ಅಖಿಲೇಶರ ಸಮಾಜ'ವ್ಯಾಧಿ'ಗೆ ಕಳೆಗುಂದಿದ ದುರ್ಗಾಶಕ್ತಿ

ಕಳ್ಳನನ್ನು ಕಳ್ಳ ಎಂದು ಕರೆದರೆ ಕೋಮುವಾದವಾಗುತ್ತದೆಯೇ? ಒಬ್ಬ...
Updated on: 

ಕಳ್ಳನನ್ನು ಕಳ್ಳ ಎಂದು ಕರೆದರೆ ಕೋಮುವಾದವಾಗುತ್ತದೆಯೇ?
ಒಬ್ಬ ಐಎಎಸ್ ಅಧಿಕಾರಿಯ ಮೇಲೆ ಇನ್ನಿಲ್ಲದಂತೆ ಮುಗಿಬಿದ್ದಿರುವ ಅಖಿಲೇಶ್ ಯಾದವ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರದ ರೀತಿ-ನೀತಿಯನ್ನು ಗಮನಿಸಿದರೆ ಇಂಥದೊಂದು ಪ್ರಶ್ನೆ ಮೂಡುತ್ತದೆ. ರಸ್ತೆಗೆ ಅಡ್ಡಲಾಗಿ  ಕಟ್ಟಿದ್ದ ಮೋಟುಗೋಡೆ ಕೆಡವುವಾಗ ಅದು ತನ್ನ ಸೇವೆಗೇ ಸಂಚಕಾರ ತರಬಹುದು ಎಂಬ ಕಲ್ಪನೆಯೂ ಆ ಅಧಿಕಾರಿಗೆ ಇರಲಿಲ್ಲ. ಆಕೆ ದುರ್ಗಾಶಕ್ತಿ ನಾಗಪಾಲ್. ಮೂಲತಃ ಪಂಜಾಬಿನ ಈಕೆ ಅಪಾರ ಕನಸುಗಳನ್ನು ಹೊತ್ತು ಭಾರತೀಯ ಆಡಳಿತಾತ್ಮಕ ಸೇವೆಗೆ ಸೇರಿದ್ದಳು. ಮನಸ್ಸು ಮಾಡಿದ್ದರೆ ತಾನು ಪಡೆದಿದ್ದ ಕಂಪ್ಯೂಟರ್ ಸೈನ್ಸ್ ಪದವಿ ಆಧಾರದ ಮೇಲೆ ಭವ್ಯ ಬದುಕು ರೂಪಿಸಿಕೊಳ್ಳಬಹುದಿತ್ತು. ಆದರೆ ಮನಸ್ಸು ನಾಗರಿಕ ಸೇವೆಯತ್ತ ಎಳೆಯಿತು. ಮದುವೆಯ ಬಳಿಕ ಉತ್ತರ ಪ್ರದೇಶದ ಕಡೆಗೆ ಸೇವೆ ಮಗ್ಗುಲು ಬದಲಿಸಿತು. ಪ್ರತಿ ವರ್ಷ ಅನೇಕ ಮಂದಿ ಈ ಸೇವೆಗೆ ಸೇರ್ಪಡೆಯಾಗುತ್ತಾರೆ. ಸಂವಿಧಾನದತ್ತ ಅಧಿಕಾರ ಬಳಸಿ ಜನರಿಗೆ ಉಪಕಾರ ಆಗುವಂಥ ನಾಲ್ಕಾರು ಕೆಲಸ ಮಾಡುವ ಆಸೆಯೊಂದಿಗೆ ಬರುತ್ತಾರೆ. ಎಲ್ಲ ಕೆಟ್ಟದ್ದಕ್ಕೂ ಈ ಆಡಳಿತಶಾಹಿಯನ್ನು ದೂರುವ ರಾಜಕಾರಣಿಗಳು ಏನೇ ಒಳ್ಳೆಯ ಕೆಲಸವಾದರೂ ಅದರ ಪೂರ್ಣ ಕ್ರೆಡಿಟ್ ತಮಗೆ ಸಲ್ಲುವಂತೆ ನೋಡಿಕೊಳ್ಳುತ್ತಾರೆ. ಈ ಮೇಲಾಟದಲ್ಲಿ ಸೋಲುವುದು ತಾವೇ ಎಂದು ಗೊತ್ತಿದ್ದರೂ ಆಡಳಿತಶಾಹಿ ಅದನ್ನು ಸಹಿಸಿಕೊಳ್ಳುತ್ತದೆ. ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಕಾಯಕದಲ್ಲಿ ನಿರಂತರವಾಗಿ ತೊಡಗಿಕೊಳ್ಳುತ್ತದೆ. ಗಂಡನ ಜೊತೆ ಸಂಸಾರ ತೂಗುವ ಸಲುವಾಗಿ ಪಂಜಾಬ್ ಕೇಡರ್‌ನಿಂದ ಉತ್ತರ ಪ್ರದೇಶಕ್ಕೆ ವರ್ಗವಾದಾಗ ತಾನು ವ್ಯವಸ್ಥೆಯ ಬಲಿಪಶುವಾಗಬಹುದು ಎಂಬ ಎಣಿಕೆ ದುರ್ಗಾಗೆ ಇರಲಿಲ್ಲ. ಆದರೆ ಈಕೆ ಇಂದು ಸೇವೆಯಿಂದ ಸಸ್ಪೆಂಡ್ ಆಗಿದ್ದಾರೆ. ಅಲ್ಲದೆ ಈಕೆಯ ವಿರುದ್ಧ ಉತ್ತರ ಪ್ರದೇಶ ಸರ್ಕಾರ ಚಾರ್ಜ್‌ಶೀಟ್ ಮತ್ತು ನೋಟೀಸ್ ನೀಡಿದೆ. ಈ ಬಗ್ಗೆ ಸ್ವತಃ ದುರ್ಗಾ ತುಟಿಬಿಚ್ಚಿಲ್ಲ. ಆದರೆ ಇಡೀ ದೇಶ ಈಕೆಯ ವಿಷಯದ ಬಗ್ಗೆ ಚರ್ಚೆ ಮಾಡುತ್ತಿದೆ. ಟಿವಿ ಚಾನೆಲ್‌ಗಳಂತೂ ಗಂಟೆಗಟ್ಟಲೆ ಈಕೆಯ ಪರವಾಗಿ ತಮ್ಮ ಗಂಟಲು ಹರಿದುಕೊಂಡಿದೆ. ಇಷ್ಟಕ್ಕೂ ದುರ್ಗಾ ಮಾಡಿದ ಅಪರಾಧವಾದರೂ ಏನು?
ಮರಳು ಮಾಫಿಯಾ!
ದಿಲ್ಲಿ ಉತ್ತರ ಪ್ರದೇಶ ಗಡಿಯಲ್ಲಿ ಚಾಚಿರುವ ನೋಯ್ಡಾ ಈಗ ದೇಶದಲ್ಲಿಯೇ ನಿರ್ಮಾಣ ಚಟುವಟಿಕೆಗೆ ಅತಿ ಪ್ರಶಸ್ತ ಭೂಮಿ. ನಾಯಿಕೊಡೆಗಳಂತೆ ಕಟ್ಟಡಗಳು ತಲೆ ಎತ್ತುತ್ತಿರುವ ಪ್ರದೇಶ. ಈ ನಿರ್ಮಾಣ ದಾಹಕ್ಕೆ ಬರಿದಾಗಿರುವುದು ಯುಮುನೆಯ ತಟ. ಅಲ್ಲಿನ ಮರಳಿಗೆ ಎಲ್ಲಿಲ್ಲದ ಬೇಡಿಕೆ. ಬೆಂಗಳೂರಿನ ಭೂದಾಹಕ್ಕೆ ಗ್ರಾಮಾಂತರ ಪ್ರದೇಶಗಳು ಬೋಳಾಗಿರುವಂತೆ ನೋಯ್ಡಾಗಾಗಿ ಯುಮುನೆಯ ತೀರದಲ್ಲಿ ಕಂಡ ಕಂಡಲ್ಲಿ ಮರಳುಗಾರಿಕೆ ಎಗ್ಗಿಲ್ಲದೆ ಸಾಗಿದೆ. ಈ ಮಾಫಿಯಾ ಯಾರ ಅಂಕೆಗೂ ಸಿಲುಕದಂಥದ್ದು.
