ಸತತ ಐದನೇ ದಿನ ಆ ಬೃಹತ್ ಗ್ರಂಥಾಲಯದ ಬಾಗಿಲಲ್ಲಿ ನಿಂತಿದ್ದ ಅವನಿಗೆ ತನ್ನ ಬಗ್ಗೆಯೇ ಸೋಜಿಗ ಮತ್ತು ಸಂತೋಷ ಒಟ್ಟೊಟ್ಟಿಗೆ ಆಗುತ್ತಿತ್ತು.
ಮೂವತ್ತೊಂದರ ಪ್ರಾಯದ ಅರವಿಂದನಿಗೆ ತನ್ನ ಜೀವಮಾನದಲ್ಲಿ ಶಾಲೆ-ಕಾಲೇಜಿನ ಪಠ್ಯಗಳನ್ನು ಬಿಟ್ಟರೆ ಮತ್ತೊಂದು ಪುಸ್ತಕವನ್ನು ಓದಿದ ನೆನಪೇ ಇಲ್ಲ. ಈ ಧೋರಣೆ ಅವನಿಗೆ ಅತ್ಯುತ್ತಮ ಪ್ರತಿಫಲವನ್ನೇ ಒದಗಿಸಿತ್ತು. ಎಲ್ಲ ಹಂತಗಳಲ್ಲೂ ಆತ ರ್ಯಾಂಕ್ ಪಡೆದೇ ಮುನ್ನುಗಿದ್ದ. ಬಹಳ ಚಿಕ್ಕ ವಯಸ್ಸಿಗೆ ಪ್ರತಿಷ್ಠಿತ ಕಂಪನಿಯ ಉನ್ನತ ಹಂತದಲ್ಲಿ ಮಿಂಚಿದ. ಬದುಕು ಆಗಸಕ್ಕೆ ನೆಗೆದಿತ್ತು. ಇಂತಿರುವಾಗ, ಸ್ವರ್ಗದ ಬಾಗಿಲಿನಲ್ಲಿ ನಿಂತವನನ್ನು ಕಾಣದ ಕೈಯೊಂದು ತಳ್ಳಿದಂತಾಗಿ ಆತ ಜಾರಿದ್ದ.
ಆರು ತಿಂಗಳ ಅವಧಿಯಲ್ಲಿ ಅರವಿಂದನ ಜೀವನದಲ್ಲಿ ಏನೆಲ್ಲ ನಡೆದುಹೋದವು. ಕಚೇರಿಯಲ್ಲಿ ಚಿಕ್ಕದೊಂದು ಇಗೊ ಕ್ಲಾಶ್ ಎಂಬಂತೆ ಶುರುವಾಗಿದ್ದ ಸಹೋದ್ಯೋಗಿಯೊಂದಿಗಿನ ಸಮರ ಏನೆಲ್ಲ ರಾಜಕೀಯಕ್ಕೆ ತಿರುಗಿ ಕಂಪನಿಯನ್ನೇ ಬಿಡಬೇಕಾಯಿತು. ಅವನಿದ್ದ ಹುದ್ದೆಗೆ ಸಮಾನವಾದ ಕೆಲಸ ತಕ್ಷಣಕ್ಕೆ ಸಿಗುವಂತಿರಲಿಲ್ಲ. ಈ ಕಿರಿಕಿರಿಯಲ್ಲಿರುವಾಗಲೇ ತಾಯಿ ಅನಿರೀಕ್ಷಿತವಾಗಿ ತೀರಿಕೊಂಡಳು. ಮೊದಲಿನಿಂದಲೂ ತಂದೆ ಜತೆ ಬೇಕಿರುವಷ್ಟೇ ಮಾತು ಎಂಬಂತಿದ್ದ ಅರವಿಂದನಿಗೆ ತಾಯಿಯ ನಿರ್ಗಮನ ಮಾನಸಿಕ ಶೂನ್ಯವೊಂದನ್ನು ಸೃಷ್ಟಿಸಿತು. ಹೀಗೆಲ್ಲ ಆಗುತ್ತಿರುವಾಗಲೇ ಮೆಚ್ಚಿಕೊಂಡಿದ್ದ ಹುಡುಗಿಯೂ ಬಿಟ್ಟುಹೋದಳು. ದೂರವಾಗುವುದಕ್ಕೆ ಅವಳಿಗಿದ್ದ ಕಾರಣ ಏನಾಗಿತ್ತೋ ಗೊತ್ತಿಲ್ಲ. ಆದರೆ ಅರವಿಂದನಿಗೆ ಮಾತ್ರ ತನ್ನ ವೃತ್ತಿಬದುಕಿನ ಸ್ಥಾನ ಅಲ್ಲಾಡಿದ್ದೇ ಆಕೆ ತನ್ನ ಬದುಕಿನಿಂದ ಹೊರಹೋಗಿದ್ದಕ್ಕೆ ಕಾರಣ ಎಂದೆನಿಸಿ ಮತ್ತಷ್ಟು ಅಧೀರನಾದ.
