ಭಾರತೀಯ "ನಿಜ ರಾಜಕಾರಣದಲ್ಲಿ" ಒಂದು ರಾಜ್ಯದ ಮುಖ್ಯಮಂತ್ರಿಯಾದವರು ಪಕ್ಷದ ರಾಷ್ಟ್ರೀಯ ನಾಯಕರಿಗೆ ಸಂಪನ್ಮೂಲವನ್ನು ಒದಗಿಸುವುದು ದೊಡ್ಡ ರಾಜಕೀಯ ವಿವಾದಕ್ಕೆ ಗ್ರಾಸವನ್ನು ಒದಗಿಸುವಂತಿಲ್ಲ. "ಅದು ಮಾಮೂಲಿ".
ಲಾಗಾಯ್ತಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ ಇದು. ರಾಜಕೀಯ ಪಕ್ಷಗಳಿಗೆ, ರಾಜಕಾರಣಕ್ಕೆ ನ್ಯಾಯವಾದ ಕಾಯಿದೆ ಬದ್ಧ ರೀತಿಯಲ್ಲಿ ಸಂಪನ್ಮೂಲಗಳನ್ನು ರೂಢಿಸಿಕೊಳ್ಳುವುದು ಅಸಾಧ್ಯವಾಗಿರುವ ಸನ್ನಿವೇಶದಲ್ಲಿ ಇಂತಹ ಅಡ್ಡದಾರಿಯನ್ನು ಹಿಡಿಯುವುದು ಅನಿವಾರ್ಯವೇ ಆಗಿರಬಹುದು. ಇದೊಂದು ತಾತ್ವಿಕ ವಿವಾದಕ್ಕೆ ವಸ್ತುವಾಗಬಹುದಷ್ಟೇ. ನಿಜ ರಾಜಕೀಯದಲ್ಲಲ್ಲ.
ಆದರೆ, ರಾಜ್ಯದ ವಿಧಾನ ಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಾರ್ಟಿಯಿಂದ ಸಿಡಿದು ಹೋಗಿ ಹೊಸದಾಗಿ ರಚಿಸಿಕೊಂಡಿರುವ ಕರ್ನಾಟಕ ಜನತಾ ಪಕ್ಷದ ಮೂಲಕ ದಾಯಾದಿಗಳ ಜಗಳವನ್ನು ಯಡಿಯೂರಪ್ಪ ಆರಂಭಿಸಿರುವುದರಿಂದ ಅವರು (ಯಡಿಯೂರಪ್ಪ) ಹಿಂದೆ ಆಡ್ವಾಣಿ ಅವರಿಗೆ ಹಣ ಕೊಟ್ಟಿದ್ದರೆನ್ನುವ ಆರೋಪ ರಾಜಕೀಯ ಅಲ್ಲಕಲ್ಲೋಲವನ್ನೇ ಸೃಷ್ಟಸಿರುವುದು ಸಹಜ. ಈ ಆರೋಪವನ್ನು, ಹಿಂದೆ ಬಿಜೆಪಿ ವಕ್ತಾರರಾಗಿದ್ದು, ಈಗ ಕೆಜೆಪಿಯ ವಕ್ತಾರರಾಗಿರುವ ಧನಂಜಯಕುಮಾರ್, ಆಡ್ವಾಣಿ ಅವರ ಮೇಲೆ ಹೊರಿಸಿದ್ದು, ಒಂದು ಅಧಿಕೃತ ಪತ್ರಿಕಾಗೋಷ್ಠಿಯಲ್ಲಿ. ಒಂದು ಪಕ್ಷದ ರಾಜ್ಯ ಘಟಕದ ಪ್ರತಿನಿಧಿ ಕೇಂದ್ರದ ನಾಯಕರಿಗೆ ಹಣವನ್ನು ಒದಗಿಸುವುದು ಸುದ್ದಿಯೇ ಅಲ್ಲ. ಆದರೆ ಆ ಹಣ ಪಕ್ಷಕ್ಕಲ್ಲದೇ "ನಾಯಕರ ಸ್ವಂತಕ್ಕೆ" ಎನ್ನುವುದಾದರೆ ಅದು ದೊಡ್ಡ ಸುದ್ದಿ- ಕಳಂಕ ಎಲ್ಲವೂ.
