ಕಮಲ್‌ಹಾಸನ್ ಮುಂಬೈ ಎಕ್ಸ್‌ಪ್ರೆಸ್ ಮಾಡಿದ್ರು, ನೀವು ಚೆನ್ನೈ ಎಕ್ಸ್‌ಪ್ರೆಸ್ ಮಾಡಿದ್ರಿ. ಏನ್ ಎಲ್ಲಾ ಸ್ಟಾರ್‌ಗಳೂ ರೈಲು ಬಿಡ್ತಾ ಇದೀರಲ್ಲ. ಹೆಂಗಿದೆ ನಿಮ್ ಸಿನಿಮಾ ಕಲೆಕ್ಷನ್?
ಚೆನ್ನಾಗಿಲ್ಲ ಚೆನ್ನಾಗಿಲ್ಲ ಅಂತನೇ ಜನ ಚೆನ್ನೈ ಎಕ್ಸ್‌ಪ್ರೆಸ್ ಸಿನಿಮಾ ನೋಡ್ತಿದಾರೆ. ನನ್ನನ್ನು ನೋಡೋಕೆ, ಚೆನ್ನೆ ದೀಪಿಕಾ ನೋಡೋಕೆ, ಬರ್ತಿದಾರೆ. ನೀವು ಕೂಡ ಟ್ರೈನ್ ಹೋಗೋಕ್ ಮುಂಚೆ ಟಿಕೆಟ್ ತಗೋಳಿ.
- ಸರಿ, ಸರಿ, ಆದ್ರೆ, ಅದೇನು ನೀವು ಇದ್ದಕ್ಕಿದ್ದಂತೆ ಮಂಗಳೂರು ಮೂಲದವರು ಅಂತ ಹೇಳ್ಕೊಂಡ್ ತಿರ್‌ಗಾಡ್ತಿದೀರಲ್ಲ?
'ಬಿ ಎ ರೋಮನ್ ವೆನ್ ಇನ್ ರೋಮ್' ಅಂತಾರಲ್ಲ. ಹಂಗೆ. ನಾನು ಎಲ್ಲಿಗೆ ತಿರುಗಾಡೋಕ್ ಹೋಗ್ತೀನೋ ಅದೇ ನನ್ನ ಮೂಲ ಅಂತ ಹೇಳ್ಕೊಳ್ಳೋದು, ಜನರನ್ನು ಮರುಳು ಮಾಡೋ ನನ್ನ ಮೂಲಮಂತ್ರ.
- ಓ ಹಂಗೆ, ಅದ್ಸರಿ, ನಿಮಗೆ ಸ್ವಂತ ಮಕ್ಕಳಿದ್ರೂ ಈ ಅಡಾಪ್ಟೆಡ್ ಮಗು ಕಥೆ ಯಾಕ್ ಶುರುವಾಯ್ತು?
ಏನಿಲ್ಲ. ಎರಡು ಮಕ್ಕಳಾದ್ಮೇಲೆ ಇನ್ಮೇಲೆ ಮಕ್ಕಳು 'ಸಾಕು ಮಗಾ' ಅಂತ ಸುಮ್ಮನಾಗಿದ್ವಿ. ಆದ್ರೆ, ಅದೇನೋ ಈಗ 'ಸಾಕು ಮಗ' ಬೇಕು ಅನ್ನಿಸಿತು. ಹಂಗಾಗಿ ಈ ವ್ಯವಸ್ಥೆ.
ಟ ಬಾಲಿವುಡ್‌ನಲ್ಲಿ ನಿಮಗೂ ಸಲ್ಮಾನ್ ಖಾನ್‌ಗೂ ಯಾಕೆ ಆಗಾಗ ಜಗಳ?
ಅದೇನೋಪ್ಪ, ಮೊದ್ಲು, ಎಲ್ಲ ಚೆನ್ನಾಗೇ ಇತ್ತು. ಅದ್ಯಾವ ಘಳಿಗೇಲಿ ಕರಣ್ ಅರ್ಜುನ್ ಅಂತ ಸಿನಿಮಾ ಮಾಡಿದ್ವೋ, ಇಬ್ರೂ ಕರ್ಣ, ಅರ್ಜುನನ್ ಥರಾನೇ ಆಗ್‌ಬಿಟ್ಟಿದೀವಿ.
- ಹೋಗ್ಲಿ, ಪ್ರತಿಸಲ ಫಾರಿನ್‌ಗೆ ಹೋದಾಗಲೂ ನಿಮಗೆ ಸಮಸ್ಯೆ ಆಗುತ್ತಂತೆ, ಯಾಕೆ?
ರೀ 'ಫಾರಿನ್ನಿಗೆ ಹೋದಾಗ ಸಮಸ್ಯೆ ಆಗುತ್ತೆ' ಅಂತ ಡಬಲ್ ಮೀನಿಂಗ್ ಪ್ರಶ್ನೆ ಕೇಳಿದ್ರೆ ಜನ ತಪ್ಪು ತಿಳ್ಕೊತಾರೆ. ನಂಗೆ ಆ ಥರ ಸಮಸ್ಯೆ ಏನೂ ಇಲ್ಲ. ವಿದೇಶಕ್ಕೆ ಹೋದಾಗ ಮಾತ್ರ ಪ್ರಾಬ್ಲಂ. ವಾರಕ್ಕೊಂದ್ಸಲ ಬರೋ ಈ ಸಾಫ್ಟ್‌ವೇರ್ ಎಂಜಿನಿಯರ್‌ಗಳ ಮೇಲಿನ ಸಿಟ್ಟನ್ನ ವಿದೇಶದವರು ನಮ್ಮ ಮೇಲೆ ತೋರಿಸ್ತಾರೆ ಅಷ್ಟೆ.
(ಕಾಲ್ಪನಿಕ ಸಂದರ್ಶನ)
ಒಮ್ಮೆ ಭೇಟಿ ಕೊಡಿ
ಅನುಪಮಾ ನಿರಂಜನ ಅವರ ದಿನಕ್ಕೊಂದು ಕಥೆ ಓದಿದವರು ಅನೇಕರು. ಅದರ ಜೊತೆ ಆಗೆಲ್ಲಾ ಮನೆಯಲ್ಲಿ ಮಕ್ಕಳಿಗೆ ಕಥೆ ಹೇಳಲು ಅಜ್ಜ ಅಜ್ಜಿಯಂದಿರು ಇರುತ್ತಿದ್ದರು. ಈಗ ಲೇಟಾಗಿ ಬಂದದ್ದಕ್ಕೆ ಅಪ್ಪ, ಅಮ್ಮನಿಗೆ ಹೇಳುವ ಕಥೆ, ಸಿಕ್ಕಾಪಟ್ಟೆ ಶಾಪಿಂಗ್ ಮಾಡಿದ್ದಕ್ಕೆ ಅಮ್ಮ, ಅಪ್ಪನಿಗೆ ಹೇಳುವ ಕಥೆಗಳನ್ನು ಬಿಟ್ಟರೆ ಮಕ್ಕಳಿಗೆ ಬೇರೆ ಕಥೆಗಳು ಕೇಳಿಸುವುದು ಅಪರೂಪ. ಹಾಗಾಗಿ ಮಕ್ಕಳ ಕಥಾ ಸಮಯಕ್ಕೆ ತಕ್ಕಂಥ ಕಥೆಗಳು ಬೇಕು ಎನ್ನುವವರು ಇಲ್ಲಿನ ಲಿಂಕ್‌ಗಳನ್ನು ನೋಡಬಹುದು.
