ಸ್ವರ ಸೇವೆಯ ಮೂಲಕ ದೇವರನ್ನು ಕುಣಿಸುವ ದೇವಾಡಿಗರು

ಹೂವು ಕಟ್ಟುವವರು ಹೂವಾಡಿಗರು, ಹಾವು ಆಡಿಸುವವರು ಹಾವಾಡಿಗರು, ದೇವರನ್ನೇ...
Updated on: 

ಹೂವು ಕಟ್ಟುವವರು ಹೂವಾಡಿಗರು, ಹಾವು ಆಡಿಸುವವರು ಹಾವಾಡಿಗರು, ದೇವರನ್ನೇ ಆಡಿಸುವವರು? ಅವರು ದೇವಾಡಿಗರು.
ಹೌದು. ತಮ್ಮ ಸ್ವರ ಸೇವೆ ಮೂಲಕ ದೇವರನ್ನು ಕುಣಿಸುವವರೇ ದೇವಾಡಿಗರು. ಭಕ್ತರಿಗೆ ದೇವರ ದರ್ಶನ ಆಗಬೇಕು ಎಂದರೆ ಈ ಸಮುದಾಯದವರಿಂದ ಸ್ವರ ಸೇವೆ ಜರುಗಲೇಬೇಕು. ಜೊತೆಗೆ ದೇವರ ಸಂಸಾರದವರು ಎಂಬ ಹೆಗ್ಗಳಿಕೆಯೂ ಈ ಸಮಾಜದವರಿಗಿದೆ.
ದೇವಾಲಯಗಳಲ್ಲಿ ವಾದ್ಯ ಪರಿಕರಗಳನ್ನು ನುಡಿಸುವುದು ದೇವಾಡಿಗರ ಕುಲ ಕಸುಬು. ತಲೆ ತಲಾಂತರದಿಂದ ಇದೇ ಕಾಯಕ ಮಾಡಿಕೊಂಡು ಬಂದಿದ್ದಾರೆ. ದೇವಾಲಯದಲ್ಲಿ ಇವರಿಗೆ ಗರ್ಭಗುಡಿವರೆಗೆ ಪ್ರವೇಶವಿದೆ. ವಾದ್ಯ ಸೇವೆ ಜೊತೆಗೆ ದೇಗುಲ ಸ್ವಚ್ಛ ಮಾಡುವುದು ಇವರ ಮತ್ತೊಂದು ಕೆಲಸ. ಅರ್ಚಕರನ್ನು ಹೊರತುಪಡಿಸಿದರೆ ದೇವಸ್ಥಾನಗಳಲ್ಲಿ ನಂತರದ ಸ್ಥಾನ ಇವರದ್ದೇ.
ವಾದ್ಯ ಸೇವೆ ಇರಲೇಬೇಕು: ದೇವರು ಗರ್ಭಗುಡಿಯಿಂದ ಹೊರಗೆ ಬರಬೇಕು, ಮೆರವಣಿಗೆ ಹೊರಡಬೇಕು ಎಂದರೆ ದೇವಾಡಿಗರ ವಾದ್ಯ ಸೇವೆ ಇರಲೇಬೇಕು. ಮೆರವಣಿಗೆ ಸಂದರ್ಭ ದೀವಟಿಗೆ ಹಿಡಿಯುವ, ನಗಾರಿ ಬಾರಿಸುವ, ಕೊಂಬು ಕಹಳೆ ಮೊಳಗಿಸುವ, ಚಂಡೆ ಮತ್ತು ಮದ್ದಳೆ ಬಾರಿಸುವುದು ದೇವಾಡಿಗರ ಕುಲ ಕಸುಬು. ಮೆರವಣಿಗೆ ವೇಳೆ ದೇವರ ಮುಂದೆ ದೇವಾಡಿಗರು, ಹಿಂದೆ ಬ್ರಾಹ್ಮಣರು ನಡೆದು ಬರುವ ಸಂಪ್ರದಾಯವಿದೆ. ಈ ಸಮಾಜದವರಿಗೆ ಮೊಯಿಲಿ, ಶೇರಿಗಾರ ಎಂಬ ಹೆಸರೂ ಇದೆ. ಒಟ್ಟಿನಲ್ಲಿ ದೇವಸ್ಥಾನದ ಕೆಲಸ ಮತ್ತು ಕಾರ್ಯಗಳಿಗೆ ಸೀಮಿತ ಆದ ಜನ ಇವರು. ಕೃಷಿ ಇವರ ಮತ್ತೊಂದು ಕಸುಬು.
ಕರ್ನಾಟಕ ರಾಜ್ಯ ದೇವಾಡಿಗರ ಸಂಘದ ಪ್ರಧಾನ ಕಾರ್ಯದರ್ಶಿ ರಾಮಚಂದ್ರ ದೇವಾಡಿಗ ಅವರು ಹೇಳುವ ಪ್ರಕಾರ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಸಮುದಾಯದ ಜನಸಂಖ್ಯೆ ಹೆಚ್ಚಾಗಿದೆ. ಕಾಸರಗೋಡು ಪ್ರದೇಶದಲ್ಲಿ ಕುಟುಂಬಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಅದನ್ನು ಹೊರತುಪಡಿಸಿದರೆ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ಸಮುದಾಯದ ಜನರಿದ್ದಾರೆ. ಅಷ್ಟೇ ಅಲ್ಲದೆ, ಮುಂಬಯಿ, ದುಬೈ ಸೇರಿ ಹೊರನಾಡಿನಲ್ಲೂ ನೆಲೆಸಿದ್ದಾರೆ.
ಮಯೂರ ವರ್ಮನ ಕಾಲದಲ್ಲಿ: ಪ್ರಾಚೀನ ಕರ್ನಾಟಕದ ಇತಿಹಾಸದ ಪ್ರಕಾರ ಕದಂಬ ವಂಶದ ಸ್ಥಾಪಕ ಮಯೂರ ವರ್ಮ ತನ್ನ ಸಾಮ್ರಾಜ್ಯದಲ್ಲಿ ಸಾವಿರಾರು ದೇವಸ್ಥಾನಗಳನ್ನು ಕಟ್ಟಿಸಿ ದೇವರ ಪೂಜೆಗೆ ಬ್ರಾಹ್ಮಣರನ್ನು ನೇಮಕ ಮಾಡಿದ. ಅದೇ ರೀತಿ ದೇಗುಲಗಳನ್ನು ಅಚ್ಚುಕಟ್ಟಾಗಿ ನೋಡಿಕೊಳ್ಳಲು ದೇವಾಡಿಗರನ್ನು ನಿಯೋಜಿಸಿದ. ನಾಗಸ್ವರ ಸೇರಿದಂತೆ ಸಂಗೀತದ ಮೂಲಕ ದೇವರನ್ನು ಆರಾಧಿಸುವ ಹೊಣೆಯನ್ನು ಈ ಸಮುದಾಯದವರಿಗೆ ಮೂಯರ ವರ್ಮನೇ ವಹಿಸಿದ ಎಂದು ದಾಖಲೆಗಳು ಹೇಳುತ್ತವೆ.
ಕ್ರಿ.ಶ.450ರಲ್ಲಿ ರಚಿತವಾದ ಅಮರ ಕೋಶದಲ್ಲೂ ಈ ಸಮಾಜದ ಬಗ್ಗೆ ಉಲ್ಲೇಖ ಇದೆ. ಅದರಲ್ಲಿ ಸ್ವರಗಾರ ಎಂಬ ಪದ ಇದೆ. ಆ ಪದ ಕ್ರಮೇಣ ಶೇರಿಗಾರ ಅಗಿರಬಹುದು ಎನ್ನುತ್ತಾರೆ ರಾಮಚಂದ್ರ ದೇವಾಡಿಗರು. ಸ್ವರಗಾರ ಎಂದರೆ ವಾದ್ಯ ಪರಿಕರಗಳ ಮೂಲಕ ಸ್ವರ ಹೊರಡಿಸಿ ದೇವರ ಸೇವೆ ಮಾಡುವವ ಎಂದರ್ಥ. ಅದೇ ರೀತಿ ದೇವರ ಆಡಿಯಾಳಾಗಿ ಹಗಲು-ರಾತ್ರಿ ದುಡಿಯುತ್ತಿದ್ದವರು ದೇವಾಡಿಗ ಆಗಿರಬಹುದು. ಅಂತೆಯೇ ದೇಗುಲಗಳ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದವರು ಮೊಯಿಲಿಗಳಾಗಿರಬಹುದು ಎಂಬುದು ಅವರ ವಿವರಣೆ. ಇನ್ನು ತುಳು ಪಾಡ್ದನದಲ್ಲಿ ಇವರನ್ನು ಗಾಣಿಗರು ಎಂದು ಕರೆಯಲಾಗಿದೆ. ಹಾಗೆಯೇ ವಿಕ್ರಮಾದಿತ್ಯನ ಕಥೆಯಲ್ಲೂ ದೇವಾಡಿಗರ ಬಗ್ಗೆ ಪ್ರಸ್ತಾಪಿಸಲಾಗಿದೆ.