ಧನಂಜಯ ಕುಮಾರ್ ಅವರು ಆರೋಪವನ್ನೇನೋ ಹೊರಿಸಿಬಿಟ್ಟರು. ಅದನ್ನೇನೂ ಆಡ್ವಾಣಿ ಅವರು ನಿರಾಕರಿಸಲಿಲ್ಲ. ಧನಂಜಯ ಕುಮಾರ್ ತಮ್ಮ ಆರೋಪಕ್ಕೆ ಬೆಂಬಲ ರೂಪದಲ್ಲಿ ದಾಖಳೆಗಳನ್ನೋ ಅಥವಾ ಸಾಂದರ್ಭಿಕ ಸಾಕ್ಷ್ಯವನ್ನೋ, ಬೇರೆ ಯಾವುದಾದರೂ ಆಧಾರವನ್ನೋ ಪ್ರದರ್ಶಿಸಿದ್ದರೆ ಆ ಮಾತು ಬೇರೆ. ಅವರು ಹಾಗೇನೂ ಮಾಡಲಿಲ್ಲ.
ಧನಂಜಯಕುಮಾರ್ ನೂರು ಕೋಟಿ ರುಪಾಯಿಗಳಷ್ಟು ಹಣವನ್ನು ಯಡಿಯೂರಪ್ಪ ಆಡ್ವಾಣಿ ಅವರಿಗೆ ಒದಗಿಸಿದ್ದಾರೆ ಎಂದು ಹೇಳಿದಾಗ, ಅವರು ಯಡಿಯೂರಪ್ಪ ಅವರ ಬಳಿ ಅಷ್ಟೊಂದು ಹಣ ಹೇಗೆ, ಯಾವ ಮೂಲದಿಂದ ಶೇಖರವಾಗಿತ್ತು ಎನ್ನುವ ಪ್ರಶ್ನೆಯನ್ನು ಮುಂದೆ ಯಾರಾದರೂ ಕೇಳಬಹುದೆಂದು ನಿರೀಕ್ಷಿಸಿರಲಿಕ್ಕಿಲ್ಲ. ಎಲ್ಲಿಂದ ಬಂದಿತ್ತು ಆ ಹಣ?
ಸದ್ಯಕ್ಕೆ, ಯಡಿಯೂರಪ್ಪ ಅವರು ಆಡ್ವಾಣಿ ಅವರಿಗೆ, ಅವರ ಮಕ್ಕಳಿಗೆ ಹಣ ಕೊಟ್ಟಿಲ್ಲ ಎಂದು ಹೇಳಿ, ಧನಂಜಯಕುಮಾರ್ ಅವರು ಹೀಗೇಕೆ ಹೇಳಿದರೋ ಎಂದು ಅಧಿಕೃತವಾಗಿ ಹೇಳಿ ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ. ಆದರೆ ಇದೇ ಕೊನೆ ಮಾತೇನು? ಖಂಡಿತ ಆಗಲಿಕ್ಕಿಲ್ಲ.
ಬಿಜೆಪಿ- ಕೆಜೆಪಿಗಳು ಈಗ ದಾಯಾದಿ ಪಕ್ಷಗಳಂತೆ ವರ್ತಿಸಿ, ಜಗಳವಾಡುತ್ತಿರುವುದು ಎಲ್ಲರಿಗೂ ಅರ್ಥವಾಗುವಂತಹ ವಿಚಾರ. ಆದರೆ ಈ ವಿವಾದದಲ್ಲಿ ಯಡಿಯೂರಪ್ಪ ಅವರು ಆಡ್ವಾಣಿ ಅವರಿಗೆ ಹಣ ಕೊಟ್ಟಿರಲೂಬಹುದೆಂದು ಒಂದೇ ಹೊತ್ತಿನಲ್ಲಿ ಎಐಸಿಸಿಯ ಕರ್ನಾಟಕದ ಪ್ರಭಾರಿ ಮಧುಸೂದನ ಮಿಸ್ತ್ರಿ, ಮಾಜಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ಪೂಜಾರಿ ಹಾಗೂ ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದು ಅವಸರದ ಅನಗತ್ಯ ಮಾತು. ಅದರಿಂದ ಅವರ ಘನತೆ ಕುಗ್ಗಿದೆ ಅಷ್ಟೇ. ಮಾಜಿ ಪ್ರಧಾನಿ ದೇವೇಗೌಡರದ್ದು ಸಂಯಮದ ಪ್ರತಿಕ್ರಿಯೆ. ಎಷ್ಟಾದರೂ ಗೌಡರು ರಾಜಕೀಯ ಜೀವನದಲ್ಲಿ ಮಾಗಿದವರು.
