ಅಂಕಣಗಳು

ವಸ್ತುಸ್ಥಿತಿ ತಿಳಿಯಲು ಬಂದ ಮಾಧ್ಯಮದವರೇ ನೀರಿನಲ್ಲಿ ಮುಳುಗಿದ್ದು!

Published On :

ಕಳೆದ ವಾರ ಬೆಳಗಾವಿಯ ಪ್ರವಾಹದ ಮಹಾಪೂರದ ಬಗ್ಗೆ ನಿಮಗೆ ಹೇಳುತ್ತಿದ್ದೆ. ಅಲ್ಲಿ ನಡೆದ ಘಟನೆಗಳೆಲ್ಲಾ ಚರಿತ್ರಾರ್ಹವೇ. ಪ್ರವಾಹ ಹೋದ ಮೇಲೆ ಎರಡು ಮೂರು ತಿಂಗಳುಗಳವರೆಗೆ ಪುನರ್ವಸತಿ ಹಾಗೂ ಪುನರ್ ನಿರ್ಮಾಣದ ಕೆಲಸ ವೇಗವಾಗಿ ನಡೆಯುತ್ತಿತ್ತು. ಪರಿಹಾರದ ಶಿಬಿರಗಳಲ್ಲಿ ವಾಸ ಮಾಡುತ್ತಿದ್ದ ಜನ ತಮ್ಮ ಮನೆಗೆ ವಾಪಸ್ಸು ಹೋಗಬೇಕಾಗಿತ್ತು. ಆದರೆ ಬಹಳಷ್ಟು ಜನರ ಮನೆ ಭಾರಿ ಮಳೆಯಿಂದಾಗಿ ಕುಸಿದು ಹೋಗಿದ್ದವು. ಹದಿನೈದು ಇಪ್ಪತ್ತು ದಿನಗಳು ನೀರಿನಲ್ಲಿ ನಿಂತ ಬೆಳೆಗಳು ನಾಶವಾಗಿದ್ದವು. ಊರುಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಪರಿಸ್ಥಿತಿಯನ್ನು ಸಾಮಾನ್ಯ ಸ್ಥರಕ್ಕೆ ತರಲು ತುಂಬಾ ಶ್ರಮಪಡಬೇಕಾಗಿದ್ದಿತು. ಎಲ್ಲಾ ಕಾಮಗಾರಿಗಳ ಬಗ್ಗೆ ನಿರ್ಣಯಗಳನ್ನು ತೆಗೆದುಕೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಒಂದು ಸಮಿತಿಯನ್ನು ರಚಿಸಲಾಗಿತ್ತು. ಎಲ್ಲಾ ಶಾಸಕರೂ ಹಾಗೂ ಕೆಲವು ಜನರು ಅದರ ಸದಸ್ಯರಾಗಿದ್ದರು. ಕೇಂದ್ರ ಸರ್ಕಾರದಿಂದ ಧನ ಸಹಾಯ ಪಡೆಯಲು ನಷ್ಟದ ಅಂದಾಜು ಹಾಗೂ ಪುನರ್ವಸತಿಯ ನೀಲನಕ್ಷೆಯನ್ನು ತಯಾರಿಸಬೇಕಿತ್ತು. ಹೊಸ ಮನೆಗಳು ಮತ್ತು ರಸ್ತೆಗಳ ನಿರ್ಮಾಣ, ಬೆಳೆಹಾನಿ ಮತ್ತು ಪಶುಹಾನಿಗಳ ಪರಿಹಾರ, ವಿದ್ಯುತ್ ಕಂಬಗಳು ಮತ್ತು ವಿದ್ಯುತ್ ಪರಿವರ್ತಕಗಳ ಮರುಸ್ಥಾಪನೆ, ಕುಡಿಯುವ ನೀರಿನ ವ್ಯವಸ್ಥೆ, ಊರಿನ ನಿರ್ಮಲೀಕರಣ, ಜನರ ಊಟ ತಿಂಡಿಗಳ ವ್ಯವಸ್ಥೆ, ಮಕ್ಕಳಿಗೆ ಮತ್ತು ಮಹಿಳೆಯರಿಗೆ ಪೌಷ್ಟಿಕ ಆಹಾರ, ಮುಂತಾದ ಹಲವಾರು