ಈಗೊಂದು ಇಪ್ಪತ್ತು ದಿನಗಳ ಮುಂಚೆ....
'ಸತ್ತು ಹೋಗೋಣ ಅಂತೆಲ್ಲ ಅಂದ್ಕೊಳ್ತಿದೀನಿ. ಸಾಯದೇ ಇರೋದಕ್ಕೆ ಕಾರಣ ಹುಡುಕಾಡ್ತಿದ್ದೀನಿ. ಆದರೆ ನನಗೆ ಐಡೆಂಟಿಟಿ ಇಲ್ಲವಾದ ಮೇಲೆ ಬದುಕಿರುವುದಕ್ಕೆ ಅರ್ಥವೇ ಗೊತ್ತಾಗ್ತಿಲ್ಲ' ಅಂತ ತನ್ನ ಗೆಳೆಯನ ಬಳಿ ಹೇಳಿದ್ದ ಅರವಿಂದ. ಅವನಿಗೆ ಹೆಚ್ಚು ಗೆಳೆಯರೂ ಇರಲಿಲ್ಲ. ಆ ಒಬ್ಬ ಗೆಳೆಯ ಅರವಿಂದನ ಮಾತಿನಿಂದ ತತ್ತರಿಸಿದ. ಒಂದೇ ಕ್ಷಣ. ಆಮೇಲೆ ನಕ್ಕುಬಿಟ್ಟ. 'ವೃತ್ತಿಯಲ್ಲಿನ ಏರಿಳಿತಕ್ಕೆ ಸಾವಿನ ಮಾತಾಡ್ತೀಯಲ್ಲ. ಅದು ಬಿಟ್ಟರೆ ಬೇರೆ ಜಗತ್ತೇ ಇಲ್ಲ ಅಂದುಕೊಂಡಿರೋದಕ್ಕೆ ನಿಂಗೆ ಹೀಗನ್ನಿಸ್ತಿದೆ. ನನ್ನ ಲ್ಯಾಪ್ಟಾಪ್ನಲ್ಲಿ ಒಂದಿಷ್ಟು ಫಿಲ್ಮ್- ಡಾಕ್ಯುಮೆಂಟರಿ ಎಲ್ಲ ಇವೆ. ತಗೊಂಡು ಹೋಗಿ ನೋಡು. ನಿನಗೆ ಸೂಕ್ತವಾದ ನೌಕರಿ ಇವತ್ತಲ್ಲ ನಾಳೆ ಸಿಗುತ್ತೆ. ಈ ನಡುವೆ ಒಂದೆರಡು ತಿಂಗಳು ಕೆಲಸದಿಂದ ರಜೆ ತೆಗೆದುಕೊಂಡಿದ್ದೀಯಾ ಅಂದ್ಕೊ. ಸಾವು- ನೋವು ಅಂತೆಲ್ಲ ಯೋಚ್ನೆ ಮಾಡೋ ಬದಲು ಇಂಥದ್ದೇನೋ ಮಾಡು' ಅಂತ ತನ್ನ ಮಿತಿಯಲ್ಲಿ ಸಾಂತ್ವನ ಹೇಳಿ ಕಳುಹಿಸಿದ್ದ ಆ ಗೆಳೆಯ.
ಇದಾಗಿ ವಾರ ಕಳೆದ ನಂತರ...
ಅರವಿಂದ ಇನ್ನಷ್ಟು ಹೈರಾಣಾಗಿದ್ದ. ಗೆಳೆಯ ಹೇಳಿದಂತೆ ಸಿನಿಮಾ ನೋಡೋಣ ಎಂದು ಪ್ರಯತ್ನಿಸಿದನಾದರೂ ಅಸಹನೆಯಿಂದ ಆಗಾಗ ಫಾರ್ವರ್ಡ್ ಬಟನ್ ಒತ್ತುತ್ತ, ನೋಡುತ್ತಿದ್ದದ್ದನ್ನು ಅರ್ಧಕ್ಕೆ ನಿಲ್ಲಿಸಿ ಮತ್ತೊಂದನ್ನು ನೋಡುವ ಕ್ರಮ ಅಂಟಿಕೊಂಡಿತು. ಆತನಿಗೆ ವಿಚಿತ್ರ ಕನಸುಗಳು ಬೀಳತೊಡಗಿದವು. ಎಲ್ಲವೂ ಸಾವಿಗೆ ಸಂಬಂಧಿಸಿದವೇ. ಅದ್ಯಾರೋ ನಗುತ್ತ ತನಗೆ ತಾನೆ ಗುಂಡು ಹೊಡೆದುಕೊಂಡಂತೆ. ಓಡುತ್ತಿರುವ ಇನ್ಯಾರಿಗೊ ಹಲವರು ಚೂರಿ ಇರಿದಂತೆ... ತುಂಬ ಹಿಂಸೆಯಾಗತೊಡಗಿತು.
