ಅಂಕಣಗಳು

ಕಸವನ್ನು ರಸವನ್ನಾಗಿ ಮಾಡುವುದು ನಮ್ಮ ಕೈಲೇ ಇದೆಯಲ್ಲವೇ?

Published On :

ಕಳೆದವಾರ ನಾನು ನಿಮಗೆ ಖಾಸ್‌ಭಾಗ್‌ನ ಕಸದ ತೊಂದರೆಯ ಬಗ್ಗೆ ಹೇಳುತ್ತಿದ್ದೆ. ನಾನು ಜಿಲ್ಲಾಧಿಕಾರಿ ಆಗಿದ್ದಿದ್ದುದರಿಂದ ಕಂದಾಯ ಇಲಾಖೆಯ ಭೂಮಿ ಎನ್ನುವ ಗಣಕ ಯಂತ್ರದಲ್ಲಿ ಸಂಗ್ರಹಿಸಿದ ದತ್ತಾಂಶದಲ್ಲಿ ಸರ್ಕಾರಿ ಭೂಮಿಗೆ ಹುಡುಕಾಟ ನಡೆಸಿದೆ. ಕೇವಲ ಹನ್ನೆರಡು ಕಿ.ಮೀ. ದೂರದಲ್ಲಿ, ಹಳ್ಳಿಯ ಜನರ ಜೀವನದಿಂದ ಮುನ್ನೂರು ಮೀಟರ್ ದೂರದ ತುರಮರಿ ಎನ್ನುವ ಐವತ್ತು ಎಕರೆ ಜಾಗ ಅಲ್ಲಿ ಲಭ್ಯವಾಯಿತು. ಅಲ್ಲಿ ಒಂದು ಸಣ್ಣ ಬೆಟ್ಟವೂ ಇದ್ದಿದ್ದರಿಂದ ಅದು ಸಹಜವಾಗಿ ಹಳ್ಳಿಗಳಿಗೆ ಒಂದು ತಡೆಗೋಡೆಯಂತೆ ಇತ್ತು. ಟ್ರಕ್‌ಗಳ ಓಡಾಟಕ್ಕೂ ತೊಂದರೆಯಾಗುತ್ತಿರಲಿಲ್ಲ. ಎಲ್ಲಾ ರೀತಿಯಿಂದಲೂ ಹಾಗೂ ತಾಂತ್ರಿಕ ದೃಷ್ಟಿಯಿಂದಲೂ ಈ ಜಾಗ ಸರಿ ಹೊಂದುತ್ತಿತ್ತು. ಅದಲ್ಲದೆ ಹಣದ ಮುಗ್ಗಟ್ಟಿನಿಂದ ಕಂಗೆಟ್ಟಿದ್ದ ಜನತೆಗೂ ಈ ಜಾಗವನ್ನು ಸರ್ಕಾರದಿಂದ ಶೇಕಡಾ ಐವತ್ತರಷ್ಟು ರಿಯಾಯಿತಿಯೊಂದಿಗೆ ಪಡೆಯಬಹುದಾದ ಸಾಧ್ಯತೆಗಳಿದ್ದವು. ಹಾಗಾಗಿ ಒಂದು ತಿಂಗಳೊಳಗೆ ಇದರ ಬಗ್ಗೆ ಎಲ್ಲಾ ವ್ಯವಸ್ಥೆಯನ್ನೂ ಮಾಡಲಾಯಿತು. ತುರುಮುರಿ ಜನರು ಈ ಬಗ್ಗೆ ಅಸಮ್ಮತಿ ವ್ಯಕ್ತಪಡಿಸಿದರು. ಖಾಸ್‌ಭಾಗ್‌ನಲ್ಲಿ ಆದಂತೆಯೇ ಕಸದಿಂದ ಅವರ ಪರಿಸರ ಹಾಳಾಗುತ್ತದೆ ಎನ್ನುವ ಭಯ ಅವರನ್ನು ಕಾಡುತ್ತಿತ್ತು. ಹದಿನಾರು ಮೀಟರ್ ನೆಲವನ್ನು ಅಗೆದು, ಎಂಟು ಕಿಲೋ ಮೀಟರ್‌ವರೆವಿಗೂ ಮಣ್ಣಿನ ಹೊದಿಕೆಯನ್ನು ಹಾಕುವುದರಿಂದ ಕಸವು ಗೊಬ್ಬರವಾಗಿ ಮಾರ್ಪಾಡಾಗುತ್ತದೆ ಎಂದು ಸ್ಥಳೀಯರಿಗೆ ವಿವರಿಸಿ ಹೇಳಿದರೂ ಅವರು ಒಪ್ಪಲು ತಯಾರಿರಲಿಲ್ಲ. ಸ್ಥಳೀಯ ನಾಯಕರುಗಳಿಗೆ ವಿಷಯವನ್ನು ವಿವರಿಸಿ ಜನರಿಗೆ ತಿಳಿವಳಿಕೆ ನೀಡಬೇಕೆಂದು ಕೇಳಿಕೊಳ್ಳಲಾಯಿತು. ಈ ವಿಷಯವಾಗಿ ಸ್ಥಳೀಯರ ಪ್ರತಿಭಟನೆ ಮುಖ್ಯಮಂತ್ರಿಯವರೆಗೂ ತಲುಪಿತು. