯಕರದ್ದು.
ಒಟ್ಟಿನಲ್ಲಿ ಏಕಾಂಗಿಯಾಗಿ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿಕೊಳ್ಳುವ ಸಾಮರ್ಥ್ಯ ಯಾವ ಪಕ್ಷಕ್ಕೂ ಇಲ್ಲ. ಹೀಗಾಗಿಯೇ ವಿಧಾನಸಭೆ ಚುನಾವಣೆ ಕಣದಲ್ಲಿ ಪರಾವಲಂಬನೆ ಲೆಕ್ಕಾಚಾರಕ್ಕೆ ಬಾಗಿಲು ತೆರೆದುಕೊಂಡಿದೆ.
ಲಗೋರಿ: ತನ್ನ ಮೇಲೆ ತನಗೆ ನಂಬಿಕೆ ಇಲ್ಲದವನು ಬೇರೆಯವರ ವಿಶ್ವಾಸಾರ್ಹತೆ ಪ್ರಶ್ನಿಸಲು ಸಾಧ್ಯವೇ?

 -ಪಿ. ತ್ಯಾಗರಾಜ್
thyagarjun@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com