n bit.ly/Ds8Uf n bit.ly/KeKgy3 n bit.ly/1dgywga n bit.ly/13sTPJM n bit.ly/RVqBrt
ಹರಿ-ಕಥೆ
ಘಾಟ್ ಸೆಕ್ಷನ್ ಒಂದರ ಕತ್ತಲ ರಸ್ತೆಯಲ್ಲಿ ಬಸ್ ಡ್ರೈವರ್ ಒಬ್ಬ ತನ್ನ ಖಾಲಿ ಬಸ್ಸಿನಲ್ಲಿ ಹೋಗುತ್ತಿದ್ದ. ಘಾಟ್‌ನ ತಿರುವಿನಲ್ಲಿ ಬಿಳಿ ಬಟ್ಟೆ ಧರಿಸಿದ್ದ, ಉದ್ದನೆಯ ಕೆಂಚು ಕೂದಲಿನ, ಸುಂದರಿ ಒಂಟಿ ಹುಡುಗಿಯೊಬ್ಬಳು ಕಾಣಿ
ಸಿದಳು. ಬಸ್ ನೋಡಿದವಳೇ ಮೆಲ್ಲನೆ ಬಸ್ಸಿಗೆ ಅಡ್ಡ ಬಂದು ಕೈ ತೋರಿಸಿದಳು. ಡ್ರೈವರ್ ನಿಲ್ಲಿಸಲೇಬೇಕಾಯ್ತು. ಹುಡುಗಿ ಬಸ್ ಹತ್ತಿದವಳೇ ಏನೂ ಮಾತನಾಡದೇ ಸುಮ್ಮನೇ ಹೋಗಿ ಬಸ್ಸಿನ ಕೊನೆಯ ಸಾಲಿನ ಸೀಟಿನಲ್ಲಿ ಕುಳಿತಳು. ಡ್ರೈವರ್ ಮುಂದೆ ಹೊರಟ. ಇದ್ದಕ್ಕಿದ್ದಂತೆ ಮಿಂಚು ಕಾಣಿಸಿಕೊಂಡಿತು. ಅದೇ ಸಮಯಕ್ಕೆ ಸರಿಯಾಗಿ ಡ್ರೈವರ್ ಮಿರರ್‌ನತ್ತ ನೋಡಿದ. ಬಸ್‌ನಲ್ಲಿ ಹಿಂದೆ ಕೂತ ಹುಡುಗಿ ಕಾಣಿಸಲಿಲ್ಲ. ಸಡನ್ನಾಗಿ ಬ್ರೇಕ್ ಹಾಕಿ ಬಸ್ ನಿಲ್ಲಿಸಿ ಹಿಂದೆ ನೋಡಿದರೆ ಹುಡುಗಿ ಅಲ್ಲೇ ಕೂತಿದ್ದಳು. ಇವನತ್ತಲೇ ನೋಡುತ್ತಿದ್ದಳು. ಆದರೆ ಅವಳ ಹಣೆಯಿಂದ ಸಣ್ಣ ರಕ್ತದ ಹನಿಯೊಂದು ಜಿನುಗುತ್ತಿತ್ತು. ಡ್ರೈವರ್‌ಗೆ ಪ್ಯಾಂಟ್ ಒದ್ದೆಯಾಗುವಷ್ಟು ಭಯವಾಯಿತು. ಮೆಲ್ಲನೆ ಮುಂದೆ ತಿರುಗಿ ಮತ್ತೆ ಭಯದಲ್ಲೇ ಬಸ್ ಓಡಿಸಲಾರಂಭಿಸಿದ. ಮತ್ತೊಮ್ಮೆ ಮಿಂಚು. ಮತ್ತೆ ಮಿರರ್ ನೋಡಿದ. ಹುಡುಗಿ ಇಲ್ಲ. ತಿರುಗಿ ನೋಡಿದರೆ ಹುಡುಗಿಯ ಮುಖದಲ್ಲಿ ರೌದ್ರತೆ ಹೆಚ್ಚಾಗಿತ್ತು. ಹಣೆಯಿಂದ ಸುರಿಯುತ್ತಿದ್ದ ರಕ್ತದ ಪ್ರಮಾಣವೂ ಹೆಚ್ಚಾಗಿತ್ತು. ಮನಸ್ಸಿನಲ್ಲೇ ದೇವರ ಮಂತ್ರ ಜಪಿಸಲಾರಂಭಿಸಿದ ಡ್ರೈವರ್ ಯಾವಾಗ ಊರು ತಲುಪುತ್ತೇನೋ ಎಂಬ ಭಯದಲ್ಲಿ ವೇಗವಾಗಿ ಬಸ್ ಓಡಿಸಲಾರಂಭಿಸಿದ. ಸ್ವಲ್ಪ ಹೊತ್ತಿನಲ್ಲಿ ಮತ್ತೆ, ಮಿಂಚು, ಮತ್ತೆ ಮಿರರ್‌ನಲ್ಲಿ ನೋಡಿದರೆ ಹುಡುಗಿ ಇಲ್ಲ. ತಿರುಗಿ ನೋಡಿದರೆ ಈ ಬಾರಿ ಅವಳ ಮುಖವೆಲ್ಲ ಆವರಿಸಿಕೊಂಡಿರುವ ರಕ್ತ. ಈ ಬಾರಿ ಆಗಿದ್ದಾಗ್ಲಿ ಅಂತ ಡ್ರೈವರ್ ಆ ಭಯದಲ್ಲೇ ಮೆಲ್ಲನೆ ಕೇಳಿಬಿಟ್ಟ, 'ನಿಜ ಹೇಳು ಯಾರು ನೀನು?'. ಹಣೆಯಿಂದ ಇಳಿಯುತ್ತಿದ್ದ ರಕ್ತವನ್ನು ಬೆರಳ ತುದಿಯಿಂದ ಮೆಲ್ಲನೆ ಒರೆಸಿಕೊಂಡ ಹುಡುಗಿ ಬಾಯಿಬಿಟ್ಟಳು 'ಮಂಗ್ ನನ್‌ಮಗನೇ, ನಾನ್ ಯಾರಾದ್ರೆ ನಿಂಗೇನು?, ನನ್ ಮೊಬೈಲ್ ಫೋನ್ ಸೀಟ್ ಕೆಳಗೆಲ್ಲೋ ಬಿದ್ದು ಹೋಗಿದೆ, ನಿನ್ ಬಸ್ಸಲ್ಲಿ ಲೈಟ್ ಬೇರೆ ಇಲ್ಲ. ಮಿಂಚು ಹೊಡೆದಾಗಲಾದ್ರೂ ಮೊಬೈಲ್ ಹುಡುಕೋಣ ಅಂತ ಬಗ್ಗಿದರೆ ನಾನು ಬಗ್ಗಿದಾಗೆಲ್ಲ ಬ್ರೇಕ್ ಹಾಕಿ, ಹಾಕಿ, ಮುಂದಿನ ಸೀಟಿಗೆ ನನ್ ಹಣೆ ಬಡಿದು ರಕ್ತ ಬರೋ ಹಾಗೆ ಮಾಡ್ತಾ ಇದೀಯಲ್ಲ, ತಲೆ ಇದ್ಯಾ ನಿಂಗೆ?'