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯವರೂ ಸಹ ಈ ಯೋಜನೆಯನ್ನು ಒಪ್ಪಿದರು. ಆಗ ಪ್ರಾದೇಶಿಕ ಆಯುಕ್ತರಾಗಿದ್ದ ಅಮಿತಾ ಪ್ರಸಾದ್ ಅವರೂ ಪ್ರತ್ಯೇಕವಾಗಿ ಅಧ್ಯಯನ ನಡೆಸಿ ತಮ್ಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದರು. ಸರ್ಕಾರವು ಯೋಜನೆಯನ್ನು ಅನುಷ್ಠಾನಗೊಳಿಸಲು ಅನುಮತಿ ನೀಡಿದ್ದರಿಂದ ಕರ್ಫ್ಯೂವನ್ನು ಹಾಕಿ ಕೆಲಸ ಆರಂಭ ಮಾಡಬೇಕಾಯಿತು. ಹಲವಾರು ಜನರನ್ನು ಮುಂಜಾಗ್ರತಾ ಕ್ರಮವಾಗಿ ಬಂಧಿಸಲಾಯಿತು. ಸಾರ್ವಜನಿಕರಿಗೆ ವಿಷಯ ವಿವರಿಸಿ ಹೇಳುವುದೇ ದೊಡ್ಡ ಕೆಲಸವಾಯಿತು. ನಾನು ಕಸ ವಿಲೇವಾರಿಯನ್ನು ವೈಜ್ಞಾನಿಕವಾಗಿ ಮಾಡುವ ಜವಾಬ್ದಾರಿಯನ್ನು ವೈಯುಕ್ತಿಕವಾಗಿ ತೆಗೆದುಕೊಳ್ಳುವೆ ಎಂದು ಹೇಳಿ ಎಲ್ಲರ ಮನ ಒಲಿಸುವುದರಲ್ಲಿ ಯಶಸ್ವಿಯಾದೆ. ತುರುಮುರಿಯಲ್ಲಿ ಕೇವಲ ಜೈವಿಕ ಕಸವನ್ನು ಹಾಕುವುದೆಂದು ತೀರ್ಮಾನ ತೆಗೆದುಕೊಳ್ಳಲಾಯಿತು.
ಸ್ವಸಹಾಯ ಸಂಘದವರು ಮನೆ ಮನೆಗಳಿಂದ ಕಸವನ್ನು ಸಂಗ್ರಹಿಸುವ ಜವಾಬ್ದಾರಿಯನ್ನು ವಹಿಸಿಕೊಂಡರು. ಕಸದಿಂದ ಗೊಬ್ಬರ ತಯಾರಿಕೆ ಜವಾಬ್ದಾರಿಯನ್ನು ವಿಕೇಂದ್ರೀಕರಿಸಲಾಯಿತು. ಎಲ್ಲೆಂದರಲ್ಲಿ ಕಸವನ್ನು ಗುಡ್ಡ ಮಾಡಿ ಬೆಂಕಿ ಹಚ್ಚುವುದನ್ನು ನಿಷೇಧಿಸಲಾಯಿತು. ದೇವಸ್ಥಾನಗಳ ಹೂವು ಮತ್ತಿತರ ತ್ಯಾಜ್ಯಗಳನ್ನು ಕೆರೆಗೆ ಎಸೆದುಬಿಡುತ್ತಿದ್ದರು. ಗಣಪತಿ ವಿಸರ್ಜನೆಯ ಸಮಯದಲ್ಲಂತೂ ಹೂವು ಮತ್ತಿತರ ತ್ಯಾಜ್ಯಗಳನ್ನು ಹಾಕಲು ಬೇರೆ ತೊಟ್ಟಿಗಳನ್ನು ಮಾಡಿದ್ದರೂ, ಕೆರೆಯಲ್ಲಿಯೇ ಎಲ್ಲವನ್ನೂ ಗಣಪತಿಯೊಂದಿಗೆ ವಿಸರ್ಜಿಸಿಬಿಡುತ್ತಿದ್ದರು. ಅದನ್ನು ತಪ್ಪಿಸಿ ನೆಲದಲ್ಲಿ ಅಗೆದ ಹೊಂಡಗಳಿಗೆ ಹಾಕಬೇಕೆಂದು ಸೂಚಿಸಲಾಯಿತು. ಚಿಂದಿ ಆಯುವ ಮಂದಿಯಂತೂ ತಮಗೆ ಬೇಕಾದುದನ್ನು ತೆಗೆದುಕೊಳ್ಳಲು ಕೆಳಗಿನಿಂದ ಎಳೆದು ಗಲೀಜು ಮಾಡುತ್ತಿದ್ದರು. ಆಗ ಒಬ್ಬ ಸ್ವಸಹಾಯ ಸಂಘದ ಸದಸ್ಯರ ಮನೆಯಲ್ಲಿ ಒಂದು ಪುಸ್ತಕವನ್ನಿಟ್ಟು, ಅದರಲ್ಲಿ ಬರೆದು, ಸಹಿ ಹಾಕಿ, ಅನುಮತಿ ಪಡೆದು ತೆಗೆದುಕೊಳ್ಳಬೇಕೆಂದು ಸೂಚಿಸಿದ್ದರಿಂದ ಈ ಸಮಸ್ಯೆ ಪರಿಹಾರವಾಯಿತು.
ಇಂದಿನ ದಿನಗಳಲ್ಲಿ ಸಂಗ್ರಹವಾಗುವ ಕಸದ ನಿರ್ವಹಣೆ ದೊಡ್ಡ ಸಮಸ್ಯೆಯಾಗಿದೆ. ಜೈವಿಕ ಕಸವನ್ನು ನಾವು ಗೊಬ್ಬರವನ್ನಾಗಿ ಪರಿವರ್ತಿಸಬಹುದು. ಆದರೆ ಪ್ಲಾಸ್ಟಿಕ್ ಮತ್ತಿತರ ಅನುಪಯೋಗಿ ವಸ್ತುಗಳನ್ನು ವಿಲೇವಾರಿ ಮಾಡುವುದು ಹೇಗೆ ಎನ್ನುವುದು ಸಂಶೋಧನೆ ನಡೆಸಲು ಉತ್ತಮವಾದ ವಿಷಯ. ನಮ್ಮ ದೇಶಕ್ಕಿಂತ ಮುಂದುವರೆದ ದೇಶಗಳಲ್ಲಿ ಪ್ಲಾಸ್ಟಿಕ್ ವಸ್ತುಗಳ ಉಪಯೋಗಗಳೂ ಅಧಿಕ. ಅಷ್ಟಲ್ಲದೆ ನವೀಕರಣ ಅತಿ ಶೀಘ್ರವಾಗಿ ಆಗುವುದರಿಂದ ವಸ್ತುಗಳು ಅನುಪಯೋಗಕರವಾಗುವುದೂ ಬಹಳ ಬೇಗ. ಅಂಥಹ ತ್ಯಾಜ್ಯವಸ್ತುಗಳನ್ನು ಪರಿಸರಕ್ಕೆ ಹಾನಿಯಾಗದಂತೆ ಹೇಗೆ ವಿಲೇವಾರಿ ಮಾಡುತ್ತಾರೆ ಎಂಬುದು ಕುತೂಹಲಕಾರಿ ವಿಷಯ. ಪ್ಲಾಸ್ಟಿಕ್ ಚೀಲಗಳನ್ನು ರಸ್ತೆಗಳಿಗೆ ಬಳಸಿಕೊಳ್ಳುತ್ತಾರೆ. ಉಳಿದ ಪ್ಲಾಸ್ಟಿಕ್ ವಸ್ತುಗಳನ್ನು ಒಂದು ದೊಡ್ಡ ಜಾಗಗಳಲ್ಲಿ ಸಂಗ್ರಹಿಸಿ, ದೊಡ್ಡ ದೊಡ್ಡ ಮಷೀನುಗಳನ್ನು ಬಳಸಿ ತುಂಡುಗಳನ್ನಾಗಿಸಿ, ನಂತರ ಅವುಗಳನ್ನು ಸಂಸ್ಕರಿಸುತ್ತಾರೆ. ನಂತರ ಅವುಗಳನ್ನು ಬೇರೆ ಬೇರೆ ವಸ್ತುಗಳ ತಯಾರಿಕೆಗೆ ಬಳಸುತ್ತಾರೆ. ಇದಕ್ಕೆ ಅವರಲ್ಲಿ ಉತ್ತಮ ತಂತ್ರಜ್ಞಾನವಿದೆ. ಮುಂದುವರೆದ ದೇಶಗಳ ಮಾದರಿಗಳನ್ನು ನಾವೂ ಅಧ್ಯಯನ ನಡೆಸಿ ಬಳಸಿಕೊಳ್ಳಬೇಕಾಗಿರುವುದು ಇಂದಿನ ಪರಿಸ್ಥಿತಿಯಾಗಿದೆ. ಆದಷ್ಟೂ ಪ್ಲಾಸ್ಟಿಕ್ ಮುಂತಾದ ಪರಿಸರ ಹಾನಿ ವಸ್ತುಗಳನ್ನು ಬಳಸದಂತೆ ಜನ ಜಾಗೃತಿಯನ್ನು ಮಾಡಬೇಕಿದೆ. ಇದಕ್ಕೆ ಸರ್ಕಾರೇತರ ಸಂಘ ಸಂಸ್ಥೆಗಳು, ಸಾರ್ವಜನಿಕರು, ಮಾಧ್ಯಮದವರು ಕೈಜೋಡಿಸಬೇಕಿದೆ. ಒಂದು ಮನೆಯಲ್ಲಿ ಒಬ್ಬರು ಇದರ ಬಗ್ಗೆ ನಿರ್ಧಾರವನ್ನು ತೆಗೆದುಕೊಂಡಲ್ಲಿ, ಜನರಲ್ಲಿ ಅರಿವು ತಾನಾಗಿ ಮೂಡಲು ಸಹಾಯವಾಗುತ್ತದೆ. ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಉತ್ತಮ ಕೆಲಸವನ್ನು ಮಾಡಬಲ್ಲವರಾಗಿದ್ದಾರೆ. ಇಂದಿನ ಮಕ್ಕಳೇ ನಮ್ಮ ಮುಂದಿನ ಪ್ರಜೆಗಳಾದ್ದರಿಂದ ಅವರಲ್ಲಿ ಜಾಗೃತಿಯನ್ನು ಮೊದಲು ಮೂಡಿಸಬೇಕಾಗಿದೆ. ಇದರಲ್ಲಿ ಮಹಿಳೆಯರ ಪಾತ್ರ ಅತ್ಯಂತ ಮುಖ್ಯವಾದುದು.
ಮಹಿಳೆಯರಂತೂ ತಮ್ಮ ಕಷ್ಟಗಳ ಪರಿಹಾರಕ್ಕಾಗಿ ನೂರಾರು ಮಂದಿಯ ಗುಂಪುಗಳನ್ನು ಕಟ್ಟಿಕೊಂಡು ಕಚೇರಿಗೆ ಬಂದು ಕಂಡು ತಮ್ಮ ಅಹವಾಲನ್ನು ಹೇಳಿಕೊಳ್ಳಲಾರಂಭಿಸಿದರು. ನಾನೇನಾದರೂ ಪ್ರವಾಸದಲ್ಲಿ ಇದ್ದರೆ, ತಮ್ಮ ಮನವಿಯನ್ನು ಕಚೇರಿಯಲ್ಲಿ ನನ್ನ ಆಪ್ತ ಸಹಾಯಕರಿಗೆ ಕೊಟ್ಟು ಹೋಗಿ ಎಂದರೂ ಕೇಳದೆ ನನ್ನ ಬರುವಿಕೆಗಾಗಿ ಕಾದು ಬಂದು ನನ್ನನ್ನು ಕಾಣಲು ಇಚ್ಛಿಸುತ್ತಿದ್ದರು. ನೀರಿಲ್ಲದ ಸಮಸ್ಯೆ, ಚರಂಡಿಗಳು ಕಟ್ಟಿಕೊಂಡಿರುವ ಸಮಸ್ಯೆ, ಇಂಥಹ ನೂರಾರು ಸಮಸ್ಯೆಗಳನ್ನು ತೆಗೆದುಕೊಂಡು ಬರುತ್ತಿದ್ದರು ಮಹಿಳೆಯರು. ಅವರ ಸಹಕಾರವನ್ನೂ ಬೇಡಿ ಕೆಲಸ ಮಾಡಿಕೊಡುತ್ತಿದ್ದುದರಿಂದ ಅವರೂ ಸಂತೋಷದಿಂದ ಸಮಸ್ಯೆಗಳ ಪರಿಹಾರದಲ್ಲಿ ಭಾಗವಹಿಸುತ್ತಿದ್ದರು. ಪಾಲಿಕೆಯಲ್ಲಿ ಸಹಾಯವಾಣಿ ಇದ್ದರೂ ಅದು ನಿಷ್ಕ್ರಿಯವಾಗಿತ್ತು. ಅದನ್ನು ಮೊದಲು ಕಾರ್ಯಾರಂಭ ಮಾಡುವಂತೆ ನೋಡಿಕೊಳ್ಳಲಾಯಿತು.
