ಅಂಕಣಗಳು

ಸುಲಭದ ಓದು ನಿರುದ್ಯೋಗಕ್ಕೆ ಆಮಂತ್ರಣ

Published On :

ಪತ್ರಿಕಾ ಬಳಗವೊಂದು ಶಿಕ್ಷಣಮೇಳವನ್ನು ಆಯೋಜಿಸಿತ್ತು. ಹೆಚ್ಚಾಗಿ ವಿದ್ಯಾರ್ಥಿನಿಯರೇ ಭಾಗವಹಿಸಿದ್ದರು. ವಿವಿಧ ಶಾಲಾ-ಕಾಲೇಜುಗಳಿಂದ ಬಂದವರಾಗಿದ್ದರು. ಪತ್ರಕರ್ತರು ಹಾಗೂ ಬ್ಯಾಂಕ್ ಅಧಿಕಾರಿಗಳು ಉಪಸ್ಥಿತರಿದ್ದರು. ಸಂಸದರು ಉದ್ಘಾಟಕರಾಗಿದ್ದರು. ನನಗೂ ಆಮಂತ್ರಣ. ಔಪಚಾರಿಕವಾಗಿ ವಿದ್ಯಾರ್ಥಿನಿಯರೊಟ್ಟಿಗೆ ಸಂವಾದಕ್ಕೆ ಇಳಿದಾಗ -'ನಿಮ್ಮಲ್ಲಿ ಎಷ್ಟುಜನ ಶಿಕ್ಷಕರಾಗಲು ಇಚ್ಛಿಸುತ್ತೀರಿ, ಕೈಯೆತ್ತಿರಿ' ಎಂದೆ. ಭಾಗಶಃ ವಿದ್ಯಾರ್ಥಿನಿಯರು ಕೈಯೆತ್ತಿದರು. ಅವರ ಪ್ರತಿಕ್ರಿಯೆಯ ಜಾಡನ್ನು ಹಿಡಿದು ನನ್ನ ಚಿಂತನೆಯನ್ನು ಮುಂದುವರೆಸುತ್ತ ಹೋದೆ. ಈಗಾಗಲೇ ಮುಂದಿನ ಹತ್ತು ವರ್ಷಗಳಿಗಾಗುವಷ್ಟು ಟಿ.ಸಿ.ಹೆಚ್. ಮತ್ತು ಬಿ.ಇಡಿ., ಪದವೀಧರರು ಸಾಲಿನಲ್ಲಿದ್ದಾರೆ. ಅವಕಾಶಗಳಿಗಾಗಿ ಕಾಯುತ್ತಿದ್ದಾರೆ. ಎರಡೂ ಪದವಿಗಳಿಗೆ ಸಂಬಂಧಿಸಿದ ಸಂಸ್ಥೆಗಳು ಮುಚ್ಚುತ್ತಿವೆ. ಉತ್ತಮವಾದ ಭವಿಷ್ಯ ಕಾಣುತ್ತಿಲ್ಲವೆಂದು ಮಾಹಿತಿ ನೀಡಿದೆ.
ನಿಮ್ಮಲ್ಲಿ ಎಷ್ಟುಜನ ಕಲೆ (Arts) ತೆಗೆದುಕೊಂಡಿದ್ದೀರಿ ಎಂಬ ಪ್ರಶ್ನೆಗೆ ಅಷ್ಟೇ ಜನ ಪ್ರತಿಕ್ರಿಯಿಸಿದರು. ಏಕೆ ಎಂದು ಕೇಳಿದ ಪ್ರಶ್ನೆಗೆ ಅವರು ಕೊಟ್ಟ ಉತ್ತರ - 'ಬಹಳ ಸುಲಭ, (Easy) ಅದಕ್ಕೆ' ಎಂದರು. ಇಂದಿನ ಯುವಜನರಲ್ಲಿ ಕಷ್ಟಪಡುವ ಪ್ರವೃತ್ತಿ ಕಡಿಮೆ ಆಗುತ್ತಿದೆ. ಕಡಿಮೆ ಪರಿಶ್ರಮದ ವೃತ್ತಿಯನ್ನು ಭವಿಷ್ಯದಲ್ಲಿ ಅವರು ನಿರೀಕ್ಷಿಸುತ್ತಾರೆ. ನಿರುದ್ಯೋಗ ಸಮಸ್ಯೆಯಿಂದಾಗಿ ವೃತ್ತಿಯು ಸಿಗುವಂತಿಲ್ಲ, ಅನ್ಯ ವೃತ್ತಿಗಳನ್ನು ನಿರ್ವಹಿಸುವಂತಿಲ್ಲ. ಅತಂತ್ರಸ್ಥಿತಿ. ನಮ್ಮಲ್ಲಿ ಆರ್ಟ್ಸ್-ಸೈನ್ಸ್-ಕಾಮರ್ಸ್ ಮೂರು ಕೋರ್ಸುಗಳು. ವಿಜ್ಞಾನ ಮತ್ತು ವಾಣಿಜ್ಯ ವಿಷಯಗಳಿಗೆ ತಕ್ಕಂತೆ ಹೆಚ್ಚು ಪ್ರಯತ್ನ - ಪರಿಶ್ರಮ, ಅಷ್ಟೇ ಬುದ್ಧಿಮತ್ತೆ ಬೇಕಾಗುತ್ತದೆ. ಕಡಿಮೆ ಸ್ಮರಣಶಕ್ತಿ ಹಾಗೂ ಅಲ್ಪಶ್ರಮದಿಂದಾಗಿ ಕಲೆಯನ್ನು ಐಚ್ಛಿಕ ವಿಷಯವೆಂದು ತೆಗೆದುಕೊಳ್ಳುವುದು ವಾಡಿಕೆ. ವಿಜ್ಞಾನವನ್ನು ಐಚ್ಛಿಕ ವಿಷಯವನ್ನಾಗಿ ತೆಗೆದುಕೊಂಡವರಿಗೆ ಒಂದಿಲ್ಲೊಂದು ಹುದ್ದೆ. ಅವರಿಗೆ ಇಂಜಿನಿಯರಿಂಗ್, ವೈದ್ಯಕೀಯ, ಪ್ಯಾರಾ ವೈದ್ಯಕೀಯ ಮುಂತಾದ ಉದ್ಯೋಗಾವಕಾಶ. ವಾಣಿಜ್ಯ ವಿಷಯವನ್ನು ಆಯ್ಕೆ ಮಾಡಿಕೊಂಡವರು ವಿವಿಧ ಬ್ಯಾಂಕ್‌ಗಳಲ್ಲಿ ಕೆಲಸ ಗಿಟ್ಟಿಸಬಹುದು. ಬ್ಯುಸಿನೆಸ್‌ಮೆನ್ ಆಗಬಹುದು. ಬಿಬಿಎಂ ಮತ್ತು ಸಿಎ ಪದವಿಯ ಮೂಲಕ ಸ್ವತಂತ್ರ ಹುದ್ದೆಯನ್ನು ನಿರ್ವಹಿಸಲು ಹೆಚ್ಚು ಸಹಾಯವಾಗುತ್ತದೆ. ಕಲೆಯನ್ನು ಐಚ್ಛಿಕ ವಿಷಯವನ್ನಾಗಿ ತೆಗೆದುಕೊಂಡವರಿಗೆ ಅವರು ನಿರೀಕ್ಷಿಸುವಂತೆ ಹುದ್ದೆಗಳು ಅಷ್ಟು ಸುಲಭವಲ್ಲ. ಪದವೀಧರರಾಗಿರಬಹುದು. ಆದರೆ ಉದ್ಯೋಗಸ್ಥರಾಗುವುದು ಕಷ್ಟಸಾಧ್ಯ. ಇಂದಿನ ಪದವಿಪೂರ್ವ ವಿದ್ಯಾರ್ಥಿಗಳು ಮತ್ತು ಎಸ್‌ಎಸ್‌ಎಲ್ಸಿ ಓದುತ್ತಿರುವ ವಿದ್ಯಾರ್ಥಿ ಮಿತ್ರರು ಗಂಭೀರವಾಗಿ ಚಿಂತಿಸಬೇಕಾಗುತ್ತದೆ. ಕಲೆಯನ್ನು ಐಚ್ಛಿಕ ವಿಷಯವನ್ನಾಗಿ ತೆಗೆದುಕೊಂಡವರಿಗೆ ಅವಕಾಶಗಳು ಇಲ್ಲವೆಂದಲ್ಲ, ಅವರು ಬಹಳ ಕಷ್ಟಪಡಬೇಕಾಗುತ್ತದೆ. ಸಮಾಜಶಾಸ್ತ್ರ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಕನ್ನಡ, ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಹೆಚ್ಚಿನ ಪರಿಣತಿಯನ್ನು ಪಡೆಯಬೇಕಾಗುತ್ತದೆ. ನಾನು ಅದೇ ಸಂವಾದದಲ್ಲಿ ಒಂದು ಅಂಶವನ್ನು ವ್ಯಕ್ತಪಡಿಸಿದೆ - 'ಕಲೆ (Arts) ಶಬ್ದವು ಸ್ವಲ್ಪ ಗೊಂದಲವನ್ನು ಸೃಷ್ಟಿಸಬಹುದು. ವಿಚಾರ ಮಾಡಿನೋಡಿದರೆ, ಈ ಹಂತದಲ್ಲಿ ಕಲೆಯನ್ನು ಕಲಿಸಲಾಗುವುದಿಲ್ಲ. ಕಲೆ ಶಬ್ದಕ್ಕೆ ಬದಲಾಗಿ 'ಸಮಾಜ ವಿಜ್ಞಾನ' (Social Science) ವೆಂದು ಹೆಸರಿಸುವುದು ಸೂಕ್ತ. ಕನ್ನಡವನ್ನು ಐಚ್ಛಿಕವಾಗಿ ಅಧ್ಯಯನ ಮಾಡಿದವರ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಕಾರಣವೇನೆಂದರೆ, ಹುದ್ದೆಗಳು ಸೀಮಿತ. ಪದವೀಧರರ ಸಂಖ್ಯೆ ವಿಪರೀತ. ಇದಕ್ಕೆ ಪರ್ಯಾಯವಾಗಿ ಆಂಗ್ಲಭಾಷೆಯನ್ನು ಇಲ್ಲವೆ ಹಿಂದಿಯನ್ನು ಆಯ್ಕೆ ಮಾಡಿಕೊಂಡು ಸ್ವಲ್ಪ ಕಷ್ಟಪಟ್ಟು ಓದಿದರೆ, ಉದ್ಯೋಗಾವಕಾಶಗಳು ಸಿಗುತ್ತವೆ. ಹಿಂದಿ ಮತ್ತು ಆಂಗ್ಲಭಾಷೆಯ ಶಿಕ್ಷಕರಿಗೆ ಬೇಡಿಕೆ ಬಹಳವಿದೆ.
