ಯುಪಿಎ ಭ್ರಷ್ಟಾಚಾರದ ಮಸಿ ಸೋನಿಯಾಗೆ ಅಂಟುವುದಿಲ್ಲವೇ?

ದಿಗ್ವಿಜಯ್ ಸಿಂಗ್ ಅಪರೂಪಕ್ಕೆ ಇದ್ದದ್ದನ್ನು ಇದ್ದ ಹಾಗೆ ಹೇಳಿದ್ದಾರೆ. ಸಿಎನ್‌ಎನ್-ಐಬಿಎನ್...
Updated on: 

ದಿಗ್ವಿಜಯ್ ಸಿಂಗ್ ಅಪರೂಪಕ್ಕೆ ಇದ್ದದ್ದನ್ನು ಇದ್ದ ಹಾಗೆ ಹೇಳಿದ್ದಾರೆ. ಸಿಎನ್‌ಎನ್-ಐಬಿಎನ್ ಚಾನೆಲ್‌ನ ಕರಣ್‌ಥಾಪರ್ ಜತೆ ಹರಟುತ್ತ 'ಸೋನಿಯಾ ಗಾಂಧಿ ಕಾಂಗ್ರೆಸ್‌ನ ನಂಬರ್ ಒನ್ ನಾಯಕಿ. ಆಕೆಯ ಆಣತಿ ಇಲ್ಲದೆ ಒಂದು ಕಲ್ಲೂ ಜರುಗುವುದಿಲ್ಲ. ಸರ್ಕಾರದ ನೀತಿ, ನಿರ್ಧಾರಗಳ ವಿಷಯದಲ್ಲಿ ಅವರದ್ದೇ ಅಂತಿಮ ತೀರ್ಮಾನ. ಯಾವುದೇ ಮಹತ್ತರ ನಿರ್ಧಾರಗಳು ಅವರ ಪರಿವೆಗೆ ಬಾರದೆ ತೆಗೆದುಕೊಳ್ಳಲು ಸಾಧ್ಯವಿಲ್ಲ' ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದಾರೆ. ಇದೇ ಮಾತನ್ನು ಆಡ್ವಾಣಿ ಹೇಳಿದಾಗ ಅವರ ಮೇಲೆ ಹರಿಹಾಯುವ ಕಾಂಗ್ರೆಸಿಗರು ಈಗ ಮಾತ್ರ ಮೌನಕ್ಕೆ ಶರಣಾಗಿದ್ದಾರೆ. 2004ರಿಂದ ಲಾಗಾಯ್ತು ಯುಪಿಎ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಈ ಅಂಶ ಎಲ್ಲರಿಗೂ ಸ್ಪಷ್ಟವಾಗಿತ್ತು. ಮನಮೋಹನ್ ಸಿಂಗ್ ಅವರು ಸಹಿ ಹಾಕಲಷ್ಟೇ ಪ್ರಧಾನಿ, ಅವರ ಹಿಂದೆ ನಿಂತು ನಿರ್ಧಾರ ಕೈಗೊಳ್ಳುವುದು ಸೋನಿಯಾ ಮತ್ತು ಸೋನಿಯಾ ಮಾತ್ರ ಎಂಬ ಬಗ್ಗೆ ಯಾರಲ್ಲಿಯೂ ಅನುಮಾನ ಇರಲಿಲ್ಲ. ಈಗ ದಿಗ್ವಿಜಯ್ ಹೇಳಿಕೆ  ಸತ್ಯವನ್ನು ಕಟುಸತ್ಯ ಎಂದು ಸಾಬೀತುಪಡಿಸಿದೆ ಅಷ್ಟೇ. ದಿಗ್ವಿಜಯ್ ಹೀಗೆ ಹೇಳುತ್ತಿರುವುದು ಇದೇ ಮೊದಲೇನಲ್ಲ. ಕೆಲ ದಿನಗಳ ಹಿಂದಷ್ಟೇ ರಾಹುಲ್ ಗಾಂಧಿಗೆ ಪರಾಕ್ ಹೇಳುವ ಭರದಲ್ಲಿ 'ಈ ಕಳೆದ ಒಂಬತ್ತು ವರ್ಷಗಳಲ್ಲಿ ಕಾಂಗ್ರೆಸ್ ಅಧ್ಯಕ್ಷರು