ಈ ದೇಶಕ್ಕೆ ಪ್ರಧಾನಿ ಅನ್ನೋ ಒಬ್ಬ ವ್ಯಕ್ತಿ ನಿಜಕ್ಕೂ ಇದ್ದಾರಾ?
ಅಂಥದ್ದೊಂದು ಅನುಮಾನ ನಿಮ್ಮನ್ನು ಕಾಡುತ್ತಿಲ್ಲವೆ? ಒಂದು ವೇಳೆ, ಪ್ರಧಾನಿ ಅನ್ನೋ ವ್ಯಕ್ತಿ ಇದ್ದಿದ್ದರೆ ನಮ್ಮ ಐವರು ಸೈನಿಕರನ್ನು ಪಾಕಿಸ್ತಾನ ಬರ್ಬರವಾಗಿ ಕೊಂದಿದ್ದರೂ ಮಾತನಾಡದೇ ಇರುತ್ತಿದ್ದರೇ? ಪಾಕಿಸ್ತಾನದ ಮುಖಕ್ಕೆ ಹೊಡೆದಂತೆ ಹೇಳದೆ, ಎಚ್ಚರಿಕೆ ಕೊಡದೆ, ಧಮಕಿ ಹಾಕದೆ ಸುಖಾಸುಮ್ಮನೆ ಕುಳಿತುಕೊಳ್ಳುತ್ತಿದ್ದರೇ? ಇಷ್ಟಕ್ಕೂ, ಘಟನೆ ನಡೆದು ನಾಲ್ಕು ದಿನ ಕಳೆದರೂ ಪ್ರಧಾನಿಯೇಕೆ ಬಾಯ್ಬಿಡುತ್ತಿಲ್ಲ? 2013 ಜನವರಿ 8ರಂದು ಜಮ್ಮು-ಕಾಶ್ಮೀರದ ಗಡಿಯಲ್ಲಿ ನಮ್ಮ ಒಬ್ಬ ಸೈನಿಕನ ಕುತ್ತಿಗೆ ಕಡಿದು ಬರೀ ದೇಹ ಕಳುಹಿಸಿದಾಗಲೂ, ಇನ್ನೊಬ್ಬ ಸೈನಿಕನನ್ನು ಮಾಂಸದ ಮುದ್ದೆಯಾಗಿಸಿ ರವಾನೆ ಮಾಡಿದಾಗಲೂ ಮಾತನಾಡದ ವ್ಯಕ್ತಿ ಹೇಗೆ ದೇಶದ ಚುಕ್ಕಾಣಿ ಹಿಡಿದಿರುವ ಪ್ರಧಾನಿ ಎನಿಸಿಕೊಳ್ಳಲು ಸಾಧ್ಯ? ನೀವೇ ಹೇಳಿ, ಮನಮೋಹನ್ಸಿಂಗ್ ಅವರು ನಿಜಕ್ಕೂ ಪ್ರಧಾನಿಯಂತೆ ವರ್ತಿಸುತ್ತಿದ್ದಾರಾ? ನಮ್ಮ ಸೈನಿಕರ ಹತ್ಯೆ ಅವರ ಅಂತಃಕರಣವನ್ನು ಕಲಕಲೇ ಇಲ್ಲವೆ? ಕ್ಷಾತ್ರ ಗುಣವನ್ನು ಬಡಿದೆಬ್ಬಿಸಲೇ ಇಲ್ಲವಾ? ಇಂತಹ ಮನಃಸ್ಥಿತಿಯ ವ್ಯಕ್ತಿಗೆ ಇತಿಹಾಸದಲ್ಲಿ ಯಾವ ಸ್ಥಾನ ತಾನೇ ದೊರೆತೀತು?