ಅಂಕಣಗಳು

ಮನಸ್ಸುಗಳ ವಿಭಜನೆ ಮಾಡುವ ಹೊಸ ರಾಜ್ಯ ರಚನೆ

Published On :

ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ 29ನೇ ರಾಜ್ಯದ ಉದಯಕ್ಕೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿಸಿದೆ. ಕರ್ನಾಟಕಕ್ಕೆ ಹೊಂದಿಕೊಂಡಿರುವ ಆಂಧ್ರಪ್ರದೇಶದ ಕೆಲವು ಜಿಲ್ಲೆಗಳನ್ನು ತೆಲಂಗಾಣ ರಾಜ್ಯವೆಂದು ಗುರುತಿಸಿ ತೆಲುಗು ಭಾಷಿಕರೇ ವಾಸಿಸುವ ಅಖಂಡ ಆಂಧ್ರಪ್ರದೇಶವನ್ನು ಒಡೆದು ಇಬ್ಭಾಗ ಮಾಡಲಾಗಿದೆ.
ಪ್ರಸ್ತುತ ಪ್ರಾದೇಶಿಕ ಗಡಿಗಳನ್ನು ಗುರುತಿಸುವ ಕೆಲಸ ಅತ್ಯಂತ ಸುಲಭ. ಆದರೆ ಮಾನಸಿಕ ಒಗ್ಗೂಡುವಿಕೆ ತೀರಾ ಕಠಿಣವಾಗುತ್ತಿದೆ. ತೆಲಂಗಾಣ ರಾಜ್ಯ ಸೃಷ್ಟಿಯ ಕುರಿತು ಸೂಕ್ಷ್ಮವಾಗಿ ಅವಲೋಕಿಸುತ್ತಾ ಹೋದರೆ ವಿಭಕ್ತ ಕುಟುಂಬಗಳು ಕಣ್ಮುಂದೆ ಬರುತ್ತವೆ. ಮೊದಲಿನ ಹಾಗೆ ಅಜ್ಜಿ-ತಾತ-ಅಪ್ಪ-ಅಮ್ಮ... ಹೀಗೆ ಕುಟುಂಬದ ಹತ್ತಾರು ಜನರು ಒಂದೇ ಸೂರಿನಡಿ ಪ್ರೀತಿ-ಬಾಂಧವ್ಯದಿಂದ ಬದುಕುತ್ತಿದ್ದ ಕಾಲ ಕಣ್ಮರೆಯಾಗಿ ಚಿಕ್ಕ-ಚಿಕ್ಕ ಕುಟುಂಬಗಳ ಕೌಟುಂಬಿಕ ವ್ಯವಸ್ಥೆ ರೂಪುಗೊಂಡಿದೆ. ಇದಕ್ಕೆಲ್ಲಾ ಕಾರಣಗಳು ಏನೇ ಇರಬಹುದು, ಆದರೆ ಕೂಡಿ ಬಾಳುವ ಕಲ್ಪನೆಯೇ ದೂರವಾಗಿ ಬಂಧು-ಬಳಗ ಇದ್ದರೂ ಅನಾಥ ಸ್ಥಿತಿಯಲ್ಲಿ ಬದುಕುವಂತಹ ಕೋಟ್ಯಂತರ ಕುಟುಂಬಗಳು ದೇಶದಾದ್ಯಂತ ಹೆಚ್ಚುತ್ತಿವೆ. ವಿಭಕ್ತ ಕುಟುಂಬಗಳ ಪರಿಕಲ್ಪನೆಯೇ ಈಗ ವಿಭಕ್ತ ರಾಜ್ಯಗಳಿಗೂ ಬಂದಿದೆ. 