ಚಟುವಟಿಕೆಗಳನ್ನು ನಡೆಸಲು ಎಲ್ಲಾ ಅಧಿಕಾರಿಗಳ ವ್ಯವಸ್ಥೆ ಆಗಬೇಕಾಗಿದ್ದಿತು. ಬೆಳಗಾಂನಲ್ಲಿಯ ವಿಶ್ವೇಶ್ವರ ಟೆಕ್ನಲಾಜಿಕಲ್ ವಿಶ್ವವಿದ್ಯಾಲಯದಿಂದ ನಮಗೆ ಮುನ್ನೂರು ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಸರ್ವೇ ಇತ್ಯಾದಿ ಕೆಲಸಗಳಿಗಾಗಿ ಒದಗಿಸಿದ್ದುದರಿಂದ ತುಂಬಾ ಅನುಕೂಲವಾಯಿತು. ಮಾಧ್ಯಮದ ಪ್ರತಿನಿಧಿಗಳಿಗೆ ಪ್ರತಿದಿನ ನಾಲ್ಕು ಗಂಟೆಗೆ ಎಲ್ಲಾ ಮಾಹಿತಿಗಳನ್ನೂ ಪಾರದರ್ಶಕವಾಗಿ ನೀಡಲಾಗುತ್ತಿತ್ತು. ಮಾಧ್ಯಮದವರ ಸಂಪೂರ್ಣ ಸಹಕಾರದಿಂದ ಸಾರ್ವಜನಿಕರು ಮತ್ತು ಸರ್ಕಾರದ ಮಧ್ಯೆ ಉತ್ತಮ ಸಂಪರ್ಕ ಬೆಳೆಯುತ್ತಿತ್ತು. ಕೆಲವೊಮ್ಮೆ ಗಾಳಿ ಸುದ್ದಿಗಳಿಂದ ಜನರಲ್ಲಿ ಆತಂಕ ಉಂಟಾಗುತ್ತಿತ್ತು. ಉದಾಹರಣೆಗೆ ಇನ್ನೊಮ್ಮೆ ಸಾಂಗ್ಲಿಯಿಂದ ಹೆಚ್ಚೆಚ್ಚು ನೀರು ಬಿಡಲಾಗಿದೆ ಎಂಬ ಸುದ್ದಿ ಬಂದಕೂಡಲೆ ಜನ ಗಾಬರಿಗೊಳ್ಳುತ್ತಿದ್ದರು. ಆಗ ತಕ್ಷಣ ವಸ್ತು ಸ್ಥಿತಿಯನ್ನು ತಿಳಿದುಕೊಂಡು ಪ್ರಚಾರ ಮಾಧ್ಯಮದಿಂದ ಜನರನ್ನು ಸಮಾಧಾನಗೊಳಿಸಲಾಗುತ್ತಿತ್ತು. ಪ್ರತಿದಿನ ಜಿಲ್ಲೆಗೆ ಪ್ರವಾಹದ ಸಮೀಕ್ಷೆ ಮಾಡಲು ಕನಿಷ್ಠ ಒಂದು ತಂಡ ಬರುತ್ತಿತ್ತು. ಅವರನ್ನು ಕರೆದುಕೊಂಡು ಎಲ್ಲಾ ವ್ಯವಸ್ಥೆಗಳನ್ನು ತೋರಿಸಬೇಕಾಗುತ್ತಿತ್ತು. ಪರಿಹಾರ ಶಿಬಿರದಲ್ಲಿ ಇದ್ದವರು ತಮ್ಮ ಕಷ್ಟಗಳನ್ನು ಹೇಳುತ್ತಾ ಕಣ್ಣೀರು ಹರಿಸುತ್ತಿದ್ದರು. ಅದನ್ನು ಕಂಡು ಬಹಳ ಬೇಜಾರಾಗುತ್ತಿತ್ತು. ಒಮ್ಮೆ ಮಾಧ್ಯಮದ ಒಂದು ತಂಡ ದೋಣಿಯಲ್ಲಿ ಕುಳಿತು ಮುಳುಗಿದ್ದ ಹಳ್ಳಿಗೆ ಭೇಟಿ ನೀಡಲು ಹೋದಾಗ ಅವರ ದೋಣಿ ನೀರಿನಲ್ಲಿ ಮುಗುಚಿಕೊಂಡಿತು. ಆಗ ನಾವು ಬೇರೆ ಕೆಲಸಗಳೆಲ್ಲವನ್ನೂ ಬಿಟ್ಟು ಮಾಧ್ಯಮದವರ ರಕ್ಷಣೆ ಮಾಡಬೇಕಾಯಿತು!
ಬೆಳಗಾವಿಯಲ್ಲಿ ಗಡಿ ವಿವಾದ ಸದಾ ಜೀವಂತವಾಗಿರುವ ಸಂಗತಿ. ಮಹಾರಾಷ್ಟ್ರ ಏಕೀಕರಣ ಸಮಿತಿ ಮತ್ತು ಕನ್ನಡಿಗರ ಮಧ್ಯೆ ಗಡಿ ಸಮಸ್ಯೆಯ ಬಿನ್ನಾಭಿಪ್ರಾಯಗಳು ಭುಗಿಲೇಳುತ್ತಲೇ ಇರುತ್ತವೆ. ಈ ಪರಿಸ್ಥಿತಿಯನ್ನು ನಿಭಾಯಿಸುವುದು ನಮ್ಮ ಬುದ್ಧಿವಂತಿಕೆಗೆ ಒಂದು ದೊಡ್ಡ ಸವಾಲೇ ಸರಿ. ಇಂತಹ ಸಂಘರ್ಷದ ವಾತಾವರಣದಲ್ಲಿ ನಾವು ಮೊಟ್ಟಮೊದಲನೆಯ ಬಾರಿ ಗಡಿನಾಡು ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಿದೆವು. ಬೆಳಗಾವಿ ಜನರಿಗೆ ನಮ್ಮ ನಾಡಿನ ವೈಭವ ಹಾಗೂ ಕಲೆಗಳ ಬಗ್ಗೆ ಪರಿಚಯಿಸಿದೆವು. ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಕಲಾವಿದರು ಭಾಗವಹಿಸಿದರು. ಅವರು ಹೇಳಿದರು ಬೆಳಗಾವಿಗೆ ಬರಲು ನಮಗೆ ತುಂಬಾ ಇಚ್ಛೆ ಇದ್ದರೂ ವಿವಾದದ ಬಗ್ಗೆ ಕೇಳಿ ಸುಮ್ಮನೆ ಇರುತ್ತಿದ್ದೆವು. ಒಂದು ಪ್ರದೇಶದ ಸಾಮಾಜಿಕ ಹಾಗೂ ಆರ್ಥಿಕ ಬೆಳವಣಿಗೆ ಆಗಬೇಕಾದರೆ ಸ್ಥಳೀಯ ಕಾನೂನಿನ ಸ್ಥಿತಿ ಚೆನ್ನಾಗಿರಬೇಕು. ಇದರಲ್ಲಿ ನಮ್ಮೆಲ್ಲರ ನಾಗರಿಕರ ಪಾಲು ಇದೆ. ಜೊತೆಗೆ ಉಪಯೋಗ ಸಹ ಇದೆ. ಬೆಳಗಾವಿ ಸಿಟಿ ನಗರಪಾಲಿಕೆಯು ಮಹಾರಾಷ್ಟ್ರ ಜೊತೆಗೆ ವಿಲೀನಗೊಳ್ಳಬೇಕು ಎಂಬ ಠರಾವನ್ನು ಮಾಡಿದ್ದರಿಂದ ಮಹಾನಗರಪಾಲಿಕೆಯನ್ನು ವಿಸರ್ಜಿಸಿ ನನ್ನನ್ನು ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಲಾಯಿತು.  ಚುನಾವಣೆ ಹತ್ತಿರದಲ್ಲಿಯೇ ಇದ್ದು, ಬೆಂಗಳೂರು ಮಹಾ ನಗರಪಾಲಿಕೆಯ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದ ಅನುಭವವು ಇದ್ದಿದ್ದರಿಂದ ನಾನು ನಗರ ನೈರ್ಮಲೀಕರಣಕ್ಕೆ ಮೊದಲ ಪ್ರಾಶಸ್ತ್ಯ ಕೊಟ್ಟೆ. ಬೆಳಗಾವಿ ಒಂದು ನಗರವಾದರೂ ಸಹ ಶುಚಿಯಾದ ನಗರವಾಗಿರಲಿಲ್ಲ. ಚರಂಡಿಗಳೆಲ್ಲವು ಕೊಳಕಾಗಿದ್ದವು. ಕಸ, ಕೊಳೆ, ಹೊಲಸುಗಳೆಲ್ಲವು ಅಲ್ಲಿ ಬಿದ್ದಿದ್ದವು. ಜಾನುವಾರಗಳು ಮತ್ತು ಹಂದಿಗಳು ರಸ್ತೆಗಳಲ್ಲಿ ಸ್ವೇಚ್ಚೆಯಿಂದ ತಿರುಗಾಡುತ್ತಿದ್ದವು. ಎಲ್ಲಾ ಕಡೆಗಳಲ್ಲೂ ಪ್ಲಾಸ್ಟಿಕ್, ತ್ಯಾಜ್ಯ ವಸ್ತು ಬಿದ್ದಿದ್ದವು. ಮೊದಲಿಗೆ ಸಫಾಯಿ ಕರ್ಮಚಾರಿಗಳ ಸಂಖ್ಯೆ ಎಷ್ಟಿದೆ ಎಂದು ನೋಡಿಕೊಂಡು ಎಲ್ಲಾ ವಾರ್ಡ್‌ಗಳಿಗೆ ಒಬ್ಬ ಸಂಪರ್ಕಾಧಿಕಾರಿಯನ್ನು ನೇಮಿಸಲಾಯಿತು. ಪ್ರತಿ ದಿನ ಬೆಳಿಗ್ಗೆ 6 ಗಂಟೆಗೆ ಎಲ್ಲಾ ಕರ್ಮಚಾರಿಗಳ ಹಾಜರಾತಿಗೆ ಒಂದು ಜಾಗದಲ್ಲಿ ಸೇರಬೇಕಾಗಿತ್ತು. ಇದಕ್ಕೆ ಮುಂಚೆ ನೈರ್ಮಲ್ಯ ಪರಿಶೀಲನೆ ಅಧಿಕಾರಿಯವರು ಹಾಜರಾತಿಯನ್ನು ತೆಗೆದುಕೊಳ್ಳುತ್ತಿದ್ದರು. ಈಗಿನ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಸಂಪರ್ಕಾಧಿಕಾರಿಗೂ ವಾಕಿ-ಟಾಕಿಯನ್ನು ಕೊಡಲಾಯಿತು. ಇದರಿಂಗಾಗಿ ನಾನು ಯಾವಾಗ ಬೇಕಾದರೂ ಅವರನ್ನು ಸಂಪರ್ಕಿಸಬಹುದಾಗಿತ್ತು. ಬೆಳಗಾವಿ ನಗರದ ನೈರ್ಮಲೀಕರಣ ಒಂದು ಚಳುವಳಿಯ ರೂಪವನ್ನು ತಾಳಿತು. ಬೆಳಗಾವಿ ನಗರದ ನಾಗರೀಕರು ನನ್ನನ್ನು ಸಂಪರ್ಕಿಸಲು ಬರುವಿಕೆಯನ್ನು ಹಾಗೂ ತಮ್ಮ ಕೆಲಸವನ್ನು ಹೇಳಿಕೊಳ್ಳಲು ಎದುರು ನೋಡುತ್ತಿದ್ದರು.  ಹಿರಿಯ ನಾಗರೀಕರು ಸ್ವ-ಇಚ್ಚೆಯಿಂದ ನೈರ್ಮಲೀಕರಣ ಕಾರ್ಯದಲ್ಲಿ ಪಾಲ್ಗೊಂಡರು. ಅದರಂತೆ ಮಹಿಳೆಯರು, ವೃತ್ತಿನಿರತರು, ಹಿರಿಯರು, ಉತ್ಸಾಹಿ ಯುವಕರು, ಎಲ್ಲರನ್ನೂ ಒಳಗೊಂಡ ಸ್ಥಳೀಯ ಸಮಾಜ ಕಲ್ಯಾಣ ಸಮಿತಿಯನ್ನು ಸ್ಥಾಪಿಸಿಕೊಂಡು ಕಾರ್ಯೋನ್ಮುಖರಾಗಿದ್ದರು.  