ಭರಿಸಲಸಾಧ್ಯವಾದ ಏಕಾಂಗಿತನ ಕಾಡಿದಾಗ ಆತ ಅಪ್ಪನ ಬಳಿ ಮಾತನಾಡಿದ. ಅದೂ ಇನ್ನೊಂಥರದ ವಿಚಿತ್ರ. ಏಕೆಂದರೆ ಅಪ್ಪನನ್ನೂ ಯಾವತ್ತೂ ವೈಫಲ್ಯದ ಪ್ರತೀಕವಾಗಿ ಗಮನಿಸಿಕೊಂಡು ಬಂದವನು ಅರವಿಂದ. ಅಪ್ಪನೆಂದರೆ ಆತನ ಕಣ್ಣಿಗೆ ತನ್ನ ಲಹರಿಗೆ ತಕ್ಕಂತೆ ಬದುಕಿ, ಹತ್ತೆಂಟು ಉದ್ಯೋಗಗಳಲ್ಲಿ ಕೈಯಾಡಿಸಿ, ಯಾವುದನ್ನೂ ಸರಿಯಾಗಿ ಮಾಡದೆ ಉಪದೇಶವನ್ನಷ್ಟೇ ಸರಾಗವಾಗಿ ಹಾಗೂ ನಿರಂತರವಾಗಿ ಮಾಡಿಕೊಂಡು ಬಂದಿದ್ದ ಜೀವಿ. ಆದರೆ ಈ ಹಂತದಲ್ಲಿ ಉಪದೇಶವಾದರೂ ಸರಿ, ಆಡುವುದಕ್ಕೆ ಏನಾದರೂ ಮಾತು ಬೇಕಿತ್ತು ಅರವಿಂದನಿಗೆ. ಅಲ್ಲದೆ, ಅಪ್ಪ ಉದ್ಧಾರವಾಗದಿದ್ದರೂ ಅವನ ಉಪದೇಶದಿಂದ ತಾನು ಉದ್ಧಾರವಾದೆ ಎಂದು ಹೇಳಿಕೊಂಡಿದ್ದ ಹಲವು ಸಂಬಂಧಿಕರ ಚಿತ್ರ ಈತನ ಕಣ್ಮುಂದೆ ಸುಳಿಯಿತು. ಬೆಚ್ಚಿಬೀಳಿಸುವ ಸಾವಿನ ಕನಸುಗಳನ್ನೂ, ಶೂನ್ಯದ ದಿಗಿಲನ್ನೂ ಅಪ್ಪನೆದುರು ಹರವಿಟ್ಟ.
ಸಾವಿನ ಯೋಚನೆಗೆ ಬಿದ್ದಿರುವ ಮಗನ ತಲ್ಲಣ ಅರಿವಾದೊಡನೆ ಸಿನಿಮಾಗಳಲ್ಲಿ ತೋರಿಸುವ ಅಪ್ಪಂದಿರಂತೆ ಅರವಿಂದನ ಅಪ್ಪ ಹೌಹಾರಿ ಭಾವೋದ್ರೇಕಕ್ಕೆ ಒಳಗಾಗಲಿಲ್ಲ. ತುಂಬ ತಣ್ಣನೆಯ ಧ್ವನಿಯಲ್ಲಿ ಹೇಳಿದ- 'ದುಡಿಮೆಯೇ ಜೀವನ ಹಾಗೂ ಅದನ್ನು ಬಿಟ್ಟು ಉಳಿದಿದ್ದೆಲ್ಲ ಕಾಲಹರಣ ಎಂಬ ಧೋರಣೆಗೆ ನಿನ್ನ ಮನಸ್ಸನ್ನು ಒಗ್ಗಿಸಿಕೊಂಡಿದ್ದೀಯಾದ್ದರಿಂದ ದುಡಿಮೆ ನಿಂತೊಡನೆ ನಿನಗೆ ಬದುಕು ಸಾಕೆನಿಸಿದೆ. ಹಾಗಂತ ಅದೇ ನಿನ್ನ ತೀವ್ರ ತುಡಿತವಾಗಿದ್ದರೆ ಈಗಿಲ್ಲಿ ಇದನ್ನೆಲ್ಲ ಹಂಚಿಕೊಳ್ಳುತ್ತಿರಲಿಲ್ಲ. ಇಷ್ಟೊತ್ತಿಗೆ ನೇಣು ಬಿಗಿದುಕೊಂಡಿರುತ್ತಿದ್ದೆ. ನಿನ್ನೊಳಗೊಂದು ಬದುಕಿನ ತುಡಿತವಿದೆ. ಹೀಗಾಗಿಯೇ ನೀನು ಸಾವಿನ ಯೋಚನೆಯಿಂದ ಹೊರಬರುವುದಕ್ಕೆ ಕಾತರಿಸುತ್ತಿದ್ದೀಯ! ಹೀಗಾಗಿ ನೀನು ತಲುಪಬೇಕಾದ ಗಮ್ಯ ಬದುಕೇ ಎಂಬುದನ್ನು ಮನದಟ್ಟು ಮಾಡಿಕೊ. ಆದರೂ ನಿನಗೆ ಕಾಡುತ್ತಿರುವ ಶೂನ್ಯಭಾವ ಮತ್ತೇನನ್ನೂ ಯೋಚಿಸುವುದಕ್ಕೆ ಬಿಡುತ್ತಿಲ್ಲ. ಆದ್ದರಿಂದ ಆ ಶೂನ್ಯವನ್ನೇ ಅರ್ಥಮಾಡಿಕೊಳ್ಳುತ್ತೇನೆ ಅಂತ ಹೊರಡು. ಅರ್ಥಾತ್ ಸಾವಿನ ಕುರಿತೇ ತುಸು ಅಧ್ಯಯನ ಮಾಡು. ಸಾವಿನ ವಿಚಾರಧಾಟಿ ಬದುಕನ್ನು ಅರ್ಥ ಮಾಡಿಸಿದಷ್ಟು ಇನ್ಯಾವುದೂ ಮಾಡಲಾರದು. ಅಂದಹಾಗೆ...ನಿನ್ನ ಕನಸುಗಳಲ್ಲಿ ಕಂಡಂತೆ ನಗುತ್ತ ಸತ್ತವರೆಂದರೆ ನನ್ನ ನೆನಪಿಗೆ ಬರುವವರು ಈ ದೇಶದ ಸ್ವಾತಂತ್ರ್ಯ ಸೇನಾನಿಗಳು. ಒಂದು ಕೆಲಸ ಮಾಡು. ಪುಸ್ತಕ-ಸಿನಿಮಾಗಳ ಮೂಲಕ ಅಂಥವರ ಸಾವನ್ನು ಹತ್ತಿರದಿಂದ ನೋಡಿ ಎದೆಗಿಳಿಸಿಕೊ. ಹೆದರಬೇಡ, ಈ ಕಾರ್ಯ ನಿನ್ನನ್ನು ಮತ್ತಷ್ಟು ಸಾವಿನ ಯೋಚನೆಗೆ ತಳ್ಳದೆ ಬದುಕಿನತ್ತ ಮುಖಮಾಡಿಸುತ್ತದೆಂಬ ನಂಬಿಕೆ ನನಗಿದೆ. ಇದು ನಿನ್ನೊಳಗಿನ ಶೂನ್ಯವನ್ನು ತುಂಬಿಸಿಕೊಳ್ಳುವ ಒಂದು ದಾರಿ ಅಷ್ಟೆ' ಎಂದುಬಿಟ್ಟಿದ್ದ.
ತನ್ನದಲ್ಲದ ಹಾದಿಯಲ್ಲಿ ಪಯಣಿಸಿದ ಎಂಟು ದಿನಗಳ ನಂತರ...