ಗೌತಮಬುದ್ಧನಗರ ಜಿಲ್ಲೆಯ ಸಬ್‌ಡಿವಿಜನಲ್ ಮ್ಯಾಜಿಸ್ಟ್ರೇಟ್ ಆಗಿದ್ದ ದುರ್ಗಾ ಕಣ್ಣು ಸಹಜವಾಗಿಯೇ ಈ ಮರಳು ದಂಧೆಯ ಮೇಲೆ ಬಿತ್ತು. ಕಾನೂನಿಗೆ ವಿರುದ್ಧವಾಗಿ ಯಾವುದೇ ಅನುಮತಿ ಪತ್ರವಿಲ್ಲದೆ ಅನೇಕರು ಇಲ್ಲಿ ಮರಳು ಗಣಿಗಾರಿಕೆಯಲ್ಲಿ ತೊಡಗಿರುವುದು ಆಕೆಯ ಗಮನಕ್ಕೆ ಬಂತು. ಸರ್ಕಾರಕ್ಕೆ ನ್ಯಾಯವಾಗಿ ಬರಬೇಕಿದ್ದ ಆದಾಯ ಸೋರಿಕೆ ತಡೆಗಟ್ಟಲು ಮುಂದಾದರು. ಅಕ್ರಮ ಮರಳು ಸಾಗಣೆಯಲ್ಲಿ ನಿರತವಾಗಿದ್ದ 30ಕ್ಕೂ ಹೆಚ್ಚು ಟ್ರಕ್, ಡಂಪರ್‌ಗಳನ್ನು ವಶಪಡಿಸಿಕೊಂಡರು. ಎರಡು ಡಜನ್‌ಗೂ ಹೆಚ್ಚು ಎಫ್‌ಐಆರ್‌ಗಳು ದಾಖಲಾದವು. ಸುಮಾರು 85 ಲಕ್ಷಕ್ಕೂ ಹೆಚ್ಚಿನ ಹಣ ದಂಡ ರೂಪದಲ್ಲಿ ವಸೂಲು ಮಾಡಿದರು. ಇದೆಲ್ಲ ಅಲ್ಲಿನ ಮಾಫಿಯಾದ ನಿದ್ದೆಗೆಡಿಸಿತು. ಸ್ಥಳೀಯ ಶಾಸಕ ನರೇಂದ್ರ ಭಾಟಿ ಶ್ರೀರಕ್ಷೆ ಇಲ್ಲದೆ ಈ ಅಕ್ರಮ ನಡೆಯುತ್ತಿರಲಿಲ್ಲ.  ಸಹಜವಾಗಿಯೇ ಇದು ಶಾಸಕನ ಕಣ್ಣು ಕೆಂಪಗಾಗಿಸಿತು. ಇದೇ ಸಂದರ್ಭದಲ್ಲಿ ಸಾರ್ವಜನಿಕ ರಸ್ತೆಯ ಮೇಲೆ ಅಕ್ರಮ ಗೋಡೆ ನಿರ್ಮಾಣ ಮಾಡಿರುವುದರ ಬಗ್ಗೆ ದೂರು ಬಂತು. ಸ್ಥಳಕ್ಕೆ ಆಗಮಿಸಿದ ದುರ್ಗಾ, ಸ್ಥಳೀಯರಿಗೆ ಪರಿಸ್ಥಿತಿ ವಿವರಿಸಿದರು. ಸುಪ್ರೀಂಕೋರ್ಟ್ ತೀರ್ಪಿನಂತೆ ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ನಿರ್ಮಾಣ ಅಕ್ರಮ ಎಂಬುದನ್ನು ಹಾಗೂ ಇದಕ್ಕೆ ಯಾವುದೇ ಪೂರ್ವಾನುಮತಿ ಇಲ್ಲ ಎಂಬ ಅಂಶವನ್ನು ಅವರ ಗಮನಕ್ಕೆ ತಂದರು. ಕಡೆಗೆ ಸ್ಥಳೀಯರೇ ಆ ಮೋಟು ಗೋಡೆಯನ್ನು ಕೆಡವಿದರು. ಅಷ್ಟು ಸಾಕಿತ್ತು ನರೇಂದ್ರ ಭಾಟಿ ಮತ್ತು ಆತನ ಬೆನ್ನಿಗಿದ್ದ ಮರಳು ಮಾಫಿಯಾಕ್ಕೆ. ದುರ್ಗಾ ಅವರು