ಆತ್ಮವಿಶ್ವಾಸ ಮತ್ತು ತಾಳ್ಮೆ: ಆಂಗ್ಲ ಇತಿಹಾಸಕಾರರೊಬ್ಬರು ವಿಶ್ಲೇಷಿಸಿರುವಂತೆ ದೇವಾಡಿಗರು ಎಂದರೆ ದೃಢಕಾಯದವರು. ವಿಶಾಲವಾದ ಹಣೆ, ಅಗಲವಾದ ಎದೆ, ಶಕ್ತಿಯುತ ತೋಳು ಮತ್ತು ಕಾಲುಗಳನ್ನು ಹೊಂದಿದವರು. ಈ ಸಮುದಾಯದಲ್ಲಿ ಮಹಿಳೆಯರೂ ಪುರುಷರಂತೆ ದುಡಿಯುವವರು. ತಿರುಪತಿ ತಿಮ್ಮಪ್ಪನ ಭಕ್ತರಾದ ಇವರು ಶೃಂಗೇರಿ ಶಾರದಾಂಬೆಯನ್ನು ಪೂಜಿಸುವವರು. ಭೂತಾರಾಧನೆಯಲ್ಲಿ ನಂಬಿಕೆ ಉಳ್ಳವರು. ಧಾರ್ಮಿಕ ಮನೋಭಾವದ ಜೊತೆಗೆ ಆತ್ಮ ವಿಶ್ವಾಸ, ತಾಳ್ಮೆ ಇವರ ಇನ್ನೊಂದು ಗುಣ. ಸಮುದಾಯದವರ ಮೂಲ ದೇವರು ಯಾವುದು ? ಎಂಬ ಪ್ರಶ್ನೆ ಇತ್ತೀಚೆಗೆ ಕೇಳಿಬಂತು.
ಹೀಗಾಗಿ ಅಷ್ಠಮಂಗಲ ಹಾಕಿ ಕೇಳಿದಾಗ ಏಕನಾಥೇಶ್ವರಿ ಹೆಸರು ಬಂದಿದೆ. ನಮ್ಮವರಲ್ಲಿ ಕೊಂಚ ಮೂಢನಂಬಿಕೆಯೂ ಹೆಚ್ಚು. ಜ್ವರ ಬಂದರೂ ಜ್ಯೋತಿಷ್ಯದ ಮೊರೆ ಹೋಗುವವರೂ ಇದ್ದಾರೆ. ಆಮಾಯಕತೆಯೂ ಇದಕ್ಕೆ ಕಾರಣ ಇರಬಹುದು ಎನ್ನುತ್ತಾರೆ ರಾಮಚಂದ್ರ ದೇವಾಡಿಗರು. ಸಂಗೀತ ಕಲೆಯಲ್ಲಿ ಪ್ರವೀಣರಾದ ಇವರು ಮದುವೆ, ನಾಮಕರಣ ಮತ್ತಿತರ ಶುಭ ಕಾರ್ಯಕ್ರಮಗಳಲ್ಲೂ ಸ್ವರ ಸೇವೆ ನಡೆಸಿಕೊಡುತ್ತಾರಂತೆ. ಬಾರ್ಕೂರು, ಅಮರಕೋಡಿಯ ಈಶ್ವರ ಮತ್ತು ಕಲ್ಯಾಣಪುರದ ಕೆಂಚಮ್ಮ ದೇವಾಲಗಳಲ್ಲಿ ದೇವಾಡಿಗರೇ ಅರ್ಚಕರಾಗಿದ್ದಾರೆ ಎಂಬುದು ಮತ್ತೊಂದು ವಿಶೇಷ.