1950ರಲ್ಲಿ ಭಾಷಾವಾರು ಪ್ರಾಂತ್ಯಗಳ ಆಧಾರದ ಮೇಲೆ ರಚನೆಗೊಂಡ ರಾಜ್ಯಗಳಲ್ಲಿ ಮತ್ತೊಮ್ಮೆ ಇಬ್ಭಾಗದ ಮೊಳಕೆಯೊಡೆದು ಹೆಮ್ಮರವಾಗುತ್ತಿದೆ. ಈಗಾಗಲೇ ಉತ್ತರಾಖಂಡ, ಛತ್ತೀಸ್‌ಗಢ ರಾಜ್ಯಗಳನ್ನು ಹೊಸದಾಗಿ ಸೃಷ್ಟಿಸಲಾಗಿದ್ದು ಮತ್ತೊಂದು ಸೇರ್ಪಡೆ ತೆಲಂಗಾಣ ರಾಜ್ಯ. ಹೊಸ ರಾಜ್ಯಗಳ ಉದಯಕ್ಕೆ ಬೇಡಿಕೆಗಳು ನಿರಂತರವಾಗಿ ಹೆಚ್ಚುತ್ತಿವೆ. ಅಸ್ಸಾಂ ರಾಜ್ಯವನ್ನು ಪ್ರತ್ಯೇಕಿಸಿ ಗುರ್ಖಾಲ್ಯಾಂಡ್, ಬೋಡೋಲ್ಯಾಂಡ್, ದಿಮಸಾಸ್, ಕಬರ್ ಹಾಗೂ ರಾಜ್ಬೊಂಗ್ಶಿಸ್ ಎಂಬ ನಾಲ್ಕು ರಾಜ್ಯಗಳನ್ನು ರಚಿಸಬೇಕೆಂದು ಅಲ್ಲಿನ ಪ್ರತ್ಯೇಕತಾ ವಾದಿಗಳು ಹಿಂಸಾರೂಪದ ಹೋರಾಟ ತೀವ್ರಗೊಳಿಸಿದ್ದಾರೆ ಅವರ ಹೋರಾಟಕ್ಕೆ ಸ್ಫೂರ್ತಿಯಾಗಿರುವುದು ನೂತನ ತೆಲಂಗಾಣ ರಾಜ್ಯ ವಿಭಜನೆ ಎನ್ನುವುದನ್ನು ಅಲ್ಲಗಳೆಯಲಾಗದು. ಈ ಹೋರಾಟವನ್ನು ಶಮನಗೊಳಿಸುವುದು ಕೇಂದ್ರ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಪಶ್ಚಿಮ ಬಂಗಾಳದಲ್ಲಿ ಪ್ರತ್ಯೇಕತೆಯ ಕೂಗು ಮೊಳಗಲಾರಂಭಿಸಿದೆ. ಮಹಾರಾಷ್ಟ್ರದಲ್ಲಿ ವಿದರ್ಭ ಪ್ರಾಂತ್ಯವನ್ನು ಪ್ರತ್ಯೇಕ ರಾಜ್ಯವಾಗಿ ರಚಿಸಬೇಕೆಂಬ ಬೇಡಿಕೆ ಆರಂಭಗೊಂಡಿದೆ. ಉತ್ತರ ಪ್ರದೇಶ ರಾಜ್ಯ ಸಾಕಷ್ಟು ವಿಸ್ತಾರವಾಗಿದ್ದು, ನಾಲ್ಕು ಹೊಸ ರಾಜ್ಯಗಳನ್ನಾಗಿ ರಚಿಸಲು ರಾಜಕೀಯ ನಾಯಕರು ಕೇಂದ್ರಕ್ಕೆ ಸಲಹೆ ಮಾಡಿದ್ದಾರೆ. ಇದೆಲ್ಲಾ ಅನ್ಯ ರಾಜ್ಯಗಳ ಕಥೆಯಾಯಿತು. ಕರ್ನಾಟಕದಲ್ಲಿ ಪ್ರತ್ಯೇಕ 'ಕೊಡವಲ್ಯಾಂಡ್‌', ದಕ್ಷಿಣಕನ್ನಡ, ಉಡುಪಿ ಜಿಲ್ಲೆಗಳನ್ನು ಸೇರಿಸಿ 'ತುಳುನಾಡು', ಉತ್ತರ ಕರ್ನಾಟಕಕ್ಕೆ ಮತ್ತೊಂದು ರಾಜ್ಯ ರಚಿಸಬೇಕೆಂದು ಕೆಲವರು ಆಗ್ರಹಿಸಿದ್ದಾರೆ.