ಅರವಿಂದನ ಎದೆಯಲ್ಲೊಂದು ಹಿತವಾದ ನಶೆಯಿತ್ತು. ಅದು ಶೂನ್ಯದ ಮಂಕನ್ನು ಚದುರಿಸಿ ಜೀವ ಕಂಪನವೊಂದನ್ನು ದಯಪಾಲಿಸಿತ್ತು. ಇಷ್ಟುದಿನಗಳಲ್ಲಿ ಕಾಡಿದ್ದೂ ಸಾವಿನ ಚಹರೆಯೇ ಆದರೂ ಬದುಕಿನ ಸಾರ್ಥಕ್ಯವನ್ನು ಸಾರಿದ ಮರಣದ ಮುಖಗಳಾಗಿದ್ದವು ಅವೆಲ್ಲ. ಸಾಯುವುದು ದೊಡ್ಡ ವಿಷಯವಲ್ಲ. ಯಾವುದಕ್ಕಾಗಿ ಸತ್ತೆ ಎಂಬುದರ ಮೇಲೆ ನಿನ್ನ ಬದುಕಿನ ಯಶಸ್ಸನ್ನು ಅಳೆಯಲಾಗುತ್ತದೆ. ಹುಡುಗಿ ಸಿಗಲಿಲ್ಲವೆಂದು- ಹಣ ಮಾಡಲಿಕ್ಕಾಗಲಿಲ್ಲವೆಂದು ಸತ್ತವರು ಸುದ್ದಿಯಾಗುತ್ತಾರೆ. ಇವೆಲ್ಲವನ್ನು ಮೀರಿದ ಉದ್ದೇಶವೊಂದಕ್ಕೆ ಸತ್ತ ಕೆಲವರು ಮಾತ್ರ ಇತಿಹಾಸವಾಗುತ್ತಾರೆ. ಅಂಥ ಸಾವುಗಳ ಕತೆ ಅರವಿಂದನ ಶೂನ್ಯವನ್ನು ತುಂಬಿದ್ದವು...
1933, ಈಗಿನ ಬಾಂಗ್ಲಾದೇಶದಲ್ಲಿರುವ ಚಿತ್ತಗಾಂವ್..
'ಸಾವು ಬಾಗಿಲು ಬಡಿಯುತ್ತಿದೆ. ನನ್ನ ಮನಸ್ಸು ಅನಂತದೆಡೆ ಹಾರುತ್ತಿದೆ. ಸಾವನ್ನು ಆಪ್ತ ಸ್ನೇಹಿತನಂತೆ ಖುಷಿಯಿಂದ ಅಪ್ಪಿಕೊಳ್ಳುವ ಪವಿತ್ರ ಗಳಿಗೆ ಇದು. ನಿಮಗಾಗಿ ಏನನ್ನು ಬಿಟ್ಟುಹೋಗುತ್ತಿದ್ದೇನೆ ಗೆಳೆಯರೆ? ಒಂದು ಬಂಗಾರದಂಥ ಕನಸನ್ನು ಮಾತ್ರ. ಭಾರತದ ಸ್ವಾತಂತ್ರ್ಯದ ಕನಸು. ಗುಲಾಮಿ ದಿನಗಳು ಕಳೆಯುತ್ತ ಬಂದಿವೆ. ಸ್ವಾತಂತ್ರ್ಯದ ಮಿಂಚು ಅದೋ ಅಲ್ಲಿ ಕಾಣುತ್ತಿದೆ. ಹಿಂದಡಿಯಿಡದೆ ಮುನ್ನುಗ್ಗಿ. ಯಶಸ್ಸು ನಿಮ್ಮದೇ'.
ಸೂರ್ಯ ಸೇನ್ನ ಈ ಪತ್ರ ಆತನ ಸಹವರ್ತಿಗಳನ್ನು ತಲುಪುವಷ್ಟರಲ್ಲಿ ಆತ ಸಾವಿನ ತೆಕ್ಕೆಯಲ್ಲಿದ್ದ. ಬ್ರಿಟಿಷರು ಸೂರ್ಯ ಸೇನ್ ಎಂಬ ಕ್ರಾಂತಿಕಾರಿಯನ್ನು ಬರ್ಬರವಾದ ಹಿಂಸೆಗೆ ಒಳಪಡಿಸಿ ಸಾಯಿಸಿದ್ದರು. ತನಗಿದ್ದ ಮಾಸ್ತರಿಕೆಯ ನೌಕರಿಯನ್ನು ಮಾಡಿಕೊಂಡು ಆರಾಮಾಗಿಯೇ ಇರಬಹುದಿತ್ತು ಸೂರ್ಯ ಸೇನ್. ಆದರೆ ಬ್ರಿಟಿಷರನ್ನು ಒದ್ದೋಡಿಸುವ ಸಂಕಲ್ಪ ತೊಟ್ಟು ಕ್ರಾಂತಿಕಾರಿಗಳ ಗುಂಪು ಕಟ್ಟಿದ. ಮಾಸ್ಟರ್ದಾ ಅಂತ ಬಂಗಾಳಿಗರ ಬಾಯಲ್ಲಿ ಆಪ್ತವಾಗಿ ಕರೆಸಿಕೊಂಡ. ಏಪ್ರಿಲ್ 18, 1930. ಸೂರ್ಯ ಸೇನ್ ನೇತೃತ್ವದಲ್ಲಿ ಚಿತ್ತಗಾಂವ್ನ ಬ್ರಿಟಿಷ್ ಆಯುಧಾಗಾರವನ್ನೇ ಕೊಳ್ಳೆ ಹೊಡೆದರು ಕ್ರಾಂತಿಕಾರಿಗಳು. ಆ ಗುಂಪಿನಲ್ಲಿದ್ದ ಹೆಚ್ಚಿನವರಿಗೆ ಇನ್ನೂ ಮುಖದ ಮೇಲೆ ಮೀಸೆ ಮೂಡಿದ್ದಿಲ್ಲ. ಅಷ್ಟೆ ಅಲ್ಲ, ರೈಲ್ವೆ, ಟೆಲಿಗ್ರಾಫ್ ಮತ್ತು ಟೆಲಿಫೋನ್ ನೆಲೆಗಳ ಮೇಲೆ ದಾಳಿ ಮಾಡಿ ಬೇರೆ ಭಾಗಗಳೊಂದಿಗಿನ ಸಂಪರ್ಕವನ್ನೇ ತಪ್ಪಿಸಿದರು. ಆಯುಧಾಗಾರದ ಆವರಣದಲ್ಲಿ ತ್ರಿವರ್ಣ ಧ್ವಜ ಏರಿಸಿದರು.