ಮಸೀದಿಯನ್ನು ಕೆಡವಿದ್ದಾರೆ ಎಂಬ ಅಪಪ್ರಚಾರಕ್ಕೆ ಮುಂದಾದರು. ಇದರಿಂದ ಅಲ್ಲಿ ಕೋಮು ಭಾವನೆ ಕೆರಳಬಹುದೆಂದೂ, ಕಾನೂನು ಸುವ್ಯವಸ್ಥೆ ವಿಕೋಪಕ್ಕೆ ಹೋಗಬಹುದೆಂದೂ ಹುಯಿಲೆಬ್ಬಿಸಿದರು. ಆದರೆ ಅಸಲಿಯತ್ತು ಏನೆಂದರೆ ಅಲ್ಲಿ ಯಾವುದೇ ಪ್ರಾರ್ಥನಾ ಗೋಡೆ ನಿರ್ಮಾಣ ಆಗಿರಲೇ ಇಲ್ಲ. ಅಲ್ಲಿದ್ದುದು ಮೂರ್ನಾಲ್ಕು ಅಡಿ ಎತ್ತರದ ಸಣ್ಣ ಗೋಡೆಯಷ್ಟೆ. ಯಾವುದೇ ರೀತಿಯಲ್ಲೂ ಅದನ್ನು ಮಸೀದಿಗೋಡೆ ಎಂದು ಕರೆಯುವಂತೆಯೂ ಇರಲಿಲ್ಲ. ಮೇಲಾಗಿ ಇಡೀ ಪ್ರದೇಶದಲ್ಲಿ ಮುಸ್ಲಿಮರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ದುರ್ಗಾ ಅವರ ಸಮಜಾಯಿಷಿ ನಂತರ ಅವರೇ ಆ ಗೋಡೆಯನ್ನು ಕೆಡವಿದ್ದರು. ಇದನ್ನು ಸ್ವತಃ ದುರ್ಗಾ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ ವಿವರಣೆಯಲ್ಲಿ ಮತ್ತು ಜಿಲ್ಲೆಯ ಎಸ್‌ಪಿ ಕೊಟ್ಟ ವಸ್ತುಸ್ಥಿತಿ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಆದರೆ ವಾಸ್ತವಕ್ಕೆ ಕುರುಡಾಗಿದ್ದ ಅಖಿಲೇಶ್ ಯಾದವ್ ಸರ್ಕಾರಕ್ಕೆ ಇದಾವುದೂ ಬೇಕಿರಲಿಲ್ಲ. ಮರಳು ಮಾಫಿಯಾದ ಉಪ್ಪು ತಿಂದಿದ್ದಕ್ಕೆ ಅವರ ಪರ ನಿಲ್ಲಲೇಬೇಕಾದ ಜುರತ್ತು ಅದಕ್ಕಿತ್ತು. ಹಾಗೆಂದೇ ದುರ್ಗಾ ಅವರನ್ನು ಸಸ್ಪೆಂಡ್ ಮಾಡಿದ್ದೂ ಅಲ್ಲದೆ ಕೋಮು ಪ್ರಚೋದನೆಗೆ ಇಂಬುಕೊಡುವಂತಹ ಕೆಲಸಕ್ಕೆ ಮುಂದಾದ ಆರೋಪವನ್ನು ಅವರ ಮೇಲೆ ಹೊರಿಸಿದೆ. ಆ ಸಂಬಂಧ ಚಾರ್ಜ್‌ಶೀಟ್ ಸಹ ನೀಡಿದೆ. ನರೇಂದ್ರ ಭಾಟಿಯಂತೂ ಅರ್ಧಗಂಟೆಯ ಅವಧಿಯಲ್ಲಿ ಈ ಅಧಿಕಾರಿಗೆ ತಾನೇ ತಕ್ಕ ಶಾಸ್ತಿ ಮಾಡಿಸಿದ್ದಾಗಿ ಬಹಿರಂಗವಾಗಿ ಕೊಚ್ಚಿಕೊಂಡಿದ್ದಾನೆ.