ಪ್ರತ್ಯೇಕ ರಾಜ್ಯ ರಚನೆಗೆ ಒತ್ತಾಯಿಸುವ ಯಾವುದೇ ಗುಂಪುಗಳು ಹೇಳುವ ಮೊದಲ ಮಾತು ನಮ್ಮ ಪ್ರದೇಶ ಅಭಿವೃದ್ಧಿಯಾಗಿಲ್ಲ. ಆದ್ದರಿಂದ ಪ್ರತ್ಯೇಕ ರಾಜ್ಯ ರಚನೆಯಾಗಲೇಬೇಕು. ಆದರೆ ಪ್ರತ್ಯೇಕ ರಾಜ್ಯ ರಚನೆಯ ಕೂಗಿನ ಹಿಂದೆ ಪ್ರಬಲವಾದ ರಾಜಕೀಯ ಹಿತಾಸಕ್ತಿ ಆಡಗಿರುತ್ತದೆ ಎನ್ನುವುದನ್ನು ನಾವು ಮರೆಯುವಂತಿಲ್ಲ. ಪ್ರತ್ಯೇಕ ರಾಜ್ಯ ರಚನೆಗಾಗಿಯೇ ರಾಜಕೀಯ ಪಕ್ಷಗಳನ್ನು ಹುಟ್ಟುಹಾಕಿ ಹೋರಾಟ ನಡೆಸುವ ನಾಯಕರು ಹೆಚ್ಚುತ್ತಿದ್ದಾರೆ.
ಅಭಿವೃದ್ಧಿಪೂರಕ ರಾಜಕೀಯ ಪ್ರಜ್ಞೆ ಆಳುವ ವರ್ಗದವರಲ್ಲಿ ಒಡಮೂಡದ ಹೊರತು ಹೊಸ ರಾಜ್ಯಗಳ ರಚನೆಗೆ ಇತಿಶ್ರೀ ಹಾಡಲು ಸಾಧ್ಯವಿಲ್ಲ. ಯಾವುದೇ ಪಕ್ಷ ಅಥವಾ ವ್ಯಕ್ತಿ ಅಧಿಕಾರಕ್ಕೆ ಏರಿದಾಗ ಅಖಂಡ ದೇಶ/ರಾಜ್ಯದ ಸಮಗ್ರ ಅಭಿವೃದ್ಧಿಗೆ, ಸಮಾನ ಅವಕಾಶ ಕಲ್ಪಿಸಬೇಕು. ತನಗೆ ಬೇಕಾದ ಪ್ರದೇಶಕ್ಕೆ ನೂರಾರು ಕೋಟಿ ರುಪಾಯಿ ಅನುದಾನ ಒದಗಿಸುವ ಸರ್ಕಾರಗಳು ಕೆಲವು ಜಿಲ್ಲೆಗಳ ಅಭಿವೃದ್ಧಿಗೆ ಬಿಡಿಗಾಸು ನೀಡಿ ತಾರತಮ್ಯ ಎಸಗುವ ಸಂಕುಚಿತತೆ ದೂರವಾಗಿ ರಾಜಧರ್ಮದ ಪಾಲನೆಯಾಗಬೇಕಿದೆ.
ಕೇಂದ್ರದಲ್ಲಿ ಮೈತ್ರಿ ಸರ್ಕಾರಗಳ ಯುಗ ಪ್ರಾರಂಭವಾದ ನಂತರವಂತೂ ಸರ್ಕಾರ ರಚನೆಗೆ ಬೆಂಬಲ ನೀಡಿದ ಪ್ರಾದೇಶಿಕ ಪಕ್ಷಗಳ ರಾಜ್ಯಕ್ಕೆ ಧಾರಾಳವಾಗಿ ಅನುದಾನ ನೀಡುವ ಕೆಟ್ಟ ಪರಿಪಾಠ ಆರಂಭವಾಗಿದೆ ಅದಕ್ಕೊಂದು ನಿದರ್ಶನ ಕಾವೇರಿ ನದಿನೀರು ಹಂಚಿಕೆ ವಿವಾದ ಮತ್ತು ಇನ್ನಿತರೆ ವಿಷಯದಲ್ಲಿ ತಮಿಳುನಾಡು ರಾಜ್ಯದ ಪರ ಇನ್ನಿಲ್ಲದ ಅಕ್ಕರೆ ಪ್ರದರ್ಶಿಸಿದ್ದು. ಹಾಗೆಯೇ ರೈಲ್ವೆ ಸಚಿವರಾಗುವವರು ತಮ್ಮ ರಾಜ್ಯಕ್ಕೆ ಅಗತ್ಯಕ್ಕಿಂತ ಹೆಚ್ಚು ರೈಲ್ವೆ ಯೋಜನೆಗಳನ್ನು ಜಾರಿಗೊಳಿಸಿ ಇನ್ನುಳಿದ ರಾಜ್ಯಗಳನ್ನು ನಿರ್ಲಕ್ಷಿಸುವುದು, ಹಣಕಾಸು ಸಚಿವರಾದವರು ತಮ್ಮ ಜಿಲ್ಲೆಗೆ, ತಮ್ಮ ಪತ್ನಿಯ ಜಿಲ್ಲೆ ಅಥವಾ ಊರಿಗೆ ಸಾಲು-ಸಾಲು ಅಭಿವೃದ್ಧಿ ಯೋಜನೆ ಪ್ರಕಟಿಸಿ ತಮ್ಮ ರಾಜಕೀಯ ವಿರೋಧಿಗಳ ಕ್ಷೇತ್ರಗಳನ್ನು ನಿರ್ಲಕ್ಷಿಸುವ ಪರಿಪಾಠ ಭೌಗೋಳಿಕ ವಿಭಜನೆಗೆ ನಾಂದಿಯಾಗುತ್ತದೆ ಎನ್ನುವ ಎಚ್ಚರ ಅಧಿಕಾರದಲ್ಲಿ ಇರುವ ನಾಯಕರಿಗೆ ಖಂಡಿತ ಇರಬೇಕು.