ಮತ್ತು ಸರ್ಕಾರ ನಡೆಸುವ ಪ್ರಧಾನಮಂತ್ರಿ ಬೇರೆ ಬೇರೆ ವ್ಯಕ್ತಿಗಳಾಗಿರುವುದು ಸುಸೂತ್ರ ಆಡಳಿತದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ ಅಲ್ಲ. ಎರಡು ಶಕ್ತಿ ಕೇಂದ್ರಗಳ ವ್ಯವಸ್ಥೆ ಉತ್ತಮ ಅಲ್ಲ' ಎಂದು ಹೇಳಿ ಕೆಲ ದಿನಗಳ ಕಾಲ ಮೌನಕ್ಕೆ ಶರಣಾಗಿದ್ದರು. ದಿಗ್ವಿಜಯ್ ಅವರ ಸತ್ಯ ನಿವೇದನೆ ಇಲ್ಲಿಗೆ ಕೊನೆ ಆಗಿಲ್ಲ. ಸರ್ಕಾರದ ದಿನನಿತ್ಯದ ಕಾರ್ಯ ನಿರ್ವಹಣೆಯಲ್ಲಿ ಸೋನಿಯಾ ಎಂದೂ ಹಸ್ತಕ್ಷೇಪ ಮಾಡಿಲ್ಲ. ಅವರ ಮಧ್ಯ ಪ್ರವೇಶ ಏನಿದ್ದರೂ ನೀತಿ ನಿರೂಪಣೆಯಲ್ಲಿ ಮಾತ್ರ ಎಂದಿದ್ದಾರೆ' ಎಂಥಾ ದುರಂತ. ಇಡೀ ದೇಶದ ಅಭ್ಯುದಯದ ಹೊಣೆ ಹೊರುವ ಪ್ರಧಾನಮಂತ್ರಿ ಸ್ಥಾನವನ್ನು ಸೋನಿಯಾಗಾಂಧಿ ಕಡತಗಳಿಗೆ ಸಹಿ ಹಾಕುವ ಸರ್ಕಾರಿ ಗುಮಾಸ್ತನ ಮಟ್ಟಕ್ಕೆ ಇಳಿಸಿ ಬಿಟ್ಟಿದ್ದಾರೆ. ಬ್ರಿಟನ್ನಿನಲ್ಲಿ ಪ್ರತಿಪಕ್ಷದ ನಾಯಕನನ್ನು ಶ್ಯಾಡೋ ಪ್ರೈಮ್ ಮಿನಿಸ್ಟರ್ ಎಂದು ಕರೆಯುತ್ತಾರೆ. ಆದರೆ ಭಾರತದಲ್ಲಿ ಆಡಳಿತ ನಡೆಸುವ ಪ್ರಧಾನಮಂತ್ರಿಯೇ ಬೇರೊಬ್ಬರ ಶ್ಯಾಡೋ ಆಗಿದ್ದಾರೆ. ಇದು ಬಹುಶಃ ದೇಶದ ಇತಿಹಾಸದಲ್ಲಿಯೇ ಈ ಹಿಂದೆ ಎಂದೂ ಆಗಿರಲಿಲ್ಲ. ಯುಪಿಎ ಸರ್ಕಾರದ ಎರಡು ಅವಧಿಗಳ ಅತಿ ದೊಡ್ಡ ಸಾಧನೆ ಎಂದರೆ ಪ್ರಧಾನಿ ಹುದ್ದೆಯ ಘನತೆಯನ್ನು ಮಣ್ಣುಪಾಲು ಮಾಡಿದ್ದೇ ಇರಬೇಕು. ಇಷ್ಟಕ್ಕೂ ಈ ಕಾಂಗ್ರೆಸ್ ಪಕ್ಷ ಸೋನಿಯಾಗೆ ಕ್ರೆಡಿಟ್ ಕೊಡುತ್ತಿರುವುದಾದರೂ ಯಾವ ಘನಂದಾರಿ ಕೆಲಸಕ್ಕೆ? ಖಜಾನೆಯನ್ನು ಹಿಂಡಿ ಹಿಪ್ಪೆ ಮಾಡಿದ ಜನಪ್ರಿಯ, ಮತ ಬ್ಯಾಂಕ್ ಮೇಲಷ್ಟೇ ಕಣ್ಣಿಟ್ಟ ಯೋಜನೆಗಳಿಗಾ? ಈ ಯೋಜನೆಗಳಿಂದ ದೇಶದ ಅರ್ಥ ವ್ಯವಸ್ಥೆಗೆ ಕಿಂಚಿತ್ತಾದರೂ ಲಾಭ ಆಗಿದೆಯೇ?