ಬೀದಿ ದೀಪಗಳು ಬೆಳಗ್ಗೆ ಬೇಡದಿದ್ದಾಗ ಉರಿಯುತ್ತಿದ್ದವು, ರಾತ್ರಿ ಬೇಕಾದಾಗ ಉರಿಯುತ್ತಿರಲಿಲ್ಲ. ಒಬ್ಬರು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅವರಿಗೆ ಬೀದಿದೀಪಗಳ ಜವಾಬ್ದಾರಿಯನ್ನು ವಹಿಸಿ, ಮಾಧ್ಯಮಗಳ ಮೂಲಕ ಅವರ ಮೊಬೈಲ್ ಫೋನಿನ ನಂಬರನ್ನು ಸಾರ್ವಜನಿಕರಿಗೆ ಕೊಡಲಾಯಿತು. ಅವರು ರಾತ್ರಿಯೆಲ್ಲಾ ಕೆಲಸ ಮಾಡಿ ಬೆಳಗ್ಗೆ ವರದಿಯನ್ನು ಸಲ್ಲಿಸಬೇಕಾಗಿದ್ದಿತ್ತು. ಒಂದು ಸಂಸ್ಥೆಗೆ ಕಿತ್ತು ಹೋಗಿರುವ ತಂತಿಗಳ ರಿಪೇರಿ, ಬಲ್ಬುಗಳನ್ನು ಹಾಕುವುದು, ಮುಂತಾದ ಜವಾಬ್ದಾರಿಯನ್ನು ಕೊಟ್ಟ ಮೇಲೆ ಪರಿಸ್ಥಿತಿ ತಹಬಂದಿಗೆ ಬಂದಿತು.
ಪಾಲಿಕೆಯಲ್ಲಿ ಲೈಸನ್ಸುಗಳನ್ನು ಕೊಡುವುದು, ಕಟ್ಟಡ ನಿರ್ಮಾಣವಾದ ಬಳಿಕ ಅವುಗಳು ಮುಗಿದ ಪ್ರಮಾಣ ಪತ್ರಗಳನ್ನು ಕೊಡುವುದು ಮಾತ್ರ ತಮ್ಮ ಕೆಲಸವೆಂದು ತಿಳಿಯಲಾಗಿತ್ತು. ಪಾಲಿಕೆಯಲ್ಲಿ ಕೆಲಸ ಮಾಡುವವರಿಗೆ ಮೊದಲು ಸೇವೆ ನಂತರ ಕಟ್ಟಳೆಗಳು ಎಂಬ ಭಾವ ಇರಲಿಲ್ಲ. ಅದಕ್ಕಾಗಿ ನಾನು ಬಹಳವಾಗಿ ಪ್ರವಾಸಗಳನ್ನು ಮಾಡಿ ಅಧಿಕಾರದ ವಿಕೇಂದ್ರೀಕಣಗೊಳಿಸಿ, ಅಧಿಕಾರಿಗಳಿಗೆ ಹಲವಾರು ಜವಾಬ್ದಾರಿಗಳನ್ನು ಕೊಡಲಾಯಿತು. ಇದರಿಂದಾಗಿ ಒಬ್ಬರ ಮೇಲೊಬ್ಬರು ಗೂಬೆ ಕೂರಿಸುವ ಪರಿಪಾಠ ನಿಂತುಹೋಯಿತು. ಒಬ್ಬರಿಗೊಬ್ಬರು ಸಹಕಾರ ನೀಡಲಾರಂಭಿಸಿದರು. ನೀರನ್ನು ಸಂಗ್ರಹಿಸಬಹುದಾದ ಕೆರೆಗಳಲ್ಲಿ ಕಸ ಕಡ್ಡಿಗಳು ತುಂಬಿಹೋಗಿತ್ತು. ಅವುಗಳನ್ನೆಲ್ಲಾ ತೆಗೆದು ಸ್ವಚ್ಛ ಮಾಡಿಸಿದ್ದರಿಂದ ನೀರು ಸಂಗ್ರಹ ಸಾಧ್ಯವಾಗಿ, ಬೇಸಿಗೆಯ ದಿನಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನೂ ಅಚ್ಚುಕಟ್ಟಾಗಿ ಮಾಡಲು ಸಾಧ್ಯವಾಯಿತು.