ಕೆಲವು ಉದಾಹರಣೆಗಳು ಮೊದಲೇ ಪ್ರಸ್ತಾಪಿಸಿದಂತೆ, ದೆಹಲಿಯ ಸಾಮ್ರಾಟರಿಗೆ ರಾಜ್ಯಗಳ ಸಾಮಂತರಿಂದ ಹಣ ಹರಿದು ಹೋಗುವ ವಿಷಯ ನಿಜಕ್ಕೂ ತುಂಬಾ ಹಳೆಯದು. ಅದು ಈಗಿನ ಮಾತಲ್ಲ.
ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ಸಮಯದಲ್ಲಿ, ಆರಂಭದ ದಿನಗಳಲ್ಲಿ ದೇವರಾಜ ಅರಸು, ಅನಂತರ ಆರ್. ಗುಂಡೂರಾವ್ ಅವರಿಬ್ಬರೂ, ಬೆಲೆ ಬಾಳುವ ರೇಷ್ಮೆ ಸೀರೆಗಳನ್ನು ಕಳಿಸಿಕೊಡುತ್ತಿದ್ದರು ಎನ್ನುವ ವರದಿಗಳಿದ್ದವು. ಅವರಿಬ್ಬರೂ ಆ ವರದಿಗಳನ್ನು ಅಂತರಂಗದಲ್ಲೂ ನಿರಾಕರಿಸಲಿಲ್ಲ, ಬಹಿರಂಗವಾಗಿ ಪ್ರಸ್ತಾಪಿಸಲೇ ಇಲ್ಲ. ಆದರೆ ಆ ಕಾಲದಲ್ಲಿನ ಮೊದಲ ಚುನಾವಣೆಗೆ (1971-72) ಹಣ ಹರಿದು ಬಂದಿದ್ದು ದೆಹಲಿಯಿಂದಲೇ. ಅದನ್ನು ಅನೇಕರು ಅಂತರಂಗದ ಮಾತುಕತೆಯಲ್ಲಿ ಒಪ್ಪುತ್ತಾರೆ. ಬಹಿರಂಗವಾಗಿ ಇಲ್ಲವೆನ್ನುತ್ತಾರೆ.
ಇಂತಹ ಹಣದ ರವಾನೆ ಪ್ರಸ್ತಾಪ ಬಹು ದೊಡ್ಡ ರೀತಿಯಲ್ಲಿ ಕೇಳಿ ಬಂದಿದ್ದು ನರಸಿಂಹರಾಯರು ಪ್ರಧಾನಿಯಾಗಿದ್ದಾಗ. ಆಗಿನ ಮಾತಿದ್ದದ್ದು ಕೋಟಿ ಕೋಟಿ ರುಪಾಯಿಗಳ ಪ್ರಮಾಣದಲ್ಲಿ. ಮುಖ್ಯಮಂತ್ರಿಯಾಗಿದ್ದ ಬಂಗಾರಪ್ಪ ಅವರ ವಿರುದ್ಧ ಬೆಂಗಳೂರಿನಲ್ಲಿ ಹಾರನಹಳ್ಳಿ ರಾಮಸ್ವಾಮಿ, ಕೆ.ಎಚ್. ರಂಗನಾಥ್ ಅವರೆಲ್ಲ ಆರೋಪಗಳನ್ನು ಹೊರಿಸುತ್ತಿದ್ದಾಗ ಆಗಾಗ್ಗೆ ಬಂಗಾರಪ್ಪ ದೆಹಲಿಗೆ ಹೋಗಿ ಬರುತ್ತಿದ್ದರು. ಆ ಕಾಲದಲ್ಲಿ ದಟ್ಟವಾಗಿ ಹಬ್ಬಿದ್ದ ವರದಿಗಳ ಪ್ರಕಾರ ತಮ್ಮನ್ನೇನಾದರೂ ಮುಖ್ಯಮಂತ್ರಿ ಸ್ಥಾನದಿಂದ ತೆಗೆದರೆ, ತಾವು ಕೊಟ್ಟಿರುವ ಹಣದ ಎಲ್ಲ ವಿವರಗಳ ಚೀಟಿಗಳನ್ನು ಬಹಿರಂಗವಾಗಿ ಪ್ರದರ್ಶಿಸುವ ಬೆದರಿಕೆಯನ್ನು ಬಂಗಾರಪ್ಪ ಹಾಕಿದ್ದರು. ಆದರೆ ಹಾಗೇನೂ ಆಗಲೇ ಇಲ್ಲ. ಒಮ್ಮೆ ಬಂಗಾರಪ್ಪ "ನನ್ಹತ್ರ ಯಾವ ಚೀಟಿ-ಪಾಟಿ ಇಲ್ಲ" ಎಂದಿದ್ದರು.
ನರಸಿಂಹರಾಯರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯದ ಮತದಾರದ ಸಂದರ್ಭದಲ್ಲಿ ಸರ್ಕಾರವನ್ನು ಉಳಿಸಲು ಕರ್ನಾಟಕದಿಂದ ಹಣ ಹೋಯಿತೆನ್ನುವ ದೂರಿತ್ತು. ಅದು ಜಾರ್ಖಂಡ ಮುಕ್ತಿ ಮೋರ್ಚಾ ಎಂ.ಪಿ.ಗಳಿಗೆ ಸಿಕ್ಕಿತೆನ್ನಲಾದ ವದಂತಿಗಳೂ ಇದ್ದವು. ಸಿಬಿಐ ತನಿಖೆಯಾಯಿತು. ಆಗಿನ ಕೆಲವು ಶಾಸಕರ ವಿಚಾರಣೆಯೂ ಆಯಿತು. ಅಲ್ಲಿಗೇ ವಿಷಯ ಮುಗಿಯಿತು. ಆಗ ವೀರಪ್ಪ ಮೊಯಿಲಿ ಮುಖ್ಯಮಂತ್ರಿ. ಈ ವಿವರಗಳೆಲ್ಲವನ್ನು ತಿಳಿದೂ ತಿಳಿದೂ ಧನಂಜಯಕುಮಾರ್, ಈ ಸಮಯದಲ್ಲಿ ಆಡ್ವಾಣಿ ಅವರ ಮೇಲೆ ದಾಳಿ ಮಾಡಿದ್ದೇಕೆ? ಅದು ಖಚಿತವಾಗಿ ಗೊತ್ತಾಗಲು ಸಮಯ ಬೇಕು. ಚುನಾವಣೆಯ ಫಲಿತಾಂಶ ಪ್ರಕಟವಾದ ಮೇಲೆ ಆ ಮಾತು.
ತಾರಕಕ್ಕೇರಿದ ಪ್ರಚಾರ: ಆಡ್ವಾಣಿ ಅವರ ಮೇಲಿನ ಆರೋಪ, ಈಗಿನ ಚುನಾವಣೆ ಪ್ರಚಾರ ಸಮರದಲ್ಲಿ ಒಂದು ಉಪಕತೆ ಅಷ್ಟೇ. ಪ್ರಚಾರ ಸಮರ ಕಾಲದಲ್ಲಿ ನಾಯಕರು ಸ್ವಲ್ಪ ಸಮಯ ಸಿಕ್ಕಾಗ ನೀಡುತ್ತಿರುವ ಪತ್ರಿಕಾ ಸಂದರ್ಶನಗಳಲ್ಲಿ ಚಿತ್ರ ವಿಚಿತ್ರವಾದ ಸಂಗತಿಗಳ ಪ್ರಸ್ತಾಪವಾಗುತ್ತಿದೆ. ಅದೆಲ್ಲವನ್ನೂ ಹೇಳಲು, ಹಿನ್ನೆಲೆಯನ್ನು ವಿವರಿಸಲು ಸಮಯ ಬೇಕು.