ಉದ್ದಿಮೆದಾರರಿದ್ದಾರೆ: ಸರ್ಕಾರದ ಜಾತಿ ಪಟ್ಟಿ ಪ್ರಕಾರ ಹಿಂದುಳಿದ ವರ್ಗದಲ್ಲಿ 2ಎ ಗುಂಪಿಗೆ ಸೇರಿರುವ ದೇವಾಡಿಗರು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಅಷ್ಟೇನೂ ಪ್ರಭಾವಶಾಲಿಗಳಾಗಿಲ್ಲ. ವೀರಪ್ಪ ಮೊಯಿಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಈಗ ಕೇಂದ್ರದಲ್ಲಿ ಸಚಿವರಾಗಿದ್ದಾರೆ. ಅವರನ್ನು ಹೊರತುಪಡಿಸಿದರೆ ಸಮುದಾಯದಲ್ಲಿ ರಾಜಕೀಯವಾಗಿ ಮೇಲೆ ಬಂದವರು ಯಾರೂ ಇಲ್ಲ.
ಎಲ್ಲರೂ ಗ್ರಾಮ, ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಮಟ್ಟದಲ್ಲೇ ಇದ್ದಾರೆ. ಅವಕಾಶಗಳ ಕೊರತೆಯೂ ಇದಕ್ಕೆ ಕಾರಣ ಇರಬಹುದು. ಆದರೆ, ಕೆಲವರು ಉದ್ಯಮಿಗಳಾಗಿ ಹೆಸರು ಮಾಡಿದ್ದಾರೆ. ದೇಶ, ವಿದೇಶಗಳಲ್ಲಿ ಉದ್ದಿಮೆಗಳನ್ನು ಸ್ಥಾಪಿಸಿದ್ದಾರೆ. ಅವರಲ್ಲಿ ಮುಂಬಯಿಯ ವಾಸು ದೇವಾಡಿಗ ಅವರೂ ಒಬ್ಬರು. ಇನ್ನು ಉನ್ನತ ಹುದ್ದೆಗಳಲ್ಲಿ ಇರುವವರ ಸಂಖ್ಯೆಯೂ ಕಡಿಮೆ. ಅಂದಹಾಗೆ ತುಳು ದೇವಾಡಿಗರ ಮಾತೃ ಭಾಷೆ. ವ್ಯವಹಾರಿಕವಾಗಿ ಅವರು ತುಳು ಹೆಚ್ಚಾಗಿ ಬಳಕೆ ಮಾಡುತ್ತಾರೆ.
ಸಮಾಜದ ಹಿತರಕ್ಷಣೆಗೆ 1956ರಲ್ಲಿ ಸ್ಥಾಪನೆಯಾದ ಸಂಘ 1973ರಲ್ಲಿ ರಾಜ್ಯ ಮಟ್ಟಕ್ಕೆ ವಿಸ್ತರಣೆ ಆಯಿತು. ಮಣ್ಣಗುಡ್ಡೆ ರಾಮಮೇಸ್ತ್ರಿ ಅವರು ಸಂಘದ ಸ್ಥಾಪಕರು. ಹಾಲಿ ಅಧ್ಯಕ್ಷರು ದಿನೇಶ್ ದೇವಾಡಿಗ. ಮರೋಳಿನ ರೈಟರಪುಟ್ಟ, ಬಾಬು ದೇವಾಡಿಗ, ಬಿ.ನಾರಾಯಣ, ಕೃಷ್ಣಪ್ಪ, ಮಂಡಪ್ಪ, ಕದ್ರಿ ಗೋಪಾಲ ದೇವಾಡಿಗ, ನಾಗೇಶ್ ಆತ್ತಾವರ, ಕೆ.ವಿ.ದೇವಾಡಿಗ, ಎಂ.ವಿ. ಅಚ್ಚಣ್ಣ, ಕೆ. ಅಣ್ಣಯ್ಯ ಶೇರಿಗಾರ, ರಾಮಣ್ಣ ಬಾಯರಿ, ಮುತ್ತಪ್ಪ, ಅಳಿಕೆ ನಾರಾಯಣ, ಸುಭಾಷ್ ಚಂದ್ರ ಕಣ್ವ ತೀರ್ಥ, ಚಂದ್ರಶೇಖರ, ಉಮೇಶ್ ಮೂಲ್ಕಿ ಸಮಾಜದ ಏಳಿಗೆಗೆ ಶ್ರಮಿಸಿದವರು.