2004ರಲ್ಲಿ ಯುಪಿಎ ಅಧಿಕಾರಕ್ಕೆ ಬಂದಾಗ ಇದ್ದ ಪರಿಸ್ಥಿತಿಯನ್ನು ಗಮನಿಸಿ, ಸತತವಾಗಿ ಹಿಂದಿನ ಸರ್ಕಾರಗಳು ಕೈಗೊಂಡಿದ್ದ ಬಂಡವಾಳ ಆಕರ, ಸುಧಾರಣಾ ಕ್ರಮಗಳಿಂದಾಗಿ ದೇಶದ ಖಜಾನೆಯಲ್ಲಿ ಬಂಡವಾಳ ತುಂಬಿತ್ತು. ಜಾಗತಿಕವಾಗಿ ಸಹ ಅದು ಆರ್ಥಿಕ ಉಬ್ಬರದ ದಿನಗಳು. ಎಲ್ಲೆಲ್ಲೂ ಹಣದ ಹರಿವು ತೀಕ್ಷ್ಣವಾಗಿದ್ದ ಕಾಲ. ಅದನ್ನು ಯುಕ್ತವಾಗಿ ಬೆಳೆಸಿಕೊಂಡಿದ್ದರೆ ಇಂದು ದೇಶದ ಅರ್ಥ ವ್ಯವಸ್ಥೆ ಸುಭದ್ರ ನೆಲೆಯಲ್ಲಿ ಇರುತ್ತಿತ್ತು. ಆದರೆ  ಮನಮೋಹನ್ ಸಿಂಗ್ ಸರ್ಕಾರ ರಚಿಸಿದಂದೇ ರಾಷ್ಟ್ರೀಯ ಸಲಹಾ ಮಂಡಳಿ (ಃಆಈ) ಎಂಬ ಪರ್ಯಾಯ ಸರ್ಕಾರವೂ  ಅಸ್ತಿತ್ವಕ್ಕೆ ಬಂತು. ಅದರ ಅಧ್ಯಕ್ಷರಾಗಿ ಸೋನಿಯಾ ಅಧಿಕಾರ ವಹಿಸಿಕೊಳ್ಳುವ ಮೂಲಕ ಪ್ರಧಾನಿಯನ್ನು ಅಂದೇ ಮೂಲೆಗುಂಪು ಮಾಡಿದರು. ಸಾಮಾನ್ಯ ಪರಿಸ್ಥಿತಿಯಲ್ಲಾಗಿದ್ದರೆ ಸರ್ಕಾರ ಸಾಗಬೇಕಾದ ಮಾರ್ಗ, ಅನುಸರಿಸಬೇಕಾದ ನೀತಿಗಳ ಬಗ್ಗೆ ಸಲಹೆ ನೀಡುವ ಹೊಣೆ ಹೊತ್ತ  ಈ ಮಂಡಳಿಗೆ ಪ್ರಧಾನಿಯೇ ಅಧ್ಯಕ್ಷರಾಗಬೇಕಿತ್ತು. ಆದರೆ ಸೋನಿಯಾಗೆ ಅದು ಬೇಕಿರಲಿಲ್ಲ. ಎಲ್ಲಿ ಪ್ರಧಾನಿ ಪರ್ಯಾಯ ಶಕ್ತಿ ಕೇಂದ್ರವಾಗಿ ಬಿಡುತ್ತಾರೋ ಎಂಬ ಭಯ ಕಾಡಿರಬೇಕು. ಇಲ್ಲವೇ 1991ರಲ್ಲಿ ರಾಜೀವ್‌ಗಾಂಧಿ ನಿಧನಾ ನಂತರ ಪ್ರಧಾನಿ ಮತ್ತು ಕಾಂಗ್ರೆಸ್ ಅಧ್ಯಕ್ಷಗಿರಿ ಅಲಂಕರಿಸಿದ ಪಿ.ವಿ. ನರಸಿಂಹರಾವ್ ಹೇಗೆ ತಮ್ಮನ್ನು ಕಡೆಗಣಿಸಿದರೋ ಹಾಗೆಯೇ ಮನಮೋಹನ್ ಸಹ ಮಾಡಿದರೆ ಗತಿ ಏನು ಎಂಬ ಅಳುಕು ಅವರನ್ನು ಕಾಡಿದ್ದಿರಬೇಕು. ಅದಕ್ಕೇ ಸಲಹಾ ಮಂಡಳಿಗೆ ಸ್ವತಃ ಸೋನಿಯಾ ಅಧ್ಯಕ್ಷರಾದರು. ದಶಕಗಳ ಹಿಂದಿನ ಇದೇ ನೆಹರು-ಗಾಂಧಿ ಕುಟುಂಬದ ಹುಸಿ ಸಮಾಜವಾದದ ಜಾಡಿನಲ್ಲಿಯೇ ಸಾಗಿದ ಈ ಮಂಡಳಿಯ ಶಿಫಾರಸುಗಳು ಆರೋಗ್ಯಕರ ಅರ್ಥ ವ್ಯವಸ್ಥೆಗೆ ಮಾರಕ ಎನ್ನುವಂತೆಯೇ ಇದ್ದವು. ಈ ಮಂಡಳಿಯ ಒತ್ತಡ, ಒತ್ತಾಸೆಗೆ ಮಣಿದು ಯುಪಿಎ-1 ಸರ್ಕಾರ ಜಾರಿಗೆ ತಂದ ಎರಡು ಮಹತ್ವದ ಯೋಜನೆಗಳನ್ನು ಗಮನಿಸಿದರೆ ಇದು ಅರ್ಥವಾಗುತ್ತದೆ. ಮೊದಲನೆಯದು ಬೃಹತ್ ಪ್ರಮಾಣದಲ್ಲಿ ರೈತರ ಸಾಲ ಮನ್ನಾ, ಇದರಿಂದ ಬೊಕ್ಕಸದ ಮೇಲೆ ಆದ ಪ್ರಭಾವ ಏನು? 60 ಸಾವಿರ ಕೋಟಿ ರೂಪಾಯಿಗಳ ಹೆಚ್ಚುವರಿ ಹೊರೆ. ಅದೂ ಸಬ್ಸಿಡಿಯ ರೂಪದಲ್ಲಿ. ಇಂದು ಸರ್ಕಾರದ ವಿತ್ತೀಯ ಕೊರತೆಯ ಬಹುಭಾಗವನ್ನು ಈ ಸಬ್ಸಿಡಿ ಭೂತ ಆವರಿಸಿಕೊಂಡಿದ್ದರೆ ಅದರಲ್ಲಿ ಸೋನಿಯಾ ಪ್ರಣೀತ ಸಾಲ ಮನ್ನಾ ಯೋಜನೆಯೂ ಸೇರಿದೆ. ಇನ್ನು ಎರಡನೆಯದು, ಬಡವರ್ಗದ ಜನರಿಗೆ ವರ್ಷದಲ್ಲಿ ಕನಿಷ್ಠ 100 ದಿನಗಳ ಉದ್ಯೋಗದ ಖಾತ್ರಿ ನೀಡುವ ನರೇಗಾ ಯೋಜನೆ. ಈ ಯೋಜನೆಯಿಂದ ದುರ್ಬಲ ಜನವರ್ಗಗಳಿಗೆ ಒಂದಿಷ್ಟು ಸಹಾಯ ಆಗಿರಬಹುದು. ಆದರೆ ಅದಕ್ಕಿಂತ ಹೆಚ್ಚಾಗಿ ಮಧ್ಯವರ್ತಿಗಳ ಬಾಳು ಬೆಳಕಾಗಿದೆ. ಯಾವುದೇ ಸರ್ಕಾರ ಜನಪರ ಯೋಜನೆಗಳನ್ನು ಜಾರಿಗೆ ತಂದಾಗ ಅದನ್ನು ಪ್ರಶ್ನಿಸುವುದು ತರವಲ್ಲ. ಹಾಗೆಯೇ ಈ ಯೋಜನೆಗಳು ಜಾರಿಗೆ ಬಂದಾಗಲೂ ಯಾರೂ ಹೆಚ್ಚಿಗೆ ಮಾತನಾಡಲಿಲ್ಲ. 2009ರಲ್ಲಿ ಯುಪಿಎ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದಾಗಲಂತೂ ಕಾಂಗ್ರೆಸ್‌ನ ಎಲ್ಲ ಹಿರಿ-ಮರಿ ಪುಢಾರಿಗಳೂ ಪಕ್ಷದ ಗೆಲುವಿಗೆ ಸೋನಿಯಾ ದೂರದೃಷ್ಟಿ (ಜನಪ್ರಿಯ ಯೋಜನೆಗಳು) ಕಾರಣ ಎಂದು ಬೊಬ್ಬೆ ಹೊಡೆದರು.