ಚುನಾವಣೆ ಪ್ರಚಾರ ಸಮರ ತಾರಕಕ್ಕೇರಿದೆ. ಯಾವ ರಾಜಕೀಯ ಪಕ್ಷವೂ ಗಂಭೀರವಾದ ವಿಚಾರಗಳ ವಿಶ್ಲೇಷಣೆಗೆ ಪ್ರಯತ್ನಿಸುತ್ತಿಲ್ಲ. ಈಗ ಪ್ರಕಟವಾಗುತ್ತಿರುವುದೆಲ್ಲ ಘೋಷಣೆಗಳು, ಇಲ್ಲವೇ ಆರೋಪ- ಪ್ರತ್ಯಾರೋಪಗಳು. ಇಂತಹ ಪ್ರಚಾರ ಸಮರ ನಡೆದರು ಒಂದೇ, ನಡೆಯದಿದ್ದರೂ ಒಂದೇ. ಅದರಿಂದ ಮತದಾನದ ಮೇಲೆ ಯಾವ ಪರಿಣಾಮವೂ ಆಗುವಂತೆ ಕಂಡು ಬರುತ್ತಿಲ್ಲ.
ಭಾಷಣ, ಸಭೆ, ಚರ್ಚೆಗಳೇ ಬೇರೆ. ಮತಗಳಿಕೆಯ ವಿಧಿ- ವಿಧಾನಗಳೇ ಬೇರೆ. ಅವೆರಡಕ್ಕೂ ಸಂಬಂಧವೇ ಇದ್ದಂತಿಲ್ಲ. ಹಿಂದೆ ಇತ್ತು ಎಂದೇನೂ ಅಲ್ಲ. ಭಾರತೀಯ ಜನತಾ ಪಾರ್ಟಿಯ ವಕ್ತಾರರು ಹೇಳುತ್ತಿರುವುದೇನು? "ನಮ್ಮಲ್ಲಿ ಮೊದಲು ಭ್ರಷ್ಟಾಚಾರ ಇತ್ತು. (ಅದನ್ನು ರಾಜನಾಥ ಸಿಂಗ್ ಅವರೂ ಒಪ್ಪಿದ್ದಾರೆ) ಈಗ ಭ್ರಷ್ಟರೆಲ್ಲ ಹೋಗಿದ್ದಾರೆ. ನಾವು ಸ್ವಚ್ಛವಾಗಿದ್ದೇವೆ. ಓಟು ಕೊಡಿ."
ಬಿಜೆಪಿಯ ಪ್ರಚಾರ ಪ್ರಕಟಿಸಿರುವ ಒಂದು ಸತ್ಯ: ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಭಾಷಣಗಳ ಗುಣಮಟ್ಟ ಹೆಚ್ಚಿದೆ. ಅವರು ಪ್ರದರ್ಶಿಸುತ್ತಿರುವ ಸಂಯಮ ಮೆಚ್ಚುವಂತಹದ್ದು. ಉತ್ತರ ಕರ್ನಾಟಕದವರೇ ಮುಖ್ಯಮಂತ್ರಿಯಾಗಬೇಕು ಎಂದಿದ್ದರೆ ಲಿಂಗಾಯಿತರು ಬಿಜೆಪಿಗೇ ಓಟು ಕೊಡಬೇಕೆನ್ನುವುದು ಅವರ ವಾದ.
ಕಾಂಗ್ರೆಸ್ ಅಬ್ಬರದ ಪ್ರಚಾರಕ್ಕೆ ಮುಂದಾಗಿದೆ. ಸೋನಿಯಾ ಗಾಂಧಿ, ರಾಹುಲ ಗಾಂಧಿ ಅವರಂತಹ ಸಪ್ತತಾರಾ ಪ್ರಚಾರಕರನ್ನು ಪಕ್ಷ ಹೆಚ್ಚಾಗಿ ಅವಲಂಬಿಸಿದೆ. ರಾಹುಲ್ ಗಾಂಧಿ ಪ್ರಸ್ತಾಪಿಸಿರುವುದು ಭ್ರಷ್ಟಾಚಾರದ ಪಿಡುಗನ್ನು. ಕರ್ನಾಟಕದ ಜನಕ್ಕೆ ದೆಹಲಿಯ ವಿದ್ಯಮಾನಗಳು ಗೊತ್ತಿಲ್ಲವೇನು?