ದೇಗುಲಗಳಲ್ಲಿ ಕೆಲಸ ಮಾಡುವುದರಿಂದ ಬರುವ ಆದಾಯದಲ್ಲಿ ದೇವಾಡಿಗರಿಗೆ ಜೀವನ ನಿರ್ವಹಣೆ ಕಷ್ಟವಾಗಿದೆ. ತಿಂಗಳಿಗೆ ತಲಾ 500, ರು. 1000 ಸಿಕ್ಕರೆ ಅದೇ ಹೆಚ್ಚು ಎನ್ನುವಂತಾಗಿದೆ. ಈ ಹಿಂದೆ ಉಂಬಳಿಯಾಗಿ ಬಂದಿರುವ ಜಮೀನುಗಳಲ್ಲಿ ಕೆಲವರು ವ್ಯವಸಾಯ ಮಾಡಿಕೊಂಡಿದ್ದಾರೆ. ಅದರೆ, ಬಹುತೇಕ ಮಂದಿ ಆರ್ಥಿಕವಾಗಿ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಅವರಿಗೆ ಮಾಸಾಶನ ನಿಗದಿ ಮಾಡಿದರೆ ಕೊಂಚ ಅನುಕೂಲ ಆದೀತು ಎನ್ನುತ್ತಾರೆ ರಾಮಚಂದ್ರ ದೇವಾಡಿಗರು.
ಶಶಿಕಾಂತ ದೇವಾಡಿಗರ ಪ್ರಕಾರ, ದೇವಾಡಿಗರು ಸಿಂಧೂ ಪ್ರಾಂತ್ಯದಿಂದ ಬಂದವರು ಆಗಿರಬಹುದು. ಶ್ರೀಕೃಷ್ಣ ದೇವರಾಯನ ಆಸ್ಥಾನದಲ್ಲೂ ಅವರಿದ್ದರು. ತುಳು ವಂಶಕ್ಕೆ ಸೇರಿದ ಇವರ ಲಾಂಛನ ವರಾಹ, ಸೂರ್ಯ-ಚಂದ್ರ ಮತ್ತು ಚೂರಿ ಆಗಿತ್ತು. ಮೊದಲು ಇವರನ್ನು ಗುಡ್ಡಗಾಡು ಜನ ಎಂದೂ ಗುರುತಿಸಲಾಗಿತ್ತು. ದೇವಾಡಿಗರು ಕೇದಾರ ಲಿಂಗೇಶ್ವರನ ಮೂಲದವರೂ ಆಗಿರಬಹುದು ಎನ್ನುತ್ತಾರೆ ಅವರು.


ವಾದ್ಯ ನುಡಿಸುವುದು ದೇವಾಡಿಗರ ಕುಲ ಕಸುಬು. ಹೀಗಾಗಿ ವಾದ್ಯ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲು ಸರ್ಕಾರ ನೆರವು ಒದಗಿಸಬೇಕು. ಸಮುದಾಯ ಭವನ ಮತ್ತು ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಲು, ವಿದ್ಯಾರ್ಥಿ ನಿಲಯಗಳನ್ನು ತೆರೆಯಲು ಸರ್ಕಾರದಿಂದ ಹಣಕಾಸು ನೆರವು ಸಿಕ್ಕರೆ ಒಳಿತಾಗುತ್ತದೆ. ಒಟ್ಟಾರೆ ಸಮಾಜದ ಏಳಿಗೆಯತ್ತ ಸರ್ಕಾರ ಗಮನ ಹರಿಸಬೇಕು.
-ರಾಮಚಂದ್ರ ದೇವಾಡಿಗ, ಪ್ರಧಾನ ಕಾರ್ಯದರ್ಶಿ, ದೇವಾಡಿಗ ಸಂಘ

- ಕೆ.ವಿ.ಪ್ರಭಾಕರ   
prabhukolar@yahoo.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com