ಎರಡು ಮುಖ್ಯವಾದ ಸ್ಥಳಗಳ ಬಗ್ಗೆ ನಿಮಗೆ ಹೇಳಲೇಬೇಕು. ಮೊದಲಿಗೆ ಕೊಟೆಕೆರೆ ಜಾಗ. ಇಲ್ಲಿ ಬಹಳ ಸುಂದರವಾದ ನೀರಿನ ಸರೋವರ ಇದ್ದಿತು. ಇದೀಗ ಆ ಸರೋವರದ ಅವಶೇಷವೂ ಇಲ್ಲದಂತೆ ಕಸ-ಕಡ್ಡಿಗಳನ್ನು ತುಂಬಿದ ಗೊಬ್ಬರದ ಗುಂಡಿಯಾಗಿ ತುಂಬಿತ್ತು. ಈ ಕೊಟೆಕೆರೆ ಸರೋವರವನ್ನು ಶುಚಿಗೊಳಿಸಿ ಉತ್ತಮ ಕೆಲಸ ಮಾಡಿದ್ದುದು ಒಂದು ದೊಡ್ಡ ಕತೆ. ಅದನ್ನು ಮುಂದೆ ನಿಮಗೆ ಹೇಳುತ್ತೇನೆ. ಎರಡನೆಯ ಸ್ಥಳ ಏನೆಂದರೆ ಬೆಳಗಾವಿ ನಗರದ ಮಧ್ಯೆ ಭಾಗದಲ್ಲಿದ್ದ ಖಾಸ್‌ಭಾಗ್ ಎನ್ನುವ ಪ್ರದೇಶ.  ಖಾಸ್‌ಭಾಗ್ ಎಂದರೆ ವಿಶೇಷ ಸುಂದರವಾದ ಹೂತೋಟ ಎಂದು ಅರ್ಥ.  ಆದರೆ ಇದು ನಗರದ ಅತೀ ದೊಡ್ಡ ಗೊಬ್ಬರದ ಗುಂಡಿಯಾಗಿತ್ತು.  ಕಳೆದ ಐವತ್ತು ಐವತ್ತೈದು ವರ್ಷಗಳಿಂದ ಬೆಳಗಾವಿ ನಗರದ ಕಸ-ಕಡ್ಡಿಗಳನ್ನು ನಗರದ ಮಧ್ಯ ಭಾಗವಾದ ಹತ್ತರಿಂದ ಹದಿನೈದು ಎಕರೆ ಈ ಖಾಸ್‌ಭಾಗ್ ಜಾಗದಲ್ಲಿ ತುಂಬಲಾಗುತ್ತಿತ್ತು. ದುರದೃಷ್ಟಕರ ಸಂಗತಿ ಎಂದರೆ ಈ ಜಾಗದ ಸುತ್ತುಮುತ್ತಲೂ ನಾಗರೀಕರು ವಾಸಿಸುವ ಮನೆಗಳು ಇದ್ದವು. ಈ ಗೊಬ್ಬರದ ಗುಂಡಿಯಿಂದ ಸೊಳ್ಳೆಗಳು, ಜಿರಳೆಗಳು ಮತ್ತಿತರ ಉಪದ್ರವಕಾರಿ ಕೀಟಗಳು ಹೆಚ್ಚಾಗಿ ಸುತ್ತಮುತ್ತಲಿನ ಮನೆಗಳಲ್ಲಿ ಇರುವವರು ಬಹಳ ತೊಂದರೆ ಅನುಭವಿಸುತ್ತಿದ್ದರು. ಬಹುತೇಕ ಮಂದಿಗೆ ಅನಾರೋಗ್ಯ ಹತ್ತಿಕೊಂಡಿತ್ತು. ಹೊಗೆಯಿಂದ ಹಾನಿಕಾರಕ ಕ್ರಿಮಿಗಳನ್ನು ನಾಶಪಡಿಸಿದ್ದರೂ ಪರಿಣಾಮಕಾರಿಯಾಗಿರಲಿಲ್ಲ. ಸುತ್ತಮುತ್ತಲಿನ ಜನರಿಗೆ ಸಂಕಷ್ಟ ಉಂಟಾಗಿ ಪ್ರತಿ ವರ್ಷ ನಗರಪಾಲಿಕೆಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ನಾನು ಅಧಿಕಾರ ಸ್ವೀಕರಿಸಿದ ಮೇಲೆ ಸ್ಥಳೀಯರು ನನ್ನ ಬಳಿ ಬಂದು ಮನವಿಯನ್ನು ಸಲ್ಲಿಸಿದರು.  