ಕುಡಿಯುವ ನೀರಿನ ನಿರ್ವಹಣೆಯಂತೂ ದೊಡ್ಡ ತಲೆನೋವಾಗಿ ಪರಿಣಮಿಸಿದ್ದಿತು. ಉತ್ತಮ ಪರಿಸ್ಥಿತಿಯೆಂದರೆ ಮೂರು ದಿನಕ್ಕೊಮ್ಮೆ ನಲ್ಲಿಯಲ್ಲಿ ಹನಿಹನಿಯಾಗಿ ನೀರು ತೊಟ್ಟಿಕ್ಕುವುದು, ಕಠಿಣ ಪರಿಸ್ಥಿತಿಯೆಂದರೆ ಏಳು ದಿನಗಳಿಗೊಮ್ಮೆ ನಲ್ಲಿಯಲ್ಲಿ ನೀರು ಕಾಣಸಿಗುವುದು. ಹಾಗಾಗಿ ಖಾಸಗಿ ನೀರು ಸರಬರಾಜು ಮಾಡುವವರು ಉತ್ತಮ ವ್ಯಾಪಾರ ಮಾಡುತ್ತಿದ್ದರು. ಖಾಸಗಿಯವರು ಮಾಡಬಹುದಾದರೆ ಪಾಲಿಕೆಯವರು ಮಾಡಲು ಏಕೆ ಸಾಧ್ಯವಿಲ್ಲ ಎಂದು ಆಲೋಚಿಸಿದಾಗ, ನೀರು ಸರಬರಾಜು ಮಾಡುವ ವ್ಯವಸ್ಥೆ ಅರವತ್ತು ವರ್ಷಗಳಷ್ಟು ಹಳೆಯದಾಗಿದ್ದು, ನೀರು ಸರಬರಾಜು ಮಾಡುವ ಕೊಳವೆಗಳೆಲ್ಲವೂ ತುಕ್ಕು ಹಿಡಿದು, ಕಸ ಕಟ್ಟಿಕೊಂಡು, ಉಪಯೋಗವಿಲ್ಲದಂತಾಗಿದ್ದವು. ಇದನ್ನು ಅಧ್ಯಯನ ನಡೆಸಲು ಒಂದು ಸಮಿತಿಯನ್ನು ರಚಿಸಿ, ವಿಶೇಷ ಸವಲತ್ತುಗಳನ್ನು ಪಡೆಯಲು ಸನ್ನದ್ಧರಾದೆವು. ವಿಶ್ವಬ್ಯಾಂಕ್ ನೆರವಿನಿಂದ ವಾರದ ಏಳೂ ದಿನಗಳು, ದಿನದ ಇಪ್ಪತ್ನಾಲ್ಕು ಗಂಟೆಗಳ ಕಾಲವೂ ಕೆಲಸ ಆರಂಭಿಸಲಾಯಿತು. ಕೊನೆಗೆ ನೀರಿನ ಸರಬರಾಜಿನ ವ್ಯವಸ್ಥೆಯನ್ನು ಕರ್ನಾಟಕ ನೀರು ಸರಬರಾಜು ಮಂಡಳಿಗೆ ವಹಿಸಿಕೊಡಲಾಯಿತು. ನೀರಿನ ಶುಲ್ಕದ ಮೊತ್ತ ತಿಂಗಳಿಗೆ ಹದಿನೈದು ಲಕ್ಷದಿಂದ ತಿಂಗಳಿಗೆ ಒಂದು ಕೋಟಿ ಆದಾಯ ತಂದುಕೊಡಲಾರಂಭಿಸಿತು.
ಮುಂದಿನ ವಾರ ಕೊಟ್ಟಕೆರೆ ಸರೋವರದ ಯೋಜನೆಯ ಬಗ್ಗೆ ಹೇಳುತ್ತೇನೆ.

-ಶಾಲಿನಿ ರಜನೀಶ್, ಐಎಎಸ್
anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.