ದೇಶದ ವಿವಿಧ ರಾಜ್ಯಗಳಲ್ಲಿ ಪ್ರತ್ಯೇಕತೆಯ ಕೂಗು ಅನೇಕ ದಶಕಗಳಿಂದಲೂ ಇದೆ. ಆದರೆ ಯು.ಪಿ.ಎ ಸರ್ಕಾರದ ಕಣ್ಣಿಗೆ ಕಂಡಿದ್ದು ಮಾತ್ರ ತೆಲಂಗಾಣ! ಏಕೆಂದರೆ ಇದು ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರ. ಮುಂಬರುವ ದಿನಗಳಲ್ಲಿ ಕಾಂಗ್ರೆಸ್‌ಗೆ ಅನುಕೂಲವಾಗಲಿ ಎಂಬ ಉದ್ದೇಶ ತೆಲಂಗಾಣ ರಾಜ್ಯ ರಚನೆಯ ಹಿಂದಿದೆ ಎಂದು ಸೀಮಾಂಧ್ರ ಭಾಗದ ಕೆಲವು ನಾಯಕರು ಆಪಾದಿಸಿದ್ದಾರೆ. ಇಂತಹ ಸ್ಥಿತಿಯಲ್ಲಿ ರಾಜ್ಯ ವಿಭಜನೆಯ ಕುರಿತು ಏನು ಪ್ರತಿಕ್ರಿಯೆ ನೀಡಬೇಕೆಂದು ತಿಳಿಯದೆ ಬಿ.ಜೆ.ಪಿ ಇನ್ನಿತರೆ ಪಕ್ಷಗಳು ಸಂದಿಗ್ಧದಲ್ಲಿ ಸಿಲುಕಿವೆ. ಆರೋಪ, ಪ್ರತ್ಯರೋಪಗಳು ಏನೇ ಇರಲಿ, ಹೀಗೆ ವಿಭಜಿಸುತ್ತಾ ಹೋದರೆ ಇನ್ನೆಷ್ಟು ರಾಜ್ಯಗಳನ್ನು ರಚಿಸಿಬೇಕು? ದೇಶ, ರಾಜ್ಯ, ಜಿಲ್ಲೆ, ತಾಲೂಕು, ಗ್ರಾಮ, ಸಂಘಗಳು ಜನರನ್ನು ಹೊರತುಪಡಿಸಿ ಇರಲು ಸಾಧ್ಯವಿಲ್ಲ. ಆದುದರಿಂದ ಜನಸಂಖ್ಯಾ ಆಧಾರದ ಮೇಲೆ ವಿಂಗಡಣೆ (ಡಿಲಿಮಿಟೇಷನ್) ನಡೆದರೆ ಮಾನಸಿಕ ವ್ಯಥೆ ಉಂಟಾಗುವುದಿಲ್ಲ. ರಾಜಕೀಯ ಹಿತಾಸಕ್ತಿಗೋಸ್ಕರ ರಾಜ್ಯಗಳನ್ನು ಇಬ್ಭಾಗ ಮಾಡಿದರೆ ಜನತೆ ಜರ್ಜರಿತರಾಗುತ್ತಾರೆ. ಇದಕ್ಕೊಂದು ನಿದರ್ಶನ ರೈತನೊಬ್ಬ ಆಂಧ್ರಪ್ರದೇಶ ವಿಭಜನೆಯ ವಿಷಯ ಕೇಳಿ ಹೃದಯಾಘಾತದಿಂದ ಮೃತಪಟ್ಟಿರುವುದು. ಏಕೆಂದರೆ ನೆಲ, ಜಲ, ಸಂಸ್ಕೃತಿಯ ವಿಚಾರ ಇದರಲ್ಲಿ ಅಡಗಿದೆ. ವಿಭಜನೆಯ ಅಡ್ಡಪರಿಣಾಮಗಳು, ಜನರ ಮನಸ್ಸಿನ ಮೇಲಾಗುವ ದುಪ್ಪರಿಣಾಮಗಳು