ಆ ಜಾಗದ ಸುತ್ತ ಗೇರಾವ್ ಮಾಡಿ ಕಸ ಕಡ್ಡಿಗಳನ್ನು ತುಂಬಿದ ಟ್ರಕ್‌ಗಳನ್ನು ರಸ್ತೆಯಲ್ಲಿಯೇ ಗೊಬ್ಬರದ ಗುಂಡಿಯಿಂದ ನೂರು ಗಜದ ಅಂತರದಲ್ಲಿ ನಿಲ್ಲಿಸಿಬಿಡುತ್ತಿದ್ದರು. ಅದುವರೆಗೆ ತುಂಬಿದ ಕಸ ಕಡ್ಡಿಗಳು ಐವತ್ತು ಗಜ ಎತ್ತರದ ಒಂದು ದೊಡ್ಡ ಪರ್ವತದಂತೆ ಕಾಣಿಸುತ್ತಿತ್ತು. ಹಾಗಾಗಿ ಟ್ರಕ್‌ನ ಕರ್ಮಚಾರಿಗಳು ಆ ಕಸವನ್ನು ಬೆಟ್ಟದ ಬುಡದಲ್ಲಿ ತಂದು ಬಿಸಾಕಿ ಹೋಗುತ್ತಿದ್ದರು. ಇದರಿಂದಾಗಿ ರಸ್ತೆ ಮೇಲೆಯೇ ಎಲ್ಲಾ ಕಸವು ಬಿದ್ದಿದ್ದು ರಸ್ತೆ ಎಲ್ಲಾ ಗಲೀಜಿನಿಂದ ತುಂಬಿ ಹೋಗಿತ್ತು. ಚಿಂತಾಜನಕವಾದ ವಿಷಯ ಎಂದರೆ ಆಗ ಕಸ-ಕಡ್ಡಿಗಳನ್ನು ಬೇರ್ಪಡಿಸುತ್ತಿರಲಿಲ್ಲ ಹಾಗೂ ಸಂಸ್ಕರಿಸಿ ಇಡುತ್ತಿರಲಿಲ್ಲ. ಕಸ ಕಡ್ಡಿಗಳನ್ನು ಊರಿನಿಂದ ಆಚೆ ಸಾಗಿಸಿ ವೈಜ್ಞಾನಿಕವಾಗಿ ಸಂಸ್ಕರಿಸುವುದು ಅತೀ ಮುಖ್ಯವಾದ ಯೋಜನೆಯಾಗಿತ್ತು. ಆದರೆ ಕಳೆದ ಇಪ್ಪತ್ತೆರಡು ವರ್ಷಗಳಿಂದ ನಗರದ ಹೊರ ವಲಯದಲ್ಲಿ ಜಾಗ ಸಿಗದೆ ಇದ್ದುದ್ದರಿಂದ ಈ ಯೋಜನೆಯನ್ನು ಅನುಷ್ಟಾನಗೊಳಿಸಲು ಸಾಧ್ಯವಾಗಿರಲಿಲ್ಲ. ನಗರದಿಂದ ಮೂವತ್ತು ನಲವತ್ತು ಕಿ.ಮೀ. ದೂರದಲ್ಲಿದ್ದ ನಲವತ್ತು ಎಕರೆ ಜಾಗವನ್ನು ಗುರುತಿಸಿ ಜಾಗವನ್ನು ಸ್ವಾಧೀನ ಪಡಿಸಿಕೊಳ್ಳುವ ಕೆಲಸವನ್ನು ಆರಂಭಮಾಡಿದ್ದರು. ಅದರ ವಿಷಯವಾಗಿ ನ್ಯಾಯಾಲಯದಲ್ಲಿ ಖಟ್ಲೆಗಳು ದಾಖಲಾಗಿದ್ದುದರಿಂದ ಯೋಜನೆ ಮುಂದುವರೆದಿರಲಿಲ್ಲ. ಇದಲ್ಲದೆ ಸಾಗಾಣಿಕೆಯ ಶುಲ್ಕವು ಬಹಳವಾಗಿದ್ದಿತು. ಮುಂದಿನವಾರ ಈ ಸಮಸ್ಯೆ ಹೇಗೆ ನಿವಾರಣೆಯಾಯಿತು ಎಂಬುದರ ಬಗ್ಗೆ ಹೇಳುತ್ತೇನೆ.

 -ಶಾಲಿನಿ ರಜನೀಶ್, ಐಎಎಸ್
anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.