ಅಲ್ಲ, ಯಾವ ರೋಗ ಬಡಿದಿದೆ ಈ ಅಖಿಲೇಶ್ ಯಾದವ್‌ಗೆ? ನಿಯಮಗಳ ಅನುಸಾರ ನಡೆದುಕೊಂಡ ಅಧಿಕಾರಿಯನ್ನು ಕೋಮುವಾದಿ ಎನ್ನುವ ಮಟ್ಟಕ್ಕೆ ಇಳಿದಿದ್ದಾರಲ್ಲ ಇವರು ಹೊಟ್ಟೆಗೆ ಏನು ತಿನ್ನುತ್ತಾರೆ? ದುರ್ಗಾ ಅವರು ಮಾಡಿದ್ದು ಕೋಮುವಾದ ಎನ್ನುವುದಾದರೆ ಅದೇ ಕಾರಣಕ್ಕೆ ಉತ್ತರ ಪ್ರದೇಶ ಸರ್ಕಾರವನ್ನೇ ವಜಾ ಮಾಡಬೇಕಾಗುತ್ತದೆ. ಅಧಿಕಾರಕ್ಕೆ ಬಂದು ಎರಡು ವರ್ಷವಾದರೂ  ಜನಪರವಾದಂತಹ ಕೆಲಸಗಳನ್ನು ಕೈಗೊಳ್ಳುವ ಬದಲು ದೇಶಕ್ಕೆ ಬಾಂಬಿಟ್ಟ ಭಯೋತ್ಪಾದಕರನ್ನು ಅವರು ಅಲ್ಪಸಂಖ್ಯಾತರು ಎಂಬ ಕಾರಣಕ್ಕೆ ಅವರ ವಿರುದ್ಧ ದಾಖಲಾಗಿದ್ದ ಕೇಸುಗಳನ್ನು ಹಿಂಪಡೆಯುವ ದುಸ್ಸಾಹಸಕ್ಕೆ ಕೈಹಾಕಿದ ಸರ್ಕಾರದ ಕ್ರಮ ಕೋಮುವಾದದ ಪರಿಧಿಗೆ ಬರುವುದಿಲ್ಲವೇ? ಇಲ್ಲಿ ಮುಲಾಯಂ ಸಿಂಗ್, ಅಖಿಲೇಶ್ ಯಾದವ್ ಮತ್ತು ಅವರ ಸಮಾಜವಾದಿ ಪಕ್ಷ ಕೋಮುವಾದಿಗಳು ಎಂದು ಅನ್ನಿಸುವುದಿಲ್ಲವೇ? ದುರ್ಗಾ ಹದ್ದುಮೀರಿ ವರ್ತಿಸಿದ ಕಾರಣ ಅವರನ್ನು ಸಸ್ಪೆಂಡ್ ಮಾಡಬೇಕಾಯಿತು. ಅಗತ್ಯ ಬಿದ್ದರೆ ಇನ್ನು ಹೆಚ್ಚಿನ ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದು ಹೇಳುವ ಅಖಿಲೇಶ್ ತಮ್ಮ ಸರ್ಕಾರದಲ್ಲಿರುವ ಕಳಂಕಿತ ಅಧಿಕಾರಿಗಳ ವಿರುದ್ಧ ಹೀಗೆಯೇ ಕ್ರಮ ಕೈಗೊಳ್ಳುತ್ತಾರೆಯೇ? ನೋಯ್ಡಾ ಭೂ ವಿತರಣೆ ವೇಳೆ ಭಾರೀ ಅಕ್ರಮ ಎಸಗಿದ್ದ ಆರೋಪದ ಮೇಲೆ ಒಂದು ಲಕ್ಷ ರು. ಜುಲ್ಮಾನೆ ಮತ್ತು ಮೂರು ವರ್ಷಗಳ ಸೆರೆವಾಸದ ಶಿಕ್ಷೆ ಎದುರಿಸುತ್ತಿದ್ದರೂ ಮೇಲ್ಮನವಿಯ ನೆಪವೊಡ್ಡಿ ಸೇವೆಯಲ್ಲಿ ಮುಂದುವರಿದಿರುವ ರಾಜೀವ್ ಕುಮಾರ್, ಅದೇ ನೋಯ್ಡಾದ ಸಿಇಓ ಆಗಿದ್ದಾಗ ಭ್ರಷ್ಟಾಚಾರದ ಆರೋಪಕ್ಕೆ ಒಳಗಾಗಿದ್ದ ಸಂಜೀವ್ ಶರಣ್ ಅವರನ್ನು ರಾಜ್ಯ ಸರ್ಕಾರ ಯಾವ ರೀತಿ ನಡೆಸಿಕೊಳ್ಳುತ್ತಿದೆ ಗೊತ್ತೆ? ರಾಜೀವ್ ಸರ್ಕಾರದ ಪ್ರಮುಖ ಇಲಾಖೆಯಲ್ಲಿ ವಿರಾಜಮಾನರಾಗಿದ್ದರೆ, ಶರಣ್ ಮತ್ತೆ ನೋಯ್ಡಾ ಸಿಇಓ ಆಗಿದ್ದಾರೆ. ಅಕ್ರಮವನ್ನು ಬಯಲಿಗೆಳೆದು ಅದರ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಕೋಮುವಾದ ಎನ್ನುವುದಾದರೆಅಕ್ರಮ ಎಸಗುವವರಿಗೆ ಆಶ್ರಯ ನೀಡುವುದನ್ನು ಬಹುಶಃ ಅಖಿಲೇಶ್‌ರಂಥವರ ಸಮಾಜ'ವ್ಯಾಧಿ' ಎನ್ನಬೇಕಾಗುತ್ತದೆ.