ಮಾಜಿ ಮುಖ್ಯಮಂತ್ರಿ ಎಸ್ಸೆಮ್ ಕೃಷ್ಣ ಅವರೂ ಪ್ರಚಾರದ ಕಣಕ್ಕೆ ಧುಮುಕ್ಕಿದ್ದಾರೆ. ಅದರಿಂದ ಅಪಪ್ರಚಾರ ಕಡಿಮೆಯಾಗಬಹುದು. ಪ್ರಚಾರದ ಪರಿಣಾಮ ಎಷ್ಟಾಗತ್ತೋ ಗೊತ್ತಿಲ್ಲ.
ಕಾಂಗ್ರೆಸ್ ಪ್ರಚಾರ ಮಂಗಳೂರು ಸೀಮೆಯಲ್ಲಿ ಜನಾರ್ದನ ಪೂಜಾರಿ, ಇತರ ಕಡೆಗಳಲ್ಲಿ ಸಿದ್ದರಾಮಯ್ಯ, ಡಾ. ಪರಮೇಶ್ವರ ಅವರನ್ನೇ ಅವಲಂಬಿಸಿದೆ. ಜಾತ್ಯತೀತ ಜನತಾದಳದಲ್ಲಿ ಸ್ವಯಂ ದೇವೇಗೌಡರೇ ನೇರವಾಗಿ ಮೈದಾನಕ್ಕೆ ಬಂದಿದ್ದಾರೆ. ಅವರ ಪ್ರಚಾರದ ತಂತ್ರಗಳ ಮುಂದೆ ಉಳಿದ ಪ್ರಚಾರಕರೆಲ್ಲ ಪೇಲವ. ಜೆಡಿಎಸ್ಗೆ ವಾಸ್ತವದಲ್ಲಿ ತನ್ನ ಶಕ್ತಿಯ ನೆಲೆಗಳಲ್ಲಿ ಬಹಿರಂಗ ಪ್ರಚಾರದ ಅಗತ್ಯವೇ ಇಲ್ಲ, ಅಲ್ಲಿ ಪಕ್ಷಕ್ಕಾಗಿ ಸ್ವಯಂಪ್ರೇರಣೆಯಿಂದ ದೇವೇಗೌಡರಿಗೆ ಜೀತ ಮಾಡುವ ರೀತಿಯಲ್ಲಿ ಹಳ್ಳಿ- ಹಳ್ಳಿಗಳಲ್ಲಿ ಪ್ರಚಾರ ಮಾಡುವ ಕಾಲಾಳುಗಳ ಪಡೆಗಳೇ ಇವೆ.
ಈಚೆಗೆ ದೇವೇಗೌಡರು ಇದ್ದಕ್ಕಿದ್ದಂತೆ ಬಹಿರಂಗ ಸಭೆಗಳಲ್ಲಿ ಕಣ್ಣೀರು ಹಾಕುವುದು ಹೆಚ್ಚಾಗಿದೆ. ಇದು ಯಾವುದರ ಲಕ್ಷಣವೋ ಗೊತ್ತಾಗಿಲ್ಲ. ದೇವೇಗೌಡರು, ಕುಮಾರಸ್ವಾಮಿ ಹೆಚ್ಚಾಗಿ ಟೀಕಿಸುತ್ತಿರುವುದು ಬಿಜೆಪಿಯನ್ನೇ. ಅದು ಸಹಜವೇ.
