ಹಕ್ಕುಗಳಿಗಾಗಿ ಹೋರಾಡುವವರೇ ಎಲ್ಲ, ಕರ್ತವ್ಯಗಳು ಲೆಕ್ಕಕ್ಕೇ ಇಲ್ಲ!

ಸ್ವಾತಂತ್ರ್ಯದ ಹಕ್ಕು, ಶಿಕ್ಷಣದ ಹಕ್ಕು, ಆಹಾರದ ಹಕ್ಕು, ಜೀವಿಸುವ ಹಕ್ಕು, ಮಾತನಾಡುವ...
Updated on: 

ಸ್ವಾತಂತ್ರ್ಯದ ಹಕ್ಕು, ಶಿಕ್ಷಣದ ಹಕ್ಕು, ಆಹಾರದ ಹಕ್ಕು, ಜೀವಿಸುವ ಹಕ್ಕು, ಮಾತನಾಡುವ ಹಕ್ಕು, ಮಾನವ ಹಕ್ಕು ಸಂಘಟನೆಗಳು. ಮಹಿಳೆಯರ ಹಕ್ಕು. ಮಕ್ಕಳ ಹಕ್ಕು. ಪುರುಷರ ಹಕ್ಕು. ಅಲ್ಪಸಂಖ್ಯಾತರ ಹಕ್ಕು. ಶಾಸಕರ ಹಕ್ಕು!
ಎಲ್ಲಿ ನೋಡಿದರೂ ಹಕ್ಕುಗಳಿಗಾಗಿ ಬಡಿದಾಟ. ಅದಕ್ಕಾಗಿಯೇ ಸಕಲ ಯತ್ನ. ನೀವು ಶಾಸಕರ ಹಕ್ಕುಗಳಿಗೆ ಧಕ್ಕೆ ಉಂಟು ಮಾಡಿದರೆ ಅದು 'ಹಕ್ಕುಚ್ಯುತಿ'. ಮಕ್ಕಳ ಹಕ್ಕುಗಳಿಗೆ ಚ್ಯುತಿ ತಂದರೆ, ಅವರಿಂದ ಶಾಲೆಯ ಯಾವುದೇ ಕೆಲಸ ಮಾಡಿಸಿದರೆ ಶಿಕ್ಷೆ. ಎಲ್ಲರಿಗೂ ಹಕ್ಕುಗಳ ಬಗ್ಗೆ ಎಲ್ಲಿಲ್ಲದ ಕಾಳಜಿ. ಹಕ್ಕುಗಳ ಸಂರಕ್ಷಣೆಗೆ ಸಂಘಟನೆ, ಹೋರಾಟ, ಹಾರಾಟ ಎಲ್ಲ. ಯಾವುದೇ ಹಕ್ಕುಗಳನ್ನು ನೀವು ಪ್ರಶ್ನೆ ಮಾಡುವಂತಿಲ್ಲ.
ಆದರೆ ನನ್ನದೊಂದು ಪ್ರಶ್ನೆಯಿದೆ. ಹಕ್ಕುಗಳಿಗೆ ಇಷ್ಟೆಲ್ಲ ಸಂಘ, ಕಾನೂನುಗಳಿರುವಾಗ ಕರ್ತವ್ಯಗಳಿಗೇಕೆ ಒಂದೇ ಒಂದು ಸಂಘವಿಲ್ಲ? ಕರ್ತವ್ಯಗಳಾ? ಹಾಗಂದರೇನು ಎಂದು ಪ್ರಶ್ನಿಸುವ ಪರಿಸ್ಥಿತಿ ಇದೆ.