ರಾಜಕೀಯ ಹಿತಾಸಕ್ತಿಯನ್ನೇ ದೃಷ್ಟಿಯಲ್ಲಿಟ್ಟುಕೊಂಡವರಿಗೆ ಅರ್ಥವಾಗುವುದಿಲ್ಲ. ಅವರದೇನಿದ್ದರೂ ಲಾಭ, ನಷ್ಟದ ಲೆಕ್ಕಾಚಾರ. ತೆಲಂಗಾಣ ವಿಷಯದಲ್ಲಿ ಕೂಡ ಇರುವುದು ರಾಜಕೀಯ ಉದ್ದೇಶವೇ. ಏಕೆಂದರೆ ಆಂಧ್ರಪ್ರದೇಶ, ಉತ್ತರಪ್ರದೇಶದಷ್ಟು ವಿಸ್ತಾರವಾದ ರಾಜ್ಯವಲ್ಲ. ಹಾಗೆ ನೋಡಿದರೆ ತೆಲಂಗಾಣದ ಪ್ರತ್ಯೇಕತೆ ಅಗತ್ಯವಿರಲಿಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ಆಂತರಿಕ ಶಾಂತಿ, ಪ್ರೀತಿ, ಸಹಬಾಳ್ವೆ ಮೂಡದೇ ಕೇವಲ ರಾಜಕೀಯ ಲಾಭಕ್ಕಾಗಿ ವಿಭಜನೆಯ ನಿರ್ಧಾರಗಳನ್ನು ಕೈಗೊಳ್ಳುವುದು ಎಷ್ಟು ಸರಿ ಎನ್ನುವ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಾದ ಕಾಲ ಸನ್ನಿಹಿತವಾಗಿದೆ.
ದೇಶದ ಆಂತರಿಕ ವಿಚಾರಗಳಲ್ಲೇ ತೊಡಗಿರುವ ಕೇಂದ್ರ ಸರ್ಕಾರಕ್ಕೆ ನೆರೆಯ ದೇಶಗಳು ನಡೆಸುತ್ತಿರುವ ಹುನ್ನಾರಗಳ ಬಗ್ಗೆ ಗಮನಹರಿಸಲು ಸಮಯವೇ ಇಲ್ಲದಂತಾಗಿದೆ. ದೇಶಕ್ಕೆ ಸ್ವಾತಂತ್ರ್ಯ ದೊರೆತ ನಂತರ ಪಾಕಿಸ್ತಾನ ಆನಂತರ ಬಾಂಗ್ಲಾ ಇಬ್ಭಾಗವಾಯಿತು. ಈಗ ಕಾಶ್ಮೀರದಲ್ಲಿ ಪ್ರತ್ಯೇಕತೆಯ ಕೂಗು ಜೋರಾಗಿದೆ. ಚೀನಾ ಅರುಣಾಚಲ ಪ್ರದೇಶವನ್ನು ಕಬಳಿಸಲು ಹುನ್ನಾರ ನಡೆಸಿದೆ. ಹಾಗಾದರೆ ದೇಶದ ಸುರಕ್ಷತೆಯ ಹೊಣೆ ಯಾರದ್ದು ಎನ್ನುವ ಪ್ರಶ್ನೆ ಮೂಡುತ್ತದೆ.


- ಶ್ರೀ ಬಸವಮೂರ್ತಿ ಮಾದಾರಚನ್ನಯ್ಯ ಸ್ವಾಮೀಜಿ
ಚಿತ್ರದುರ್ಗ

anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.