2004ರ ಪುನರಾವರ್ತನೆ: ಕೆಲವು ಕಡೆಗಳಲ್ಲಿ ದೇವೇಗೌಡರು ತಮ್ಮ ಪಕ್ಷಕ್ಕೇ ಸರ್ಕಾರದ ರಚನೆ ಸಾಧ್ಯವಾಗುವಷ್ಟು ಸ್ಥಾನಗಳು ಸಿಗುತ್ತೆ ಎಂದಿದ್ದಾರೆ. ಕೆಲವು ಕಡೆ ನಮ್ಮನ್ನು ದೂರವಿಟ್ಟು ಬೇರೆ ಯಾವ ಪಕ್ಷವೂ ಸರ್ಕಾರ ರಚಿಸುವಂತಿಲ್ಲ ಎಂದಿದ್ದಾರೆ. ಇದರ ಅರ್ಥ ಏನು? ಅಗತ್ಯಬಿದ್ದರೆ 2004ರ ಪುನರಾವರ್ತನೆಗೂ ಸಿದ್ಧ ಎಂದೇ ಅಲ್ಲವೇ?
ಜೆಡಿಎಸ್ನ ಅಭ್ಯರ್ಥಿಗಳ ಪಟ್ಟಿಯಲ್ಲಿ ಆ ಪಕ್ಷ ತನ್ನ ಶಕ್ತಿ ನೆಲೆಗಳನ್ನು ಬಿಟ್ಟು ಉಳಿದ ಕಡೆಗಳಲ್ಲಿ ಅಭ್ಯರ್ಥಿಗಳ ಆಯ್ಕೆಯಲ್ಲಿ ರಾಜಕೀಯ ಧರ್ಮವನ್ನು ಪಾಲಿಸಿಲ್ಲ ಎನ್ನುವುದು ನಿಜ. ಆಪರೇಷನ್ ಕಮಲದ ವೀರರೂ ಆ ಪಟ್ಟಿಯಲ್ಲಿದ್ದಾರೆ.
ಯಡಿಯೂರಪ್ಪ ತಂತ್ರ: ಇನ್ನೊಂದು ಕಡೆ, ಯಡಿಯೂರಪ್ಪ ಅವರೂ ಅದನ್ನೇ ಹೇಳುತ್ತಿರುವುದು. ತಮ್ಮನ್ನು (ಅಂದರೆ ಕೆಜಿಪಿ) ಬಿಟ್ಟು ಬೇರೆ ಯಾರೂ ಸರ್ಕಾರ ರಚಿಸುವುದು ಸಾಧ್ಯವಿಲ್ಲ, ನಿಜ. ಯಡಿಯೂರಪ್ಪ ಅವರ ಪಕ್ಷದ ಟಿಕೆಟ್ಗೆ ರಾಜ್ಯದ ಕೆಲವು ಕಡೆಗಳಲ್ಲಿ ಬೇಡಿಕೆ ಇರಲಿಲ್ಲ. ಅನೇಕರನ್ನು ಕೇವಲ ಸಂಖ್ಯಾಬಲದ ಪ್ರದರ್ಶನಕ್ಕಾಗಿ ನಿಲ್ಲಿಸಲಾಗಿದೆ ಅಷ್ಟೇ.
ಬಿ. ಶ್ರೀರಾಮುಲು ಅವರ ಪಕ್ಷದ ಸ್ಥಿತಿಯೂ ಅಷ್ಟೇ. ಯಡಿಯೂರಪ್ಪ ಅವರ ಪಕ್ಷದಲ್ಲಿ ಪ್ರಬಲ ಜಾತಿಗಳಿಗೆ ಪ್ರಾಮುಖ್ಯವಿದ್ದರೆ, ಶ್ರೀರಾಮುಲು ಅವರ ಬಿಎಸ್ಸಾರ್ ಕಾಂಗ್ರೆಸ್ಸಿನಲ್ಲಿ ಪರಿಶಿಷ್ಟರು, ಹಿಂದುಳಿದವರಿಗೇ ಹೆಚ್ಚು ಅವಕಾಶ ಸಿಕ್ಕಿದೆ. ರಾಜ್ಯದ ಎಲ್ಲ ಕಡೆಗಳಲ್ಲೂ ಒಂದೇ ರೀತಿಯ ಶಕ್ತಿಗಳು ಕೆಲಸ ಮಾಡುತ್ತಿವೆ ಎಂದು ಹೇಳುವುದೂ ಕಷ್ಟ. ಎಲ್ಲ ಕಡೆಗಳಿಂದಲೂ, ಸ್ಥಳೀಯ ವಿದ್ಯಮಾನಗಳ ಅರಿವಿರುವವರು ಪ್ರಕಟಿಸುತ್ತಿರುವ ವರದಿಗಳನ್ನು ಗಮನಿಸಿದರೆ, ಪ್ರಚಾರ ಸಮರ ತೀವ್ರಗೊಂಡಿದ್ದರೂ, ಮತದಾರರ ಮೇಲೆ ಅದರ ನಿಜವಾದ ಪರಿಣಾಮವೇನು ಎನ್ನುವುದು ಗೊತ್ತಾಗುತ್ತಿಲ್ಲ. ಚುನಾವಣೆ ಎಂದರೆ ಹಾಗೆಯೇ.