ಶಾಸಕರ ಕರ್ತವ್ಯ ಭಾದ್ಯತಾ ಸಮಿತಿ, ಸಾರ್ವಜನಿಕರ ಕರ್ತವ್ಯ ಉಲ್ಲಂಘನಾ ತಡೆ ಕಾನೂನು, ಮಕ್ಕಳ ಕರ್ತವ್ಯ ರಕ್ಷಣಾ ಸಮಿತಿ, ಪುರುಷರ ಕರ್ತವ್ಯ ಭಾದ್ಯತಾ ಸಮಿತಿ ಹೀಗೆ ಎಲ್ಲೂ ಸಮಿತಿಗಳ ಹೆಸರು ಕೇಳಿದ್ದು ನೆನಪಿಲ್ಲ!
ಹಕ್ಕುಗಳಿಗೋಸ್ಕರ ಅಷ್ಟೆಲ್ಲ ಸಮಿತಿ, ಕಾನೂನು, ಸಂಘಟನೆಗಳಿರುವಾಗ ಕರ್ತವ್ಯಕ್ಕೆ ಒಂದಾದರೂ ಸಮಿತಿ, ಸಂಘಟನೆ ಬೇಡವೇ?
ನಮ್ಮ ಸಂವಿಧಾನದಲ್ಲಿ ಹಕ್ಕು ಮತ್ತು ಕರ್ತವ್ಯಗಳಿಗೆ ಸಮಾನ ಸ್ಥಾನ ನೀಡಲಾಗಿದೆ. ಹೇಗೆ ಪ್ರತಿಯೊಂದು ಪ್ರಜೆಗೂ ಹಕ್ಕುಗಳನ್ನು ನೀಡಲಾಗಿದೆಯೋ ಹಾಗೆಯೇ ಕರ್ತವ್ಯಗಳನ್ನೂ ನೀಡಲಾಗಿದೆ. ಆದರೆ ಹಕ್ಕುಗಳಿಗೆ ಸಿಗುವ ಬೆಲೆ ಕರ್ತವ್ಯಗಳಿಗೆ ಇಲ್ಲ. ಎಲ್ಲರಿಗೂ ಹಕ್ಕುಗಳ ಬಗ್ಗೆಯೇ ಆಸಕ್ತಿ. ಕರ್ತವ್ಯಗಳನ್ನು ಪಾಲಿಸದಿದ್ದರೂ ಪರವಾಗಿಲ್ಲ. ಹಕ್ಕುಗಳಿಗೆ ಮಾತ್ರ ಯಾವುದೇ ಧಕ್ಕೆ ಬರಬಾರದು. ಕರ್ತವ್ಯಗಳು ಯಾವುದೆಂದು ಗೊತ್ತಿಲ್ಲದಿದ್ದರೂ ಪರ್ವಾಗಿಲ್ಲ, ಹಕ್ಕುಗಳ ಬಗ್ಗೆ ಮಾತ್ರ ಸ್ಪಷ್ಟ ಅರಿವಿರುತ್ತದೆ. ನಮ್ಮನ್ನಾಳುವವರನ್ನೇ ಉದಾಹರಣೆಗೆ ತೆಗೆದುಕೊಳ್ಳೋಣ. ವಿಧಾನಸಭೆ ಅಥವಾ ಲೋಕಸಭೆಯಲ್ಲೇ ನೋಡಿ. ಅಲ್ಲಿ ಹಕ್ಕು ಬಾಧ್ಯತಾ ಸಮಿತಿಗಳಿವೆ. ನೀವು ಶಾಸಕರು, ಸಂಸದರ ಬಗ್ಗೆ ಏನಾದರೂ ಬರೆದರೆ, ಮಾತನಾಡಿದರೆ, ಆರೋಪ ಮಾಡಿದರೆ ಅವರು ನಿಮ್ಮ ಮೇಲೆ ಹಕ್ಕುಚ್ಯುತಿ ಮಂಡಿಸಬಹುದು. ಆ ಆರೋಪದ ತನಿಖೆಗಾಗಿ ವ್ಯಕ್ತಿಗಳನ್ನು ವಿಧಾನಸಭೆಗೆ ಕರೆಸಿ ಶಾಸಕರೇ ಇರುವ ಸಮಿತಿ ವಿಚಾರಣೆ ನಡೆಸಬಹುದು. ಅಷ್ಟಕ್ಕೂ ಸಮಾಧಾನವಾಗದಿದ್ದರೆ ವಿಧಾನಸಭೆಗೇ ಕರೆದು ಛೀಮಾರಿ ಹಾಕಬಹುದು.
ಕೇವಲ ಭೂ ಒತ್ತುವರಿ ಬಗ್ಗೆ ಮಾತನಾಡುವಾಗ ಶಾಸಕರ ಹೆಸರು ತೆಗೆದುಕೊಂಡರು ಎಂಬ ಕಾರಣಕ್ಕೆ ನಿವೃತ್ತ ಸರ್ಕಾರಿ ಅಧಿಕಾರಿ ಸುಬ್ರಮಣಿಯನ್ ಅವರ ಮೇಲೆ ಹಕ್ಕುಚ್ಯುತಿ ಮಂಡಿಸಲಾಗಿದೆ. ಕೆಲವೇ ಸಮಯದ ಹಿಂದೆ ಅಣ್ಣಾ ಹಜಾರೆ ಅವರ ಹೋರಾಟ ನಡೆಯುತ್ತಿದ್ದ ಸಂದರ್ಭದಲ್ಲಿ ನಡೆಸಿದ ಅಣಕು ನಾಟಕದಲ್ಲಿ ಖ್ಯಾತ ಪೊಲೀಸ್ ಅಧಿಕಾರಿ ಕಿರಣ್ ಬೇಡಿಯವರ ವಿರುದ್ಧ ಮತ್ತು ಹೇಳಿಕೆಯೊಂದಕ್ಕೆ ಅನುಪಮ್ ಖೇರ್ ವಿರುದ್ಧ ನಮ್ಮ ಸಂಸದರು ಹಕ್ಕುಚ್ಯುತಿ ಮಂಡಿಸಲು ಹೊರಟಿದ್ದರು.
ಆದರೆ ತಮ್ಮ ಕರ್ತವ್ಯವನ್ನು ಸರಿಯಾಗಿ ಪಾಲಿಸದ ಶಾಸಕರು ಸಂಸದರ ಮೇಲೆ ಕರ್ತವ್ಯಚ್ಯುತಿ ದಾಖಲಿಸಿದ ಉದಾಹರಣೆಗಳೇ  ಇಲ್ಲ!
ಹೆಂಡತಿಯನ್ನು ಬಿಟ್ಟು ಬೇರೆಯವರನ್ನು ರೈಲು, ವಿಮಾನದಲ್ಲಿ ಪತ್ನಿಯೆಂದು ಉಚಿತವಾಗಿ ಕರೆದುಕೊಂಡ ಹೋದ ಸಂಸದರಿದ್ದಾರೆ. ಸದನದೊಳಗೇ ನೋಡಬಾರದ್ದನ್ನು ನೋಡಿದವರಿದ್ದಾರೆ. ನೋಡಿಯೂ ನೋಡಿಲ್ಲವೆಂದು ಬಚಾವ್ ಆಗಿದ್ದಾರೆ. ಪ್ರಶ್ನೆ ಕೇಳಲು ಹಣ ಪಡೆದವರಿದ್ದಾರೆ. ನಾವು ಪ್ರತಿನಿಧಿಯೆಂದು ಆರಿಸಿ ಕಳುಹಿಸಿದರೆ, ಸರಿಯಾಗಿ ಅಧಿವೇಶನಗಳಲ್ಲಿ ಭಾಗವಹಿಸದವರಿದ್ದಾರೆ. ಅಂಗಿ ಹರಿದುಕೊಂಡವರು, ಮೈಕ್ ಕಿತ್ತೆಸೆದವರು, ಸ್ಪೀಕರ್ ಅವರನ್ನೇ ಎಳೆಯಲು ಹೋದವರು, ರೆಸಾರ್ಟ್‌ಗೆ ಹೋಗಿ ಕುಳಿತುಕೊಂಡವರು ಹೀಗೆ ಎಂತೆಂತಹ ಜನರನ್ನೋ ನೋಡಿದ್ದೇವೆ. ಅವರ್ಯಾರ ಮೇಲೂ ಕರ್ತವ್ಯಚ್ಯುತಿ ದಾಖಲು ಮಾಡಲು ಸಾಧ್ಯವಾಗಿಲ್ಲ. ಯಾಕೆಂದರೆ ಅಂಥದ್ದೊಂದು ಅವಕಾಶವೇ ಇಲ್ಲ!
ಮಾನವ ಹಕ್ಕುಗಳದ್ದೂ ಇದೇ ಕತೆ. ಮಾನವ ಹಕ್ಕುಗಳಿದ್ದಂತೆ ಮಾನವ ಕರ್ತವ್ಯಗಳೂ ಇರಬೇಕಲ್ಲವೇ? ಅದು ಯಾರಿಗೂ ಗೊತ್ತಿಲ್ಲ. ಆದರೆ ಮಾನವ ಹಕ್ಕುಗಳ ಬಗ್ಗೆ ಮಾತ್ರ ಪುಂಖಾನುಪುಂಖವಾಗಿ ಮಾತನಾಡುವವರು ಮತ್ತು ಪುಟಗಟ್ಟಲೆ ಲೇಖನ ಬರೆಯುವವರು, ಹೇಗೆಲ್ಲ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಪುಸ್ತಕ ಬರೆಯುವವರು ಸಾಕಷ್ಟಿದ್ದಾರೆ. ಆದರೆ ಮಾನವನ ಹಕ್ಕುಗಳು ಯಾವುದು ಎಂದು ಕೇಳಿದರೆ ಹಕ್ಕುಗಳ ಬಗ್ಗೆ ಮಾತನಾಡುವವರು ಸುಮ್ಮನಾಗಿಬಿಡಬಹುದು. ಯಾಕೆಂದರೆ ಅಂತಹ ಸಂಗತಿಯೊಂದು ಇದೆ ಎಂಬುದನ್ನೇ ಅವರು ಗಮನಿಸಿಲ್ಲ.
ನಮ್ಮ ಸಂವಿಧಾನದಲ್ಲಿ ಪ್ರಜೆಗಳಿಗೆ ಹೇಗೆ ಹಕ್ಕುಗಳನ್ನು ನೀಡಲಾಗಿದೆಯೋ ಹಾಗೆಯೇ ಕರ್ತವ್ಯಗಳನ್ನು ನೀಡಲಾಗಿದೆ. ನಮ್ಮ ಸಂವಿಧಾನದಲ್ಲಿ ಮೊದಲು 10 ಕರ್ತವ್ಯಗಳಿದ್ದವು, ಸಂವಿಧಾನದ 42ನೇ ತಿದ್ದುಪಡಿಯಲ್ಲಿ ಒಂದು ಕರ್ತವ್ಯವನ್ನು ಸೇರಿಸಿರುವುದರಿಂದ, ಪ್ರತಿ ಪ್ರಜೆಗಳಿಗೂ ಒಟ್ಟು 11 ಕರ್ತವ್ಯಗಳಿವೆ ಎಂಬುದು ನಮಗ್ಯಾರಿಗೂ ಗೊತ್ತೇ ಇಲ್ಲ. ಕಾರಣ ನಮಗೆ ಕರ್ತವ್ಯ ಅಷ್ಟು ಮುಖ್ಯ ಅಂತ ಅನಿಸಿಯೇ ಇಲ್ಲ. ಅದೇ ಯಾರಾದರೂ ನಮ್ಮ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನ ನಡೆಸುವ ಚಿಂತನೆಯಲ್ಲಿದ್ದಾರೆ ಎಂಬುದು ಗೊತ್ತಾದರೆ ಸಾಕು, ಉರಿದೇಳುತ್ತೇವೆ. ಪರಿಸರ ಮತ್ತು ಸಾರ್ವಜನಿಕ ಆಸ್ತಿಗಳ ರಕ್ಷಣೆ ನಮ್ಮ ಕರ್ತವ್ಯಗಳಲ್ಲೊಂದು. ಈ ಕರ್ತವ್ಯವನ್ನು ನಾವು ಎಷ್ಟು ಪರಿಣಾಮಕಾರಿಯಾಗಿ ಪಾಲಿಸಿದ್ದೇವೆ? ಬಸ್ಸಿಗೆ ಕಲ್ಲು ಹೊಡೆದಿಲ್ಲವೇ? ಪೊಲೀಸ್ ವಾಹನಕ್ಕೆ ಬೆಂಕಿ ಹಚ್ಚಿಲ್ಲವೇ? ಬಸ್ ನಿಲ್ದಾಣದಲ್ಲಿ ಗುಟಕಾ ಉಗುಳಿ ಚಿತ್ತಾರ ಮೂಡಿಸಿಲ್ಲವೇ? ಸಿಕ್ಕಸಿಕ್ಕಲ್ಲಿ ಮೂತ್ರ ಮಾಡಿ ಪರಿಸರ ನಾಶ ಮಾಡಿಲ್ಲವೇ? ಸಾರ್ವಜನಿಕರ ಹಣವನ್ನು ದುರ್ಬಳಕೆ ಮಾಡಿಕೊಂಡ ಜನಪ್ರತಿನಿಧಿಗಳಿಲ್ಲವೇ?
ಉದಾಹರಣೆಗೆ ಮಕ್ಕಳ ಬಳಿ ಕೆಲಸ ಮಾಡಿಸುವುದು ಅಪರಾಧ ಅಥವಾ ಅವರ ಹಕ್ಕುಗಳಿಗೆ ಅಡ್ಡಿಪಡಿಸಿದಂತೆ. ಹಾಗೆಯೇ ಮಕ್ಕಳನ್ನು 6ರಿಂದ 14 ವರ್ಷದೊಳಗಿನ ಮಕ್ಕಳಿಗೆ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸುವುದು ಪ್ರತಿ ಪಾಲಕರ ಕರ್ತವ್ಯ. ಮಕ್ಕಳನ್ನು ಶಾಲೆಗೆ ಕರೆಸಲು ಸರ್ಕಾರ ಏನೆಲ್ಲ ಕಸರತ್ತು ಮಾಡುತ್ತಿದೆ. ಹಾಲು, 2 ಹಣ ಏನೆಲ್ಲ ಮಾಡಲಾಗುತ್ತಿದೆ. 'ಬಾ ಮರಳಿ ಶಾಲೆಗೆ' ಅಂತ ಸರ್ಕಾರ ಬೊಬ್ಬೆ ಹೊಡೆದಿದ್ದೂ ಆಯ್ತು. ಆದರೆ ಮಕ್ಕಳನ್ನು ಶಾಲೆಗೆ ಕಳುಹಿಸದ ಪಾಲಕರನ್ನು ಬಂಧಿಸಿದ, ಅವರಿಗೆ ಯಾವುದಾದರೂ ಶಿಕ್ಷೆ ವಿಧಿಸಿದ ಉದಾಹರಣೆಗಳಿವೆಯೇ? ಮಕ್ಕಳನ್ನು ಶಾಲೆಗೆ ಕಳುಹಿಸಬೇಕಾದ್ದು ಅವರ ಕರ್ತವ್ಯ. ಅದು ಬಿಟ್ಟು ಶಾಲೆಯಿಂದ ಮಕ್ಕಳು ಹೊರಗಿದ್ದರೆ ಅದಕ್ಕೆ ಶಿಕ್ಷಕರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ನಮ್ಮನ್ನಾಳಿದವರು ಹೇಳಿಕೆ ನೀಡಿದ ಉದಾಹರಣೆಗಳಿವೆ!