ಸ್ಯಾಂಡಲ್‌ವುಡ್
ಚಿತ್ರರಂಗದಲ್ಲಿ ನಾಯಕ ನಟರೇ ನಿರ್ಮಾಪಕರಾದಾಗ ಚಿತ್ರರಂಗದ ಕೆಲವು ಸೋ ಕಾಲ್ಡ್ ಸರ್ವಾಧಿಕಾರಿಗಳಿಗೆ ಎದೆಯಲ್ಲಿ ತೌಡು ಕುಟ್ಟಿದಂತಾಗುತ್ತದೆ. ಸಾಮಾಜಿಕ ಚಿತ್ರ ಮಾಡಿದರೂ ಹಾರರ್ ಸಿನಿಮಾ ಮಾಡಿದವರಂತೆ ನಾಯಕರೂ ಭಯಪಡುತ್ತಾರೆ. ಆದರೆ ದುನಿಯಾ ವಿಜಯ್ ಭಯಾನಕ ಚಿತ್ರವನ್ನೇ ಮಾಡಿದ್ದಾರೆ. ಹಾಗಾಗಿ ಅವರ ಭಯ ಇನ್ನಷ್ಟು ಹೆಚ್ಚಿದೆ. ಅದಕ್ಕೆ ಕಾರಣಗಳೂ ಇವೆ. ವಿಜಯ್‌ರ ಮೊದಲ ಚಿತ್ರಕ್ಕೆ ಸರಿಯಾದ ಚಿತ್ರಮಂದಿರ ಸಿಗದಂತೆ ಮಾಡುವ ಪ್ರಯತ್ನಗಳು ನಡೆದಿವೆ. ಹಾಗಾಗಿ ವಿಜಯ್‌ರಂಥ ಸ್ಟಾರ್ ನಟನಿಗೆ ಸಿಕ್ಕಿರುವುದು ಭೂಮಿಕಾದಂಥ ಥಿಯೇಟರ್. ಅದರ ಜೊತೆಗೆ ಜಯಮ್ಮನ ಮಗ ಚಿತ್ರದ ಪೋಸ್ಟರ್‌ಗಳ ಸರಬರಾಜು ವಿಷಯದಲ್ಲೂ ಕಿರಿಕ್. ಅದೂ ಸಾಲದು ಎಂಬಂತೆ ಜಯಮ್ಮನ ಮಗ ಚಿತ್ರದ ಪೋಸ್ಟರ್‌ಗಳ ಮೇಲೆ ಬಿಡುಗಡೆಯಾದ ಮರುದಿನವೇ ಬೇರೆ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ. ಇದನ್ನು ಗಂಭೀರವಾಗಿ ತೆಗೆದುಕೊಂಡಿರುವ ವಿಜಯ್ ಅಂಟಿಯೂ ಅಂಟದಂತಿದ್ದುಕೊಂಡೇ, ಜಯಮ್ಮನ ಮಗನನ್ನು ಬೆಳೆದು ದೊಡ್ಡವನಾಗದಂತೆ ಅಡ್ಡಗಾಲು ಹಾಕಿದವರಿಗೆ ಸರಿಯಾದ ಸಮಯದಲ್ಲಿ ಚಾಟಿ ಏಟು ಬೀಸುತ್ತೇನೆ ಎನ್ನುತ್ತ ಜಯಮ್ಮನ ಮಗ ಚಿತ್ರದ ಕಾಳಿ ದೇವಿಯ ಗತ್ತಿನಲ್ಲೇ ಎಚ್ಚರಿಕೆಯ ಮಾತುಗಳನ್ನಾಡಿದ್ದಾರೆ.
ಡಬ್ಕುಡಬಲ್ ತುದಾಂಡಲ್...