ಇಂದು ಇಡೀ ದೇಶ ದುರ್ಗಾಶಕ್ತಿ ನಾಗಪಾಲ್ ಬಗ್ಗೆ ಚರ್ಚಿಸುತ್ತಿದ್ದರೂ ಸ್ವತಃ ಐಎಎಸ್ ಸಮೂಹದಿಂದ ಒಂದು ಸಣ್ಣ ಧ್ವನಿ ಕೂಡ ಕೇಳಿಬರದಿರುವುದು ವಿಪರ್ಯಾಸವೇ ಸರಿ. ಅದರಲ್ಲೂ ಹಿರಿಯ ಅಧಿಕಾರಿಗಳಂತೂ ಏನೂ ಆಗಿಯೇ ಇಲ್ಲ ಎಂಬಂತೆ ಕೈಕಟ್ಟಿ ಕುಳಿತಿರುವುದಾದರೂ ಏಕೆ? ಇಷ್ಟಕ್ಕೂ ಕಿರಿಯ ಅಧಿಕಾರಿಗಳನ್ನು ಕಾಪಾಡಬೇಕಾದ ಹೊಣೆ ಇರುವುದು ಇವರ ಮೇಲೆಯೇ ಅಲ್ಲವೆ, ತಾವಿಲ್ಲದೆ ಸರ್ಕಾರ ನಡೆಯದು ಎಂಬ ವಾಸ್ತವ ತಿಳಿದಿದ್ದರೂ ಈ ಅಧಿಕಾರಿಗಳೇಕೆ ಮುಗುಮ್ಮಾಗಿ ಕುಳಿತುಕೊಳ್ಳುತ್ತಾರೆ. ಪ್ರಾಯಶಃ ಅವರಲ್ಲಿಯೂ ಸಾಕಷ್ಟು ಹುಳುಕುಗಳಿವೆ. ಇಂದು ಬಹುತೇಕ ಐಎಎಸ್ ಅಧಿಕಾರಿಗಳು ಸಂವಿಧಾನಕ್ಕಿಂತ ರಾಜಕಾರಣಿಗಳ ಈಛಟಠ ಜ್ಟಿಟಟ್ಟಢಿಜ್ಠಡ (ಬೆಂಬಲಿಗ) ಆಗಿ ಮಾರ್ಪಟ್ಟಿದ್ದಾರೆ. ಹೀಗಾಗಿ ತಮಗೆ ಬೇಕಾದ ಸರ್ಕಾರ ಬಂದಾಗ ಆಯಕಟ್ಟಿನ ಸ್ಥಾನಗಳನ್ನು ಅಲಂಕರಿಸುತ್ತಾರೆ. ಅದರಲ್ಲೂ ಉತ್ತರ ಪ್ರದೇಶದಂತಹ ರಾಜ್ಯದಲ್ಲಿ ಒಂದು ಸರ್ಕಾರ ಬದಲಾಗುತ್ತಿದ್ದಂತೆಯೇ ಇಡೀ ಅಧಿಕಾರಿ ವರ್ಗವೇ ಅವರ ನಿಷ್ಠೆಗೆ ಅನುಸಾರವಾಗಿ ಬದಲಾಗುತ್ತದೆ. ಈ ಕಾರಣ ಸರ್ಕಾರದ ಅನೀತಿಯ ವಿರುದ್ಧ ಪ್ರತಿಭಟಿಸುವುದಿರಲಿ, ಅದನ್ನು ಪ್ರಶ್ನಿಸುವ ತಾಕತ್ತೂ ಅಧಿಕಾರಿಗಳಲ್ಲಿ ಇಲ್ಲವಾಗಿದೆ. ಆಡಳಿತಶಾಹಿ ಬಲಹೀನವಾಗಿ ರಾಜಕಾರಣಿಯ ಕೈ ಮೇಲಾಗಲು ಅಧಿಕಾರಿಗಳ ಪಾತ್ರವೂ ಇದೆ. ಇಂದು ದುರ್ಗಾ ಪರ ಮಾತನಾಡುತ್ತಿರುವ ಮಾಯಾವತಿ, ಸೋನಿಯಾಗಾಂಧಿ ಮುಂತಾದವರು ತಮ್ಮ ಬುಡಕ್ಕೆ ಬಂದಾಗ ಅಖಿಲೇಶ್‌ರಂತೆಯೇ ನಡೆಯುತ್ತಾರೆ ಎಂಬುದನ್ನು ಐಎಎಸ್ ವೃಂದ ಮರೆಯಬಾರದು. ದುರ್ಗಾಗೆ ಅನ್ಯಾಯವಾಗದಂತೆ ನೋಡಿಕೊಳ್ಳಿ ಎಂದು ಪ್ರಧಾನಿಗೆ ಪತ್ರ ಬರೆದ ಸೋನಿಯಾ, ಹರ್ಯಾಣದಲ್ಲಿ ಭೂಸ್ವಾಹ ಮಾಡಿದ ತನ್ನ ಅಳಿಯನ ಅಕ್ರಮ ತಡೆಯಲೆತ್ನಿಸಿದ ದಿಟ್ಟ ಅಧಿಕಾರಿ ಖೇಮ್ಕಾರನ್ನು ಅಲ್ಲಿನ ಕಾಂಗ್ರೆಸ್ ಸರ್ಕಾರ ಬೇಟೆಯಾಡಿದಾಗ ಏಕೆ ಸುಮ್ಮನಿದ್ದರು? ಇನ್ನು ಮಾಯಾವತಿಯಂತೂ ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಅದೆಷ್ಟೋ ಅಧಿಕಾರಿಗಳಿಗೆ ಕಿರುಕುಳ ಕೊಟ್ಟಿದ್ದನ್ನು ನಿರಾಕರಿಸಲು ಸಾಧ್ಯವೇ? ಇಂದು ಸರ್ಕಾರಿ ಸೇವೆಗಳಿಂದ ಜನ ವಿಮುಖರಾಗುತ್ತಿದ್ದಾರೆ. ಸೇನೆಗೆ ಸೇರಲು ಹಿಂದೇಟು ಹಾಕುತ್ತಿದ್ದಾರೆ. ಅದರಲ್ಲೂ ಸೈನಿಕರ ವಿಚಾರದಲ್ಲಿ, ಅವರ ತ್ಯಾಗದ ವಿಷಯದಲ್ಲಿ ಸರ್ಕಾರಗಳು ನಡೆದುಕೊಳ್ಳುವ ರೀತಿ ಸದ್ಯ ಅದರ ಸಹವಾಸವೇ ಬೇಡ ಎಂಬಂತಹ ವಾತಾವರಣ ನಿರ್ಮಿಸಿದೆ. ಇನ್ನು ದುರ್ಗಾಶಕ್ತಿ ಅವರಂತಹ ಪ್ರಕರಣಗಳಿಂದ ಜನ ಆಡಳಿತ ಸೇವೆಗೆ ಬೆನ್ನು ಮಾಡುವ ಎಲ್ಲ ಅಪಾಯಗಳಿವೆ. ಹಾಗೊಂದು ವೇಳೆ ಸೇರಿದರೂ ಬಲುಬೇಗ ಭ್ರಮನಿರಸನಗೊಂಡು ಹೊರ ನಡೆಯುವುದಿಲ್ಲ ಎನ್ನುವುದಕ್ಕೆ ಯಾವುದೇ ಖಾತ್ರಿ ಇಲ್ಲ. ಇಂತಹ ಪರಿಸ್ಥಿತಿಗೆ ರಾಜಕಾರಣಿಗಳ ಕೊಡುಗೆ ಅಪಾರವಾಗಿದ್ದರೂ, ಸಂಬಂಧಪಟ್ಟ ಎಲ್ಲರೂ ಪ್ರತ್ಯಕ್ಷ-ಪರೋಕ್ಷವಾಗಿ ಇದಕ್ಕೆ ಕಾರಣರಾಗುತ್ತಿದ್ದಾರೆ ಎಂಬುದನ್ನು ಮರೆಯುವಂತಿಲ್ಲ.


- ಕೆ.ಎಸ್.ಜಗನ್ನಾಥ್
jagannath.kudinoor@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com