ಶಾಂತಿ-ಸೌಹಾರ್ದತೆ ಕಾಪಾಡುವುದು, ಸಹೋದರರಂತೆ ಬಾಳುವುದು, ದೇಶ ಮತ್ತು ದೇಶದ ಧ್ವಜ, ಚಿಹ್ನೆಗಳನ್ನು ಗೌರವಿಸುವುದು ಕೂಡ ಪ್ರಜೆಗಳ ಕರ್ತವ್ಯದಲ್ಲಿ ಒಂದು. ಈ ಕರ್ತವ್ಯಗಳನ್ನು ಪ್ರಜೆಗಳು ಸರಿಯಾಗಿ ಪಾಲಿಸದೇ ಇದ್ದಾಗ ಪೊಲೀಸರು ಅಥವಾ ಭದ್ರತಾ ಸಿಬ್ಬಂದಿ ಜನರನ್ನು ನಿಯಂತ್ರಿಸಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ಪ್ರಜೆಗಳ ಕೆಲವು ಹಕ್ಕುಗಳಿಗೂ ಅಡ್ಡಿಯಾಗಬಹುದು. ಆಗ ಹಕ್ಕುಗಳಿಗೆ ಅಡ್ಡಿಯಾಗಿದ್ದನ್ನೇ ದೊಡ್ಡ ಸಂಗತಿ ಮಾಡಲಾಗುತ್ತದೆ. ಕರ್ತವ್ಯ ಪಾಲಿಸದೇ ಇದ್ದುದು ದೊಡ್ಡ ಸಂಗತಿಯೇ ಅಲ್ಲ ಎಂಬಂತಾಗುತ್ತದೆ.
ಮಾನವ ಹಕ್ಕುಗಳಂತೂ ಉತ್ತಮ ಪ್ರಜೆಗಳಿಗಿಂತ ಕೆಟ್ಟವರಿಗೇ ಹೆಚ್ಚು ಉಪಯೋಗವಾಗುತ್ತಿದೆ. ನಿಜವಾಗಿಯೂ ಒಬ್ಬ ಸಾಮಾನ್ಯ ಪ್ರಜೆಯ ಮಾನವ ಹಕ್ಕುಗಳು ಉಲ್ಲಂಘನೆಯಾಗಿದ್ದರೆ ಅದನ್ನು ಖಂಡಿತ ಬೆಂಬಲಿಸೋಣ. ಆದರೆ ಇಂದು ನಕ್ಸಲರು, ಉಗ್ರರು, ಕಾನೂನು ಪಾಲಿಸದೇ ಮಾನವ ಹಕ್ಕುಗಳ ಆಶ್ರಯ ಪಡೆಯುತ್ತಿದ್ದಾರೆ. ನಾವು ಅವರ ಮಾನವ ಹಕ್ಕುಗಳ ಬಗ್ಗೆ ಮಾತನಾಡುತ್ತೇವೆ. ಆದರೆ ಅವರು ತಮ್ಮ ಕರ್ತವ್ಯ ಮರೆತು, ಅವುಗಳನ್ನು ಉಲ್ಲಂಘಿಸಿದ್ದನ್ನು ಮರೆಯುತ್ತೇವೆ.