ಟಿ ದಾರಿಯಲ್ಲಿ ಒಂಟಿಯಾಗಿ ಹೋಗುತ್ತಿದ್ದ ಆಮೆಯ ಮೇಲೆ ಮೂರ್ನಾಲ್ಕು ಬಸವನ ಹುಳುಗಳು ಅಟ್ಯಾಕ್ ಮಾಡಿ ಹಲ್ಲೆ ಮಾಡಿದವು. ಕಂಪ್ಲೇಂಟ್ ಬರ್ಕೊಳ್ಳುವಾಗ ಕಾನ್‌ಸ್ಟೇಬಲ್ ಆಮೆಯನ್ನ ಕೇಳಿದ 'ಇದೆಲ್ಲ ಹೇಗಾಯ್ತು.'. ಆಮೆ ಹೇಳ್ತು, 'ಇದೆಲ್ಲ ಎಷ್ಟು ಫಾಸ್ಟ್ ಆಗಿ ಆಗೋಯ್ತು ಅಂದ್ರೆ, ನಂಗೆ ಏನೂ ಗೊತ್ತೇ ಆಗ್‌ಲಿಲ್ಲ'
ಟಿ ಕೆಲಸದ ಮೇಲೆ ಭಕ್ತಿ ಇದ್ರೆ, ವರ್ಕ್ ಈಸ್ ವರ್ಷಿಪ್, ಕೆಲಸ ಜಾಸ್ತಿ ಆದ್ರೆ ವರ್ಕ್ ಈಸ್ ವರ್ಕ್‌ಶಾಪ್
ಟಿ ಕಷ್ಟದಲ್ಲಿದ್ದಾಗ ಭಕ್ತರನ್ನು ಕಾಪಾಡುವ ದೇವರು ಏಳು ಕುಂಡಲವಾಡ ಬೇಕಂತಲೇ ಭಕ್ತರಿಗೆ ಕಷ್ಟ ಕೊಟ್ಟು, ಪರೀಕ್ಷೆ ಇಟ್ಟು ತಮಾಷೆ ಮಾಡುವ ದೇವರು ಏಳು 'ಕಿಂಡಲ್'ವಾಡ
ಟಿ ಖೇಮು ಕಣ್ಣು ಚೆಕ್ ಅಪ್ ಮಾಡಿಸಲು ಹೋಗಿದ್ದ. ಅಲ್ಲಿದ್ದ ಹುಡುಗಿ ಅವನ ಎಡಗಣ್ಣಿಗೆ ಒಂದೊಂದೇ ಲೆನ್ಸ್ ಹಾಕಿ 'ಅಲ್ಲಿ ಬೋರ್ಡ್ ಮೇಲೆ ಬರೆದಿರೋದು ಕಾಣ್ಸುತ್ತಾ, ಓದಿ' ಅಂದಳು. ಖೇಮು ಓದಿದ.. 'ಜಿ, ಡಿ, ಯು, ಬಿ, ಸಿ.' ಮುಂದಿನ ಸಾಲು ಕಾಣಿಸಲಿಲ್ಲ. ಹುಡುಗಿ ಇನ್ನೊಂದು ಲೆನ್ಸ್ ಹಾಕಿ 'ಈಗ ಕಾಣ್ಸುತ್ತಾ...ಓದಿ' ಅಂದ್ಳು. ಹೌದು ಎಂದ ಖೇಮು ಓದಿದ...'ಎ, ಜಿ, ಎಸ್, ಎಚ್, ಎಮ್'. ಸರಿ, ಈ ಬಾರಿ, ಹುಡುಗಿ ಖೇಮುನ ಬಲಗಣ್ಣಿಗೆ ಲೆನ್ಸ್ ಹಾಕಿ 'ಕಾಣ್ಸುತ್ತ, ಓದಿ' ಅಂದಳು. ಖೇಮು 'ಜಿ, ಡಿ, ಯು, ಬಿ, ಸಿ,' ಮತ್ತು 'ಎ, ಜಿ, ಎಸ್, ಎಚ್, ಎಮ್' ಅಂತ ಎರಡೂ ಸಾಲು ಓದಿಬಿಟ್ಟ. ಹುಡುಗಿ ಆಶ್ಚರ್ಯದಿಂದ ನಿಮ್ಮ ಎಡಗಣ್ಣಿಗಿಂತ ಬಲಗಣ್ಣು ಸ್ಟ್ರಾಂಗ್ ಅನ್ಸುತ್ತೆ. ಎರಡು ಸಾಲೂ ಕಾಣಿಸುತ್ತಲ್ಲ ಅಂದಳು. ಖೇಮು ಹೇಳಿದ 'ಕಾಣಿಸ್‌ಲಿಲ್ಲ, ಆದ್ರೆ ಇವಾಗ್ ತಾನೇ ಓದಿದ್ನಲ್ವಾ, ನೆನ್‌ಪಿತ್ತು. ಹಂಗಾಗಿ ಹೇಳ್‌ಬಿಟ್ಟೆ'
-ಹರಿ
harikannadaprabha@gmail.com