ಕೆಲವು ಕಡೆ ಪಕ್ಷ ಮುಖ್ಯ, ಅನೇಕ ಕಡೆಗಳಲ್ಲಿ ಅಭ್ಯರ್ಥಿ ಮುಖ್ಯ. ಕೆಲವು ಕಡೆಗಳಲ್ಲಿ ಜನರು ಯಾವುದಾದರೊಂದು ಪಕ್ಷ ಅಥವಾ ವ್ಯಕ್ತಿಯ ಪರವಾಗಿ ಮತ ನೀಡಿದರೆ, ಅನೇಕ ಕಡೆಗಳಲ್ಲಿ ಒಂದು ಪಕ್ಷದ ಅಥವಾ ಒಬ್ಬ ಅಭ್ಯರ್ಥಿಯ ವಿರುದ್ಧ ಮತ ನೀಡುವ ಸಂಭವವೂ ಇದ್ದಿದ್ದೇ.
ಈಗ ಕಣದಲ್ಲಿರುವ ಎಲ್ಲ ಪಕ್ಷಗಳಲ್ಲೂ ಕಪ್ಪು-ಬಿಳಿ ಎನ್ನುವ ಆಯ್ಕೆಯ ಪರಿಸ್ಥಿತಿ ಇಲ್ಲ. ಇದು ಒಳ್ಳೆಯ ಪಕ್ಷ, ಇದಲ್ಲ ಎನ್ನುವ ಸ್ಥಿತಿಯೂ ಇಲ್ಲ. ಇಂತಹ ಸ್ಥಿತಿಯಲ್ಲಿ ಮತದಾರರ ಒಲವಿನ ದಿಕ್ಕು- ದೆಸೆಗಳನ್ನು ಗುರ್ತಿಸುವುದು ಕಷ್ಟ.
ಯಾವ ಪ್ರದೇಶದಲ್ಲಾದರೂ, ಚುನಾವಣೆಯಲ್ಲಿ ಭೂಗರ್ಭದಲ್ಲಿ ಹಲವಾರು ಸುಳಿಗಳು ಪ್ರಭಾವ ಬೀರುತ್ತವೆ. ಅದರಲ್ಲಿ ಎಲ್ಲವೂ ಎಲ್ಲರಿಗೂ ಗೋಚರವಾಗುವುದಿಲ್ಲ. ಅದೇ ವೈವಿಧ್ಯದ ಲಕ್ಷಣ. ಪ್ರಚಾರ ಸಮರದ ಓಘದಿಂದಲೇ ಏನನ್ನೂ ಹೇಳುವುದಕ್ಕಾಗದು. ಹಾಗೆ ಹೇಳಿದರೆ ಏನನ್ನೂ ಹೇಳಿದಂತಾಗುವುದಿಲ್ಲ. ಅದು ನಿಜ.
ಕಿಡಿಗೇಡಿತನ: ಹಲವು ವಾಮಪಂಥೀಯ ಬೌದ್ಧಿಕ ನಾಯಕರು ಈಗ ಕಾಂಗ್ರೆಸ್- ಜೆಡಿಎಸ್ ಕಡೆಗೆ ವಾಲುತ್ತಿರುವಂತಿದೆ. ದೇಶದಲ್ಲಿ ಬಿಜೆಪಿ ಒಂದೇ ಬಲಪಂಥೀಯ ಕೋಮುವಾದಿ ಶಕ್ತಿಯೇ?
-ಸತ್ಯ
anisikeprabha@gmail.com