ಆದರೆ ಇದರ ಅಸಲಿಯತ್ತು ಬೇರೆಯದೇ ಇತ್ತು. ಎರಡೂ ಯೋಜನೆಗಳ ಫಲಾನುಭವಿಗಳು ಗ್ರಾಮೀಣ ಪ್ರದೇಶದ ಜನರಾಗಿದ್ದರು. ಏಕಾಏಕಿ ಅವರ ಕೈಗೆ ಹಣ ಸೇರುವಂತೆ ಮಾಡುವ ಮೂಲಕ ಸರ್ಕಾರ ಕೃತಕ ಹಣದುಬ್ಬರದ ಬೀಜ ಬಿತ್ತಿತ್ತು. ರೈತರನ್ನು, ಕೂಲಿ ಕಾರ್ಮಿಕರನ್ನು ಗಿರಾಕಿ ಸಂಸ್ಕೃತಿಗೆ ಪರಿಚಯಿಸಿತು. ಇದರಿಂದ ಹಣದ ಹರಿವು ಎಲ್ಲ  ಸ್ತರಗಳಲ್ಲಿ ಹೆಚ್ಚಾಗಿ ಡಿಮ್ಯಾಂಡ್ ಸೃಷ್ಟಿಯಾಯಿತು. ಆದರೆ ಈ ಡಿಮ್ಯಾಂಡ್ ಪೂರೈಸುವ ವಿಧಾನ (Supply chain) ಬಿರುಕು ಬಿಟ್ಟಿತು. ಈ ಎರಡರ ನಡುವಿನ ಅಂತರ ದಿನೇ ದಿನೆ ಹೆಚ್ಚಾಗಿ ಹಣದುಬ್ಬರ ಮಿತಿ ಮೀರಿತು. ಪರಿಣಾಮ ಏರುಮುಖವಾಗಬೇಕಿದ್ದ, ದೇಶದ ಅರ್ಥ ವ್ಯವಸ್ಥೆ ಕುಸಿತದ ಭೀತಿಗೆ ಒಳಗಾಯಿತು. ಕೃತಕ ಹಣದುಬ್ಬರ ಸೃಷ್ಟಿಸಿದ ಅಪಕೀರ್ತಿ ಆರ್ಥಿಕ ತಜ್ಞ ಮನಮೋಹನ್ ಸಿಂಗ್ ಅವರ ತಲೆಗಂಟಿತು. ಸೋನಿಯಾ ಗಾಂಧಿ ಅವರಿಗೆ ಆ ಶಾಪ ತಟ್ಟಲೇ ಇಲ್ಲ. ಇಂದು ದೇಶದ ಅರ್ಥ ವ್ಯವಸ್ಥೆ ಅಲುಗಾಡುತ್ತಿದೆ, ಬಂಡವಾಳ ಸೃಷ್ಟಿ ಇವತ್ತಿನ ತುರ್ತು ಅಗತ್ಯವಾಗಿದೆ. ಇದಕ್ಕಾಗಿ ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಹೆಚ್ಚಿಸಲೇಬೇಕಾಗಿದೆ. ಚಿಲ್ಲರೆ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸಲೇಬೇಕಾಗಿದೆ. ಆರ್ಥಿಕ ಸುಧಾರಣಾ ಕ್ರಮಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳದಿದ್ದರೆ ದೇಶ ದಿವಾಳಿ ಆಗುತ್ತದೆ. ಹಾಗಾಗಿ ನಮ್ಮೊಂದಿಗೆ ಸಹಕರಿಸಿ ಎಂದು ಮನಮೋಹನ್ ಸಿಂಗ್ ಮತ್ತು ವಿತ್ತ ಸಚಿವ ಚಿದಂಬರಂ ಎಷ್ಟೇ ಅಲವತ್ತುಕೊಂಡರೂ ಅದಕ್ಕೆ ನೇರ ಹೊಣೆ ಸೋನಿಯಾಗಾಂಧಿ ಅಲ್ಲವೇ? ಅವರ ಮಾತು ಕೇಳಿ, ಅವರ ತಾಳಕ್ಕೆ ತಕ್ಕಂತೆ  ಕುಣಿದು ಅರ್ಥ ವ್ಯವಸ್ಥೆಯನ್ನು ಹಳಿ ತಪ್ಪಿಸಿ ಈಗ ಬೊಬ್ಬೆ ಹೊಡೆದರೆ ಯಾರು ಕೇಳುತ್ತಾರೆ? ಜನರಿಗೆ ಬುದ್ಧಿ ಹೇಳುವ ಮೊದಲು ಇಂತಹ ಯೋಜನೆಗಳ ಜಾರಿಗೆ ರಚ್ಚೆ ಹಿಡಿದು ಕುಳಿತ ಸೋನಿಯಾ ಅವರಿಗೇ ಬುದ್ಧಿ ಹೇಳಬೇಕಿತ್ತಲ್ಲವೇ? ಈ ಸೋನಿಯಾ ಸಲಹಾ ಮಂಡಳಿಯ ಅವಾಂತರ ಇಲ್ಲಿಗೆ ಮುಗಿದಿಲ್ಲ. ಸಂಸತ್ತಿನ ಪ್ರಸಕ್ತ ಅಧಿವೇಶನದಲ್ಲಿ ಅನುಮೋದನೆಗೆ ಕಾದಿರುವ ಆಹಾರ ಭದ್ರತಾ ಕಾಯಿದೆ ದೇಶದ ಆರ್ಥಿಕತೆಯ ಪಾಲಿಗೆ ಮತ್ತೊಂದು ಬಿಳಿಯಾನೆ ಆಗುವ ಎಲ್ಲ ಲಕ್ಷಣಗಳಿವೆ. ಇದು ಜಾರಿಗೆ ಬಂದದ್ದೇ ಆದರೆ ಇದೊಂದರಿಂದಲೇ ಸಬ್ಸಿಡಿ ಮೊತ್ತ ಲಕ್ಷ ಕೋಟಿ ರೂ. ದಾಟಲಿದೆ. ಈಗಾಗಲೇ ಅಂಕೆ ಮೀರಿರುವ ವಿತ್ತೀಯ ಕೊರತೆ ಮತ್ತಷ್ಟು ಏರಲಿದೆ. ಸಾಲದ್ದಕ್ಕೆ ಉಳ್ಳವರಿಗೆ ಮತ್ತು ಸಬ್ಸಿಡಿದಾರರಿಗೆಂದು ಎರಡು ಪ್ರತ್ಯೇಕ ಮಾರುಕಟ್ಟೆ ಸೃಷ್ಟಿಯಾಗಲಿದೆ. ಈಗ ಸರ್ಕಾರದ ಗೋದಾಮು ಸೇರುವ ಧವಸ-ಧಾನ್ಯ ಈ ಯೋಜನೆಯ ಫಲಾನುಭವಿಗಳಿಗೆಂದೇ ಮೀಸಲಾದ ಬಳಿಕ ಮುಕ್ತ ಮಾರುಕಟ್ಟೆಯಲ್ಲಿ ಒತ್ತಡ ಹೆಚ್ಚಿ ಅದು ಕೃತಕ ಅಭಾವ ಸೃಷ್ಟಿಸುವುದೇ ಅಲ್ಲದೆ ಈವರೆಗೆ ಆಹಾರ ಸ್ವಾವಲಂಬಿಯಾಗಿರುವ ದೇಶದವನ್ನು ಪರಾವಲಂಬಿ (ಆಹಾರ ಆಮದು) ದೇಶವಾಗಿಸುವ ಎಲ್ಲ ಅಪಾಯ ಇದೆ. ಈಗಷ್ಟೇ ಇಳಿಮುಖ ಕಾಣುತ್ತಿರುವ ಹಣದುಬ್ಬರ ಮತ್ತೆ ಕೈ ಮೀರುವ ಲಕ್ಷಣಗಳನ್ನೂ ಅಲ್ಲಗಳೆಯುವಂತಿಲ್ಲ.