ಸಾಮಾಜಿಕ ಶಾಂತಿ ಕಾಪಾಡುವುದು ನಮ್ಮ ಕರ್ತವ್ಯ. ಬಂದೂಕು ಹಿಡಿದು ತಿರುಗಾಡುತ್ತೇನೆ. ಆ ಮೂಲಕ ಸಾಮಾಜಿಕ ಶಾಂತಿ-ನೆಮ್ಮದಿಗೆ ಭಂಗ ತಂದರೆ, ಆಗ ಅಂಥವರನ್ನು ಹದ್ದುಬಸ್ತಿನಲ್ಲಿಡಬೇಕಾಗುತ್ತದೆ. ಅವರು ಯಾರನ್ನು ಬೇಕಾದರೂ ಕೊಲೆ ಮಾಡಬಹುದು. ಅದು ಹೋರಾಟ. ಅದೇ ಅವರ ಮೇಲೆ ಗುಂಡು ಹಾರಿಸಿದರೆ ಮಾನವ ಹಕ್ಕು ಉಲ್ಲಂಘನೆ. ಅವರು ಗುಂಡು ಹಾರಿಸಿ ಮಾನವ ಹಕ್ಕು ಉಲ್ಲಂಘಿಸಿಲ್ಲವೇ? ಕೊಲೆಗಾರರು ಕೊಲೆ ಮಾಡಿದ ವ್ಯಕ್ತಿಯ ಮಾನವ ಹಕ್ಕುಗಳ ಉಲ್ಲಂಘನೆಯಾಗಲಿಲ್ಲವೇ? ಕೊಲೆ ಮಾಡುವ ಮೂಲಕ ತನ್ನ ಕರ್ತವ್ಯಗಳನ್ನು ಮೀರುವುದರ ಜತೆಗೆ ಇತರರ ಮಾನವ ಹಕ್ಕುಗಳನ್ನು ಉಲ್ಲಂಘಿಸಿದ್ದು ತಪ್ಪಲ್ಲವೇ? ಅಂತಹ ವ್ಯಕ್ತಿಗಳಿಗೆ ಹಕ್ಕುಗಳನ್ನು ಯಾಕೆ ನೀಡಬೇಕು?
ನಮ್ಮ ಸಂವಿಧಾನದಲ್ಲಿ ಹಕ್ಕು ಮತ್ತು ಕರ್ತವ್ಯಗಳನ್ನು ಒಟ್ಟಿಗೆ ನೀಡಲಾಗಿದೆ. ಅವುಗಳನ್ನು ಬೇರೆ ಬೇರೆ ಎಂದು ಪರಿಗಣಿಸಿಲ್ಲ. ಒಂದೇ ಒಂದು ತಪ್ಪೆಂದರೆ ಕರ್ತವ್ಯಗಳನ್ನು ಪಾಲಿಸದಿದ್ದರೆ ಯಾವುದೇ ಶಿಕ್ಷೆಗೆ ಅವಕಾಶ ಕಲ್ಪಿಸಿಲ್ಲ. ಆದರೆ ಹಕ್ಕುಗಳ ಉಲ್ಲಂಘನೆಯಾದರೆ ಅದಕ್ಕೆ ಕಾನೂನಿದೆ, ಶಿಕ್ಷೆಯೂ ಇದೆ.
ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾಗಿವೆ. ಇಷ್ಟು ವರ್ಷ ಹಕ್ಕುಗಳಿಗಾಗಿ ಹೋರಾಡಿ, ಬಡಿದಾಡಿಯಾಗಿದೆ. ಇನ್ನಾದರೂ ಕರ್ತವ್ಯಗಳ ಬಗ್ಗೆ ಗಮನಹರಿಸೋಣ. ಹಕ್ಕುಗಳಿಗಿಂತ ಕರ್ತವ್ಯಕ್ಕೆ ಮೊದಲ ಗಮನಕೊಡೋಣ. ಯಾರು ಕರ್ತವ್ಯಗಳನ್ನು ಸರಿಯಾಗಿ ಪಾಲಿಸುತ್ತಾರೋ ಅವರಿಗೆ ಮಾತ್ರ ಹಕ್ಕುಗಳು ದೊರೆಯಬೇಕು. ಕರ್ತವ್ಯಗಳನ್ನು ಮರೆತು, ಇತರರ ಹಕ್ಕುಗಳನ್ನು ಉಲ್ಲಂಘಿಸುವವರಿಗೆ ಯಾವ ಹಕ್ಕುಗಳೂ ಅನ್ವಯವಾಗಬಾರದು. ಆಗ ಮಾತ್ರ ಬಹುಶಃ ಉತ್ತಮ ಸಮಾಜ ಕಟ್ಟಲು ಸಾಧ್ಯವಾಗಬಹುದು.

- ವಿನಾಯಕಭಟ್ಟ ಮೂರೂರು
vakradanta@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com