ಉಳಿದಂತೆ ನಮ್ಮ ಹದಿಹರೆಯದವರಿಗೆ ನಾನು ಕೊಡಬಯಸುವ ಸಲಹೆಯೆಂದರೆ ಕಟ್ಟಡ ನಿರ್ಮಾಣಕ್ಕೆ ಸಂಬಂಧಸಿದಂತಹ ಶಿಕ್ಷಣ. ಇದರ ಅಗತ್ಯವಿಂದು ಎದ್ದು ಕಾಣುತ್ತದೆ. ಯೋಜನೆ ಮಾಡುವವರ ಕೊರತೆಯಿದೆ. ಕೊರತೆಯು ಬೇಡಿಕೆಗೆ ಒತ್ತಾಸೆ ನೀಡುತ್ತದೆ.  ಭೂಮಿಗೆ ವಿವಿಧ ಸ್ವರೂಪವನ್ನು ಕೊಡುವಂತಹ ಕೌಶಲ್ಯ ಬೇಕಿದೆಯಿಂದು. ಸರ್ಕಾರಿ ಮೀಸಲಾತಿಯಿಂದಾಗಿ ಮಧ್ಯಮವರ್ಗದವರು ಉದ್ಯೋಗಾವಕಾಶದಿಂದ ವಂಚಿತರಾಗಬಹುದು. ಅಂಥವರು ಪರಿಶ್ರಮದ ಕೆಲಸಗಳಾದ ಬಾರ್‌ಬೆಂಡಿಂಗ್, ಸೆಂಟ್ರಿಂಗ್ ಹಾಕುವುದು, ಬಡಗಿತನ ಮುಂತಾದ ಜೀವನೋಪಯೋಗಿ ಹುದ್ದೆಗಳನ್ನು ಪಡೆಯಬಹುದು. ಇಲ್ಲಿ ಯಾವುದೇ ರೀತಿಯ ಮೀಸಲಾತಿ ಇರುವುದಿಲ್ಲ. ಇಂಥ ಕೆಲಸಗಳನ್ನು ಮಾಡುವವರಿಗೆ ಎಲ್ಲಿಲ್ಲದ ಬೇಡಿಕೆಯಿದ್ದು, ದೂರದ ಪಶ್ಚಿಮ ಬಂಗಾಳ, ಪಂಜಾಬ್ ಮತ್ತಿತರ ರಾಜ್ಯಗಳಿಂದ ಕರೆಸಿಕೊಳ್ಳಲಾಗುತ್ತಿದೆ. ಇವರ ದಿನಗೂಲಿಯೂ ದುಬಾರಿ.
ವೃತ್ತಿ ಆಧಾರಿತ ಶಿಕ್ಷಣಕ್ಕೆ ಮಹತ್ವ ನೀಡಬೇಕಾದ ಸಂದರ್ಭವಿದು. ಪದವಿಯೇ ಬೇರೆ, (ಪ್ರ)ವೃತ್ತಿಯೇ ಬೇರೆ. ವೃತ್ತಿ ಅಥವಾ ಉದ್ಯೋಗ ಆಧರಿತ ಶಿಕ್ಷಣದಿಂದ ಜೀವನ ನಿರ್ವಹಣೆ ಸುಲಭ. ಈ ದಿಶೆಯಲ್ಲಿ ಶಿಕ್ಷಣದಲ್ಲಿ ಸಾಕಷ್ಟು ಸುಧಾರಣೆಗಳು ಆಗಬೇಕಿದೆ. ಹೊಸ ಸ್ವರೂಪವನ್ನು ನೀಡಬೇಕಿದೆ. ಶಿಕ್ಷಣ ತಜ್ಞರು ಈ ಸಂಬಂಧ ಗಂಭೀರವಾಗಿ ಚರ್ಚಿಸಿ, ಸರ್ಕಾರಕ್ಕೆ ನಿರ್ದೇಶಿಸಬೇಕಾಗುತ್ತದೆ.

- ಡಾ. ಶಿವಮೂರ್ತಿ ಮುರುಘಾ ಶರಣರು
ಶ್ರೀ ಮುರುಘಾಮಠ, ಚಿತ್ರದುರ್ಗ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.