ಈ ಕಾಯಿದೆ ಅನುಷ್ಠಾನಕ್ಕೆ ಬಂದಾಕ್ಷಣ ಸೋನಿಯಾ ಅವರನ್ನು ಬಡ ಜನರ ಉದ್ಧಾರಕ್ಕೆಂದೇ ಅವತರಿಸಿದ ದೇವತೆ ಎಂದು ಕಾಂಗ್ರೆಸಿಗರು ಕೊಂಡಾಡಿದರೂ ಆಶ್ಚರ್ಯ ಇಲ್ಲ. ಆದರೆ ಇದು ಉಂಟು ಮಾಡುವ ಅಸಮಾನತೆಯನ್ನು ಸರಿದೂಗಿಸುವ ಅಥವಾ ಅದರ ದುಷ್ಪರಿಣಾಮವನ್ನು ಸಹಿಸಿಕೊಳ್ಳಬೇಕಾದ ಅನಿವಾರ್ಯತೆ ಮಾತ್ರ ಸಾಮಾನ್ಯ  ಜನರದ್ದೇ ಆಗಿರುತ್ತದೆ. ಇನ್ನು ದಿಗ್ವಿಜಯ್ ಮಾತಿನ ಲಾಜಿಕ್ ಪ್ರಕಾರ ಈ ಸರ್ಕಾರದ ಸೂತ್ರ ಸೋನಿಯಾ ಕೈಲಿದೆ ಎಂದಾದರೆ ಯುಪಿಎ ಆಡಳಿತದಲ್ಲಿ ಬಯಲಿಗೆ ಬಂದ ಭ್ರಷ್ಟಾಚಾರದಲ್ಲೂ ಅವರ ಕೈವಾಡವಿದೆ ಎಂದಾಯಿತಲ್ಲವೇ? ಸರ್ಕಾರದ ನೀತಿ ನಿರೂಪಣೆಯಲ್ಲಿ ಮಾತ್ರ ಸೋನಿಯಾ ಮೂಗು ತೂರಿಸುತ್ತಾರೆ ಎಂದಾದರೆ 2ಜಿ ತರಂಗಾಂತರ ಗುಚ್ಛ ಹಾಗೂ ಕಲ್ಲಿದ್ದಲು ಗಣಿ ಹರಾಜು ಪ್ರಮುಖ ನೀತಿ ನಿರ್ಧಾರಗಳಲ್ಲವೇ? ಒಂದೊಂದೂ ಹಲವು ಲಕ್ಷ ಕೋಟಿ ರೂ.ಗಳ ಭ್ರಷ್ಟಾಚಾರದ ಬೇರುಗಳು ಎಂದಾದರೆ ಅದೇ ಬೇರು ಸೋನಿಯಾ ಹಾಗೂ ಕಾಂಗ್ರೆಸ್ ಪಕ್ಷವನ್ನು ಪೋಷಿಸಿಲ್ಲ ಎಂದು ನಂಬುವುದಾದರೂ ಹೇಗೆ? ಅಧಿಕಾರ ಬೇಡ ಎಂದು 'ತ್ಯಾಗ' ಮಾಡಿದ ಮೇಲೆ ಪರೋಕ್ಷವಾಗಿ ಅಧಿಕಾರದ ನೊಗ ಹಿಡಿಯುವ, ತನಗೆ ಬೇಕೆಂದ ಹಾಗೆ ಸರ್ಕಾರವನ್ನು ಕುಣಿಸುವ ಉಮೇದಾದರೂ ಏಕೆ? ತ್ಯಾಗದ ಹೆಸರಿನಲ್ಲಿ ವರ್ಜ್ಯ ಮಾಡಿದ್ದನ್ನು ಪಕ್ಷದ ಹೆಸರಿನಲ್ಲಿ ಮರಳಿ ಪಡೆಯುವ ದುರಾಸೆಯಾದರೂ ಏಕೆ? ಯಾವ ಕಾಂಗ್ರೆಸಿಗನೂ ಸೋನಿಯಾ ಅವರಿಗೆ ಈ ಪ್ರಶ್ನೆಗಳನ್ನು ಕೇಳಲಾರ. ಕೇಳಲು ಸಾಧ್ಯವೂ ಇಲ್ಲ. ಆದರೆ ಮತದಾರ ಖಂಡಿತ ಈ ಪ್ರಶ್ನೆ ಕೇಳಬಹುದು ಮತ್ತು ಕೇಳಲೇಬೇಕು.

 -ಕೆ.ಎಸ್.ಜಗನ್ನಾಥ್
jagannath.kudinoor@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com