ನಂತರ ಬ್ರಿಟಿಷ್ ಪಡೆಯಿಂದ ತಪ್ಪಿಸಿಕೊಂಡು ಅಲೆಯುವಾಗ ನಡೆದ ಚಕಮಕಿಯಲ್ಲಿ ಹಲವು ಕ್ರಾಂತಿಕಾರಿಗಳು ಪ್ರಾಣತೆತ್ತರು. ಸೂರ್ಯ ಸೇನ್ ಹಾಗೂ ಕೆಲ ಸಹವರ್ತಿಗಳು ಪಾರಾಗಿ, ನಿರಂತರವಾಗಿ ಜಾಗ ಬದಲಿಸುತ್ತ ಕ್ರಾಂತಿ ದೀವಿಗೆ ನಂದದಂತೆ ಹಿಡಿದಿದ್ದರು. ಅದೊಂದು ದಿನ ಮತ್ಸರ- ಹಣದಾಸೆಗೆ ಬಲಿಯಾದ ಕಾಮ್ರೆಡ್ಗಳಲ್ಲೊಬ್ಬ ನೇತ್ರಸೇನ್, ಬ್ರಿಟಿಷರಿಗೆ ನೀಡಿದ ಮಾಹಿತಿಯಿಂದ ಸೂರ್ಯಸೇನ್ ಸೆರೆಯಾಗಬೇಕಾಯಿತು.
ಸೂರ್ಯ ಸೇನ್ ಜತೆ ನೆನಪಿಸಿಕೊಳ್ಳಲೇಬೇಕಾದ ಹೆಸರು ಪ್ರೀತಿಲತಾ ವಡ್ಡೆದಾರ್. ಪದವೀಧರೆಯಾಗಿದ್ದ ಈಕೆ ಸೂರ್ಯ ಸೇನ್ ಜತೆ ಹಲವು ದಾಳಿಗಳನ್ನು ಸಂಘಟಿಸಿದವಳು. ಸ್ಫೋಟಕಗಳ ಪೂರೈಕೆಯಲ್ಲಿ ಎತ್ತಿದ ಕೈ. ಚಿತ್ತಗಾಂವ್ನ ಪಹರ್ತಳಿಯಲ್ಲೊಂದು ಯುರೋಪಿಯನ್ ಕ್ಲಬ್. ಅದರ ಬಾಗಿಲಲ್ಲಿ ಹೀಗೆ ಬರೆಯಲಾಗಿತ್ತು: 'ನಾಯಿಗಳಿಗೆ ಮತ್ತು ಭಾರತೀಯರಿಗೆ ಪ್ರವೇಶವಿಲ್ಲ'. ಇಂಥ ಅಹಂಕಾರಿಗಳ ಅಡ್ಡೆಯ ಮೇಲೆ 1932ರ ಸೆಪ್ಟೆಂಬರ್ 23ರಂದು ಪ್ರೀತಿಲತಾ ನೇತೃತ್ವದ 40 ಕ್ರಾಂತಿಕಾರಿಗಳು ಸಶಸ್ತ್ರ ದಾಳಿ ನಡೆಸಿದರು. ಪೊಲೀಸರ ಜತೆ ಸಂಘರ್ಷ ತೆರೆದುಕೊಂಡಿತು. ಗುಂಡೇಟು ತಿಂದ ಪ್ರೀತಿಲತಾಳಿಗೆ ತಾನಿನ್ನು ತಪ್ಪಿಸಿಕೊಳ್ಳಲಾಗದು ಎಂದಾದಾಗ ಜತೆಯಲ್ಲೇ ಒಯ್ದಿದ್ದ ಸಯನೈಡ್ ಮಾತ್ರೆ ತಿಂದು ಸಾವನ್ನು ಚುಂಬಿಸಿದಳು.
ಅಂದಹಾಗೆ, ಸೂರ್ಯಸೇನ್ನನ್ನು ಬ್ರಿಟಿಷರಿಗೆ ಹಿಡಿದುಕೊಟ್ಟಿದ್ದ ನೇತ್ರಸೇನ್ಗೂ ಆತ ಇನಾಮು ಸ್ವೀಕರಿಸುವುದಕ್ಕೆ ಮುನ್ನವೇ ಸಾವು ಬಂತು. ಸೂರ್ಯಸೇನ್ನ ಸಹವರ್ತಿ ನೇತ್ರಸೇನ್ನ ಹೆಂಡತಿ ಎದುರೇ ಆತನ ಕುತ್ತಿಗೆ ಕತ್ತರಿಸಿದ. ಪೊಲೀಸರು ತನಿಖೆಗೆ ಬಂದು ಆಕೆಯನ್ನು ವಿಚಾರಿಸಿದರು. ಅವಳೆಂದಳು: 'ಗಂಡನನ್ನು ಕೊಂದವನನ್ನು ಕಣ್ಣಾರೆ ನೋಡಿದ್ದೇನೆ. ಆದರೆ ಆತನನ್ನು ಗುರುತಿಸಲಾರೆ. ನೀವೇನಾದರೂ ಶಿಕ್ಷೆ ಕೊಡಿ. ನೇತ್ರಸೇನ್ನಂಥವನಿಗೆ ಮಡದಿಯಾಗಿದ್ದಕ್ಕೆ ನನಗೆ ವಿಷಾದವಿದೆ. ಆತ ಚಿತ್ತಗಾಂವ್ನ ಮನೆಮಗನಿಗೆ ದ್ರೋಹ ಮಾಡಿಬಿಟ್ಟ...'
1908ರ ಜೂನ್ 13....
ಹತ್ತೊಂಬತ್ತು ವರ್ಷದ ಖುದಿರಾಂ ಬೋಸ್ ಕಟಕಟೆಯಲ್ಲಿ ನಿಂತಿದ್ದ. ಹದಿನಾರರ ಪ್ರಾಯಕ್ಕೆಲ್ಲ ಬ್ರಿಟಿಷರನ್ನು ಒದ್ದೋಡಿಸುವ ಕ್ರಾಂತಿಕಾರಿ ಮಾರ್ಗವನ್ನು ಅಪ್ಪಿಕೊಂಡಿದ್ದ ಆ ಧೀರನ ಮೇಲೆ ಆಂಗ್ಲರು ಹಾಗೂ ಸರ್ಕಾರಿ ಕಚೇರಿಗಳ ಮೇಲೆ ಸರಣಿ ಬಾಂಬ್ ಸ್ಫೋಟ ನಡೆಸಿದ ಆರೋಪಗಳಿದ್ದವು. ಅವುಗಳಲ್ಲಿ ಮುಖ್ಯವಾದದ್ದು ಆತ ತನ್ನ ಗೆಳೆಯ ಪ್ರಫುಲ್ಲ ಚಾಕಿ ಜತೆ ಸೇರಿ ಯುರೋಪಿಯನ್ ಕ್ಲಬ್ ಮೇಲೆ ಬಾಂಬ್ ಸ್ಫೋಟಿಸಿ ಮೂವರ ಸಾವಿಗೆ ಕಾರಣವಾದ ಘಟನೆ. 1908ರ ಏಪ್ರಿಲ್ 30ರಂದು ನಡೆದ ಆ ದಾಳಿಯ ಗುರಿ ಕೋಲ್ಕತಾ ಪ್ರಸಿಡೆನ್ಸಿಯ ಮ್ಯಾಜಿಸ್ಟ್ರೇಟ್ ಕಿಂಗ್ಸ್ಫೋರ್ಡ್ನನ್ನು ಕೊಲ್ಲುವುದಾಗಿತ್ತು. ಆದರೆ ಆಕಸ್ಮಿಕವಾಗಿ ಆತ ಬಚಾವಾಗಿ ಹೆಂಡತಿ ಹಾಗೂ ಮಗಳು ಪ್ರಾಣತೆತ್ತರು. ಬಾಂಬ್ ಎಸೆದ ಇಬ್ಬರೂ ಹುಡುಗರು ಬರಿಗಾಲಲ್ಲಿ ಅವೆಷ್ಟೋ ಕಿಲೋಮೀಟರ್ ನಡೆದರು. ಪ್ರಫುಲ್ಲನನ್ನು ಪೊಲೀಸರು ಸುತ್ತುವರಿದಾಗ ಆತ ತನಗೆ ತಾನೆ ಗುಂಡಿಕ್ಕಿಕೊಂಡು ಸಾವನ್ನು ಬರಮಾಡಿಕೊಂಡ. ಇದೀಗ ಕಟಕಟೆಯಲ್ಲಿ ನಿಂತಿದ್ದ ಖುದಿರಾಮ್ನನ್ನು ರಕ್ಷಿಸುವುದಕ್ಕೆ ನ್ಯಾಯವಾದಿಗಳು ಏನೆಲ್ಲ ಪ್ರಯತ್ನ ಮಾಡಿದರು. ಆದರೆ ಕ್ರಾಂತಿಕಾರಿಗಳನ್ನು ಬ್ರಿಟಿಷ್ ಸರ್ಕಾರ ಎಂದೂ ಮನ್ನಿಸಿದ್ದಿಲ್ಲ. ನ್ಯಾಯಾಧೀಶರು ಆತನಿಗೆ ಮರಣ ದಂಡನೆ ಪ್ರಕಟಿಸಿದರು. ಪ್ರತಿಯಾಗಿ ಖುದಿರಾಂ ಮುಗುಳ್ನಕ್ಕ! ನ್ಯಾಯಾಧೀಶರಿಗೆ ಆಶ್ಚರ್ಯ. 'ಮರಣ ಅಂದರೆ ಏನೆಂದು ಗೊತ್ತಾ ನಿನಗೆ' ಅಂತ ಕೇಳಿದರು. ನಗುತ್ತಲೇ ತನಗೆ ಗೊತ್ತೆಂದ ಖುದಿರಾಂ. 'ಇಲ್ಲಿ ಇಷ್ಟೊಂದು ಪ್ರಮಾಣದಲ್ಲಿ ನೆರೆದಿರುವ ಜನರಿಗೆ ನೀನು ಏನಾದರೂ ಹೇಳುವುದಿದೆಯಾ' ನ್ಯಾಯಾಧೀಶರ ಮನಸ್ಸು ತುಸು ಕರಗಿದಂತಿತ್ತು. ಖುದಿರಾಂ ಹೇಳಿದ- 'ನೀವು ಸ್ವಲ್ಪ ಸಮಯ ಕೊಟ್ಟರೆ ಬಾಂಬ್ ಮಾಡುವುದು ಹೇಗೆ ಅಂತ ವಿಸ್ತಾರವಾಗಿ ಹೇಳುತ್ತೇನೆ'.
ಖುದಿರಾಂ ಬೋಸ್ ತ್ಯಾಗ ಬಂಗಾಳದಲ್ಲಿ ಕಿಚ್ಚನ್ನೇ ಹತ್ತಿಸಿತು. ಬ್ರಿಟಿಷರನ್ನು ಕೊಲ್ಲುವುದಕ್ಕೆ ನಮ್ಮ ಮೈಮೇಲೆ ಸಾವೆಳೆದುಕೊಳ್ಳುವುದಕ್ಕೆ ಸಿದ್ಧ ಎಂದು ಹೂಂಕರಿಸಿದ ಯುವಪಡೆ ಆಂಗ್ಲರನ್ನು ಅಲ್ಲಾಡಿಸಿಬಿಟ್ಟಿತು.
ಇನ್ನೆರಡು ದಿನ ಕಳೆದರೆ....
ಆಗಸ್ಟ್ 15. ಸ್ವಾತಂತ್ರ್ಯೋತ್ಸವ. ತಮ್ಮ ಸಾವಿನ ಮೂಲಕ ನಮ್ಮ ನಾಳೆಗಳನ್ನು ಸುಂದರವಾಗಿಸಿದವರೆಲ್ಲರ ನೆನಪಲ್ಲಿ ನಮ್ಮ ಬದುಕಿನ ಅರ್ಥ ಸ್ಫುಟವಾಗಲಿ. ನಮ್ಮೊಳಗಿನ ಅರವಿಂದನ ಬರಡು ಎದೆಯಲ್ಲಿ ತುಂಬಲಿ ಒಂದು ಉತ್ಕರ್ಷ.
- ಚೈತನ್ಯ ಹೆಗಡೆ
cchegde@gmail.com